ಮಂಗಳವಾರ, ಡಿಸೆಂಬರ್ 10, 2019
20 °C

ಶಿವಾಜಿ ಮಹಾರಾಜರ ಪುತ್ಥಳಿ ಸ್ಥಾಪನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಾಜಿ ಮಹಾರಾಜರ ಪುತ್ಥಳಿ ಸ್ಥಾಪನೆ

ಕಲಬುರ್ಗಿ: ನಗರದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪುತ್ಥಳಿಯನ್ನು ಸ್ಥಾಪಿಸಬೇಕು ಎನ್ನುವುದು ಮರಾಠ ಸಮುದಾಯದ ಬಹುದಿನಗಳ ಬೇಡಿಕೆಯಾಗಿದ್ದು, ಈ ಬಗ್ಗೆ ಗಮನ ಹರಿಸಲಾಗುವುದು ಎಂದು ಮೇಯರ್ ಶರಣಕುಮಾರ ಮೋದಿ ಹೇಳಿದರು. ಡಾ.ಎಸ್.ಎಂ.ಪಂಡಿತ ರಂಗಮಂದಿರದಲ್ಲಿ ಸೋಮವಾರ ಏರ್ಪಡಿಸಿದ್ದ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಶಿವಾಜಿ ಮಹಾರಾಜರು ಚಿಕ್ಕ ವಯಸಿನಲ್ಲಿಯೇ ವೀರ, ಶೂರರಾಗಿದ್ದರು. ಅಲ್ಲದೆ ಈ ದೇಶ ಕಂಡ ಅಪ್ರತಿಮ ದೇಶಭಕ್ತರಾಗಿದ್ದರು. ಮರಾಠ ಸಮುದಾಯ ಸೇರಿ ಹಿಂದೂ ಸಮುದಾಯದ ಏಳಿಗೆಗಾಗಿ ಶ್ರಮಿಸಿದ ಮಹಾನ್ ನಾಯಕ. ರಾಜ್ಯದಲ್ಲಿ ಮರಾಠ ಸಮುದಾಯವನ್ನು 2ಎ ವರ್ಗಕ್ಕೆ ಸೇರಿಸಬೇಕು ಎಂಬ ಬೇಡಿಕೆ ಇದ್ದು, ಮುಂದಿನ ದಿನಗಳಲ್ಲಿ ಸರ್ಕಾರ ಈ ಬಗ್ಗೆ ತೀರ್ಮಾನ ಕೈಗೊಳ್ಳಲಿದೆ’ ಎಂದರು.

ಶಾಸಕ ದತ್ತಾತ್ರೇಯ ಪಾಟೀಲ ರೇವೂರ ಮಾತನಾಡಿ, ‘ತುಳಜಾ ಭವಾನಿ ಕೃಪೆಗೆ ಪಾತ್ರರಾದ ಶಿವಾಜಿ ಮಹಾರಾಜರು ಕೇವಲ ಮರಾಠ ಸಮುದಾಯದ ನಾಯಕರಲ್ಲ, ಹಿಂದೂ ಧರ್ಮವನ್ನು ಒಟ್ಟುಗೂಡಿಸಿದ ಧರ್ಮ ರಕ್ಷಕರಾಗಿದ್ದಾರೆ. ಮುಂಬೈಗೆ ಹೊಂದಿಕೊಂಡಿರುವ ಅರಬ್ಬಿ ಸಮುದ್ರದಲ್ಲಿ ₹3,500 ಕೋಟಿ ವೆಚ್ಚದಲ್ಲಿ ಶಿವಾಜಿ ಮಹಾರಾಜರ ಪುತ್ಥಳಿ ನಿರ್ಮಿಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ’ ಎಂದು ಹೇಳಿದರು.

ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್ತಿನ ರಾಜ್ಯ ಘಟಕದ ಉಪಾಧ್ಯಕ್ಷ ಸೂರ್ಯಕಾಂತ ಕದಂ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾಳಗಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಎಸ್.ಜಿ. ಶೀಲವಂತ ಅವರು ಛತ್ರಪತಿ ಶಿವಾಜಿ ಮಹಾರಾಜರ ಜೀವನ ಚರಿತ್ರೆ ಕುರಿತು ಉಪನ್ಯಾಸ ನೀಡಿದರು.

ಶಿಷ್ಟಾಚಾರ ತಹಶೀಲ್ದಾರ್ ಪ್ರಕಾಶ ಚಿಂಚೋಳಿಕರ್, ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಬಿ.ಜಗದಾಳೆ, ಗೌರವ ಅಧ್ಯಕ್ಷ ಡಾ. ದಿನಕರ್ ಮೋರೆ, ಮುಖಂಡರಾದ ತಿಪ್ಪಣಪ್ಪ ಕಮಕನೂರ, ಸತೀಶ್ ಕದಂ, ಪ್ರತಾಪ್ ಕಾಕಡೆ, ಸುಭಾಷ ಜಾಧವ್, ರಾಘವೇಂದ್ರ ಕುಲಕರ್ಣಿ, ಶಿವರಾಜ ತಿವಾರಿ ಇದ್ದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ದತ್ತಪ್ಪ ಸಾಗನೂರ ಸ್ವಾಗತಿಸಿದರು. ಶಿವಾಜಿ ಮಹಾರಾಜರ ವೇಷಧಾರಿ ಆರ್.ಡಿ.ಮಾನೆ ಗಮನ ಸೆಳೆದರು. ಇದಕ್ಕೂ ಮುನ್ನ ಛತ್ರಪತಿ ಶಿವಾಜಿ ಮಹಾರಾಜರ ಭಾವಚಿತ್ರನ್ನೊಳಗೊಂಡ ವಿವಿಧ ಜಾನಪದ ಕಲಾ ತಂಡದ ಭವ್ಯ ಮೆರವಣಿಗೆಯು ಅಯ್ಯರವಾಡಿ ಹನುಮಾನ ದೇವಸ್ಥಾನದಿಂದ ಪ್ರಾರಂಭವಾಗಿ ರಂಗಮಂದಿರ ತಲುಪಿತು.

* * 

ಮರಾಠ ಸಮುದಾಯ ಭವನ ನಿರ್ಮಾಣಕ್ಕ ನಿವೇಶನ ಒದಗಿಸಬೇಕು ಎಂಬ ಬೇಡಿಕೆ ಇದೆ. ನಗರಾಭಿವೃದ್ಧಿ ಪ್ರಾಧಿಕಾರದಿಂದ ಈ ಬಗ್ಗೆ ಕ್ರಮ ವಹಿಸಲಾಗುವುದು.

ದತ್ತಾತ್ರೇಯ ಪಾಟೀಲ ರೇವೂರ

ಶಾಸಕ

ಪ್ರತಿಕ್ರಿಯಿಸಿ (+)