24ರಿಂದ ಸ್ವಚ್ಛ ಬೆಂಗಳೂರು ಅಭಿಯಾನ

7
ಪಾಲಿಕೆ– ಸಾರ್ವಜನಿಕರ ಸಹಭಾಗಿತ್ವದಲ್ಲಿ ಕಾರ್ಯಕ್ರಮ

24ರಿಂದ ಸ್ವಚ್ಛ ಬೆಂಗಳೂರು ಅಭಿಯಾನ

Published:
Updated:

ಬೆಂಗಳೂರು: ಸಾರ್ವಜನಿಕರ ಸಹಭಾಗಿತ್ವದಲ್ಲಿ ಇದೇ 24ರಿಂದ ಮಾರ್ಚ್‌ 3ರವರೆಗೆ ‘ಸ್ವಚ್ಛ ಬೆಂಗಳೂರು ಅಭಿಯಾನ’ ಹಮ್ಮಿಕೊಳ್ಳಲಾಗಿದೆ ಎಂದು ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ತಿಳಿಸಿದರು.

ಬುಧವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕ್ಲೀನ್‌ ಬೆಂಗಳೂರು ಎಂಬ ಆ್ಯಪ್‌ ಅಭಿವೃದ್ಧಿಪಡಿಸಲಾಗಿದೆ. ನಾಗರಿಕರು, ಸಂಘ–ಸಂಸ್ಥೆಗಳು ಪಾಲ್ಗೊಳ್ಳುವಿಕೆಯ ಕುರಿತು ಆ್ಯಪ್‌ ಮೂಲಕ ಮಾಹಿತಿ ನೀಡಬಹುದು’ ಎಂದರು.

ವಾರ್ಡ್‌ ಮಟ್ಟದ ಎಂಜಿನಿಯರ್‌ಗಳು ಹಾಗೂ ಸಂಘ ಸಂಸ್ಥೆಗಳೊಂದಿಗೆ ಈಗಾಗಲೇ ಸಭೆ ನಡೆಸಲಾಗಿದೆ. ಭಾರತೀಯ ರಿಯಲ್ ಎಸ್ಟೇಟ್ ಅಭಿವೃದ್ಧಿ ಸಂಘಟನೆಗಳ ಒಕ್ಕೂಟ (ಕ್ರೆಡಾಯ್) ಹಾಗೂ ಕಸ ನಿರ್ವಹಣೆ ಗುತ್ತಿಗೆದಾರರೊಂದಿಗೂ ಚರ್ಚೆ ನಡೆಸಲಾಗಿದೆ. ಕಸ ಹಾಗೂ ಕಟ್ಟಡ ತ್ಯಾಜ್ಯ ಎಲ್ಲೆಲ್ಲಿ ಬಿದ್ದಿದೆ ಎಂಬುದನ್ನು ಎಂಜಿನಿಯರ್‌ಗಳು ವಾರ್ಡ್‌ವಾರು ಪಟ್ಟಿ ಮಾಡಿದ್ದಾರೆ. ಕಟ್ಟಡದ ಅವಶೇಷಗಳನ್ನು ಸಾಗಿಸಲು ಬೇಕಾದ ಟಿಪ್ಪರ್‌ ಹಾಗೂ ಉಪಕರಣಗಳನ್ನು ಉಚಿತವಾಗಿ ಒದಗಿಸುವುದಾಗಿ ಕ್ರೆಡಾಯ್‌ನ ಪದಾಧಿಕಾರಿಗಳು ತಿಳಿಸಿದ್ದಾರೆ ಎಂದು ಹೇಳಿದರು.

ಕಟ್ಟಡ ತ್ಯಾಜ್ಯವನ್ನು ಬೆಲ್ಲಹಳ್ಳಿ ಕ್ವಾರಿಗೆ ಹಾಗೂ ಕಸವನ್ನು ಕಸ ವಿಲೇವಾರಿ ಘಟಕಗಳಿಗೆ ಸಾಗಿಸಲಾಗುತ್ತದೆ. ಈ ಅಭಿಯಾನಕ್ಕೆ ಪಾಲಿಕೆಯು ಯಾವುದೇ ಅನುದಾನ ಖರ್ಚು ಮಾಡುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.

‘ನಗರದಲ್ಲಿ ಫ್ಲೆಕ್ಸ್‌ ಹಾಗೂ ಬಂಟಿಂಗ್‌ ಹಾವಳಿ ಬಗ್ಗೆ ದೂರುಗಳು ಬಂದಿವೆ. ಅಭಿಯಾನದ ಸಂದರ್ಭದಲ್ಲಿ ಅವುಗಳನ್ನೂ ತೆರವುಗೊಳಿಸುತ್ತೇವೆ. ಖಾಲಿ ನಿವೇಶನಗಳಲ್ಲಿ ಕಸ ಇದ್ದರೆ ಅಂತಹ ಮಾಲೀಕರಿಗೆ ನೋಟಿಸ್‌ ನೀಡಲಾಗುತ್ತಿದೆ. ಅವರು ಕಸವನ್ನು ತೆರವುಗೊಳಿಸದಿದ್ದರೆ, ಪಾಲಿಕೆ ವತಿಯಿಂದ ತೆರವುಗೊಳಿಸಿ ವೆಚ್ಚವನ್ನು ಮಾಲೀಕರಿಂದಲೇ ವಸೂಲಿ ಮಾಡುತ್ತೇವೆ’ ಎಂದರು.

***

ಬಿಬಿಎಂಪಿ ಕೇಂದ್ರ ಕಚೇರಿ ಹಾಗೂ ವಲಯ ಕಚೇರಿಗಳಲ್ಲಿ ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಸಲು ಕ್ರಮ ಕೈಗೊಳ್ಳುತ್ತೇವೆ.

– ಎನ್‌.ಮಂಜುನಾಥ ಪ್ರಸಾದ್‌, ಪಾಲಿಕೆ ಆಯುಕ್ತ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry