ಗುರುವಾರ , ಜೂನ್ 4, 2020
27 °C

ಹವ್ಯಾಸಗಳಿಗೆ ಅಮ್ಮನೇ ಸ್ಫೂರ್ತಿ

ಕಾವ್ಯ ಸಮತಳ Updated:

ಅಕ್ಷರ ಗಾತ್ರ : | |

ಹವ್ಯಾಸಗಳಿಗೆ ಅಮ್ಮನೇ ಸ್ಫೂರ್ತಿ

ಕಲೆ ಸಾಧಕನ ಸ್ವತ್ತೆ ವಿನಾ ಸೋಮಾರಿಗಳ ಸ್ವತ್ತಲ್ಲ’ ಎನ್ನುವ ಲೋಕೋಕ್ತಿಯನ್ನು ಚಾಚೂ ತಪ್ಪದೇ ಪಾಲಿಸಿದ ಬಹುಮುಖ ಪ್ರತಿಭೆ ಭಾವನಾ ಗಿರೀಶ್ ಕುಮಾರ್.

ವರ್ಣಚಿತ್ರ, ಅಂಚೆಚೀಟಿ ಸಂಗ್ರಹ, ಛಾಪಾಕಾಗದ, ಗ್ರಾಮಾಫೋನ್, ರೇಡಿಯೊ, ಗಣೇಶ ಮೂರ್ತಿಗಳು, ತರಹೇವಾರಿ ನಾಣ್ಯಗಳು ಹೀಗೆ ಇವರ ಸಂಗ್ರಹಲ್ಲಿವೆ. ಹಲವು ವರ್ಷಗಳಿಂದ ಇವರು ಸಂಗ್ರಹಿಸಿರುವ ವಸ್ತುಗಳು ಹವ್ಯಾಸ ವಸ್ತು ಸಂಗ್ರಹಾಲಯ ಮಾಡುವ ಮಟ್ಟಿಗೆ ಬೆಳೆದಿದೆ.

ಸ್ವತಃ ಚಿತ್ರ ಕಲಾವಿದರಾಗಿರುವ ಗಿರೀಶ್ ವಿವಿಧ ರೀತಿಯ ಬೆಂಕಿಪಟ್ಟಣದ ಮಾದರಿಗಳು, 150 ವರ್ಷಕ್ಕೂ ಹಳೆಯದಾದ ಗ್ರಾಮಾಫೋನ್‍ಗಳು ಮತ್ತು ಹಳೆಯಕಾಲದ ರೇಡಿಯೋಗಳನ್ನು ಸಂಗ್ರಹಿಸಿದ್ದಾರೆ. ಭಾರತ ಸ್ವಾತಂತ್ರ್ಯ ಪಡೆದ ನಂತರ ಬಿಡುಗಡೆಯಾದ ಎಲ್ಲ ಅಂಚೆಚೀಟಿಗಳ ಮಾದರಿ ಇವರ ಸಂಗ್ರಹದಲ್ಲಿದೆ.

ಸುವಾಸನೆ ಬೀರುವ ಅಂಚೆಚೀಟಿ, ಮುಟ್ಟಿದರೆ ಬಿಸಿ ಅನುಭವ ಕೊಡುವಂತಹ ಅಂಚೆಚೀಟಿ, ಚಿನ್ನ, ಬೆಳ್ಳಿ, ಕಂಚು, ಸೆರಾಮಿಕ್, ತ್ರಿಡಿ ವಿನ್ಯಾಸ, ಕ್ರಿಸ್ಟೆಲ್, ಮುತ್ತು, ರಾಜರು ನೀಡಿದ ಧಾನ್ಯದ ಗುರುತಿನ, ಜ್ವಾಲಾಮುಖಿ ಬೂದಿಯಿಂದ ಕೂಡಿದ, ರೇಷ್ಮೆಯಿಂದ ಮಾಡಿರುವ, ಆಸ್ಟ್ರಿಯಾ ದೇಶದ ಓಕ್ ಮರದಿಂದ ತಯಾರಾದ ಅಂಚೆಚೀಟಿಗಳು ಇವರ ಬಳಿ ಇವೆ. ವಿವಿಧ ದೇಶಗಳಲ್ಲಿ ವಿಶಿಷ್ಟ ಸಂದರ್ಭಗಳಿಗೆಂದು ಬಿಡುಗಡೆಯಾಗಿರುವ ಸುಮಾರು 2300 ಅಂಚೆಚೀಟಿಗಳ ಸಂಗ್ರಹ ನೋಡುಗರ ಕಣ್ಮನ ತಣಿಸುವಂತಿವೆ.

ಇವರ ಬಳಿ 25 ಪೈಸೆ ಮುಖಬೆಲೆಯ 30,000 ನಾಣ್ಯಗಳ ಸಂಗ್ರಹವಿದೆ. ಈ ಸಂಗ್ರಹಕ್ಕೆ ಲಿಮ್ಕಾ ಮತ್ತು ವರ್ಲ್ಡ್‌ ರೆಕಾರ್ಡ್‌ ಸೆಟ್ಟರ್ಸ್‌ ದಾಖಲೆಯ ಗೌರವ ಸಿಕ್ಕಿದೆ. 50 ಪೈಸೆಗಳ 30,786 ನಾಣ್ಯಗಳ ಸಂಗ್ರಹಕ್ಕೆ ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್‌ ಗೌರವ ಸಿಕ್ಕಿದೆ.

ಎಚ್‍ಎಎಲ್‍ನಲ್ಲಿ ಮೆಕ್ಯಾನಿಕಲ್ ಎಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿರುವ ಗಿರೀಶ್ ಅವರಿಗೆ ಐತಿಹಾಸಿಕ ವಸ್ತು ಸಂಗ್ರಹಣೆಗೆ ಪ್ರೇರಣೆ ನೀಡಿದವರು ಅವರ ತಾಯಿ ಭಾವನಾ.

‘ಹನ್ನೊಂದು ವರ್ಷದವನಿದ್ದಾಗ ಅಕ್ಕ, ಪುಸ್ತಕವೊಂದರಲ್ಲಿ ಅಂಚೆಚೀಟಿಗಳನ್ನು ಅಂಟಿಸುತ್ತಿದ್ದುದನ್ನು ನೋಡಿದೆ. ನನಗೆ ಇಷ್ಟವಾಯಿತು. ಅಕ್ಕ ಆ ಪುಸ್ತಕವನ್ನು ನನಗೆ ಕೊಟ್ಟಳು. ಅಂದಿನಿಂದ ಆರಂಭವಾದ ಈ ಸಂಗ್ರಹ ಇಂದು ವಿವಿಧ ರೀತಿಯ ವಸ್ತುಗಳನ್ನು ಸಂಗ್ರಹಿಸುವಂತೆ ಮಾಡಿದೆ’ ಎನ್ನುತ್ತಾರೆ ಅವರು.

ಇವರ ಬಳಿ 3321 ಗಣೇಶನ ವಿಗ್ರಹಗಳಿವೆ. ಒಂದಕ್ಕಿಂತ ಒಂದು ಭಿನ್ನ ಎನ್ನುವುದು ವಿಶೇಷ. ಹಲವು ಮಾದರಿ ಗುಂಡಿಗಳು (ಬಟನ್ಸ್‌), ರಾಜ ಕಾಲದ ಛಾಪಾಕಾಗದಗಳು, ಗಣೇಶನ ಚಿತ್ರವಿರುವ ಮದುವೆಯ ಕರೆಯೋಲೆ ಪತ್ರಗಳು, ಗಣಪತಿಯ ಚಿತ್ರವಿರುವಿರುವ ಇಂಡೋನೇಷ್ಯಾದ 20,000 ರೂಪಿಯಾ ಹೀಗೆ ಸಂಗ್ರಹ ವಸ್ತುಗಳ ಸಂಖ್ಯೆ ವಿಸ್ತಾರಗೊಳುತ್ತಲೇ ಇದೆ.

ಪ್ರಸ್ತುತ ಗಿರೀಶ್ ಅವರು ಅಂಚೆಚೀಟಿಗಳು ಮತ್ತು ಗಣೇಶನ ಮೂರ್ತಿಗಳಿಗಾಗಿ ಪುಟ್ಟ ಮ್ಯೂಸಿಯಂ ನಿರ್ಮಿಸುತ್ತಿದ್ದಾರೆ. ಸದ್ಯಕ್ಕೆ ಒಡೆಯರ ಕಾಲದ ದಕ್ಷಿಣ ಭಾರತದ ಬಗ್ಗೆ ಸಂಶೋಧನೆ ನಡೆಸುತ್ತಿದ್ದಾರೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.