‘ಕಾಂಗ್ರೆಸ್‌ ಗೂಂಡಾಗಿರಿ ಮಿತಿ ಮೀರಿದೆ’

7
ವಿಧಾನಸಭೆಯಲ್ಲಿ ವಿರೋಧಪಕ್ಷದ ನಾಯಕ ಜಗದೀಶ ಶೆಟ್ಟರ್‌ ಆಕ್ರೋಶ

‘ಕಾಂಗ್ರೆಸ್‌ ಗೂಂಡಾಗಿರಿ ಮಿತಿ ಮೀರಿದೆ’

Published:
Updated:

ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್‌ ಗೂಂಡಾಗಿರಿ ಮಿತಿ ಮೀರಿದೆ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಜಗದೀಶ ಶೆಟ್ಟರ್‌ ಆಕ್ರೋಶ ವ್ಯಕ್ತಪಡಿಸಿದರು.

ವಿಧಾನಸಭೆಯಲ್ಲಿ ಶೂನ್ಯವೇಳೆಯಲ್ಲಿ ಮಾತನಾಡಿದ ಅವರು, ಕೆಲವು ದಿನಗಳಿಂದ ಸಾಕಷ್ಟು ಹಲ್ಲೆ, ದೌರ್ಜನ್ಯ ಪ್ರಕರಣಗಳು ಬೆಳಕಿಗೆ ಬಂದಿವೆ. ಆದರೆ, ಸರ್ಕಾರ ಮಾತ್ರ ಕ್ರಮ ತೆಗೆದುಕೊಳ್ಳುವುದನ್ನು ಬಿಟ್ಟು ಹಿಂದಿನ ಮತ್ತು ಇಂದಿನ ಸರ್ಕಾರದ ಅವಧಿಯಲ್ಲಿ ನಡೆದ ಅಪರಾಧ ಪ್ರಕರಣಗಳ ಲೆಕ್ಕ ಕೊಡುತ್ತಿದೆ. ಇದರಿಂದ ಪ್ರಯೋಜನವೇನು ಎಂದು ಪ್ರಶ್ನಿಸಿದರು.

ಇಂತಹ ಗೂಂಡಾಗಿರಿಯ ವಿರುದ್ಧ ದೂರು ನೀಡಲು ಸಾಮಾನ್ಯ ಜನ ಮಾತ್ರವಲ್ಲ, ಅಧಿಕಾರಿಗಳೂ ಹೆದರುವ ಸ್ಥಿತಿ ಇದೆ. ಸ್ವತಃ ಗೃಹ ಸಚಿವ ರಾಮಲಿಂಗಾರೆಡ್ಡಿಯವರಿಗೇ ಕಟ್ಟುನಿಟ್ಟಿನ ಆದೇಶಗಳನ್ನು ನೀಡಲು ಸಾಧ್ಯವಾಗುತ್ತಿಲ್ಲ. ಅಂತಹ ಸ್ವಾತಂತ್ರ್ಯ ಸಚಿವರಿಗೇ ಇಲ್ಲ. ‘ಸೂಪರ್‌ ಸಿಎಂ’ ಆಗಿರುವ ಗೃಹ ಇಲಾಖೆ ಸಲಹೆಗಾರರೇ ಎಲ್ಲವನ್ನು ನಿರ್ಣಯಿಸುತ್ತಿದ್ದಾರೆ ಎಂದು ಶೆಟ್ಟರ್‌ ಕಟಕಿಯಾಡಿದರು.

ಮೊಹಮ್ಮದ್‌ ನಲಪಾಡ್‌ ಕಡೆಯವರು ಪೂರ್ಣಿಮಾ ಎಂಬುವವರನ್ನು ಕೊಲೆ ಮಾಡುವ ಬೆದರಿಕೆ ಒಡ್ಡಿರುವುದು ಈಗ ಬೆಳಕಿಗೆ ಬಂದಿದೆ. ಕಾಂಗ್ರೆಸ್‌ನ ಮತ್ತೊಬ್ಬ ನಾಯಕ ಬಿಬಿಎಂಪಿ ಕಚೇರಿಗೆ ನುಗ್ಗಿ ಪೆಟ್ರೋಲ್‌ ಸುರಿದು ದಾಂದಲೆ ಮಾಡಿದ್ದಾನೆ. ದಕ್ಷಿಣ ಕನ್ನಡದಲ್ಲಿ ಇವತ್ತು ಬಿಜೆಪಿ ಕಾರ್ಯಕರ್ತರು ಹೋಗುತ್ತಿದ್ದ ಬಸ್ಸಿನ ಮೇಲೆ ಕಲ್ಲು ತೂರಾಟ ನಡೆದಿದೆ. ಇಂತಹ ಕೃತ್ಯಗಳನ್ನು ತಡೆಯುತ್ತಿಲ್ಲ. ಅಪರಾಧಿಗಳನ್ನು ಸರ್ಕಾರ ಬಂಧಿಸುತ್ತಿಲ್ಲ ಎಂದು ಹೇಳಿದರು.

‘ನಾವು ಏನಾದರೂ ಮಾತನಾಡಿದರೆ ಸುಳ್ಳು ಹೇಳುತ್ತಿದ್ದಾರೆ ಎನ್ನುತ್ತೀರಿ. ನಾವು ಹೇಳುತ್ತಿರುವುದು ನಿಜವೊ ಸುಳ್ಳೋ ಎಂಬುದನ್ನು ಜನರೇ ತೀರ್ಮಾನಿಸುತ್ತಾರೆ’ ಎಂದು ಶೆಟ್ಟರ್‌ ಹೇಳಿದರು.

ಆಗ ಮಧ್ಯ ಪ್ರವೇಶಿಸಿದ ರಾಮಲಿಂಗಾರೆಡ್ಡಿ, ‘ನೀವು ಆಡುವ ಪ್ರತಿ ಮಾತು ಸುಳ್ಳು ಎಂದು ಹೇಳುವುದಿಲ್ಲ. ಪರೇಶ ಮೇಸ್ತ ಬಿಜೆಪಿ ಕಾರ್ಯಕರ್ತ ಎಂದು ಹೇಳಿದ್ದು ಸುಳ್ಳು. ವಿದ್ವತ್‌ ಬಿಜೆಪಿ ಕಾರ್ಯಕರ್ತ ಎಂದು ಹೇಳಿ ನಂತರ, ತಾವು ಹೇಳಿದ್ದು ಸುಳ್ಳು ಎಂದು ಅಮಿತ್‌ ಶಾ ತಿಳಿಸಿದರು. ನಿಮ್ಮ ಕೆಲವು ಮಾತುಗಳು ಮಾತ್ರ ಸುಳ್ಳು ಎಂದಿದ್ದೇನೆ’ ಎಂದು ಸಮಜಾಯಿಷಿ ನೀಡಿದರು.

‘ಮೊಹಮ್ಮದ್‌ ನಲಪಾಡ್‌ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ದೂರು ನೀಡಿರುವ ಪೂರ್ಣಿಮಾ ಆಗಲೇ ಮೇಲಿನ ಅಧಿಕಾರಿಗಳಿಗೆ ದೂರು ನೀಡಬಹುದಿತ್ತು. ಸಂತೋಷ್‌ ಕೊಲೆ ಆದಾಗ ಸ್ಕ್ರೂಡ್ರೈವರ್‌ನಿಂದ ಚುಚ್ಚಿದ್ದರಿಂದ ಸತ್ತಿರಬಹುದು ಎಂದು ಹೇಳಿಕೆ ನೀಡಿದ್ದು ನಿಜ. ಪೊಲೀಸರು ನೀಡಿದ ಮಾಹಿತಿಯನ್ನು ನೀಡಿದ್ದೆ’ ಎಂದೂ ಗೃಹ ಸಚಿವರು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry