ಶುಕ್ರವಾರ, ಡಿಸೆಂಬರ್ 13, 2019
27 °C

ಕಳ್ಳತನ ಮಾಡಿದ ಆರೋಪದಲ್ಲಿ ಆದಿವಾಸಿ ಯುವಕನನ್ನು ಥಳಿಸಿ ಕೊಂದರು!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಳ್ಳತನ ಮಾಡಿದ ಆರೋಪದಲ್ಲಿ ಆದಿವಾಸಿ ಯುವಕನನ್ನು ಥಳಿಸಿ ಕೊಂದರು!

ಪಾಲಕ್ಕಾಡ್: ಕಳ್ಳತನ ಆರೋಪದಲ್ಲಿ ಅಟ್ಟಪ್ಪಾಡಿಯಲ್ಲಿ ಆದಿವಾಸಿ ಯುವಕನೊಬ್ಬನಿಗೆ ಸ್ಥಳೀಯರು ಹಿಗ್ಗಾಮುಗ್ಗ ಥಳಿಸಿದ್ದು, ತೀವ್ರ ಗಾಯಗೊಂಡ ಯುವಕ ಗುರುವಾರ ಸಂಜೆ ಮೃತಪಟ್ಟಿದ್ದಾನೆ.

ಸ್ಥಳೀಯರಿಂದ ತೀವ್ರ ಹಲ್ಲೆಗೊಳಗಾದ ಯುವಕ ಪೊಲೀಸ್ ಠಾಣೆಗೆ ಕರೆದೊಯ್ಯುವ ವೇಳೆ ಮೃತಪಟ್ಟಿದ್ದಾನೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಅಟ್ಟಪ್ಪಾಡಿ ಕಡುಕ್ ಮಣ್ಣ ಎಂಬಲ್ಲಿನ ಆದಿವಾಸಿ ಮಧು ಎಂಬ ಯುವಕ ಕಳ್ಳತನ ಮಾಡುತ್ತಿದ್ದ ಎಂದು ಆರೋಪವಿತ್ತು. ಆನಂತರ ನಾಪತ್ತೆಯಾಗಿದ್ದ ಮಧು ಎಂಬ ಈ ಯುವಕನ್ನು ಕಾಡಿನ ಹತ್ತಿರವಿದ್ದ ಒಂದು ಪ್ರದೇಶದಲ್ಲಿ ಅಲ್ಲಿನ ಗ್ರಾಮಸ್ಥರು ಸೆರೆ ಹಿಡಿದಿದ್ದರು. ಕಳ್ಳತನ ಮಾಡಿದ್ದಕ್ಕಾಗಿ ಕೆಲವು ಯುವಕರು ಮಧು ಮೇಲೆ ಹಲ್ಲೆ ನಡೆಸಿ ಆಮೇಲೆ ಪೊಲೀಸರ ವಶಕ್ಕೊಪ್ಪಿಸಿದ್ದಾರೆ. ಪೊಲೀಸರು ಮಧುವನ್ನು ವಶಕ್ಕೆ ತೆಗೆದುಕೊಂಡು ಹೋಗುತ್ತಿದ್ದ ವೇಳೆ ಯುವಕ ರಕ್ತಕಾರಿ ಕುಸಿದು ಬಿದ್ದಿದ್ದಾನೆ. ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದ್ದರೂ ಆತನ ಪ್ರಾಣ ಉಳಿಸಲು ಸಾಧ್ಯವಾಗಲಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

ಮಾನಸಿಕ ಅಸ್ವಸ್ಥನಾಗಿದ್ದ ಮಧು

ಮಾನಸಿಕ ಅಸ್ವಸ್ಥನಾಗಿದ್ದ  ಮಧು ಕೆಲವು ವರ್ಷದಿಂದ ಊರಿನಿಂದಾಚೆ ಬದುಕುತ್ತಿದ್ದನು. ಕೆಲವು ದಿನಗಳಿಂದ ಈತ ಊರಿನಲ್ಲಿ ಆಹಾರ ಸಾಮಾಗ್ರಿಗಳನ್ನು ಕಳ್ಳತನ ಮಾಡುತ್ತಿದ್ದನು ಎನ್ನಲಾಗುತ್ತಿದೆ.

ಹಲ್ಲೆ ನಡೆಸುವ ಮುನ್ನ ಸೆಲ್ಫಿ ಕ್ಲಿಕ್ಕಿಸಿದ ಯುವಕರುಗ್ರಾಮದಲ್ಲಿನ ಅಂಗಡಿಗಳಿಂದ ಆಹಾರ ವಸ್ತುಗಳನ್ನು ಕಳ್ಳತನ ಮಾಡಿದ ಆರೋಪದದಲ್ಲಿ ಮಧು ಎಂಬ ಯುವಕನ ಮೇಲೆ ಹಲ್ಲೆ ನಡೆಸುವ ಮುನ್ನ ಒಂದಿಬ್ಬರು ಯುವಕರು ಸೆಲ್ಫಿ ಕ್ಲಿಕ್ಕಿಸಿದ್ದಾರೆ. ಮಧು ಉಟ್ಟಿದ್ದ ಲುಂಗಿಯನ್ನು ಬಿಚ್ಚಿ ಅದರಲ್ಲೇ ಆತನ ಕೈಯನ್ನು ಕಟ್ಟಿಹಾಕಿದ ನಂತರ ಯುವಕನೊಬ್ಬ ಸೆಲ್ಫಿ ಕ್ಲಿಕ್ಕಿಸಿದ್ದಾನೆ. ಈ ಸೆಲ್ಫಿ ಸಾಮಾಜಿಕ ಮಾಧ್ಯಮಗಳಲ್ಲಿ  ಅಪ್‍ಲೋಡ್ ಆಗಿದೆ.ಮಧುವನ್ನು ಥಳಿಸುತ್ತಿರುವ ವಿಡಿಯೊವನ್ನು ಗ್ರಾಮಸ್ಥರು ಸೆರೆ ಹಿಡಿದಿದ್ದಾರೆ.

ಸಾಮಾಜಿಕ ಮಾಧ್ಯಮಗಳಲ್ಲಿ ಆಕ್ರೋಶ

ಮಾನಸಿಕ ಅಸ್ವಸ್ಥನಾದ ಮಧು ಎಂಬ ಯುವಕನ್ನು ಥಳಿಸಿ ಹತ್ಯೆ ಮಾಡಿದ ಘಟನೆಯನ್ನು ಖಂಡಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ. ಸಂಪೂರ್ಣ ಸಾಕ್ಷರತೆ ಹೊಂದಿದ ಕೇರಳದಲ್ಲಿ ಆಹಾರ ವಸ್ತುಗಳನ್ನು ಕಳ್ಳತನ ಮಾಡಿದ್ದಾನೆ ಎಂಬ ಆರೋಪದಲ್ಲಿ ಮಾನಸಿಕ ಅಸ್ವಸ್ಥನಾದ ಯುವಕನ್ನು ಥಳಿಸಿ ಹತ್ಯೆ ಮಾಡಿದ್ದು ಮಾತ್ರವಲ್ಲದೆ ಆತನ ಜತೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಅಹಂಕಾರ ಮೆರೆದ ಯುವಕರ ವಿರುದ್ಧ ಸಾಮಾಜಿಕ ಮಾಧ್ಯಮಗಳಲ್ಲಿ ಟೀಕಾ ಪ್ರಹಾರ ನಡೆದಿದೆ.

 

ವಿಚಾರಣೆ
ನಿನ್ನ ಬಣ್ಣ ಯಾವುದು?
ಕಪ್ಪು
ನಿನ್ನ ಕುಲ ಯಾವುದು?
ಕಾಡಿನ ಮಗ ನಾನು ಸಾರ್
ನೀನು ಬೆಲೆ ಬಾಳುವ ಸುಗಂಧ ದ್ರವ್ಯ ಬಳಸುತ್ತಿದ್ದೀಯಾ?
ಜನಿಸಿದ ಮಣ್ಣಿನದ್ದೂ, ಬೆಳೆಸಿದ ಕಾಡಿನದ್ದೇ ಗಂಧ ನನಗೆ
ನೀನು ಕದ್ದಿದ್ದು ಏನನ್ನು?
ಸ್ವಲ್ಪ ಅಕ್ಕಿ, ಹಸಿವು ತಡೆಯಲಾಗಲಿಲ್ಲ
ಥೂ, ಕೋಟಿಗಳನ್ನು ಕಳ್ಳತನ ಮಾಡದೆ ಬರೀ ಅಕ್ಕಿಯನ್ನು ಕದ್ದು ನಮ್ಮಂಥ ದೊಡ್ಡ ಕಳ್ಳರಿಗೆ ಅವಮಾನವನ್ನುಂಟುಮಾಡಿದ ಈ ಮನುಷ್ಯನನ್ನು ಥಳಿಸಿ ಕೊಲ್ಲಲು ಆಜ್ಞೆ ನೀಡುತ್ತೇನೆ.
ಹಲ್ಲೆಗೊಳಗಾಗಿ ರಕ್ತ ಕಾರುವಾಗಲೂ ಆ ವ್ಯಕ್ತಿ ಅಳುತ್ತಿದ್ದ, ಬುದ್ದೀ...ಆ ಅಕ್ಕ ನನ್ನ ಮಕ್ಕಳಿಗೆ ತೆಗೆದುಕೊಂಡು ಹೋಗಿ ಕೊಟ್ಟು ಬಿಡಿ
-ರಾಹುಲ್ ದೇವ್

ಕೋಟಿ ಕದ್ದವರು ವಿದೇಶದಲ್ಲಿ ಸುಖವಾಗಿದ್ದಾರೆ
ಬದುಕಲು ಬೇಕಾಗಿ ಕದ್ದವರು ಸಾವಿಗೀಡಾಗುತ್ತಾರೆ

-ಜಾಕ್ಸನ್ ಸಖರಿಯಾ

ಪ್ರತಿಕ್ರಿಯಿಸಿ (+)