ಶುಕ್ರವಾರ, ಡಿಸೆಂಬರ್ 13, 2019
27 °C

ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳುವುದಕ್ಕೆ ಆಕ್ಷೇಪ: ಹೇಳಿಕೆ ವಾಪಸ್ ಪಡೆದ ಸಚಿವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳುವುದಕ್ಕೆ ಆಕ್ಷೇಪ: ಹೇಳಿಕೆ ವಾಪಸ್ ಪಡೆದ ಸಚಿವ

ಬೆಂಗಳೂರು: ಪೆಟ್ರೋಲ್‌ ಎರಚಿ ಬೆಂಕಿ ಇಡುವ ಬೆದರಿಕೆ ಹಾಕಿದ ನಾರಾಯಣಸ್ವಾಮಿ ವಿರುದ್ಧ ದೂರು ನೀಡದ ಬಿಬಿಎಂಪಿ ಕಂದಾಯ ಅಧಿಕಾರಿ (ಎಆರ್‌ಒ) ವಿರುದ್ಧ ಕ್ರಮ ತೆಗೆದುಕೊಳ್ಳುವುದಾಗಿ ಹೇಳಿದ ಗೃಹ ಸಚಿವ ರಾಮಲಿಂಗಾರೆಡ್ಡಿ, ವಿರೋಧ ಪಕ್ಷ ಆಕ್ಷೇ‍‍ಪ ವ್ಯಕ್ತಪಡಿಸಿದ ಬಳಿಕ ತಮ್ಮ ಹೇಳಿಕೆ ವಾಪಸ್ ಪಡೆದರು.

ಕಾಂಗ್ರೆಸ್‌ ಮುಖಂಡ ನಾರಾಯಣಸ್ವಾಮಿ ನಡೆಸಿದ ದಬ್ಬಾಳಿಕೆ ವಿಚಾರ ವಿಧಾನಸಭೆಯ ಶೂನ್ಯವೇಳೆಯಲ್ಲಿ ಬುಧವಾರ ಪ್ರಸ್ತಾಪವಾಯಿತು.

‘ಈ ಘಟನೆ ಇದೇ 16 ರಂದು ನಡೆದಿತ್ತು. ಆದರೆ, ಅಧಿಕಾರಿ ದೂರು ನೀಡದೇ ಇರುವುದೂ ಅಪರಾಧ’ ಎಂದು ಸಚಿವ ರೆಡ್ಡಿ ಹೇಳಿದರು.

‘ದೂರು ನೀಡಿದರೆ ಪೆಟ್ರೋಲ್‌ ಸುರಿದ ಆಸಾಮಿ ಬೆಂಕಿ ಹಾಕಬಹುದು ಎಂಬ ಹೆದರಿಕೆಯಿಂದ ಅಧಿಕಾರಿ ಹಿಂದೇಟು ಹಾಕಿರಬಹುದು. ಅಪರಾಧಿಯನ್ನು ಬಂಧಿಸುವುದನ್ನು ಬಿಟ್ಟು,  ಕ್ರಮ ತೆಗೆದುಕೊಳ್ಳಲು ಮುಂದಾಗಿರುವುದು ಸರಿಯಲ್ಲ’ ಎಂದು ಬಿಜೆಪಿಯ ಸುರೇಶ್‌ ಕುಮಾರ್‌  ಆಕ್ಷೇಪಿಸಿದರು.

‘ಪೆಟ್ರೋಲ್‌ ಹಾಕಿ ಬೆಂಕಿ ಹಚ್ಚಲು ಹೋದ ವ್ಯಕ್ತಿ ತಪ್ಪಿಸಿಕೊಂಡು ಓಡಾಡುತ್ತಿದ್ದಾನೆ. ಆದರೆ, ದೂರು ಕೊಡಲಿಲ್ಲ ಎಂಬ ಕಾರಣಕ್ಕೆ ಅಧಿಕಾರಿ ವಿರುದ್ಧ ಕ್ರಮ ತೆಗೆದುಕೊಳ್ಳಲು ಮುಂದಾಗಿದ್ದು ಸರಿಯಲ್ಲ. ಪ್ರಾಮಾಣಿಕ ಅಧಿಕಾರಿಗಳು ಕೆಲಸ ಮಾಡಲು ಸಾಧ್ಯವಾಗದ ಸ್ಥಿತಿ ಇದೆ’ ಎಂದು ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್‌ ಹೇಳಿದರು.

‘ಎಆರ್‌ಒ ವಿರುದ್ಧ ಕ್ರಮ ತೆಗೆದುಕೊಳ್ಳುವುದಿಲ್ಲ. ಪೆಟ್ರೋಲ್‌ ಎರಚಿ ಬೆಂಕಿ ಹಾಕುವ ಬೆದರಿಕೆ ಒಡ್ಡಿದ ನಾರಾಯಣಸ್ವಾಮಿ ಬಂಧನಕ್ಕೆ ಪೊಲೀಸ್‌ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ’ ಎಂದು ಸಚಿವ ರೆಡ್ಡಿ ತಿಳಿಸಿದರು.

ನಾರಾಯಣಸ್ವಾಮಿ ಕಾಂಗ್ರೆಸ್‌ ಮುಖಂಡ ಎನ್ನುವುದು ನಿಜ. ಆದರೆ, ಅವರು ಸರ್ಕಾರಿ ಕಚೇರಿಗೆ ನುಗ್ಗಿ ದಾಂದಲೆ ನಡೆಸಿರುವುದು ಅಪರಾಧ. ಖಾತಾ ಮಾಡಿಕೊಡುವುದಿಲ್ಲ ಎಂದು ಅಧಿಕಾರಿ ಹೇಳಿದ್ದರೆ, ನಾರಾಯಣಸ್ವಾಮಿ ನ್ಯಾಯಾಲಯಕ್ಕೆ ಹೋಗಬಹುದಿತ್ತು. ಇಲ್ಲವೇ ಮೇಲಿನ ಅಧಿಕಾರಿಗಳಿಗೆ ತಿಳಿಸಬಹುದಿತ್ತು ಎಂದೂ ಅವರು ಹೇಳಿದರು.

ಪ್ರತಿಕ್ರಿಯಿಸಿ (+)