ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತಕ್ಕೆ ಸರಣಿ ಜಯಿಸುವ ಕಾತರ

ದಕ್ಷಿಣ ಆಫ್ರಿಕಾ ಎದುರಿನ ಎರಡನೇ ಟ್ವೆಂಟಿ–20 ಪಂದ್ಯ ಇಂದು
Last Updated 20 ಫೆಬ್ರುವರಿ 2018, 18:55 IST
ಅಕ್ಷರ ಗಾತ್ರ

ಸೆಂಚೂರಿಯನ್‌ (ಪಿಟಿಐ): ಏಕದಿನ ಸರಣಿ ಗೆದ್ದು ಚಾರಿತ್ರಿಕ ಸಾಧನೆ ಮಾಡಿರುವ ಭಾರತ ತಂಡ ಈಗ ಹರಿಣಗಳ ನಾಡಿನಲ್ಲಿ ಮತ್ತೊಂದು ಮೈಲುಗಲ್ಲು ಸ್ಥಾಪಿಸಲು ಸಜ್ಜಾಗಿದೆ.

ಸೂಪರ್‌ಸ್ಪೋರ್ಟ್ಸ್‌ ಪಾರ್ಕ್‌ ಅಂಗಳದಲ್ಲಿ ಬುಧವಾರ ನಡೆಯುವ ಎರಡನೇ ಟ್ವೆಂಟಿ–20 ಪಂದ್ಯದಲ್ಲಿ ವಿರಾಟ್‌ ಕೊಹ್ಲಿ ಬಳಗ ದಕ್ಷಿಣ ಆಫ್ರಿಕಾ ಎದುರು ಆಡಲಿದೆ. ಮೊದಲ ಪಂದ್ಯದಲ್ಲಿ ಆತಿಥೇಯರನ್ನು ಮಣಿಸಿ ವಿಶ್ವಾಸದಿಂದ ಬೀಗುತ್ತಿರುವ ಭಾರತ ಈ ಪಂದ್ಯದಲ್ಲೂ ಗೆದ್ದು ಸರಣಿ ಕೈವಶ ಮಾಡಿಕೊಳ್ಳುವತ್ತ ಚಿತ್ತ ನೆಟ್ಟಿದೆ.

ಅಮೋಘ ಲಯದಲ್ಲಿರುವ ಶಿಖರ್‌ ಧವನ್‌, ಎರಡನೇ ಪಂದ್ಯದಲ್ಲೂ ಅಬ್ಬರಿಸಲು ಕಾಯುತ್ತಿದ್ದಾರೆ. ವಾಂಡರರ್ಸ್‌ನಲ್ಲಿ ನಡೆದಿದ್ದ ಮೊದಲ ಹೋರಾಟದಲ್ಲಿ ಧವನ್‌, 39 ಎಸೆತಗಳಲ್ಲಿ 72ರನ್‌ ಬಾರಿಸಿದ್ದರು. ರೋಹಿತ್‌ ಶರ್ಮಾ ಕೂಡ ಗರ್ಜಿಸಿದ್ದರು. ಅವರು 9 ಎಸೆತಗಳಲ್ಲಿ 21ರನ್‌ ಕಲೆಹಾಕಿದ್ದರು. ಈ ಜೋಡಿ ಮತ್ತೊಮ್ಮೆ ತಂಡಕ್ಕೆ ಭದ್ರ ಅಡಿಪಾಯ ಹಾಕಿಕೊಡಲು ಉತ್ಸುಕವಾಗಿದೆ.

ಒಂದು ವರ್ಷದ ನಂತರ ತಂಡದಲ್ಲಿ ಸ್ಥಾನ ಗಳಿಸಿರುವ ಸುರೇಶ್‌ ರೈನಾ ಕೂಡ ದೊಡ್ಡ ಮೊತ್ತ ಪೇರಿಸುವ ಕನಸು ಹೊತ್ತಿದ್ದಾರೆ. ಹಿಂದಿನ ಪಂದ್ಯದಲ್ಲಿ ಅವರು 7 ಎಸೆತಗಳಲ್ಲಿ 15ರನ್‌ ಗಳಿಸಿದ್ದರು. ಮಧ್ಯಮ ಕ್ರಮಾಂಕದಲ್ಲಿ ಕೊಹ್ಲಿ ತಂಡದ ಬ್ಯಾಟಿಂಗ್‌ ಬೆನ್ನೆಲುಬಾಗಿದ್ದಾರೆ. ಏಕದಿನ ಸರಣಿಯಲ್ಲಿ 6 ಪಂದ್ಯಗಳಿಂದ 558ರನ್‌ ಗಳಿಸಿ ಪ್ರಾಬಲ್ಯ ಮೆರೆದಿದ್ದ ಅವರು ಚುಟುಕು ಸರಣಿಯ ಮೊದಲ ಹಣಾಹಣಿಯಲ್ಲಿ 26ರನ್‌ ಬಾರಿಸಿದ್ದರು. ಹಿಂದಿನ ಪಂದ್ಯದ ವೇಳೆ ಸೊಂಟದ ನೋವಿಗೆ ಒಳಗಾಗಿದ್ದ ಅವರು ಇದರಿಂದ ಸಂಪೂರ್ಣವಾಗಿ ಗುಣವಾಗಿದ್ದಾರೆ.

ಕರ್ನಾಟಕದ ಮನೀಷ್‌ ಪಾಂಡೆ, ಅನುಭವಿ ಮಹೇಂದ್ರ ಸಿಂಗ್‌ ದೋನಿ ಮತ್ತು ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ ಅವರೂ ಬ್ಯಾಟಿಂಗ್‌ನಲ್ಲಿ ತಂಡಕ್ಕೆ ಬಲ ತುಂಬುವ ಸಾಮರ್ಥ್ಯ ಹೊಂದಿದ್ದಾರೆ.

ಬೌಲಿಂಗ್‌ನಲ್ಲೂ ತಂಡ ಶಕ್ತಿಯುತವಾಗಿದೆ. ಮೊದಲ ಪಂದ್ಯದಲ್ಲಿ 5 ವಿಕೆಟ್‌ ಉರುಳಿಸಿದ್ದ ಭುವನೇಶ್ವರ್‌ ಮತ್ತೊಮ್ಮೆ ಹರಿಣಗಳ ನಾಡಿನ ತಂಡದ ಬ್ಯಾಟಿಂಗ್‌ ಶಕ್ತಿಗೆ ಪೆಟ್ಟು ನೀಡಲು ಕಾಯುತ್ತಿದ್ದಾರೆ. ಜಸ್‌ಪ್ರೀತ್‌ ಬೂಮ್ರಾ ಕೂಡ ಆರಂಭದಲ್ಲೇ ವಿಕೆಟ್‌ ಪಡೆದು ಎದುರಾಳಿಗಳ ಮೇಲೆ ಒತ್ತಡ ಹೇರುವ ಆಲೋಚನೆ ಹೊಂದಿದ್ದಾರೆ.

‘ಮಾಡು ಇಲ್ಲವೇ ಮಡಿ’ ಹೋರಾಟ: ಮೊದಲ ಪಂದ್ಯದಲ್ಲಿ ಸೋತಿರುವ ದಕ್ಷಿಣ ಆಫ್ರಿಕಾ ತಂಡ ಸರಣಿ ಗೆಲುವಿನ ಆಸೆ ಜೀವಂತ
ವಾಗಿಟ್ಟುಕೊಳ್ಳಬೇಕಾದರೆ ಈ ಪಂದ್ಯದಲ್ಲಿ ಗೆಲ್ಲಲೇಬೇಕು. ಹೀಗಾಗಿ ಆತಿಥೇಯರ ಪಾಲಿಗೆ ಇದು ‘ಮಾಡು ಇಲ್ಲವೇ ಮಡಿ’ ಹೋರಾಟ.

ಸ್ಫೋಟಕ ಬ್ಯಾಟ್ಸ್‌ಮನ್‌ ಎಬಿ ಡಿವಿಲಿಯರ್ಸ್‌ ಗಾಯದಿಂದಾಗಿ ಸರಣಿಗೆ ಅಲಭ್ಯರಾಗಿದ್ದಾರೆ. ಇದು ಡುಮಿನಿ ಬಳಗಕ್ಕೆ ಹಿನ್ನಡೆಯಾಗಿ ಪರಿಣಮಿಸಿದೆ.

ಮೊದಲ ಪಂದ್ಯದಲ್ಲಿ ಈ ತಂಡ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿತ್ತು. ರೀಜಾ ಹೆನ್ರಿಕ್ಸ್‌ ಮತ್ತು ಫರ್ಹಾನ್‌ ಬೆಹಾರ್ಡೀನ್‌ ಅವರನ್ನು ಬಿಟ್ಟು ಉಳಿದವರೆಲ್ಲಾ ವಿಕೆಟ್‌ ನೀಡಲು ಅವಸರಿಸಿದ್ದರು! ಬೌಲರ್‌ಗಳು ವಿಕೆಟ್‌ ಪಡೆಯಲು ಪರದಾಡಿದ್ದರು.

ಇಬ್ಬರು ಸ್ಪಿನ್ನರ್‌ಗಳು?

ಸೂಪರ್‌ಸ್ಪೋರ್ಟ್‌ ಅಂಗಳ ಸ್ಪಿನ್ನರ್‌ಗಳಿಗೆ ಹೆಚ್ಚು ನೆರವು ನೀಡುತ್ತದೆ. ಹೀಗಾಗಿ ಕೊಹ್ಲಿ ಇಬ್ಬರು ಸ್ಪಿನ್ನರ್‌ಗಳನ್ನು ಕಣಕ್ಕಿಳಿಸುವ ನಿರೀಕ್ಷೆ ಇದೆ.

ಒಂದೊಮ್ಮೆ ವಿರಾಟ್‌ ತಂಡದಲ್ಲಿ ಬದಲಾವಣೆ ಮಾಡಿದರೆ ಗಾಯದ ಕಾರಣ ಮೊದಲ ಪಂದ್ಯಕ್ಕೆ ಅಲಭ್ಯರಾಗಿದ್ದ ಕುಲದೀಪ್‌ ಯಾದವ್‌ ಅಥವಾ ಅಕ್ಷರ್‌ ಪಟೇಲ್‌ಗೆ ಯಜುವೇಂದ್ರ ಚಾಹಲ್‌ ಜೊತೆ ಸ್ಪಿನ್‌ ವಿಭಾಗದ ಹೊಣೆ ನಿಭಾಯಿಸುವ ಅವಕಾಶ ಸಿಗಬಹುದು. ಆಗ ಎಡಗೈ ವೇಗಿ ಜಯದೇವ್‌ ಉನದ್ಕತ್‌ ತಂಡ‌ದಿಂದ ಹೊರಗುಳಿಯಬೇಕಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT