ಮಂಗಳವಾರ, ಡಿಸೆಂಬರ್ 10, 2019
20 °C
500 ಮೀಟರ್ಸ್‌ ಸ್ಪೀಡ್‌ ಸ್ಕೇಟಿಂಗ್‌ನಲ್ಲಿ ಮಿಂಚು

ಚಳಿಗಾಲದ ಒಲಿಂಪಿಕ್ಸ್‌: ನವೊ ಕೊಡೈರಾಗೆ ಚಿನ್ನದ ಪದಕ

Published:
Updated:
ಚಳಿಗಾಲದ ಒಲಿಂಪಿಕ್ಸ್‌:  ನವೊ ಕೊಡೈರಾಗೆ ಚಿನ್ನದ ಪದಕ

ಗಾಂಗ್‌ನೆವುಂಗ್‌, ದಕ್ಷಿಣ ಕೊರಿಯಾ (ರಾಯಿಟರ್ಸ್‌): ಅಮೋಘ ಸಾಮರ್ಥ್ಯ ತೋರಿದ ಜಪಾನ್‌ನ ನವೊ ಕೊಡೈರಾ, ಚಳಿಗಾಲದ ಒಲಿಂಪಿಕ್ಸ್‌ನ ಮಹಿಳೆಯರ 500 ಮೀಟರ್ಸ್‌ ಸ್ಪೀಡ್‌ ಸ್ಕೇಟಿಂಗ್‌ನಲ್ಲಿ ಚಿನ್ನ ಜಯಿಸಿದ್ದಾರೆ.

ಗಾಂಗ್‌ನೆವುಂಗ್‌ ಓವಲ್ ಸಂಕೀರ್ಣ ದಲ್ಲಿ ಭಾನುವಾರ ನಡೆದ ಸ್ಪರ್ಧೆಯಲ್ಲಿ ನವೊ, 36.94 ಸೆಕೆಂಡುಗಳಲ್ಲಿ ನಿಗದಿತ ದೂರ ಕ್ರಮಿಸಿದರು. ಇದರೊಂದಿಗೆ ಒಲಿಂಪಿಕ್ಸ್‌ನಲ್ಲಿ ಚಿನ್ನದ ಸಾಧನೆ ಮಾಡಿದ ಜಪಾನ್‌ನ ಮೊದಲ ಸ್ಪೀಡ್‌ ಸ್ಕೇಟರ್‌ ಎಂಬ ಹಿರಿಮೆಗೆ ಪಾತ್ರರಾದರು.

ಕೊರಿಯಾದ ಲೀ ಸಾಂಗ್‌ ಹವ್‌ (37.33ಸೆ.) ಈ ವಿಭಾಗದ ಬೆಳ್ಳಿ ಗೆದ್ದರೆ, ಜೆಕ್‌ ಗಣರಾಜ್ಯದ ಕ್ಯಾರೋಲಿನಾ ಎರ್ಬನೋವಾ (37.34ಸೆ.) ಕಂಚು ತಮ್ಮದಾಗಿಸಿಕೊಂಡರು.

ಪುರುಷರ ವಿಭಾಗದ ಸ್ಕೀ ಸ್ಲಾಪ್‌ಸ್ಟೈಲ್‌ ಫೈನಲ್‌ ರನ್‌–3 ಸ್ಪರ್ಧೆಯಲ್ಲಿ ನಾರ್ವೆಯ ಒಯೆಸ್ಟೀನ್‌ ಬ್ರಾಟೆನ್‌, 95.00 ಸ್ಕೋರ್‌ ಕಲೆಹಾಕಿ ಚಿನ್ನಕ್ಕೆ ಕೊರಳೊಡ್ಡಿದರು.

ಅಮೆರಿಕದ ನಿಕ್‌ ಗೊಯೆಪ್ಪರ್‌ (93.60), ಕೆನಡಾದ ಅಲೆಕ್ಸ್‌ ಮರ್ಚಾಂಡ್‌ (92.40) ಕ್ರಮವಾಗಿ ಈ ವಿಭಾಗದ ಬೆಳ್ಳಿ ಮತ್ತು ಕಂಚು ತಮ್ಮದಾಗಿಸಿಕೊಂಡರು.

ಪುರುಷರ ಫ್ರೀಸ್ಟೈಲ್‌ ಸ್ಕೀಯಿಂಗ್‌ ಏರಿಯಲ್ಸ್‌ ಫೈನಲ್‌–3 ಸ್ಪರ್ಧೆಯಲ್ಲಿ ಉಕ್ರೇನ್‌ನ ಅಲೆಕ್ಸಾಂಡರ್‌ ಅಬ್ರಾಮೆಂಕೊ (128.51 ಸ್ಕೋರ್‌) ಮೊದಲಿಗರಾದರು.

ಚೀನಾದ ಜಿಯಾ ಜೊಂಗ್ಯಾಂಗ್‌ (128.05) ಬೆಳ್ಳಿ ಗೆದ್ದರೆ, ಇಲಿಯಾ ಬರೊವ್‌ (122.17) ಕಂಚಿಗೆ ತೃಪ್ತಿಪಟ್ಟರು.

4X10 ಕಿ.ಮೀ ಕ್ರಾಸ್‌ಕಂಟ್ರಿ ಸ್ಕೀಯಿಂಗ್‌ ರಿಲೇ ಸ್ಪರ್ಧೆಯಲ್ಲಿ ನಾರ್ವೆ ಚಿನ್ನ ಗೆದ್ದುಕೊಂಡಿತು. ಬಯಥ್ಲಾನ್‌ನ 15 ಕಿ.ಮೀ. ಮಾಸ್‌ ಸ್ಟಾರ್ಟ್‌ ವಿಭಾಗದಲ್ಲಿ ಫ್ರಾನ್ಸ್‌ನ ಮಾರ್ಟಿನ್‌ ಫೋರ್‌ಕೇಡ್‌ ಚಿನ್ನಕ್ಕೆ ಮುತ್ತಿಕ್ಕಿದರು.

ಅಲ್ಪೈನ್‌ ಸ್ಕೀಯಿಂಗ್‌ ಜಿಯಾಂಟ್‌ ಸ್ಲಾಲೋಮ್‌ ರನ್‌–2 ಸ್ಪರ್ಧೆಯಲ್ಲಿ ಮಾರ್ಷೆಲ್‌ ಹಿರಾಸ್ಚರ್‌ ಮೊದಲ ಸ್ಥಾನ ಪಡೆದರು.

ಪ್ರತಿಕ್ರಿಯಿಸಿ (+)