ಭಾನುವಾರ, ಡಿಸೆಂಬರ್ 8, 2019
25 °C

ತೆರೆಮರೆಯ ಶ್ರಮಿಕರು

Published:
Updated:
ತೆರೆಮರೆಯ ಶ್ರಮಿಕರು

ಹತ್ತನೇ ಅಂತರರಾಷ್ಟ್ರೀಯ ಸಿನಿಮಾ ಉತ್ಸವಕ್ಕೆ ಬೆಂಗಳೂರು ಸಜ್ಜಾಗಿ ನಿಂತಿದೆ. ಪ್ರಪಂಚದ ಸಿನಿ ಕ್ಷೇತ್ರದ ಅತ್ಯುತ್ತಮ ಚಿತ್ರಗಳನ್ನು ಹೆಕ್ಕಿ ಚಿತ್ರಪ್ರೇಮಿಗಳಿಗೆ ಉಣಬಡಿಸುವ ಸಕಲ ತಯಾರಿ ನಡೆದಿದೆ. ಈ ಬೃಹತ್‌ ಸಿನಿಮಾ ಸಂತೆಯ ಯಶಸ್ಸಿನ ಹಿಂದೆ ಸಮರ್ಥ ಸಂಘಟನೆಯೂ ಮಹತ್ವದ ಪಾತ್ರ ವಹಿಸುತ್ತದೆ.

ಉತ್ಸವಕ್ಕೆ ನಿರ್ದೇಶಕರು, ಕಾರ್ಯನಿರ್ವಹಣಾ ನಿರ್ದೇಶಕರು, ಕಲಾ ನಿರ್ದೇಶಕರು, ರಿಜಿಸ್ಟ್ರಾರ್‌, ಟೆಕ್ನಿಕಲ್ ಟೀಂ, ಕಂಟೆಂಟ್‌ ರೈಟರ್ಸ್‌, ಸೋಷಿಯಲ್‌ ಮೀಡಿಯಾ... ಹೀಗೆ ಹತ್ತಾರು ಬಗೆಯ ಜವಾಬ್ದಾರಿಗಳನ್ನು ವಹಿಸಿಕೊಂಡು ಕೆಲಸ ಮಾಡುತ್ತಿದ್ದಾರೆ. ವಿವಿಧ ಕ್ಷೇತ್ರಗಳ ಹಿನ್ನೆಲೆಯವುಳ್ಳ 250 ಮಂದಿಯ ಸ್ವಯಂ ಸೇವಕರ ತಂಡವಿದ್ದು, ಅವರು ಸಿನಿಮೋತ್ಸವದಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ.

ಮೂರು ತಿಂಗಳಿನಿಂದ ಸುಮಾರು 20 ಸ್ವಯಂಸೇವಕರು ಉತ್ಸವದ ತಯಾರಿಗಾಗಿ ನಿರಂತರ ಕೆಲಸ ಮಾಡುತ್ತಲೇ ಇದ್ದಾರೆ.    18 ವರ್ಷಕ್ಕೆ ಮೇಲ್ಪಟ್ಟವರು ಸ್ವಯಂ ಸೇವಕರಾಗಿ ಕೆಲಸ ಮಾಡುತ್ತಿದ್ದಾರೆ. ಕಲೆ, ವಾಣಿಜ್ಯ, ವಿಜ್ಞಾನ ಕಾಲೇಜು ವಿದ್ಯಾರ್ಥಿಗಳು, ಪದವೀಧರರು, ಎಂಜಿನಿಯರ್‌ಗಳು, ಚಿತ್ರರಂಗ, ಜಾಹೀರಾತು ವಿಭಾಗದಲ್ಲಿ ವಿವಿಧ ಕೆಲಸದಲ್ಲಿ ತೊಡಗಿಸಿಕೊಂಡವರು ಭಾಗವಹಿಸಿದ್ದಾರೆ ಎಂದು ಮಾಹಿತಿ ನೀಡುತ್ತಾರೆ ಉತ್ಸವದ ಮುಖ್ಯ ಸಂಯೋಜಕ ಪಿ.ಬಿ. ಮುರಳಿ.

ಆಯ್ಕೆಯಾದ ಸಿನಿಮಾಗಳಿಗೆ ಸಂಬಂಧಿಸಿದ ದೇಶಗಳೊಂದಿಗೆ ಸಂವಹನ ಸಾಧಿಸಬೇಕು, ಚಿತ್ರಗಳನ್ನು ತರಿಸಿಕೊಳ್ಳಬೇಕು, ಕೆಲವರಿಗೆ ಭಾರತಕ್ಕೆ ಬರಲು ವೀಸಾ ಸಮಸ್ಯೆ ಆಗಿರುತ್ತದೆ. ಅಂಥವುಗಳನ್ನು ಪರಿಹರಿಸಬೇಕು. ಬೇರೆ ಕಡೆಗಳಿಂದ ಬರುವವರಿಗೆ ಉಳಿದುಕೊಳ್ಳಲು ಹೋಟೆಲ್‌ ವ್ಯವಸ್ಥೆ ಆಗಬೇಕು. ಬೆಂಗಳೂರಿಗೆ ಬರುವವರ ಫ್ಲೈಟ್‌ ಯಾವ ಸಮಯಕ್ಕೆ ಬಂದಿಳಿಯುತ್ತದೆ ಎಂದು ತಿಳಿದುಕೊಳ್ಳಬೇಕು. ಏರ್‌ಪೋರ್ಟ್‌ಗೆ ಹೋಗಿ ಅವರಿಗಾಗಿ ಕಾದು, ಅವರನ್ನು ಕರೆತಂದು ಹೋಟೆಲ್‌ಗೆ ಬಿಡಬೇಕು, ಸಿನಿಮೋತ್ಸವದಲ್ಲಿ ಭಾಗವಹಿಸುವ ಆಸಕ್ತರಿಗೆ ಬೇಕಾಗುವ ಸಿನಿಮಾ ಪಟ್ಟಿಗಳು ತಯಾರಾಗಬೇಕು, ಅವರಿಗೆ ನೀಡುವ ಬ್ಯಾಗ್‌ಗಳ ವಿನ್ಯಾಸ ಆಗಬೇಕು, ಯಾವ ಪರದೆಯಲ್ಲಿ ಯಾವ ಸಿನಿಮಾ ನಿರ್ಧಾರವಾಗಬೇಕು, ಅವುಗಳು ಇಲ್ಲಿಯ ಸರ್ವರ್‌ ಮೂಲಕ ಪ್ಲೇ ಆಗುತ್ತವೆಯೇ ಪರೀಕ್ಷಿಸಬೇಕು... ಹೇಳುತ್ತಾ ಹೋದರೆ ಸಿನಿಮೋತ್ಸವಕ್ಕಾಗಿ ದುಡಿಯುವ ಕೈಗಳ ಕೆಲಸದ ಪಟ್ಟಿ ಬೆಳೆಯುತ್ತಲೇ ಸಾಗುತ್ತದೆ.

ಇವೆಲ್ಲವುಗಳಿಗೂ ಮುಖ್ಯವಾದ, ಬಹು ಸವಾಲಿನ ಕೆಲಸ ಎಂದರೆ ಸಿನಿಮಾಗಳ ಸಂಗ್ರಹ. ಅವುಗಳು ಕೊರಿಯರ್‌ ಮೂಲಕ ಬೆಂಗಳೂರಿಗೆ ಬರಬೇಕು. ಅವು ಡಿಸಿಪಿ, ಬ್ಲ್ಯೂ ರೇ, ಡಿವಿಡಿ ಫಾರ್ಮಾಟ್‌ಗಳಲ್ಲಿ ಬರುತ್ತವೆ. ಕೆಲವೊಂದು ಹಾರ್ಡ್‌ ಡ್ರೈವ್‌ನಲ್ಲಿಯೂ ಇರುತ್ತವೆ. ಅವು ಬೇರೆ ಕಡೆಯಿಂದ ಬಂದು ಮೊದಲು ಕಸ್ಟಮ್ಸ್‌ ವಿಭಾಗಕ್ಕೆ ಬರುತ್ತವೆ. ಅವರಿಗೆ ಇದೂ ಕೂಡ ಎಲ್ಲಾ ಕೊರಯರ್‌ನಂತೆಯೇ. ಹೀಗಾಗಿ ಅಲ್ಲಿಯ ಪರೀಕ್ಷಾ ವಿಧಾನಗಳು ಮುಗಿದ ಮೇಲೆಯೇ ಸಿನಿಮಾ ಉತ್ಸವಕ್ಕೆ ಸಂಬಂಧಿಸಿದವರಿಗೆ ಸಿಗುತ್ತದೆ. ಕೆಲವೊಂದು ದೇಶದಿಂದ ಬಂದವು ಬೇಗ ಸಿಕ್ಕಿದರೆ ಇನ್ನು ಕೆಲವು ತುಂಬಾ ಸಮಯ ತೆಗೆದುಕೊಳ್ಳುತ್ತವೆ. ಅಲ್ಲಿಂದ ತರುವುದೇ ದೊಡ್ಡ ಕೆಲಸ. ಇನ್ನು ತಂದ ಮೇಲೆಯೂ ಕೆಲವಕ್ಕೆ ಪಾಸ್‌ವರ್ಡ್‌ ಇರುತ್ತವೆ. ಅವುಗಳನ್ನು ಇಲ್ಲಿಯ ಸಿಸ್ಟಂಗೆ ಸರಿಹೊಂದುವಂತೆ ಬದಲಾಯಿಸಿಕೊಳ್ಳಬೇಕು. ಹೀಗೆ ಒಂದಲ್ಲ ಎರಡಲ್ಲ ಇಂಥ ನೂರಾರು ಸಮಸ್ಯೆಗಳಿಗೆ ಸಾಕ್ಷಿಯಾಗುತ್ತಾ, ಅವುಗಳನ್ನು ತಾಳ್ಮೆಯಿಂದ ಪರಿಹರಿಸಿಕೊಳ್ಳುತ್ತಾ ಸಿನಿಮೋತ್ಸವಕ್ಕೆ ಬಂದವರ ಮುಖದಲ್ಲಿ ನಗುವರಳಲು ಕಾರಣವಾಗುತ್ತಾರೆ.

