ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಣಿಕಟ್ಟಿನ ದಾಳಿ ದಂಡಿಸುವುದೇ ಖುಷಿ

ಎರಡನೇ ಟ್ವೆಂಟಿ–20 ಪಂದ್ಯದಲ್ಲಿ ಭಾರತ ತಂಡಕ್ಕೆ ನಿರಾಸೆ; ದುಬಾರಿಯಾದ ಚಾಹಲ್‌
Last Updated 23 ಫೆಬ್ರುವರಿ 2018, 5:55 IST
ಅಕ್ಷರ ಗಾತ್ರ

ಸೆಂಚೂರಿಯನ್‌, ದಕ್ಷಿಣ ಆಫ್ರಿಕಾ (ಪಿಟಿಐ):‘ಮಣಿಕಟ್ಟಿನ ದಾಳಿಯನ್ನು ಎದುರಿಸುವುದು ನನಗೆ ಅಚ್ಚುಮೆಚ್ಚು. ಲೆಗ್‌ಸ್ಪಿನ್ನರ್‌ಗಳ ಎಸೆತಗಳನ್ನು ಬೌಂಡರಿ ಗೆರೆಯಾಚೆ ಅಟ್ಟುವುದರಲ್ಲಿ ನಾನು ತುಂಬ ಖುಷಿ ಕಾಣುತ್ತೇನೆ...’

ಭಾರತ ವಿರುದ್ಧದ ಎರಡನೇ ಟ್ವೆಂಟಿ–20 ಪಂದ್ಯದಲ್ಲಿ ಸ್ಫೋಟಿಸಿ ದಕ್ಷಿಣ ಆಫ್ರಿಕಾ ತಂಡಕ್ಕೆ ಆರು ವಿಕೆಟ್‌ಗಳ ಜಯ ಗಳಿಸಿಕೊಟ್ಟ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್‌ ಹೆನ್ರಿಕ್ ಕ್ಲಾಸೆನ್‌ ಪಂದ್ಯದ ನಂತರ ಹೇಳಿದ ಮಾತು ಇದು.

ಬುಧವಾರ ನಡೆದ ಪಂದ್ಯದಲ್ಲಿ ನಾಲ್ಕನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಇಳಿದ ಕ್ಲಾಸೆನ್‌ 30 ಎಸೆತಗಳಲ್ಲಿ 69 ರನ್ ಗಳಿಸಿದ್ದರು. ಏಳು ಸಿಕ್ಸರ್ ಮತ್ತು ಮೂರು ಬೌಂಡರಿಗಳು ಅವರ ಇನಿಂಗ್ಸ್‌ನಲ್ಲಿದ್ದವು.

ಏಕದಿನ ಸರಣಿಯಲ್ಲಿ ಆತಿಥೇಯ ಬ್ಯಾಟ್ಸ್‌ಮನ್‌ಗಳನ್ನು ಕಟ್ಟಿ ಹಾಕಿದ್ದ ಲೆಗ್ ಸ್ಪಿನ್ನರ್‌ ಯಜುವೇಂದ್ರ ಚಾಹಲ್ ಬುಧವಾರ ಹೆಚ್ಚು ದಂಡನೆಗೆ ಒಳಗಾಗಿದ್ದರು. ನಾಲ್ಕು ಓವರ್‌ಗಳಲ್ಲಿ ಅವರು 64 ರನ್‌ ನೀಡಿದ್ದರು. ಯಾವುದೇ ವಿಕೆಟ್ ಕಬಳಿಸಲು ಅವರಿಗೆ ಸಾಧ್ಯವಾಗಲಿಲ್ಲ. ಟ್ವೆಂಟಿ–20 ಕ್ರಿಕೆಟ್‌ನಲ್ಲಿ ಭಾರತದ ಬೌಲರ್ ಒಬ್ಬರ ದುಬಾರಿ ಸ್ಪೆಲ್ ಆಗಿತ್ತು ಇದು.

ಚಾಹಲ್‌ ಹಾಕಿದ 13ನೇ ಓವರ್‌ನಲ್ಲಿ 23 ರನ್‌ ಕಬಳಿಸಿ ಪಂದ್ಯದ ಗತಿಯನ್ನು ಬದಲಿಸಿದ್ದ ಕ್ಲಾಸೆನ್‌ ‘ಕ್ಲಬ್‌ ಪಂದ್ಯಗಳನ್ನು ಆಡುವಾಗಲೇ ಲೆಗ್‌ ಸ್ಪಿನ್ನರ್‌ಗಳನ್ನು ಎದುರಿಸುವುದು ನನಗೆ ಖುಷಿ ನೀಡುತ್ತಿತ್ತು. ಟೈಟನ್‌ ಕ್ಲಬ್‌ ತಂಡಕ್ಕಾಗಿ ಆಡುತ್ತಿದ್ದಾಗ ಶಾನ್‌ ವಾನ್‌ ಬರ್ಗ್‌ ಅವರ ಎಸೆತಗಳನ್ನು ಸಿಕ್ಸರ್‌ಗೆ ಎತ್ತುತ್ತಿದ್ದೆ’ ಎಂದು ಹೇಳಿದರು.

‘ಭಾರತದ ವೇಗಿಗಳು ಉತ್ತಮ ದಾಳಿ ಸಂಘಟಿಸಿದ್ದರು. ಅವರು ಹಾಕಿದ ‘ಕಟರ್‌’ಗಳನ್ನು ಎದುರಿಸುವುದು ಕಷ್ಟವಾಗಿತ್ತು. ಹೀಗಾಗಿ ನಾನು ಚಾಹಲ್ ಮೇಲೆ ದಾಳಿಗೆ ಮುಂದಾದೆ. ಇದು ಫಲ ನೀಡಿತು. 13ನೇ ಓವರ್‌ನ ಮೊದಲ ಎರಡು ಎಸೆತಗಳನ್ನು ಬೌಂಡರಿಗೆ ಅಟ್ಟಿದ ನಂತರ ಭರವಸೆ ಮೂಡಿತು. ಈ ಓವರ್‌ನಲ್ಲಿ ಸಾಕಷ್ಟು ರನ್‌ ಗಳಿಸಬಹುದು ಎಂಬ ವಿಶ್ವಾಸ ಮೂಡಿತು’ ಎಂದು ಅವರು ತಿಳಿಸಿದರು.

ಚಳಿ ಬಿಡಿಸಿದ ಡುಮಿನಿ: ಬುಧವಾರದ ಪಂದ್ಯದಲ್ಲಿ ಸ್ಫೋಟಿಸಲು ಪ್ರಮುಖ ಕಾರಣ ಜೆಪಿ ಡುಮಿನಿ ಅವರ ಭರವಸೆಯ ಮಾತುಗಳು ಎಂದು ಕೂಡ ಕ್ಲಾಸೆನ್ ವಿವರಿಸಿದರು.

‘ಪ್ರತಿ ಓವರ್‌ ಆರಂಭವಾಗುವ ಮೊದಲು ಆ ಓವರ್‌ನಲ್ಲಿ ಎಷ್ಟು ರನ್ ಗಳಿಸಬೇಕು ಎಂದು ಡುಮಿನಿ ಹೇಳು
ತ್ತಿದ್ದರು. ಅವರ ಸೂಚನೆಯಂತೆ ಮಾಡಲು ನನಗೆ ಸಾಧ್ಯವಾಯಿತು’ ಎಂದರು.

ಬೌಲರ್‌ಗಳಿಗೆ ಕಷ್ಟ ಕೊಟ್ಟ ಮಳೆ: ಪಂದ್ಯದಲ್ಲಿ ಭಾರತದ ಬೌಲರ್‌ಗಳು ದುಬಾರಿಯಾಗಲು ಮಳೆ ಕಾರಣ ಎಂದು ನಾಯಕ ವಿರಾಟ್ ಕೊಹ್ಲಿ ಹೇಳಿದರು.

‘ಭಾರತ ಆರಂಭದಲ್ಲೇ ವಿಕೆಟ್ ಕಳೆದುಕೊಂಡ ಕಾರಣ 175 ರನ್‌ ಗಳಿಸಲು ಮಾತ್ರ ಸಾಧ್ಯ ಎಂದು ಲೆಕ್ಕ ಹಾಕಿದ್ದೆವು. ಆದರೆ ಮನೀಷ್ ಪಾಂಡೆ ಮತ್ತು ಮಹೇಂದ್ರ ಸಿಂಗ್ ದೋನಿ ಅವರ ಉತ್ತಮ ಆಟದಿಂದಾಗಿ ತಂಡ ಸ್ಪರ್ಧಾತ್ಮಕ ಮೊತ್ತ ಪೇರಿಸಿತು. ಹೀಗಾಗಿ ಗೆಲುವಿನ ಭರವಸೆ ಇತ್ತು. ಆದರೆ ಮಳೆಯ ನಂತರ ಬೌಲರ್‌ಗಳಿಗೆ ಚೆಂಡಿನ ಮೇಲೆ ನಿಯಂತ್ರಣ ಸಾಧಿಸಲು ಆಗಲಿಲ್ಲ’ ಎಂದು ಕೊಹ್ಲಿ ಹೇಳಿದರು.

‘ದಕ್ಷಿಣ ಆಫ್ರಿಕಾದ ಬ್ಯಾಟ್ಸ್‌ಮನ್‌ ಗಳು ಚೆನ್ನಾಗಿ ಗುರಿ ಬೆನ್ನತ್ತಿದರು. ಡುಮಿನಿ ಮತ್ತು ಕ್ಲಾಸೆನ್ ಮೆಚ್ಚುಗೆಗೆ ಅರ್ಹರು’ ಎಂದು ಕೊಹ್ಲಿ ಹೇಳಿದರು.

ಮಧ್ಯಮ ಕ್ರಮಾಂಕಕ್ಕೆ ಬಲ ತುಂಬುವ ಭರವಸೆ

ಎರಡನೇ ಟ್ವೆಂಟಿ–20 ಪಂದ್ಯದಲ್ಲಿ ಲಭಿಸಿದ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡಿರುವುದಾಗಿ ಹೇಳಿದ ಮನೀಷ್ ಪಾಂಡೆ ಭಾರತ ತಂಡದ ಮಧ್ಯಮ ಕ್ರಮಾಂಕಕ್ಕೆ ಬಲ ತುಂಬಲು ತಮಗೆ ಸಾಧ್ಯವಿದೆ ಎಂಬ ಭರವಸೆ ವ್ಯಕ್ತಪಡಿಸಿದರು.

ಪಂದ್ಯದಲ್ಲಿ 48 ಎಸೆತಗಳಲ್ಲಿ 79 ರನ್‌ ಗಳಿಸಿದ ಪಾಂಡೆ ಭಾರತ ಉತ್ತಮ ಮೊತ್ತ ಗಳಿಸಲು ನೆರವಾಗಿದ್ದರು.

‘ಅವಕಾಶಕ್ಕಾಗಿ ಕಾಯುತ್ತಾ ಕೂರುವುದು ಕಷ್ಟದ ಕೆಲಸ. ಆದರೆ ಕ್ರಿಕೆಟ್‌ನಲ್ಲಿ ಅದು ಅನಿವಾರ್ಯ. ಅಪ್ರತಿಮ ಆಟಗಾರರು ತುಂಬಿರುವ ಭಾರತದಂಥ ತಂಡದಲ್ಲಿ ಆಡಲು ಕಾಯಲೇಬೇಕಾಗುತ್ತದೆ. ಆದರೆ ಅವಕಾಶ ಲಭಿಸಿದಾಗ ಸಾಮರ್ಥ್ಯ ತೋರಿಸಬೇಕಾಗುತ್ತದೆ’ ಎಂದು ಅವರು ಹೇಳಿದರು.

ಮನೀಷ್‌ಗೆ ಬಿಸಿ ಮುಟ್ಟಿಸಿದ ಮಹಿ

ಜೋಹಾನ್ಸ್‌ಬರ್ಗ್: ಮಹೇಂದ್ರಸಿಂಗ್ ದೋನಿ ಅವರು ಬ್ಯಾಟಿಂಗ್ ಮಾಡುವಾಗ ಪಿಚ್‌ನಲ್ಲಿ ಮಿಂಚಿನಂತೆ ಓಡಿ ರನ್‌ ಗಳಿಸಿ ಗಮನ ಸೆಳೆಯುತ್ತಾರೆ. ಇನ್ನೊಂದು ಬದಿಯಲ್ಲಿರುವ ಬ್ಯಾಟ್ಸ್‌ಮನ್ ಕೂಡ ಅವರಿಗೆ ಸರಿಸಾಟಿಯಾಗಿ ಓಡುವಂತಿದ್ದರೆ ಒಂದು, ಎರಡು ರನ್‌ಗಳು ತಂಡದ ಖಾತೆಗೆ ಸೇರಿ ಎದುರಾಳಿ ಫೀಲ್ಡರ್‌ಗಳು ಒತ್ತಡಕ್ಕೆ ಸಿಲುಕುತ್ತಾರೆ. ಒಂದೊಮ್ಮೆ ಇನ್ನೊಂದು ಬದಿಯ ಬ್ಯಾಟ್ಸ್‌ಮನ್ ಚುರುಕಾಗಿ ಓಡದಿದ್ದರೆ ದೋನಿಯ ಕೆಂಗಣ್ಣಿಗೆ ಗುರಿಯಾಗುವುದು ಖಚಿತ.

ಬುಧವಾರದ ಪಂದ್ಯದಲ್ಲಿ ಮನೀಷ್ ಪಾಂಡೆ ಅವರು ದೋನಿಯ ಕೋಪಕ್ಕೆ ಗುರಿಯಾದರು. 20ನೇ ಓವರ್‌ನ ಮೊದಲ ಎಸೆತದಲ್ಲಿ ಎರಡನೇ ರನ್ ಓಡಲು ಪಾಂಡೆ ನಿರಾಕರಿಸಿದರು. ಇದರಿಂದ ಸಿಟ್ಟಿಗೆದ್ದ ದೋನಿ, ಪಾಂಡೆಯನ್ನು ಕರೆದು ತಪ್ಪು ತಿದ್ದಿಕೊಳ್ಳುವಂತೆ ಹೇಳಿದರು. ದೋನಿಯವರ ಬಿರುನುಡಿಗಳು ಸ್ಟಂಪ್‌ನ ಮೈಕ್‌ನಲ್ಲಿ ದಾಖಲಾಗಿವೆ. ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ತಂಡವು ಸಂಕಷ್ಟದಲ್ಲಿದ್ದಾಗ ದೋನಿ ಮತ್ತು ಮನೀಷ್ ಐದನೇ ವಿಕೆಟ್ ಜೊತೆಯಾಟದಲ್ಲಿ 98 ರನ್‌ಗಳನ್ನು ಗಳಿಸಿ ಆಸರೆಯಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT