ಅಡಿಕೆ ನಿಷೇಧಿಸದಂತೆ ಕೇಂದ್ರಕ್ಕೆ ಪ್ರಸ್ತಾವ

7

ಅಡಿಕೆ ನಿಷೇಧಿಸದಂತೆ ಕೇಂದ್ರಕ್ಕೆ ಪ್ರಸ್ತಾವ

Published:
Updated:

ಬೆಂಗಳೂರು: ‘ಅಡಿಕೆ ನಿಷೇಧಿಸದಂತೆ ಕೇಂದ್ರ ಸರ್ಕಾರಕ್ಕೆ ರಾಜ್ಯದಿಂದ ಪ್ರಸ್ತಾವ ಕಳುಹಿಸುತ್ತೇವೆ. ಸದ್ಯದಲ್ಲೇ ಬೆಳೆಗಾರರ ಮಂಡಳಿ ರಚಿಸುತ್ತೇವೆ’ ಎಂದು ತೋಟಗಾರಿಕೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ತಿಳಿಸಿದರು.

ವಿಧಾನ ಪರಿಷತ್‌ನಲ್ಲಿ ಮಂಗಳವಾರ ಶೂನ್ಯ ವೇಳೆಯಲ್ಲಿ ಆಡಳಿತ ಪಕ್ಷದ ಮುಖ್ಯ ಸಚೇತಕ ಐವನ್ ಡಿಸೋಜಾ ಪ್ರಸ್ತಾಪಿಸಿದ ವಿಷಯಕ್ಕೆ ಸಚಿವರು ಉತ್ತರಿಸಿದರು.

‘ಈಗಾಗಲೇ ನಾವು ಕೇಂದ್ರ ಸರ್ಕಾರಕ್ಕೆ ಅಡಿಕೆ ನಿಷೇಧಿಸದಂತೆ ಮೂರ್ನಾಲ್ಕು ಬಾರಿ ಶಿಫಾರಸು ಮಾಡಿದ್ದೇವೆ. ಪ್ರಯೋಗಾಲಯದಿಂದ ಮತ್ತೊಮ್ಮೆ ವರದಿ ಪಡೆದು ಪರಿಶೀಲಿಸುವುದಾಗಿ ಕೇಂದ್ರ ಹೇಳಿದೆ. ತೋಟಗಾರಿಕೆ ವಿವಿ ವರದಿ ಪಡೆದು ಮತ್ತೊಮ್ಮೆ ಕೇಂದ್ರಕ್ಕೆ ಕಳುಹಿಸುತ್ತೇವೆ’ ಎಂದರು.

ಇದಕ್ಕೂ ಮೊದಲು ಐವಾನ್ ಡಿಸೋಜಾ, ‘ಅಡಿಕೆ ನಿಷೇಧದ ಭೀತಿ ಬೆಳೆಗಾರರಲ್ಲಿ ಆತಂಕ ಸೃಷ್ಟಿಸಿದೆ. ಅಧಿಕಾರಿಗಳು ನೀಡಿದ ತಪ್ಪು ಮಾಹಿತಿಯನ್ನೇ ನಂಬಿ ಕೇಂದ್ರ ಸರ್ಕಾರ ಎರಡು ತಿಂಗಳ ಹಿಂದೆಯೇ ನಿಷೇಧಿಸುವ ವಿಚಾರ ಪ್ರಸ್ತಾಪಿಸಿದ್ದರೂ ಬೆಳೆಗಾರರ ಬೆನ್ನಿಗೆ ನಿಲ್ಲಬೇಕಾದ ರಾಜ್ಯದ ಸಂಸದರು ಮೌನವಹಿಸಿರುವುದು ಅಚ್ಚರಿ ಮೂಡಿಸಿದೆ’ ಎಂದರು.

‘ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ರಾಜ್ಯ ಸಚಿವರು ಡಿ.22ರಂದು ಲೋಕಸಭೆಯಲ್ಲಿ ನೀಡಿರುವ ಲಿಖಿತ ಉತ್ತರದಲ್ಲಿ ಅಡಿಕೆ ಕ್ಯಾನ್ಸರ್‌ಕಾರಕ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಸತತವಾಗಿ ಅಡಿಕೆ ಬಳಸುವುದು ಕ್ಯಾನ್ಸರ್‍ಗೆ ಕಾರಣವಾಗುತ್ತದೆ. ಅಡಿಕೆಯಿಂದ ತಯಾರಾಗುವ ಸುಗಂಧಪೂರಿತ ಉತ್ಪನ್ನಗಳ ತಯಾರಿ, ಮಾರಾಟ ನಿಷೇಧಿಸುವಂತೆ ರಾಜ್ಯಗಳಿಗೆ ಸೂಚನೆ ನೀಡಲಾಗಿದೆ. ಗುಟ್ಕಾ ಉತ್ಪಾದನೆ ಮತ್ತು ಮಾರಾಟ ನಿಯಂತ್ರಿಸುವ ಸಂಬಂಧ ಆಹಾರ ಸುರಕ್ಷತಾ ಮಾನದಂಡ ಅನುಷ್ಠಾನಗೊಳಿಸುವಂತೆ ಎಲ್ಲ ರಾಜ್ಯ ಸರ್ಕಾರಗಳಿಗೆ ಸೂಚಿಸಿರುವುದು ಸಚಿವರ ಉತ್ತರದಲ್ಲಿ ಉಲ್ಲೇಖವಾಗಿದೆ’ ಎಂದು ಸದನದ ಗಮನ ಸೆಳೆದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry