ಸೀರೆ ಹಂಚಿಕೆ: ‘ಕೈ’ ಕಾರ್ಯಕರ್ತನ ಕೈ ಕಟ್!

7

ಸೀರೆ ಹಂಚಿಕೆ: ‘ಕೈ’ ಕಾರ್ಯಕರ್ತನ ಕೈ ಕಟ್!

Published:
Updated:
ಸೀರೆ ಹಂಚಿಕೆ: ‘ಕೈ’ ಕಾರ್ಯಕರ್ತನ ಕೈ ಕಟ್!

ಚಿಕ್ಕಬಳ್ಳಾಪುರ: ಗೌರಿಬಿದನೂರು ತಾಲ್ಲೂಕಿನ ಮಂಚೇನಹಳ್ಳಿ ಹೋಬಳಿ ವ್ಯಾಪ್ತಿಯ ಆರ್ಕುಂದ ಗ್ರಾಮದಲ್ಲಿ ಗುರುವಾರ ರಾತ್ರಿ ಸೀರೆ ಹಂಚಿಕೆ ವಿಷಯದಲ್ಲಿ ಘರ್ಷಣೆ ನಡೆದು ಕಾಂಗ್ರೆಸ್ ಕಾರ್ಯಕರ್ತನೊಬ್ಬನ ಕೈ ಕಟ್ ಮಾಡಲಾಗಿದೆ.

‘ಸಂಕ್ರಾಂತಿ ಸುಗ್ಗಿ’ ಕಾರ್ಯಕ್ರಮದ ನೆಪದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮನೆಮನೆಗೆ ತೆರಳಿ ಸೀರೆಗಳನ್ನು ವಿತರಿಸುವಾಗ ಜೆಡಿಎಸ್ ಕಾರ್ಯಕರ್ತರು ಆಕ್ಷೇಪ ವ್ಯಕ್ತಪಡಿಸಿದರು. ಆಗ ಘರ್ಷಣೆ ನಡೆದಿದೆ. ಜೆಡಿಎಸ್ ಕಾರ್ಯಕರ್ತ ಲೋಕೇಶ್ ಎಂಬುವರು ಮಚ್ಚಿನಿಂದ ನಡೆಸಿದ ಹಲ್ಲೆಗೆ ಕಾಂಗ್ರೆಸ್ ಕಾರ್ಯಕರ್ತ ಎಸ್.ರವಿಕುಮಾರ್ ಎಂಬುವರ ಎಡಗೈ ತುಂಡಾಗಿದೆ. ಗಾಯಾಳುವನ್ನು ಹೆಚ್ಚಿನ ಚಿಕಿತ್ಸೆಗೆಗಾಗಿ ಬೆಂಗಳೂರಿಗೆ ಕಳುಹಿಸಿಕೊಡಲಾಗಿದೆ.

ರಾಜ್ಯ ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿ ಶಾಸಕ ಡಾ.ಕೆ.ಸುಧಾಕರ್ ಅವರು ಮಹಿಳಾ ಮತದಾರರನ್ನು ಓಲೈಸಲು ತಮ್ಮ ಬೆಂಬಲಿಗರ ಮೂಲಕ ವಿತರಿಸಿದ್ದರು ಎನ್ನಲಾದ ಸೀರೆಯನ್ನು ವ್ಯಕ್ತಿಯೊಬ್ಬ ನಡುರಸ್ತೆಯಲ್ಲಿ ಬೆಂಕಿ ಹಚ್ಚಿ ಸುಟ್ಟು ಆಕ್ರೋಶ ವ್ಯಕ್ತಪಡಿಸಿದ ವಿಡಿಯೊ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಸುಧಾಕರ್ ಅವರು ತಮ್ಮ ಸಾಯಿಕೃಷ್ಣ ಚಾರಿಟೆಬಲ್ ಟ್ರಸ್ಟ್‌ ವತಿಯಿಂದ ಆಯೋಜಿಸಿರುವ ‘ಸಂಕ್ರಾಂತಿ ಸುಗ್ಗಿ’ ಕಾರ್ಯಕ್ರಮಕ್ಕೆ ಜನರನ್ನು ಆಹ್ವಾನಿಸುವ ನೆಪದಲ್ಲಿ ಕ್ಷೇತ್ರದಾದ್ಯಂತ ತಮ್ಮ ಬೆಂಬಲಿಗರ ಮೂಲಕ ಮನೆ ಮನೆಗೆ ಸೀರೆ ಹಂಚುತ್ತಿದ್ದಾರೆ ಎಂದು ತಿಳಿದುಬಂದಿದೆ.

2 ನಿಮಿಷ 28 ಸೆಕೆಂಡ್ ಇರುವ ವಿಡಿಯೊ ದೃಶ್ಯಾವಳಿಯಲ್ಲಿ ಸೀರೆ ಬೆಂಕಿ ಹಚ್ಚುವ ವ್ಯಕ್ತಿ ಸುಧಾಕರ್ ಅವರನ್ನು ಉದ್ದೇಶಿಸಿ ಪ್ರಶ್ನೆಗಳನ್ನು ಕೇಳುವ ಜತೆಗೆ ಮತದಾರರನ್ನು ಉದ್ದೇಶಿಸಿ ಇಂತಹ ಗಿಮಿಕ್‌ಗಳಿಗೆ ಮರುಳಾಗಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ಪಡೆಯಲು ಸುಧಾಕರ್ ಅವರನ್ನು ಸಂಪರ್ಕಿಸಲಾಯಿತು. ಆದರೆ ಅವರ ಮೊಬೈಲ್ ಸ್ವಿಚ್ಡ್‌ಆಫ್‌ ಆಗಿತ್ತು.

ವಿಡಿಯೊದಲ್ಲಿ ಏನಿದೆ?

‘ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಮತದಾರರಲ್ಲಿ ವಿನಂತಿ. ನಮ್ಮ ಶಾಸಕರಾದ ಕೆ.ಸುಧಾಕರ್ ಅವರು ಸೀರೆ ವಿತರಣೆ ಮಾಡುತ್ತಿದ್ದಾರೆ. ಅದು ಯಾವ ಉದ್ದೇಶಕ್ಕೆ ಮಾಡುತ್ತಿದ್ದಾರೆ? ಮತಗಳನ್ನು ಸೆಳೆಯಲು ಮಾಡುತ್ತಿದ್ದಾರಾ? ಇಷ್ಟು ವರ್ಷಗಳಿಂದ ಪ್ರತಿ ವರ್ಷ ಏಕೆ ಸೀರೆ ವಿತರಿಸಲಿಲ್ಲ? ಇದು ನಮ್ಮ ಪ್ರಶ್ನೆ. ಸುಧಾಕರ್ ಅವರು ದಯವಿಟ್ಟು ಈ ಪ್ರಶ್ನೆಗೆ ಉತ್ತರಿಸಬೇಕು. ಚುನಾವಣೆ ಹತ್ತಿರ ಬರುತ್ತಿದ್ದಂತೆ ಈ ರೀತಿ ಸೀರೆ ವಿತರಿಸುತ್ತಿರುವುದು ಮತ ಹಾಕಿಸಿಕೊಳ್ಳಲು ಗಿಮಿಕ್ ಮಾಡುತ್ತಿದ್ದಾರಾ? ಅಥವಾ ಮಹಿಳೆಯರಿಗೆ ಉಟ್ಟುಕೊಳ್ಳಲು ಇಲ್ಲವೆಂದು ಸೀರೆ ವಿತರಿಸುತ್ತಿದ್ದಾರಾ?

ಸೀರೆ ವಿತರಿಸುವ ಹಾಗಿದ್ದರೆ ಬಡವರಿಗೆ ವರ್ಷ ವರ್ಷ ಕೂಡಾ ಸೀರೆ ವಿತರಣೆ ಮಾಡಬೇಕು ಎಂದು ವಿನಂತಿಸುತ್ತೇನೆ. ಚುನಾವಣೆ ಹತ್ತಿರ ಬಂದಾಗ ಮಾತ್ರ ಸುಧಾಕರ್ ಅವರು ಸೀರೆ, ಕುಕ್ಕರ್ ವಿತರಣೆ, ರಂಗೋಲಿ ಕಾರ್ಯಕ್ರಮಗಳನ್ನು ಮಾಡುತ್ತಿದ್ದಾರೆ. ಅಧಿಕಾರದ ಚುಕ್ಕಾಣಿ ಹಿಡಿಯಲು ಇಂತಹ ಗಿಮಿಕ್ ಮಾಡಬಾರದು.

ನಾನು ಎಲ್ಲ ಮತದಾರ ಬಂಧುಗಳಲ್ಲಿ ವಿನಂತಿಸಿಕೊಳ್ಳುತ್ತೇನೆ. ಈ ಸೀರೆಯತ್ತ ಯಾರೂ ಗಮನ ಕೊಡಬೇಡಿ. ಯಾರು ನಿಷ್ಠಾವಂತರಾಗಿ ಕ್ಷೇತ್ರವನ್ನು ಅಭಿವೃದ್ಧಿಪಡಿಸುತ್ತಾರೋ ಅಂತಹ ಒಳ್ಳೆಯ ವ್ಯಕ್ತಿಯನ್ನು ಗುರುತಿಸಿ ಮತ ನೀಡಿ ಗೆಲ್ಲಿಸಿ. ಇಂತಹ ರೋಲ್‌ಕಾಲ್ ವ್ಯವಹಾರಕ್ಕೆ ಮಾತ್ರ ಅವಕಾಶ ಮಾಡಿಕೊಡಬೇಡಿ. ಸುಧಾಕರ್ ಅವರು ಕೊಟ್ಟಿರುವ ಸೀರೆಗೆ ನಾವು ಬೆಂಕಿ ಇಡುತ್ತಿದ್ದೇವೆ. ಇದನ್ನು ಎಲ್ಲರಿಗೂ ಶೇರ್ ಮಾಡಿ. ನಮ್ಮ ಎಲ್ಲಾ ಮತದಾರರು ಇದನ್ನು ವೀಕ್ಷಿಸಬೇಕು ಎಂದು ವಿನಂತಿಸಿಕೊಳ್ಳುತ್ತಿದ್ದೇನೆ’ ಎಂಬ ಹೇಳಿಕೆ ವೈರಲ್‌ ಆದ ವಿಡಿಯೊದಲ್ಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry