ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಕ್ಷಾಂತರ ಮಂದಿ–ಹತ್ತಾರು ಖಾದ್ಯ!

Last Updated 18 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ಶ್ರವಣಬೆಳಗೊಳ: ಮಹಾಮಸ್ತಕಾಭಿಷೇಕದಂತೆಯೇ ಅದನ್ನು ನೋಡಲು ಬಂದ ಭಕ್ತರಿಗೆ ನಡೆದಿರುವ ಅನ್ನದಾಸೋಹದ ವೈಭವ ಸಹ ಜೋರಾಗಿದೆ.

ರಜಾದಿನವಾದ ಭಾನುವಾರ ದಕ್ಷಿಣದ ಜೈನಕಾಶಿಗೆ ಲಗ್ಗೆ ಇಟ್ಟ ಲಕ್ಷಾಂತರ ಜನರ ಹೊಟ್ಟೆ ತಣಿಸಿದ ಶ್ರೇಯಸ್ಸು ವಿಂಧ್ಯಗಿರಿಯ ತಪ್ಪಲಲ್ಲಿ ತೆರೆಯಲಾದ ಏಳು ಭೋಜನಾಲಯಗಳದು.

12 ಉಪನಗರಗಳಲ್ಲೂ ಭೋಜನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಪ್ರತಿಯೊಂದರಲ್ಲೂ ಉತ್ತರ ಮತ್ತು ದಕ್ಷಿಣ ಭಾರತದ ಖಾದ್ಯಗಳನ್ನು ಉಣಬಡಿಸಲಾಯಿತು. ಪ್ರತಿ ಕೇಂದ್ರದಲ್ಲೂ ಅಂದಾಜು 20 ಸಾವಿರ ಜನರು ಊಟ ಮಾಡಿದರು. ರಾಗಿ ಮುದ್ದೆ, ಚಪಾತಿ, ಖಡಕ್‌ ರೊಟ್ಟಿ, ಶಾವಿಗೆ ಪಾಯಸ, ಚಂಪಾಕಲಿ, ಹೆಸರು–ಕಡಲೆ ಕಾಳು ಪಲ್ಯ, ಪರೋಟ, ಪುಲಾವ್‌ ಸೇರಿದಂತೆ ಬಗೆಬಗೆಯ ಖಾದ್ಯಗಳನ್ನು ಸವಿದರು.

ಪ್ರತಿ ದಿನ ಲಕ್ಷಾಂತರ ಭಕ್ತರು ಭೇಟಿ ನೀಡುವ ನಿರೀಕ್ಷೆ ಮೊದಲೇ ಇದ್ದ ಕಾರಣ ಉಗ್ರಾಣದಲ್ಲಿ ಸಾವಿರ ಟನ್‌ ಅಕ್ಕಿ, ಬೇಳೆ, ಹಿಟ್ಟು, ತರಕಾರಿಗಳನ್ನು ದಾಸ್ತಾನು ಮಾಡಲಾಗಿತ್ತು. ಬಾಹುಬಲಿ ಮಹಾಮಸ್ತಕಾಭಿಷೇಕದ ಮೊದಲ ದಿನ 3. 5 ಲಕ್ಷ ಜನರು ಕ್ಷೇತ್ರಕ್ಕೆ ಭೇಟಿ ನೀಡಿದ್ದರು. ಟರ್ಕಿ, ಅಮೆರಿಕ, ಲಂಡನ್‌ನಿಂದಲೂ ಭಕ್ತರು ಬಂದಿದ್ದರು.

‘ಆರಂಭದಲ್ಲಿದ್ದ ಲೋಪ, ದೋಷ ಸರಿಪಡಿಸಿಕೊಂಡು, ಶಿಸ್ತು ಮತ್ತು ಜಾಗೃತೆಯಿಂದ ಮಹೋತ್ಸವವನ್ನು ಆಚರಿಸಲಾಗುತ್ತಿದೆ. ಡೋಲಿ ಹೊರುವವರಿಗೆ ಮೆಟ್ಟಿಲು ಹೊಸದಾಗಿ ನಿರ್ಮಾಣ ಮಾಡದಿದ್ದರೆ ಸಾಕಷ್ಟು ತೊಂದರೆ ಆಗುತ್ತಿತ್ತು. ನರೇಂದ್ರ ಮೋದಿ ಸಮಾರಂಭ ಆಗಮಿಸುತ್ತಿರುವುದು ಸಂತಸ ತಂದಿದೆ’ ಎಂದು ಜೈನ ಮಠದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಹೇಳಿದರು.

ಮಳಿಗೆ ವರ್ತಕರ ಪ್ರತಿಭಟನೆ ಮಹೋತ್ಸವದ ಅಂಗವಾಗಿ ತೆರೆದಿರುವ ವಸ್ತುಪ್ರದರ್ಶನದಲ್ಲಿ ಮಳಿಗೆಗಳ ವರ್ತಕರು ಅವ್ಯವಸ್ಥೆ ವಿರುದ್ಧ ಪ್ರತಿಭಟನೆ ನಡೆಸಿದರು.

‘ಒಂದು ಮಳಿಗೆಗೆ ₹ 14 ರಿಂದ ₹ 17 ಸಾವಿರ ಬಾಡಿಗೆ ತೆಗೆದುಕೊಳ್ಳಲಾಗಿದೆ. ಯಾವುದೇ ವ್ಯವಸ್ಥೆ ಮಾಡಿಲ್ಲ. ವಸ್ತುಪ್ರದರ್ಶನ ನಡೆಯುತ್ತಿರುವ ಕುರಿತು ನಾಮ ಫಲಕವನ್ನೂ ಹಾಕಿಲ್ಲ. ಜಿಲ್ಲಾಮಟ್ಟದಲ್ಲಿ ಆಯೋಜಿಸುವ ಪ್ರದರ್ಶನಕ್ಕಿಂತಲೂ ಕಡೆಯಾಗಿದೆ’ ಎಂದು ಮಳಿಗೆದಾರರ ಆರೋಪಿಸಿದರು.

‘ವಸ್ತಪ್ರದರ್ಶನದ ಆವರಣದೊಳಗೆ ತಳ್ಳುವ ಗಾಡಿಯವರಿಗೆ ಹಣ್ಣು, ತಿಂಡಿ, ತಿನಿಸು ಮಾರಾಟ ಮಾಡಲು ಅವಕಾಶ ನೀಡಲಾಗಿದೆ. ನಮಗೆ ದಿನಕ್ಕೆ ₹ 500 ವ್ಯಾಪಾರವಾದರೆ ಹೆಚ್ಚು. ಸ್ವಚ್ಛತೆಯಂತೂ ಇಲ್ಲವೇ ಇಲ್ಲ. ಶೌಚಾಲಯಕ್ಕೆ ವ್ಯವಸ್ಥೆ ಇಲ್ಲ ಹಾಗೂ ಸ್ನಾನಕ್ಕೂ ನೀರಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಳಿಕ ವಸ್ತುಪ್ರದರ್ಶನದ ಉಸ್ತುವಾರಿ ಹೊತ್ತಿರುವ ಅಧಿಕಾರಿಗಳು ಸ್ಥಳಕ್ಕೆ ಬಂದು, ಬೇಡಿಕೆ ಈಡೇರಿಸುವ ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂತೆಗೆದುಕೊಂಡರು.

ಬೆಟ್ಟ ಏರುವ ವಯೋವೃದ್ಧರನ್ನು ಕೈ ಹಿಡಿದು ಬಾಹುಬಲಿ ಮೂರ್ತಿಯ ಪಾದದವರೆಗೂ ಕರೆದೊಯ್ಯವ ಕೆಲಸದಲ್ಲಿ ಸ್ಕೌಟ್‌, ಗೈಡ್ಸ್‌ ಶಿಬಿರಾರ್ಥಿಗಳು ನಿರತರಾಗಿದ್ದಾರೆ. ಎರಡೂ ಕಡೆ ಬೆಟ್ಟವೇರುವವರಿಗೆ ಬಾಟಲ್‌ಗಳಲ್ಲಿ ನೀರು ಪೂರೈಸಿ ದಾಹ ನೀಗಿಸುತ್ತಿದ್ದಾರೆ.


ಅಭಿಷೇಕ ಮಾಡಿದ ‘ರಾಹುಲ್‌’
ಎರಡನೇ ದಿನ ನಡೆದ ಬಾಹುಬಲಿ ಮಹಾಮಸ್ತಕಾಭಿಷೇಕದಲ್ಲಿ ‘ರಾಹುಲ್‌ ಗಾಂಧಿ’ ಅಭಿಷೇಕ ಮಾಡಿದರು. ಅಭಿಷೇಕ ನೋಡುತ್ತಿದ್ದವರಿಗೆ ಅಚ್ಚರಿಯಾಯಿತು. ಆದರೆ, ಅಭಿಷೇಕ ಮಾಡುವವರ ಪಟ್ಟಿಯಲ್ಲಿದ್ದ ರಾಹುಲ್‌ ಎಂಬ ಭಕ್ತರೊಬ್ಬರ ಹೆಸರನ್ನು ಓದಿದಾಗ ಜನರು ‘ಎಐಸಿಸಿ’ ಅಧ್ಯಕ್ಷ ರಾಹುಲ್‌ ಗಾಂಧಿ ಅವರೇ ಬಂದಿರಬೇಕು ಅಂದುಕೊಂಡರು. ಮಾಧ್ಯಮದವರು ಸಹ ರಾಹುಲ್‌ ಬಂದಿರುವುದುನ್ನು ಖಚಿತ ಪಡಿಸಿಕೊಳ್ಳಲು ಪರದಾಡಿದರು. ಕೊನೆಗೆ ವಿಷಯ ಗೊತ್ತಾದ ಮೇಲೆ ನಿರುಮ್ಮಳರಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT