ಬುಧವಾರ, ಡಿಸೆಂಬರ್ 11, 2019
16 °C

ನಿಗೂಢ ಗುಣದ ‘ಅಭಿಸಾರಿಕೆ’

Published:
Updated:
ನಿಗೂಢ ಗುಣದ ‘ಅಭಿಸಾರಿಕೆ’

ಕನ್ನಡದಲ್ಲಿ ‘ಅಭಿಸಾರಿಕೆ’ ಎಂಬುದಕ್ಕೆ ವಿಶೇಷ ಅರ್ಥವಿದೆ. ಗೆಳೆಯನ ಸಾಂಗತ್ಯವನ್ನು ಅರಸಿ ಹೊರಟವಳನ್ನು ಅಭಿಸಾರಿಕೆ ಎಂದು ಕರೆಯಲಾಗುತ್ತದೆ. ಈಗ ಅದೇ ಹೆಸರಿನ ಕನ್ನಡ ಸಿನಿಮಾವೊಂದು ಬರುತ್ತಿದೆ. ಆ ಶಬ್ದದ ಮೂಲ ಅರ್ಥವನ್ನೂ ಒಳಗೊಂಡಿದೆಯಾದರೂ ಇನ್ನೊಂದು ಶಬ್ದ ಚಮತ್ಕಾರವೂ ಇಲ್ಲಿದೆ.ಈ ಚಿತ್ರದ ನಾಯಕನ ಹೆಸರು ಅಭಿ, ನಾಯಕಿ ಸಾರಿಕೆ. ಈ ಇಬ್ಬರ ಹೆಸರೂ ಸೇರಿ ಅಭಿಸಾರಿಕೆಯಾಗಿದೆ.

ನಾಯಕ– ನಾಯಕಿಯ ನಡುವಿನ ಪ್ರೀತಿ, ಅದಕ್ಕೆ ಅಡ್ಡಿಯಾಗುವ ಖಳನಾಯಕ, ಕಥೆ ಹೀಗೆ ಸಾಗುತ್ತಿರುವಾಗಲೇ ಅದಕ್ಕೆ ತಿರುವು ಕೊಡಲೆಂದು ಬರುವ ಮತ್ತೊಬ್ಬಳು ಹುಡುಗಿಯ ಸುತ್ತ ಈ ಚಿತ್ರ ಸುತ್ತುತ್ತದೆ. ‘ಮಹಿಳಾ ಪ್ರಧಾನ, ಸಸ್ಪೆನ್ಸ್‌ ಚಿತ್ರವಿದು’ ಎಂದು ನಿರ್ದೇಶಕ ಎ.ಎಸ್‌. ಮಧುಸೂದನ್‌ ಹೇಳಿದ್ದಾರೆ. ತೇಜು ಮೊದಲ ಬಾರಿಗೆ ನಾಯಕನಾಗಿ ನಟಿಸುವ ಪುಲಕದಲ್ಲಿದ್ದಾರೆ. ಸೋನೆಲ್‌ ಮಂತೆರೊ ನಾಯಕಿ. ಮತ್ತೊಬ್ಬ ನಾಯಕಿಯಾಗಿ ರಚನಾ ನಟಿಸಿದ್ದಾರೆ. ನಾಯಕಿಗಾಗಿ ಹಪಹಪಿಸುವ, ಅವಳನ್ನು ಹೇಗಾದರೂ ತನ್ನವಳನ್ನಾಗಿಸಿಕೊಳ್ಳಬೇಕು ಎಂದು ವಿಕೃತಗಳನ್ನು ಮಾಡುವ ಖಳನ ಪಾತ್ರದಲ್ಲಿ ಯಶಸ್‌ ಶೆಟ್ಟಿ ನಟಿಸಿದ್ದಾರೆ.

ಚಿನ್ಮಯ್‌ ಅವರು ಬರೆದಿರುವ ನಾಲ್ಕು ಹಾಡುಗಳಿಗೆ ಕರಣ್‌ ಬಿ. ಕೃಪಾ ಸಂಗೀತ ಸಂಯೋಜಿಸಿದ್ದಾರೆ. ಬೆನಕರಾಜು ಮತ್ತು ವೇಲುಮುರುಗನ್‌ ಈ ಚಿತ್ರಕ್ಕೆ ಛಾಯಾಗ್ರಹಣ ಮಾಡಿದ್ದಾರೆ. ಲಿಂಗರಾಜು ಸಂಕಲನ, ಕುಂಗ್ ಫು ಚಂದ್ರು ಸಾಹಸ ಈ ಚಿತ್ರಕ್ಕಿದೆ. ಶಿವಕುಮಾರ್‌ ಕೆ. ಮತ್ತು ಪ್ರಶಾಂತ್‌ ಕೊಡ್ಗೆದಾರ್‌ ಅವರು ಹಣ ಹೂಡಿದ್ದಾರೆ. ನಿರ್ದೇಶಕರೂ ನಿರ್ಮಾಣದಲ್ಲಿ ಪಾಲುದಾರರಾಗಿದ್ದಾರೆ.ಈಗಾಗಲೇ ಧ್ವನಿಸುರಳಿ ಬಿಡುಗಡೆ ಹೊರತಂದಿರುವ ‘ಅಭಿಸಾರಿಕೆ’ಯನ್ನು ಏಪ್ರಿಲ್‌ನಲ್ಲಿ ತೆರೆಗೆ ತರುವ ಯೋಚನೆ ತಂಡದ್ದು.

ಪ್ರತಿಕ್ರಿಯಿಸಿ (+)