ಮುರಳಿ ಅವರು ಪ್ರಕಾರ, ‘ನಿರಂತರವಾಗಿ 24 ಗಂಟೆ ನಾವು ಕೆಲಸ ಮಾಡುತ್ತಲೇ ಇರುತ್ತೇವೆ. ಇಲ್ಲಿ ಇಂಥ ತಂಡದ ಕೆಲಸ ಕಡಿಮೆ ಎನ್ನುವಂತಿಲ್ಲ. ತಂಡದ ಎಲ್ಲರೂ ಎಲ್ಲ ಕೆಲಸವನ್ನು ಸರಿಯಾಗಿ ಮಾಡಿದರಷ್ಟೇ ಎಲ್ಲವೂ ಸುಲಭವಾಗುತ್ತದೆ. ನಾವು ಹುಡುಗರು ಹೆಚ್ಚೂ ಕಡಿಮೆ ದಿನವಿಡೀ ಕೆಲಸ ಮಾಡುತ್ತಿದ್ದೇವೆ. ಇನ್ನು ತಂಡದಲ್ಲಿರುವ ಹೆಣ್ಣುಮಕ್ಕಳು ಬೆಳಿಗ್ಗೆ ಒಂಬತ್ತರಿಂದ ಆರೇಳು ಗಂಟೆಯವರೆಗೆ ಕೆಲಸ ಮಾಡುತ್ತಾರೆ. ತಯಾರಿಯ ಕೆಲಸ ಎಷ್ಟು ಕಠಿಣವಾಗಿರುತ್ತದೋ ಅಷ್ಟೇ ಶ್ರಮ, ಉತ್ಸವ ನಡೆಯುವಾಗಲೂ, ಮುಗಿಯುವವರೆಗೂ ನಿರಂತರವಾಗಿ ಮಾಡುತ್ತಲೇ ಇರಬೇಕಾಗುತ್ತದೆ’ ಎನ್ನುತ್ತಾರೆ.

ಒರಾಯನ್‌ ಮಾಲ್‌ನ 11 ಪರದೆಗಳಲ್ಲಿ ಚಿತ್ರ ಪ್ರದರ್ಶನವಾಗುತ್ತದೆ. ಒಂದೇ ಬಾರಿಗೆ ಚಿತ್ರ ಪ್ರದರ್ಶನ ಆಗುತ್ತದೆ ಎಂದರೆ ಸುಮಾರು 2800 ಮಂದಿ ಕುಳಿತು ಚಿತ್ರ ವೀಕ್ಷಿಸಬಹುದು. ಇನ್ನು ಚಾಮರಾಜ ಪೇಟೆಯಲ್ಲಿರುವ ಕರ್ನಾಟಕ ಚಲನಚಿತ್ರ ಕಲಾವಿದರ ತಂಡ ನಿರ್ಮಿಸಿರುವ ಡಾ.ರಾಜ್‌ ಭವನದಲ್ಲಿಯೂ ಚಿತ್ರ ಪ್ರದರ್ಶನವಿದೆ. ಅಲ್ಲಿ 300 ಆಸನಗಳಿವೆ. ಅಲ್ಲಿಯೂ ಸಾಕಷ್ಟು ಮಂದಿ ಬರುತ್ತಾರೆ. ಇಲ್ಲಿಗೆ ಸಂಬಂಧಿಸಿದ ಎಲ್ಲಾ ನಿರ್ವಹಣೆಯನ್ನು, ಬಂದ ಜನರ ಅವಶ್ಯಕತೆಯನ್ನೂ ಈಡೇರಿಸುವುದು ತಂಡದವರೇ. ಹೀಗಾಗಿ ಕೆಲವರು ನಿರಂತರ ಕೆಲಸದಲ್ಲಿ ತೊಡಗಿಕೊಂಡಿದ್ದರೆ ಇನ್ನು ಕೆಲವರು ವ್ಯವಸ್ಥೆಯ ಭಾರ ಹೊತ್ತು ಓಡಾಡುತ್ತಿರುತ್ತಾರೆ. ಕೆಲಸ, ಒತ್ತಡಗಳ ನಡುವೆ ವಿಶ್ರಾಂತಿಯಂತೂ ಸಿನಿಮೋತ್ಸವ ಮುಗಿಯುವಷ್ಟು ದೂರ. →→v

ಪ್ರತಿಕ್ರಿಯಿಸಿ (+)