ಮಂಗಳವಾರ, ಡಿಸೆಂಬರ್ 10, 2019
20 °C
ಉಗ್ರ ಜಸ್ಪಾಲ್ ಅತ್ವಾಲ್‌ಗೆ ಆಹ್ವಾನ ನೀಡಿದ್ದಕ್ಕೆ ಕೆನಡಾ ಪ್ರಧಾನಿಗೆ ಮುಜುಗರ

ಟ್ರುಡೊಗೆ ಅಂಟಿಕೊಂಡ ಖಲಿಸ್ತಾನ್ ವಿವಾದ

ಪಿಟಿಐ Updated:

ಅಕ್ಷರ ಗಾತ್ರ : | |

ಟ್ರುಡೊಗೆ ಅಂಟಿಕೊಂಡ ಖಲಿಸ್ತಾನ್ ವಿವಾದ

ನವದೆಹಲಿ: ಗುರವಾರ ರಾತ್ರಿ ಇಲ್ಲಿ ನಿಗದಿಯಾಗಿದ್ದ  ಔತಣಕೂಟದಲ್ಲಿ ಭಾಗಿಯಾಗಲು ಖಲಿಸ್ತಾನ್ ಉಗ್ರ ಜಸ್ಪಾಲ್ ಅತ್ವಾಲ್‌ಗೆ ಆಹ್ವಾನ ನೀಡಿದ ಕಾರಣ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಅವರ ಭಾರತ ಪ್ರವಾಸ ವಿವಾದಕ್ಕೆ ಕಾರಣವಾಗಿದೆ.

ಇದರಿಂದ ತಕ್ಷಣ ಎಚ್ಚೆತ್ತ ಕೆನಡಾ ಹೈಕಮಿಷನರ್ ನಾದಿರ್ ಪಟೇಲ್ ಅವರು ಜಸ್ಪಾಲ್‌ಗೆ ನೀಡಿದ್ದ ಆಹ್ವಾನ ರದ್ದುಗೊಳಿಸಿ ವಿವಾದಕ್ಕೆ ತೇಪೆ ಹೆಚ್ಚಲು ಯತ್ನಿಸಿದ್ದಾರೆ.

ನಾದಿರ್‌ ಅವರು ಭಾರತ ಪ್ರವಾಸದಲ್ಲಿರುವ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಅವರಿಗೆ ಈ ಔತಣಕೂಟ ಆಯೋಜಿಸಿದ್ದರು.

1986ರಲ್ಲಿ ವ್ಯಾಂಕೋವರ್‌ನಲ್ಲಿ ಪಂಜಾಬ್‌ ಸಚಿವ ಮಲ್ಕೈತ್ ಸಿಂಗ್ ಅವರ ಹತ್ಯೆ ಯತ್ನ ಪ್ರಕರಣದಲ್ಲಿ ಜಸ್ಪಾಲ್ ಅತ್ವಾಲ್ ಅಪರಾಧಿ ಎಂದು ಘೋಷಿಸಿದ್ದ ಕೋರ್ಟ್, 20 ವರ್ಷ ಜೈಲು ಶಿಕ್ಷೆ ವಿಧಿಸಿತ್ತು.

ಟ್ರುಡೊ ಪತ್ನಿ ಜೊತೆ ಉಗ್ರ!:  ದೆಹಲಿ ಹಾಗೂ ಮುಂಬೈನಲ್ಲಿ ಕೆನಡಾ ಪ್ರಧಾನಿ ಭಾಗಿಯಾಗಿದ್ದ ಎರಡು ಅಧಿಕೃತ ಕಾರ್ಯಕ್ರಮಗಳಲ್ಲಿ ಅತ್ವಾಲ್ ಭಾಗಿಯಾಗಿದ್ದ ಬಗ್ಗೆ ಟೀಕೆ ವ್ಯಕ್ತವಾಗಿದೆ. ಅಲ್ಲದೆ ಟ್ರುಡೊ ಅವರ ಪತ್ನಿ ಸೋಫಿ ಗ್ರಗೋರಿ, ಕೆನಡಾ ಸಚಿವ ಅಮರ್‌ಜೀತ್ ಸೋಹಿ ಹಾಗೂ ಅತ್ವಾಲ್ ಜೊತೆಗಿರುವ ಫೋಟೊವೊಂದು ವಿವಾದವನ್ನು ಸೃಷ್ಟಿಸಿದೆ.

ಅತ್ವಾಲ್‌ಗೆ ಆಹ್ವಾನ ನೀಡಿದ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಟ್ರುಡೊ ಅವರು ಹೇಳಿದ್ದಾರೆ.

ಕೆನಡಾ ಪ್ರಧಾನಿಯವರ ಖಲಿಸ್ತಾನ ಪರ ನಿಲುವಿನ ಬಗ್ಗೆ ಸಾಕಷ್ಟು ಟೀಕೆ ವ್ಯಕ್ತವಾಗಿತ್ತು. ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಕೂಡಾ ಟ್ರುಡೊ ಅವರ ಭೇಟಿ ವೇಳೆ ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು.

ಪ್ರತ್ಯೇಕತಾವಾದಕ್ಕೆ ಎಂದಿಗೂ ಬೆಂಬಲ ನೀಡುವುದಿಲ್ಲ ಎಂದು ಟ್ರುಡೊ ಅವರು ಅಮರೀಂದರ್ ಸಿಂಗ್‌ಗೆ ಭರವಸೆ ನೀಡಿದ್ದರು.

ವೀಸಾ ಸಿಕ್ಕಿದ್ದು ಹೇಗೆ?

ಭಾರತ ಪ್ರವೇಶಿಸಲು ಜಸ್ಪಾಲ್ ಅತ್ವಾಲ್ ವೀಸಾ ಪಡೆದಿದ್ದು ಹೇಗೆ ಎಂಬುದನ್ನು ಪರಿಶೀಲಿಸಲಾಗುತ್ತಿದೆ ಎಂದು ವಿದೇಶಾಂಗ ವ್ಯವಹಾರ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಹೇಳಿದ್ದಾರೆ.

‘ಇದರಲ್ಲಿ ಎರಡು ವಿಷಯಗಳಿವೆ. ಕಾರ್ಯಕ್ರಮಗಳಲ್ಲಿ ಅತ್ವಾಲ್ ಭಾಗಿಯಾಗಿರುವ ಬಗ್ಗೆ ಕೆನಡಾ ಅಧಿಕಾರಿಗಳು ಪ್ರತಿಕ್ರಿಯೆ ನೀಡಬೇಕು. ವೀಸಾ ಹೇಗೆ ಸಿಕ್ಕಿತು ಎಂಬ ಬಗ್ಗೆ ನಾವು ಪರಿಶೀಲಿಸುತ್ತೇವೆ ’ ಎಂದಿದ್ದಾರೆ.

ಪ್ರತಿಕ್ರಿಯಿಸಿ (+)