ಬುಧವಾರ, ಡಿಸೆಂಬರ್ 11, 2019
21 °C

ಶಾಸಕ ಹ್ಯಾರಿಸ್ ಪುತ್ರ ನಲಪಾಡ್ ಜಾಮೀನು ಅರ್ಜಿ ವಿಚಾರಣೆ ನಾಳೆಗೆ ಮುಂದೂಡಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಾಸಕ ಹ್ಯಾರಿಸ್ ಪುತ್ರ ನಲಪಾಡ್ ಜಾಮೀನು ಅರ್ಜಿ ವಿಚಾರಣೆ ನಾಳೆಗೆ ಮುಂದೂಡಿಕೆ

ಬೆಂಗಳೂರು: ಉದ್ಯಮಿ ಪುತ್ರ ವಿದ್ವತ್ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಎನ್ ಎ ಹ್ಯಾರಿಸ್ ಪುತ್ರ ಮೊಹಮದ್‌ ನಲಪಾಡ್ ಜಾಮೀನು ಅರ್ಜಿ ವಿಚಾರಣೆಯನ್ನು ಬೆಂಗಳೂರಿನ 63ನೇ ಸೆಷನ್ಸ್ ನ್ಯಾಯಾಲಯ ಫೆ.24ಕ್ಕೆ ಮುಂದೂಡಿದೆ.

ಅರ್ಜಿಗೆ ಹೆಚ್ಚುವರಿ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡುವಂತೆ ಎಸ್ ಪಿಪಿ ಶ್ಯಾಮ್ ಸುಂದರ್ ಮಾಡಿಕೊಂಡ ಮನವಿಗೆ ಕೋರ್ಟ್ ಅವಕಾಶ ನೀಡಿದೆ. ಮೂರನೇ ವ್ಯಕ್ತಿ ವಾದವನ್ನು ಆಲಿಸಬೇಕೇ ಅಥವಾ ಬೇಡವೇ ಎಂಬ ಬಗ್ಗೆ ಕೋರ್ಟ್ ನಾಳೆ ಆದೇಶ ನೀಡಲಿದೆ.

ಹ್ಯಾರಿಸ್ ಪುತ್ರ ನಲಪಾಡ್ ಪರ ವಕೀಲ ಟಾಮಿ ಸೆಬಾಸ್ಟಿಯನ್ ವಾದ ಮಂಡಿಸಿದ್ದರು. ಫೆ.26ರಂದು ಅರ್ಜಿಗೆ ಹೆಚ್ಚುವರಿ ಆಕ್ಷೇಪಣೆ ಸಲ್ಲಿಸುವಂತೆ ಸೂಚಿಸಿದೆ.

ಏನಿದು ಪ್ರಕರಣ?

ಸಿ.ಸಿ ಟಿ.ವಿ ದೃಶ್ಯಗಳ ವಿವರ: ‘ಫರ್ಜಿ ಕೆಫೆ’ಯ ಸಿ.ಸಿ ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿರುವ ಗಲಾಟೆಯ ದೃಶ್ಯಗಳು ಹಾಗೂ ಅಲ್ಲಿ ನಡೆದ ಸಂಭಾಷಣೆಯ ವಿವರಗಳನ್ನು ತನಿಖಾ ತಂಡದ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ವಿವರಿಸಿದರು.

‘ರಾತ್ರಿ 9.55ಕ್ಕೆ ಕೆಫೆಗೆ ಬಂದ ವಿದ್ವತ್ ಹಾಗೂ ಸ್ನೇಹಿತರು, ಗೋಡೆ ಬದಿಯ ಟೇಬಲ್‌ನಲ್ಲಿ ಕುಳಿತಿದ್ದಾರೆ. ಕಾಲಿಗೆ ಪೆಟ್ಟಾಗಿದ್ದರಿಂದ ವಿದ್ವತ್ ಪಕ್ಕದ ಟೇಬಲ್‌ನ ಕುರ್ಚಿ ಎಳೆದುಕೊಂಡು, ಅದರ ಮೇಲೆ ಕಾಲಿಟ್ಟುಕೊಂಡಿದ್ದಾರೆ. 10 ಗಂಟೆಗೆ ನಲಪಾಡ್ ಗ್ಯಾಂಗ್ ಬಂದಿದೆ. ಅವರಲ್ಲಿ ಒಬ್ಬಾತ, ‘ಕುರ್ಚಿ ಮೇಲಿಂದ ಕಾಲು ತೆಗಿ’ ಎಂದಿದ್ದಾನೆ. ಅದಕ್ಕೆ ವಿದ್ವತ್, ‘ಕಾಲು ಫ್ರ್ಯಾಕ್ಚರ್ ಆಗಿದೆ ಬ್ರೋ’ ಎಂದು ಪ್ರತಿಕ್ರಿಯಿಸಿದ್ದಾರೆ. ಆಗ ಇಬ್ಬರೂ ಪರಸ್ಪರ ದುರುಗುಟ್ಟಿ ನೋಡಿಕೊಂಡಿದ್ದಾರೆ.

‘ಬಳಿಕ ನಲಪಾಡ್ ಗ್ಯಾಂಗ್ ಸಮೀಪದ ಇನ್ನೊಂದು ಟೇಬಲ್‌ಗೆ ಹೋಗಿ ಕುಳಿತಿದೆ. ಇದಾದ ಒಂದೂವರೆ ನಿಮಿಷದಲ್ಲೇ ವಿದ್ವತ್ ಬಳಿ ಎದ್ದು ಬಂದ ಆರೋಪಿ ಅರುಣ್‌, ‘ಏನೋ ಗುರಾಯಿಸ್ತೀಯಾ’ ಎಂದಿದ್ದಾನೆ. ಆಗ ಮಾತಿನ ಚಕಮಕಿ ಶುರುವಾಗಿದ್ದು, ಇಬ್ಬರೂ ಕೈ–ಕೈ ಮಿಲಾಯಿಸಿಕೊಂಡಿದ್ದಾರೆ. ಈ ಹಂತದಲ್ಲಿ ಅರುಣ್‌ನ ಕೆನ್ನೆಗೆ ಹೊಡೆದ ವಿದ್ವತ್, ಆತನನ್ನು ನೂಕಿದ್ದಾರೆ. ಕೂಡಲೇ ನಲಪಾಡ್ ಎದ್ದು ಬಂದು ಮುಷ್ಠಿಯಿಂದ ವಿದ್ವತ್ ಮುಖಕ್ಕೆ ಗುದ್ದಿದ್ದಾನೆ. ಬಳಿಕ ಸಹಚರರು ಸಹ ಅವರ ಮೇಲೆ ಮುಗಿಬಿದ್ದಿದ್ದಾರೆ.’

‘ಈ ಹಂತದಲ್ಲಿ ವಿದ್ವತ್ ಸ್ನೇಹಿತರು ಕ್ಷಮೆಯಾಚಿಸಿದ್ದಾರೆ. ಆಗ ಆರೋಪಿಗಳು ಎಚ್ಚರಿಕೆ ನೀಡಿ ತಮ್ಮ ಟೇಬಲ್‌ನತ್ತ ತೆರಳಿದ್ದಾರೆ. ಕುಂಟುತ್ತಲೇ ಹೋಗಿ ಪುನಃ ಕುರ್ಚಿಯಲ್ಲಿ ಕುಳಿತುಕೊಂಡ ವಿದ್ವತ್, ಸಿಟ್ಟಿನಲ್ಲಿ ಕೂಗಾಡಲು ಶುರು ಮಾಡಿದ್ದಾರೆ.’

‘ಇದರಿಂದ ಕೆರಳಿದ ಆರೋಪಿಗಳು, ಮತ್ತೆ ಗಲಾಟೆ ಪ್ರಾರಂಭಿಸಿ ಬಟ್ಟೆ ಹರಿದು ಹೊಡೆದಿದ್ದಾರೆ. ಸ್ವಲ್ಪ ಸಮಯದ ಬಳಿಕ ಸ್ನೇಹಿತರು ವಿದ್ವತ್ ಅವರನ್ನು ಅಲ್ಲಿಂದ ಕರೆದುಕೊಂಡು ಹೊರಹೋಗಿದ್ದಾರೆ. ಹಿಂದೆಯೇ ಆರೋಪಿಗಳೂ ತೆರಳಿದ್ದಾರೆ. ಇವಿಷ್ಟು ದೃಶ್ಯಗಳು ಕೆಫೆಯೊಳಗಿನ ಸಿ.ಸಿ ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.’

‘ಹೊರಬಂದ ಬಳಿಕ ಮೊದಲ ಮಹಡಿಯಲ್ಲಿ ಹಾಗೂ ಪಾರ್ಕಿಂಗ್ ಪ್ರದೇಶದಲ್ಲೂ ಹೊಡೆದಿದ್ದಾರೆ. ನಂತರ ಮಲ್ಯ ಆಸ್ಪತ್ರೆಗೆ ಕರೆದೊಯ್ದಾಗ ಅಲ್ಲಿಗೂ ನುಗ್ಗಿ ದಾಂದಲೆ ಮಾಡಿದ್ದಾರೆ. ಪ್ರಕರಣದಲ್ಲಿ ಸಿ.ಸಿ ಟಿ.ವಿ ದೃಶ್ಯಗಳು ