ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರ ಗಟ್ಟಿ ಧ್ವನಿಯಾಗಿದ್ದ ಪುಟ್ಟಣ್ಣಯ್ಯ: ಸಿದ್ದರಾಮಯ್ಯ

Last Updated 19 ಫೆಬ್ರುವರಿ 2018, 11:29 IST
ಅಕ್ಷರ ಗಾತ್ರ

ಪಾಂಡವಪುರ: ‘ಸದನದ ಒಳಗೆ, ಹೊರಗೆ ರೈತರ ಪರವಾದ ಗಟ್ಟಿ ಧ್ವನಿಯಾಗಿದ್ದ ಶಾಸಕ ಕೆ.ಎಸ್‌.ಪುಟ್ಟಣ್ಣಯ್ಯ ಅವರ ಸಾವು ಅನಿರೀಕ್ಷಿತವಾದುದು. ಜೀವನವಿಡೀ ಹೋರಾಟದಲ್ಲೇ ಮುಂದುವರಿದ ಅವರು ನಿಸ್ವಾರ್ಥದಿಂದ ಸೇವೆ ಸಲ್ಲಿಸಿದ್ದರು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಪಾಂಡವಪುರ ತಾಲ್ಲೂಕು, ಕ್ಯಾತನಹಳ್ಳಿ ಗ್ರಾಮದ ಕ್ರೀಡಾಂಗಣದಲ್ಲಿ ಸೋಮವಾರ ಕೆ.ಎಸ್‌.ಪುಟ್ಟಣ್ಣಯ್ಯ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

‘ಪ್ರೊ.ಎಂ.ಡಿ.ನಂಜುಂಡಸ್ವಾಮಿ ಅವರ ಚಿಂತನೆಗಳ ಪ್ರಭಾವಕ್ಕೆ ಒಳಗಾಗಿ ನಾವೆಲ್ಲರೂ ರೈತಪರ ಹೋರಾಟದಲ್ಲಿ ಪಾಲ್ಗೊಂಡೆವು. ನಾವು ಹೋರಾಟ ಬಿಟ್ಟು ರಾಜಕಾರಣಕ್ಕೆ ಬಂದೆವು. ಆದರೆ ಪುಟ್ಟಣ್ಣಯ್ಯ ಹೋರಾಟ ಮುಂದುವರಿಸಿ ರೈತರ ಪರವಾಗಿ ನಿಂತರು. ರೈತರ ಪ್ರತಿನಿಧಿಯಾಗಿ ರಾಜಕಾರಣಕ್ಕೂ ಬಂದರು. ಬದ್ಧತೆಯಿಂದ ಹಲವು ಚಳವಳಿ ನಡೆಸಿರುವ ಅವರ ಸಾವು ಇಡೀ ರಾಜ್ಯಕ್ಕೆ ತುಂಬಲಾಗದ ನಷ್ಟ. ನಾಡಿಗೆ ಇಂಥವರು ಅತ್ಯಗತ್ಯ. ಅವರ ಅಗಲಿಕೆಯಿಂದ ವೈಯಕ್ತಿಕವಾಗಿಯೂ ನನಗೆ ನೋವಾಗಿದೆ’ ಎಂದು ಹೇಳಿದರು.

‘ಬಜೆಟ್‌ ಮಂಡನೆ ಪೂರ್ವದಲ್ಲಿ ಪುಟ್ಟಣ್ಣಯ್ಯ ನನ್ನನ್ನು ಭೇಟಿಯಾಗಿ ರೈತರಿಗೆ ಅನುಕೂಲವಾದ ಕೆಲವು ಅಂಶಗಳನ್ನು ಸೇರಿಸುವಂತೆ ಸಲಹೆ ನೀಡಿದ್ದರು. ಮುಂಬರುವ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ತಯಾರಿ ನಡೆಸಿದ್ದ ಅವರು ಸಹಾಯ ಮಾಡುವಂತೆ ಕೇಳಿಕೊಂಡಿದ್ದರು. ನಾನು ನೋಡೋಣ ಎಂದಷ್ಟೇ ಹೇಳಿದ್ದೆ. ಆದರೆ ಅವರು ಇಷ್ಟು ಬೇಗ ನಿಧನ ಹೊಂದುತ್ತಾರೆ ಎಂದು ಯಾರೂ ಊಹಿಸಿರಲಿಲ್ಲ’ ಎಂದರು.

ಪುಟ್ಟಣ್ಣಯ್ಯ ಪ್ರತಿಮೆಗೆ ಹಸಿರು ನಿಶಾನೆ
ಸಿದ್ದರಾಮಯ್ಯ ಸುದ್ದಿಗಾರರ ಜೊತೆ ಮಾತನಾಡುವಾಗ ಸಾವಿರಾರು ಜನರು ‘ಪಾಂಡವಪುರದಲ್ಲಿ ಪುಟ್ಟಣ್ಣಯ್ಯ ಪ್ರತಿಮೆ ಬೇಕೇ ಬೇಕು’ ಎಂದು ಘೋಷಣೆ ಕೂಗಿದರು. ಜನರ ಕೂಗಿದೆ ಸಿದ್ದರಾಮಯ್ಯ ಒಪ್ಪಿಗೆ ಸೂಚಿಸಿದರು. ಮುಖ್ಯಮಂತ್ರಿಗಳ ಜೊತೆ ಸಚಿವ ಡಾ.ಮಹಾದೇವಪ್ಪ, ಸಂಸದ ಧ್ರುವನಾರಾಯಣ್‌, ಡಾ.ಯತೀಂದ್ರ ಸಿದ್ದರಾಮಯ್ಯ ಅಂತಿಮ ನಮನ ಸಲ್ಲಿಸಿದರು. ನಂತರ ಮುಖ್ಯಮಂತ್ರಿಗಳು ಪುಟ್ಟಣ್ಣಯ್ಯ ಪತ್ನಿ ಸುನಿತಾ ಪುಟ್ಟಣ್ಣಯ್ಯ ಹಾಗು ಪುತ್ರ ದರ್ಶನ ಅವರಿಗೆ ಸಾಂತ್ವನ ಹೇಳಿದರು.

ನೆರೆದಿದ್ದ ಜನಸಾಗರ

ಜನಸಾಗರ

ಭಾನುವಾರ ರಾತ್ರಿಯಿಂದಲೂ ಕ್ಯಾತನಹಳ್ಳಿ ಗ್ರಾಮಕ್ಕೆ ಜನಸಾಗರವೇ ಬಂದು ಸೇರಿತ್ತು. ಮೈಸೂರು–ಮಂಗಳೂರು ರಾಜ್ಯ ಹೆದ್ದಾರಿಯಿಂದ ಕ್ಯಾತನಹಳ್ಳಿ ಗ್ರಾಮದವರೆಗೂ ಹಸಿರು ಶಾಲುಗಳೇ ಕಾಣುತ್ತಿದ್ದವು. ರಸ್ತೆಯುದ್ದಕ್ಕೂ ನೀರು ಚುಮುಕಿಸಿ ರಸ್ತೆಯನ್ನು ದೂಳುಮುಕ್ತಗೊಳಿಸಲಾಗಿತ್ತು. ವಿವಿಧ ಜಿಲ್ಲೆಗಳಿಂದ ರೈತರು, ರೈತಸಂಘದ ಕಾರ್ಯಕರ್ತರು ಬಂದು ಅಗಲಿದ ನಾಯಕನಿಗೆ ಅಂತಿಮ ನಮನ ಸಲ್ಲಿಸಿದರು. ಪೊಲೀಸರು ಬ್ಯಾರಿಕೇಡ್‌ ಅಳವಡಿಸಿ ಅಂತಿಮ ನಮನ ಸಲ್ಲಿಸಲು ಜನರನ್ನು ಸಾಲಾಗಿ ಬಿಡುತ್ತಿದ್ದರು. ಗ್ರಾಮಸ್ಥರು, ಮಹಿಳೆಯರು, ವೃದ್ಧರು ಪುಟ್ಟಣ್ಣಯ್ಯ ಅವರನ್ನು ನೆನೆದು ಕಣ್ಣೀರು ಸುರಿಸಿದರು.

ಗುರುವಾರ ಅಂತ್ಯಕ್ರಿಯೆ

ಗುರುವಾರ (ಫೆ.22) ಕೆ.ಎಸ್‌.ಪುಟ್ಟಣ್ಣಯ್ಯ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ನೆರವೇರಲಿದೆ ಎಂದು ಅವರ ಕುಟುಂಬದ ಸದಸ್ಯರು ತಿಳಿಸಿದ್ದಾರೆ.

ಪುಟ್ಟಣ್ಣಯ್ಯ ಅವರ ಪುತ್ರಿಯರಾದ ಅಕ್ಷತಾ, ಸ್ಮಿತಾ ವಿದೇಶದಿಂದ ಮಂಗಳವಾರ ಸಂಜೆ ಬರುತ್ತಾರೆ. ತಂಗಿ ರೇಣುಕಾ ಬುಧವಾರ ಬರುತ್ತಾರೆ. ಗುರುವಾರ ಬೆಳಿಗ್ಗೆ ಕ್ಯಾತನಹಳ್ಳಿ ಗ್ರಾಮದ ಕ್ರೀಡಾಂಗಣದಲ್ಲಿ ಮತ್ತೆ ಸಾರ್ವಜನಿಕ ದರ್ಶನಕ್ಕೆ ಇಡಲಾಗುವುದು. ಮಧ್ಯಾಹ್ನ ಅಂತ್ಯಸಂಸ್ಕಾರ ನೆರವೇರಿಸಲಾಗುವುದು ಎಂದು ತಿಳಿಸಿದ್ದಾರೆ.

ಗುರುವಾರದವರೆಗೆ ಮೃತದೇಹವನ್ನು ಸಂರಕ್ಷಣೆ ಮಾಡಲು ಮೈಸೂರಿನ ಜೆಎಸ್‌ಎಸ್‌ ವೈದ್ಯಕೀಯ ಕಾಲೇಜು ಶೈತ್ಯಾಗಾರದಲ್ಲಿ ವ್ಯವಸ್ಥೆ ಮಾಡಲಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪುಟ್ಟಣ್ಣಯ್ಯ ಅವರ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು –ಪ್ರಜಾವಾಣಿ ಚಿತ್ರಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT