4

ನನ್ನ ಮಗ ಹೇಗಾದರೂ ಬದುಕುತ್ತಿದ್ದ, ಅವನನ್ನು ಹತ್ಯೆ ಮಾಡಿದ್ದು ಯಾಕೆ?: ಕಣ್ಣೀರಿಟ್ಟ ಆದಿವಾಸಿ ಯುವಕನ ತಾಯಿ

Published:
Updated:
ನನ್ನ ಮಗ ಹೇಗಾದರೂ ಬದುಕುತ್ತಿದ್ದ, ಅವನನ್ನು ಹತ್ಯೆ ಮಾಡಿದ್ದು ಯಾಕೆ?: ಕಣ್ಣೀರಿಟ್ಟ ಆದಿವಾಸಿ ಯುವಕನ ತಾಯಿ

ಪಾಲಕ್ಕಾಡ್: ಅಟ್ಟಪ್ಪಾಡಿ ಮುಕ್ಕಾಲಿ ಎಂಬಲ್ಲಿ ಕಳ್ಳತನ ಆರೋಪದಲ್ಲಿ ಆದಿವಾಸಿ ಯುವಕನೊಬ್ಬನನ್ನು ಗ್ರಾಮಸ್ಥರು ಥಳಿಸಿ ಪೊಲೀಸರಿಗೊಪ್ಪಿಸಿದ್ದರು. ಪೊಲೀಸರು ಆತನನ್ನು  ವಶಪಡಿಸಿ ಕರೆದೊಯ್ಯುತ್ತಿದ್ದ ವೇಳೆ ತೀವ್ರ ಹಲ್ಲೆಗೊಳಗಾಗಿದ್ದ ಯುವಕ ಮರಣವನ್ನಪ್ಪಿದ್ದನು. ಪಾಲಕ್ಕಾಡ್‍ನಲ್ಲಿ ಗುರುವಾರ ಸಂಜೆ ಈ ಪ್ರಕರಣ ನಡೆದಿದ್ದು, ಯುವಕನ ಸಾವಿಗೆ ಕಾರಣರಾದ ಎಲ್ಲ ಆರೋಪಿಗಳನ್ನು ಬಂಧಿಸುವ ವರೆಗೆ ತಾವು ಅಹೋರಾತ್ರಿ ಮುಷ್ಕರ ನಡೆಸುವುದಾಗಿ ಅಟ್ಟಪ್ಪಾಡಿ ಆದಿವಾಸಿ ಸಂರಕ್ಷಣಾ ಸಮಿತಿ ಹೇಳಿದೆ.

ಪ್ರಸ್ತುತ ಪ್ರಕರಣದ ತನಿಖೆಯನ್ನು ಅಟ್ಟಪ್ಪಾಡಿ ಡಿವೈಎಸ್‍ಪಿ ಪಿ.ಕೆ. ಸುಬ್ರಮಣ್ಯಅವರ ನೇತೃತ್ವದಲ್ಲಿರುವ  ವಿಶೇಷ ತಂಡ ನಡೆಸಲಿದೆ ಎಂದು ಎಸ್‍ಪಿ ಹೇಳಿದ್ದಾರೆ.

ಅದೇ ವೇಳೆ ಪ್ರಕರಣದ ಬಗ್ಗೆ ಮೆಜಿಸ್ಟ್ರೇಟ್ ಮಟ್ಟದಲ್ಲಿ ತನಿಖೆ ನಡೆಸುವುದಾಗಿ ಸಚಿವ ಎ.ಕೆ .ಬಾಲನ್ ಹೇಳಿದ್ದಾರೆ. ಇದಕ್ಕಾಗಿ ಮಣ್ಣಾರ್‍ಕಾಡ್ ತಹಶೀಲ್ದಾರರಿಗೆ ಜವಾಬ್ದಾರಿ ನೀಡಲಾಗಿದೆ. ಸಚಿವರು ಶನಿವಾರ ಅಟ್ಟಪ್ಪಾಡಿಗೆ ಭೇಟಿ ನೀಡಲಿದ್ದಾರೆ. ಮಧು ಎಂಬ ಈ ಯುವಕನ ಹತ್ಯಾ ಪ್ರಕರಣದಲ್ಲಿ ಆರೋಪಿಗಳನ್ನು ಬಂಧಿಸುತ್ತೇವೆ ಮತ್ತು ಮಧುವಿನ ಕುಟುಂಬಕ್ಕೆ ಸಹಾಯ ಮಾಡುತ್ತೇವೆ ಎಂದಿದ್ದಾರೆ ಸಚಿವರು.

ಏತನ್ಮಧ್ಯೆ, ಮುಕ್ಕಾಲಿ ಪಾಕ್ಕುಳದ ವ್ಯಾಪಾರಿ ಕೆ, ಹುಸೇನ್, ಮಧು ಮೇಲೆ ಹಲ್ಲೆ ನಡೆಯುವಾಗ ಯುವಕರ ಗುಂಪಿನಲ್ಲಿದ್ದ ಕರೀಂ ಎಂಬವರನ್ನು ಅಗಳಿ ಪೊಲೀಸರು ಬಂಧಿಸಿದ್ದಾಕೆ. ಐದು ಮಂದಿಯನ್ನು ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ. ಈ ಪ್ರಕರಣದಲ್ಲಿ 15 ಮಂದಿ ಭಾಗಿಯಾಗಿದ್ದಾರೆ. ಆರೋಪಿಗಳಿಗಾಗಿ ಶೋಧ ನಡೆಯುತ್ತಿದೆ ಎಂದಿದ್ದಾರೆ ಪೊಲೀಸರು.

ತ್ರಿಶ್ಶೂರ್‍‍ನಲ್ಲಿ ಮರಣೋತ್ತರ ಪರೀಕ್ಷೆ

ಮಧು ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ತ್ರಿಶ್ಶೂರ್ ಮೆಡಿಕಲ್ ಕಾಲೇಜಿಗೆ ಕೊಂಡೊಯ್ಯಲಾಗಿದೆ. ಆರೋಪಿಗಳನ್ನು ಬಂಧಿಸಿದ ನಂತರವೇ ಮರಣೋತ್ತರ ಪರೀಕ್ಷೆ ನಡೆಸಿದರೆ ಸಾಕು ಎಂದು ಪ್ರತಿಭಟನೆ ನಡೆದಿತ್ತು. ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ಅಧಿಕಾರಿ ಮಧ್ಯಪ್ರವೇಶ ಮಾಡಿದ ನಂತರ ಮೃತದೇಹವನ್ನು ತ್ರಿಶ್ಶೂರಿಗೆ ಸಾಗಿಸಲಾಯಿತು.

ಏನಿದು ಪ್ರಕರಣ?

ಮುಕ್ಕಾಲಿ ಎಂಬಲ್ಲಿ ಆಹಾರವನ್ನು ಕಳ್ಳತನ ಮಾಡಿದ್ದಕ್ಕಾಗಿ ಅಟ್ಟಪ್ಪಾಡಿ ಕಡುಕಮಣ್ಣ ಎಂಬಲ್ಲಿ ವಾಸಿಸುತ್ತಿದ್ದ ಆದಿವಾಸಿ ಯುವಕ ಮಧು ಎಂಬಾತನನ್ನು ಗ್ರಾಮಸ್ಥರು ಸೆರೆ ಹಿಡಿದು ಥಳಿಸಿದ್ದರು. ನಂತರ ಪೊಲೀಸರ ವಶಕ್ಕೊಪ್ಪಿಸಿದ್ದರು. ಗ್ರಾಮಸ್ಥರಿಂದ ತೀವ್ರ ಹಲ್ಲೆಗೊಳಗಾದ ಮಧು ಪೊಲೀಸ್ ಠಾಣೆಗೆ ಕರೆದೊಯ್ಯುತ್ತಿದ್ದ ದಾರಿ ಮಧ್ಯೆ ಅಸ್ವಸ್ಥರಾಗಿ ಕುಸಿದು ಬಿದ್ದಿದ್ದಾರೆ. ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದ್ದರೂ ಮಧುವಿನ ಪ್ರಾಣ ಉಳಿಸಲು ಸಾಧ್ಯವಾಗಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

ಅವನು ಹೇಗಾದರೂ ಬದುಕುತ್ತಿದ್ದ, ಯಾಕೆ ಹತ್ಯೆ ಮಾಡಿದಿರಿ?

ಎಲ್ಲರೂ ಸೇರಿ ನನ್ನ ಮಗನನ್ನು ಯಾಕೆ ಹತ್ಯೆ ಮಾಡಿದ್ದೀರಿ? -ಹೀಗೆ ಕೇಳಿದ್ದು ಮಧುವಿನ ಅಮ್ಮ ಮಲ್ಲಿ. ಕಳೆದ ಒಂಭತ್ತು ತಿಂಗಳಿನಿಂದ ಮಧು ಕಾಡಿನಲ್ಲೇ ವಾಸವಾಗಿದ್ದ. ಅವನು ಹೇಗಾದರು ಮಾಡಿ ಬದುಕುತ್ತಿದ್ದ. ನನ್ನ ಮಗನನ್ನು ಕೊಂದಿದ್ದು ಅಲ್ಲಿನ ಗ್ರಾಮದವರು. ಅವನು ಮಾನಸಿಕ ಅಸ್ವಸ್ಥನಾಗಿದ್ದ. ಆತ ಕದಿಯಲಿಲ್ಲ. ಅವನ ಹತ್ಯೆಗೆ ಕಾರಣರಾದವರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಮನೋರಮಾ ಸುದ್ದಿವಾಹಿನಿ ಜತೆ ಮಾತನಾಡಿದ ಮಲ್ಲಿ ಒತ್ತಾಯಿಸಿದ್ದಾರೆ.

ರಸ್ತೆ ತಡೆದು ಪ್ರತಿಭಟನೆ

ಅಗಳಿ: ಕಳ್ಳತನದ ಆರೋಪದ ಮೇಲೆ ಮಧು ಎಂಬ ಯುವಕನಿಗೆ ಅಮಾನವೀಯ ರೀತಿಯಲ್ಲಿ ಹಲ್ಲೆ ನಡೆಸಿ ಆತನ ಹತ್ಯೆಗೆ ಕಾರಣರಾದವರನ್ನು ಶೀಘ್ರವೇ ಬಂಧಿಸಬೇಕೆಂದು ಒತ್ತಾಯಿಸಿ ಆದಿವಾಸಿಗಳು ರಸ್ತೆ ತಡೆದು ಪ್ರತಿಭಟನೆ ನಡೆಸಿದ್ದಾರೆ. ಶುಕ್ರವಾರ ಸಂಜೆ ಅಗಳಿ ಪೊಲೀಸ್ ಠಾಣೆಯ ಮುಂದೆ ಆದಿವಾಸಿಗಳು ಮುಷ್ಕರ ಹೂಡಿದ್ದಾರೆ.

ಕಾಡಿನಿಂದ ಹಿಡಿದುಕೊಂಡು ಬಂದು ಥಳಿಸಿದರು

ಅಟ್ಟಪ್ಪಾಡಿ ಮುಕ್ಕಾಲಿಯಲ್ಲಿ ಗ್ರಾಮಸ್ಥರಿಂದ ಹಲ್ಲೆಗೊಳಗಾಗಿ ಸಾವಿಗೀಡಾದ ಆದಿವಾಸಿ ಯುವಕ ಮಧು ಪೊಲೀಸರಿಗೆ ನೀಡಿದ ಹೇಳಿಕೆ ಮಾಧ್ಯಮಗಳಿಗೆ ಲಭ್ಯವಾಗಿದೆ.  ಮನೋರಮಾ ಸುದ್ದಿ ಮಾಧ್ಯಮದ ಪ್ರಕಾರ, ಮಧು ಪೊಲೀಸರಿಗೆ ನೀಡಿದ ಹೇಳಿಕೆ ಹೀಗಿದೆ.

ಒಂದಷ್ಟು ಜನರು ನನ್ನನ್ನು ಕಾಡಿನಿಂದ ಹಿಡಿದುಕೊಂಡು ಬಂದು ಜೀಪಿನೊಳಗೆ ನೂಕಿದರು. ನನ್ನನ್ನು ಕಳ್ಳನೆಂದು ಹೇಳಿ ತುಳಿದರು, ಹೊಡೆದರು ಎಂದು ಮಧು ಹೇಳಿದ್ದಾರೆ ಎಂದು ಎಫ್ಐಆರ್‍‍ನಲ್ಲಿದೆ.

ಮಧುವಿನ ಹತ್ಯೆಗೆ ಕಾರಣರಾದವರನ್ನು ಬಂಧಿಸಬೇಕೆಂದು ಪ್ರತಿಭಟನೆ ತೀವ್ರವಾಗಿದ್ದು, ಈ ಹಿನ್ನೆಲೆಯಲ್ಲಿ ಮರಣೋತ್ತರ ಪರೀಕ್ಷೆಯನ್ನು ನಾಳೆಗೆ ಮುಂದೂಡಲಾಗಿದೆ.

ಕಾಡಿನಿಂದ ತನ್ನನ್ನು ಸೆರೆ ಹಿಡಿದವರ ಹೆಸರನ್ನೂ ಮಧು ಪೊಲೀಸರಿಗೆ ಹೇಳಿದ್ದಾರೆ. ಹುಸೇನ್, ಮತ್ತಚ್ಚನ್, ಮನು, ಅಬ್ದುಲ್ ರೆಹಮಾನ್, ಅಬ್ದುಲ್  ಲತೀಫ್, ಅಬ್ದುಲ್ ಕರೀಂ,ಎ.ಪಿ. ಉಮ್ಮರ್ ಮೊದಲಾದವರ ಹೆಸರನ್ನು ಮಧು ಹೇಳಿರುವುದಾಗಿ ಎಫ್‍ಐಆರ್‍‍ನಲ್ಲಿದೆ. ಇದರಲ್ಲಿ ಹುಸೇನ್ ಮತ್ತು ಕರೀಂ ಅವರು ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ತನ್ನ ಮೇಲೆ ಯಾವ ರೀತಿ ಹಲ್ಲೆ ನಡೆಸಿದ್ದಾರೆ ಎಂಬುದನ್ನು  ಮಧು ಪೊಲೀಸರಿಗೆ ಹೇಳಿದ್ದಾರೆ. ಇಷ್ಟೆಲ್ಲಾ ಹೇಳಿದ ನಂತರವೇ ಮಧು ಮರಣವನ್ನಪ್ಪಿದ್ದಾರೆ ಎಂದು ಎಫ್‍ಐಆರ್‍‍ನಲ್ಲಿ ಉಲ್ಲೇಖಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry