ಭಾನುವಾರ, ಡಿಸೆಂಬರ್ 8, 2019
24 °C

ಎಎಫ್‌ಸಿ ಕಪ್‌ ಫುಟ್‌ಬಾಲ್‌ ಚಾಂಪಿಯನ್‌ಷಿಪ್‌; ಡೊವ್ಯಾಲ್‌ ‘ಹ್ಯಾಟ್ರಿಕ್‌’ ದಾಖಲೆ

Published:
Updated:
ಎಎಫ್‌ಸಿ ಕಪ್‌ ಫುಟ್‌ಬಾಲ್‌ ಚಾಂಪಿಯನ್‌ಷಿಪ್‌; ಡೊವ್ಯಾಲ್‌ ‘ಹ್ಯಾಟ್ರಿಕ್‌’ ದಾಖಲೆ

ಬೆಂಗಳೂರು: ಎಎಫ್‌ಸಿ ಕಪ್‌ ಫುಟ್‌ಬಾಲ್‌ ಟೂರ್ನಿಯಲ್ಲಿ ಗುಂಪು ಹಂತಕ್ಕೆ ಅರ್ಹತೆ ಗಳಿಸುವ ಬೆಂಗಳೂರು ಫುಟ್‌ಬಾಲ್‌ ಕ್ಲಬ್‌ (ಬಿಎಫ್‌ಸಿ) ಕನಸು ಮಂಗಳವಾರ ಕಂಠೀರವ ಕ್ರೀಡಾಂಗಣದಲ್ಲಿ ಸಾಕಾರಗೊಂಡಿತು.

ಮಿಡ್‌ಫೀಲ್ಡರ್‌ ಆ್ಯಂಟೋನಿಯೊ ಡೊವ್ಯಾಲ್‌ ಗಳಿಸಿದ ಮೂರು ಗೋಲುಗಳ ಬಲದಿಂದ ಬಿಎಫ್‌ಸಿ, ಅರ್ಹತಾ ಟೂರ್ನಿಯ ಎರಡನೇ ಲೆಗ್‌ನ ‘ಪ್ಲೇ ಆಫ್‌’ ಹೋರಾಟದಲ್ಲಿ 5-0 ಗೋಲುಗಳಿಂದ ಮಾಲ್ಡೀವ್ಸ್‌ನ ಟಿ.ಸಿ. ಸ್ಪೋರ್ಟ್ಸ್‌ ಕ್ಲಬ್‌ ತಂಡವನ್ನು ಹಣಿಯಿತು.

ಡೊವ್ಯಾಲ್‌, ಎಎಫ್‌ಸಿ ಕಪ್‌ನಲ್ಲಿ ‘ಹ್ಯಾಟ್ರಿಕ್‌’ ಗೋಲು ಗಳಿಸಿದ ಬಿಎಫ್‌ಸಿಯ ಮೊದಲ ಆಟಗಾರ ಎಂಬ ದಾಖಲೆ ತಮ್ಮದಾಗಿಸಿಕೊಂಡರು.

ಮೊದಲ ಲೆಗ್‌ನಲ್ಲಿ 3-2ರಿಂದ ಎದುರಾಳಿಗಳ ಸವಾಲು ಮೀರಿದ್ದ ಬಿಎಫ್‌ಸಿ, ತವರಿನ ಅಂಗಳದಲ್ಲೂ ಪ್ರಾಬಲ್ಯ ಮೆರೆಯಿತು. ಆರಂಭದ ಎಂಟು ನಿಮಿಷಗಳಲ್ಲಿ ಪ್ರವಾಸಿ ಪಡೆಯಿಂದ ಅಲ್ಪ ಪ್ರತಿರೋಧ ಎದುರಿಸಿದ ಲಾಲ್ತುಮಾವಿಯ ರಾಲ್ಟೆ ಬಳಗ ಆ ನಂತರ ಅಭಿಮಾನಿಗಳು ಖುಷಿಯ ಕಡಲಲ್ಲಿ ತೇಲುವಂತೆ ಮಾಡಿತು.

9ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್‌ ಅವಕಾಶ ಕೈಚೆಲ್ಲಿದ ಡೊವ್ಯಾಲ್‌, 12ನೇ ನಿಮಿಷದಲ್ಲಿ ಮೋಡಿ ಮಾಡಿದರು. ನಿಶು ಕುಮಾರ್‌ ತಮ್ಮತ್ತ ಕಳುಹಿಸಿದ ಚೆಂಡನ್ನು ನಿಯಂತ್ರಣಕ್ಕೆ ಪಡೆದ ಅವರು ಅದನ್ನು 30ಗಜ ದೂರದಿಂದ ಒದ್ದು ಗುರಿ ಮುಟ್ಟಿಸಿದ ರೀತಿ ಮನ ಸೆಳೆಯುವಂತಿತ್ತು. ಆ ನಂತರ ಆಟದ ವೇಗ ಹೆಚ್ಚಿಸಿಕೊಂಡ ಆತಿಥೇಯರು ಗೋಲು ಗಳಿಸುವ ಹಲವು ಅವಕಾಶಗಳನ್ನು ಸೃಷ್ಟಿಸಿಕೊಂಡರು. ಆದರೆ ಗುರಿ ಮುಟ್ಟಿಸಲು ಮಾತ್ರ ಆಗಲಿಲ್ಲ.

35ನೇ ನಿಮಿಷದಲ್ಲಿ ಡೊವ್ಯಾಲ್‌, ವೈಯಕ್ತಿಕ ಎರಡನೇ ಗೋಲು ಬಾರಿಸಿದರು. ಸಹ ಆಟಗಾರ ತಮ್ಮತ್ತ ತಳ್ಳಿದ ಚೆಂಡನ್ನು ಎದುರಾಳಿ ಗೋಲುಪೆಟ್ಟಿಗೆಯ ಸನಿಹ ಇದ್ದ ಅವರು ಚುರುಕಾಗಿ ಗುರಿ ತಲುಪಿಸಿದರು. ಇದರ ಬೆನ್ನಲ್ಲೇ (36ನೇ ನಿಮಿಷ) ಎರಿಕ್‌ ಪಾರ್ಟಲು ಕಾಲ್ಚಳಕ ತೋರಿದರು. ಅಂಗಳದ ಮಧ್ಯಭಾಗದಿಂದ ಅವರು ಒದ್ದ ಚೆಂಡು ಶರವೇಗದಲ್ಲಿ ಸಾಗಿ ಎದುರಾಳಿ ಗೋಲುಪೆಟ್ಟಿಗೆಯ ಬಲೆಗೆ ಮುತ್ತಿಕ್ಕಿದಾಗ ಮೈದಾನದಲ್ಲಿ ಸಂಭ್ರಮ ಮೇಳೈಸಿತು.

ದ್ವಿತೀಯಾರ್ಧದಲ್ಲೂ ರಾಲ್ಟೆ ಪಡೆಯ ಆಟ ರಂಗೇರಿತು. 48ನೇ ನಿಮಿಷದಲ್ಲಿ ಡೊವ್ಯಾಲ್‌, ಚಾಕಚಕ್ಯತೆಯಿಂದ ಚೆಂಡನ್ನು ಗುರಿ ತಲುಪಿಸಿ ಉದ್ಯಾನನಗರಿಯ ಅಭಿಮಾನಿಗಳ ಮನ ಗೆದ್ದರು. ಇದರೊಂದಿಗೆ ಆತಿಥೇಯರ ಮುನ್ನಡೆ 4-0ಗೆ ಹೆಚ್ಚಿತು.

ಇಷ್ಟಾದರೂ ಬಿಎಫ್‌ಸಿ ಗೋಲಿನ ದಾಹ ನೀಗಿದಂತೆ ಕಾಣಲಿಲ್ಲ. ಎದುರಾಳಿಗಳ ದುರ್ಬಲ ರಕ್ಷಣಾಕೋಟೆಯನ್ನು ಗುರಿಯಾಗಿಟ್ಟುಕೊಂಡು ದಾಳಿ ಮುಂದುವರಿಸಿತು. 90ನೇ ನಿಮಿಷದಲ್ಲಿ ರಾಹುಲ್‌ ಬೆಕೆ ಗೋಲು ಗಳಿಸಿ ತಂಡದ ಸಂಭ್ರಮ ಹೆಚ್ಚಿಸಿದರು. ಆತಿಥೇಯರ ಅಬ್ಬರದ ಮುಂದೆ ಟಿ.ಸಿ.ಸ್ಪೋರ್ಟ್ಸ್ ಮಂಕಾಯಿತು.

ಪ್ರತಿಕ್ರಿಯಿಸಿ (+)