3

ಜ್ಞಾನ ಬಚ್ಚಿಡಲು, ಕದಿಯಲು ಸಾಧ್ಯವಿಲ್ಲ

Published:
Updated:

ಚಿಂತಾಮಣಿ: 'ಜ್ಞಾನವನ್ನು ಬಚ್ಚಿಡಲು ಹಾಗೂ ಕದಿಯಲು ಯಾರಿಂದಲೂ ಸಾಧ್ಯವಿಲ್ಲ' ಎಂದು ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ನಡಂಪಲ್ಲಿ ಶ್ರೀನಿವಾಸ್‌ ಅಭಿಪ್ರಾಯಪಟ್ಟರು.

ತಾಲ್ಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯು ಮಂಗಳವಾರ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಿದ್ದ ಸರ್ವಜ್ಞ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

’ನೀರು, ಅಗ್ನಿ, ಭೂಮಿ ಯಾವ ಜಾತಿ, ಸಮುದಾಯಕ್ಕೂ ಸೀಮಿತವಾಗದೆ ಎಲ್ಲರಿಗೂ ಸಮಾನತೆ ಒದಗಿಸಿದೆ. ಸರ್ವಜ್ಞ ಸಹ ಎಲ್ಲ ಜಾತಿ, ಧರ್ಮ, ಸಮುದಾಯಗಳಿಗೂ ಸೇರಿದವರು. ಸರ್ವಜ್ಞರಂತಹ ಪ್ರತಿಭಾವಂತರನ್ನು ಒಂದು ಸಮುದಾಯಕ್ಕೆ ಸೀಮಿತಗೊಳಿಸುವುದು ಅರ್ಥಹೀನ’ ಎಂದರು.

‘ಸರ್ವಜ್ಞ ಎಂಬುದು ಈತನ ಕಾವ್ಯನಾಮ. ತಂದೆ ತಾಯಿಗಳೊಂದಿಗೆ ಪುಣ್ಯಕ್ಷೇತ್ರ, ಗುರುಮಠಗಳನ್ನು ಭೇಟಿ ಮಾಡಿ ಜ್ಞಾನವನ್ನು ಸಂಪಾದಿಸಿದನು. ಅವರು ರಚಿಸಿರುವ ತ್ರಿಪದಿಗಳಿಗೆ ಲೆಕ್ಕವಿಲ್ಲ, ಸಮಾಜದ ಅಭಿವೃದ್ಧಿ ಹಾಗೂ ಬದಲಾವಣೆಗಾಗಿ ಅವರ ವಚನಗಳಿಂದ ಸಾಕಷ್ಟು ಮಾಹಿತಿ ದೊರೆಯುತ್ತದೆ. ಅವರು ರಚಿಸಿರುವ ತ್ರಿಪದಿಗಳ ಕುರಿತು ನಿಖರವಾದ ಮಾಹಿತಿ ಇಲ್ಲ, ಸರಿಸುಮಾರು 7070 ವಚನಗಳು ಲಭ್ಯವಾಗಿವೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ’ ಎಂದರು.

ಮುಖಂಡ ವೆಂಕಟಾಚಲಪತಿ ಮಾತನಾಡಿ, ‘ಕುಂಬಾರ ಸಮುದಾಯಕ್ಕೆ ಎಲ್ಲ ರಂಗಗಳಲ್ಲೂ ಹಿಂದುಳಿದಿದೆ. ಶೈಕ್ಷಣಿಕವಾಗಿ ಹಾಗೂ ರಾಜಕೀಯವಾಗಿ ಮೀಸಲಾತಿ ನೀಡಬೇಕು’ ಎಂದು ಒತ್ತಾಯಿಸಿದರು.

ಮಡಿಕೆ ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸುವ ಕಾಯಕಯೋಗಿಗಳಾದ ಸುಶೀಲಮ್ಮ, ಗುರಮ್ಮ, ಲಕ್ಷ್ಮಮ್ಮ, ನಂಜಮ್ಮ ಅವರನ್ನು ಸನ್ಮಾನಿಸಲಾಯಿತು.

ಕೆ.ವಿ.ಮಂಜುನಾಥ್‌ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪ ತಹಶೀಲ್ದಾರ್‌ ಆಂಜನಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ನರೇಂದ್ರಕುಮಾರ್‌, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಸಿ.ಶ್ರೀನಿವಾಸ್‌, ಸಮುದಾಯದ ಮುಖಂಡರಾದ ಅಶ್ವತ್ಥಪ್ಪ, ಸೀನಪ್ಪ, ವೆಂಕಟಾಚಲಪತಿ, ನಾಗರಾಜ್‌, ಗುರುದತ್‌ ಚಂದ್ರಶೇಖರ್‌, ಸುಬ್ರಮಣಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry