ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀ ಅಂದ್ರ ನಂಗ ಭಾಳ ಭಾಳ ಇಷ್ಟಾಲೇ

ಮೆಚ್ಚುಗೆ ಪಡೆದ ಪತ್ರಗಳು
Last Updated 21 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ಈ ವಿಶ್ವ ಎಷ್ಟ ವಿಶಾಲ ಅಂತ ವಿಜ್ಞಾನಿಗೋಳ್‌ ಕಂಡ ಹಿಡಿದಾರ್ ನೋಡು, ಅದಕ್ಕಿಂತ ವಿಶಾಲ ನಿನ್ನ ಪ್ರೀತಿ. ಒಂದ ಸತಿ ಅನ್ನಸ್ತೈತಿ ಈ ಹೋಲಿಕೇನೂ ತಪ್ಪss ಅದ ಅಂತ. ಎಂಥಾ ಅಗಾದೋ ನಿನ್ನ ಪ್ರೀತಿ! ಅದನ್ನ ಸಂಪೂರ್ಣವಾಗಿ ನಂಗss ನೀ ಕೊಟ್ಟಿದ್ದು ನನ್ನ ನಸೀಬ. ಪ್ರಶಾಂತವಾಗಿ ಯಾರ ಅಡೆತಡೆ ಇಲ್ದೆ ಹರಿಯೋ ಝರಿ, ಸ್ವತಂತ್ರವಾಗಿ ಹಾರಾಡೋ ಪಕ್ಷಿ, ತನ್ನವ್ವನ ಹತ್ರ ಇರೋ ಸಣ್ಣ ಮರಿ ಹಾಂಗ, ಮತ್ತss ಎಳೇ ಕೂಸಿನ ನಗುವಿನ ಹಂಗ ನಮ್ಮಿಬ್ಬರ ಪ್ರೀತಿ. ಭಾಳ ಸೊಗಸಾಗೈತಿ, ಅಲ್ಲಾ? ಎಂಥಾ ಸಂದರ್ಭ ಬಂದ್ರೂ ಯಾವ್ದೆ ಬೇಡಿಕೆಯನ್ನೂ ಇಡದೇ, ಗಪ್ ಇರೋದಿದೆಯಲ್ಲಾ, ಅದ ಪರಿಶುದ್ಧ ಪ್ರೀತಿ. ತಪ್ಪು ಯಾರದರ ಇರಲಿ, ಪಟಕ್ಕನ ಒಪ್ಪಿಕೊಳ್ಳೋದು ಸೋಲss ಅಲ್ಲ. ಅದss ಸಂದರ್ಭಗಳಿಗೆ ಕೊಡೋ ಕಿಮ್ಮತ್ತು. ಇಂಥ ಕಲಕರಹಿತ ಪ್ರೀತಿ ನಾ ನಿನ್ನಲ್ಲಿ ಕಂಡೇನಿ.

ನಂಗ ಯಾವ ಕನಸೂ ಇಲ್ಲ. ಯಾಕಂದ್ರ ನನ್ನ ಎಲ್ಲಾ ಕನಸಗಳನ್ನ ನಿನ್ನ ಕನಸಿನಲ್ಲಿ ವಿಲೀನ ಮಾಡೇನಿ. ನೀ ನಿನ್ನ ಕನಸಗಳನ್ನ ಪೂರ್ಣ ಮಾಡಿಕೊಳ್ಳೋದಂದ್ರ, ನನ್ನವು ಮಾಡಿದಂಗ. ಅಳೋದನ್ನ ನಾನು ಜಾಸ್ತಿ ಮಾಡೇನಿ. ಅದಕ್ಕss ಕನಸು ಕಾಣೋದನ್ನ ಕೈಬಿಟ್ಟೀನಿ. ಹಿಂಗಾಗಿ ನಿನ್ನ ಕನಸುಗಳು ಅಂದ್ರ ನನ್ನವು. ನೀ ಏನ್ ಸಾಧಿಸಬೇಕಂತಿ, ಅದಕ್ಕ ಸಾತ್ ಕೊಡತೀನಿ; ನಿನ್ನ ಜೊತಿ ನಿಲ್ತೀನಿ. ನೀ ಮಾತ್ರ ಅನ್ನಕೊಂಡಿದ್ದನ್ನ ಸಾಧಿಸಾಕಬೇಕು ಮತ್ತ.

ಹಂಗss ನೆಪ್‌ ಆಗತಾವ ನೋಡ ಆ ದಿನಗಳು. ಬರೀ ಸಣ್ಣ ಸಣ್ಣ ವಿಷಯಕ್ಕ ಜಗಳ ಮಾಡಿಕೊಂಡಿದ್ರ, ತಾಬಡತೋಬಡ ಸ್ವಾರಿಲೇ, ಕ್ಷಮಿಸಿಬಿಡಲೇ ಅಂತ ಹೇಳಾವ ನೀನ್ ಮಾತ್ರ. ಎಷ್ಟೋ ಸತಿ, ಈ ನಿನ್ನ ಗುಣಕ್ಕನ ನಾ ಮನಸೋತಿದ್ದೆ. ಏನರ ಇರವಾತ, ಯಾರದರ ತಪ್ಪಿರಲಿ, ಒಮ್ಮೆ ತಪ್ಪಾತಲೇ ನಂದ ಅನ್ನಾವ ನೀನss ನೋಡು. ಇಂಥ ಸ್ವಭಾವ ಎಲ್ಲಾರ್ಗೂ ಇರೂದಿಲ್ಲಲೇ. ಎಷ್ಟೋ ಗಂಡಾ-ಹೆಂಡತಿಗೊಳು, ಸೋಲಾಕ ನಾ ಒಲ್ಯೆ, ನೀ ಒಲ್ಯೆ ಎಂದು ಬಾಯ್ ಬಡಕೊಂಡ, ಜೀವನಾನ ಯುದ್ಧಭೂಮಿ ಮಾಡೀ, ಬದಕನ್ನ ಹಾಳ ಮಾಡಿಕೊಂಡಾವ. ಆದ್ರ ನೀ ಮಾತ್ರ ಹಂಗಲ್ಲ ನೋಡು. ಜಗಳದಲ್ಲಿ ಗೆಲ್ಲೋದಕ್ಕಿಂತ ಜಾಸ್ತಿ, ನಿನಗ, ನಾ ನಿನ್ನ ಜೀವನದ ಕೊನೆ ಕ್ಷಣ ದವರೆಗೂ ಬೇಕು ಅನ್ನೋ ಗಟ್ಟಿಯಾದ ಆಸೇನ ದೊಡ್ಡದದ. ಬದುಕಿನ್ಯಾಗ ಹೊಂದಾಣಿಕೆ ಮೊದಲ ಬೇಕ ಅನ್ನೋದನ್ನ ನೀ ನನಕಿಂತ ಚೆಂದ ಅರ್ಥಮಾಡಿಕೊಂಡೀದಿ. ಈ ವಿಷಯದಾಗ ನೀ ಸೋತ್ರೂ ಗೆದ್ದಂಗ. ನಾ ಹುಚ್ಚುಕೋಡಿ ಮನಸನ್ಯಾಕಿ, ಜಗಳದಾಗೂ ಗೆಲ್ಲಾಕ ನೋಡತೇನಿ. ಆದ್ರ ನೀ ಬಾಳ ದೊಡ್ಡಾಂವ ಆಗತಿ ಇದ್ರಾಗ. ಇದ ಸ್ವಭಾವ ನನಗ ಬ್ಯಾಡ ಬ್ಯಾಡ ಅಂದ್ರು ಹಿಡಸತೈತಿ ನೋಡು.

ವರ್ಣನೆ ಅಂತಾ ಬಂದ್ರ ಯಾವಾಗ್ಲೂ ಕಲಾಕ್ಷೇತ್ರದಾಗ ಹೆಣ್ಣಿಗೆ ಭಾಳ ಸ್ಥಾನ ಕೊಡತಾರ. ಯಾಕ ಹುಡುಗರು, ಗಂಡಸರು ಅದಕ್ಕ ಯೋಗ್ಯ ಇಲ್ಲೇನು? ನೀ ಮಾತ್ರ ಎಲ್ಲಾ ವರ್ಣನೆಗೂ ಯೋಗ್ಯ ಅದಿ ನೋಡು. ಅತೀ ಹೆಚ್ಚೂ ಅಲ್ಲ, ಕಡಿಮೆನೂ ಅಲ್ಲ ಅನ್ನೊ ಮೈಕಟ್ಟು ಮತ್ತ ಎತ್ತರ ನಿನ್ನದದ. ಸಂಪಿಗೆಯ ಮೂಗ, ತಾವರೆಯ ಕಣ್ಣ, ತೆಳುವಾದ ತುಟಿ, ಮಸ್ತ ಹುಬ್ಬ ಬರೀ ಹೆಣ್ಣಿನ ಆಸ್ತಿ ಅಲ್ಲ. ಅವನ್ನ ನಿನಗೂ ಹೋಲಿಸಬಹುದು. ಹಾಕ್ಕೊಳ್ಳೊ ಅರಬೀ ನೋಡಿದ್ರ ನೀ ಯಾವ ಹೀರೊಕ್ಕಿಂತ ಕಡಿಮೆಯಿಲ್ಲ. ನಿನ್ನ ಒಂದೊಂದ ಮಾತು ಮುತ್ತು ಇದ್ಹಂಗ. ಒಂದ ದಿನಾನೂ ಮನಸ್ಸಿಗೆ ನೋವ ಆಗೋವಂಗ ಮಾತಾಡಲಿಲ್ಲ. ಹುಟ್ಟೋವಾಗ ಬಾಯಾಗ ಸಕ್ರಿ ಡಬ್ಬಿ ಇಟಗೊಂಡ ಹುಟ್ಟಿ ಅಂತ ಕಾಣತೈತಿ. ನಾ ನಿನ್ನಂಗ ಚೆಂದ ಇಲ್ಲೊ ಅಂತ ಹಜಾರ್ ಸತಿ ಹೇಳಿದ್ರೂ, ‘ನೀ ಹೇಂಗರ ಇರ, ನೀ ನನಗ ಬೇಕು ಅಷ್ಟss, ನಾ ನಿನ್ನ ಸ್ವಭಾವವನ್ನ, ನಡತೆಯನ್ನ ಬಾಳ ಮೆಚ್ಚಕೊಂಡೇನಿ’ ಅಂತಿ. ಇಂಥಾ ಮಾತ ಕೇಳಿದ್ರ ಒಂಥರಾ ರೋಮಾಂಚನ, ಜೊತಿಗೆ ಕಣ್ಣಾಗ ಬಾಳ ಸತಿ ದಳದಳಾ ನೀರೂ ಬರತದ. ನಿಂದು ಒಂಥರಾ unconditional love.

ನೀ ನನಗ ಹಿಂಗ ಪ್ರೀತಿ ಮಾಡೋದ ನೋಡಿದ್ರ, ದೇವರ ಮ್ಯಾಲ ಡೌಟ್ ಬರತೈತಿ. ಅಲ್ಲಾ ದೇವ್ರ ಹೆಂಗರ ನನಗ ನಿನ್ನಂಥ ಪ್ರೀತಿ ಮಾಡಾಂವನನ್ನ ಕೊಡಾಕ ಸಾಧ್ಯಯೆಂದ? ಯಾಕಂದ್ರ ಬರೀ ದುಃಖ ಕಂಡೇನಿ ನಾ. ಯಾವದರ ಒಳ್ಳೆದನ್ನ ಆ ದೇವ್ರ ಮಾಡತಾನ ಅಂತಾ ನಂಬಿಕೇನ ಇಟ್ಟಕೊಂಡಿಲ್ಲ ನಾ. ಆದ್ರ ನೀ ನನ್ನ ಬದುಕಿನ್ಯಾಗ ಬಂದದ್ದ, ಏನೋ ಒಳ್ಳೆದ ಆಗತದ ಅಂತಾ ಅನಸಾಕತ್ತೈತಿ. ಖಾತ್ರಿ ಮಾಡಿ ಕೊಟ್ಟಿ ನೀ. ಎಷ್ಟ ಜನ್ಮಾ ಎತ್ತಿ, ಎಷ್ಟ ಪುಣ್ಯ ಮಾಡೇನೋ ನಿನ್ನಂಥವನ್ನ ಕಂಡೇನಿ. ಬಾಳ ಸತಿ ಅಂಜಿಕಿ ಬರತೈತಿ. ಎಲ್ಲಿ ದೇವ್ರ ನಿನ್ನನ್ನ ನನ್ನಿಂದ ಕಸಗೋತಾನ ಅಂತ.

ಇತಿಹಾಸದಾಗ ಕ್ಲಾಸಿಕಲ್ ಲವ್ ಸ್ಟೋರಿಸ್ ಕೇಳೇನಿ. ಅವೆಲ್ಲ ಇವನ್ನ ಮುಂದ ಜೀರೋ ಅನ್ನಸಾಕ ಹತ್ಯಾವ. ಪ್ರಾಮಾಣಿಕ ಒಲವನ್ನ ಧಾರೆಯೆರೆಯೋದರಾಗ ನಿಂಗ ಸರಿಸಾಟಿ ಯಾರಿಲ್ಲ. ಇನ್ನೇನು ಬೇಕ ನನಗ. ಯಾವುದೇ ಕಾರಣಕ್ಕೂ ನಿನ್ನ ಸ್ವಭಾವವನ್ನ ಬದಲಾಯಿಸಕೊಬ್ಯಾಡ. ಸಾಯೊ ಕೊನೆ ಗಳಿಗ್ಯಾಗ, ನನ್ ಕಡೆ ಉಸಿರು ತೊಗೋಳುವಾಗ, ನನ್ನ ತಲಿ ನಿನ್ನ ತೊಡಿ ಮ್ಯಾಲ ಇರಬೇಕು ಅಂದುಕೊಂಡೇನಿ. ಅದಕ್ಕ ಹೇಳತೀನಿ ಜೀವನದ ಕಡೆ ಗಳಿಗೆವರೆಗೂ ನಿನ್ನ ಪ್ರೀತಿ ನನಗ ಬೇಕ್. ನನಗ ಬೇಕಾದನ್ನ ಕೊಟ್ಟೇ ಕೊಡತಿ, ಈಡೇರಸ್ತಿ ಅಂತ ಖಾತ್ರಿ ಐತಿ ನಂಗ.
ಇಂತಿ ನಿನ್ನ ಬಾಳ ಬಾಳ ಇಷ್ಟಪಡಾಕಿ,
ಪೂವು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT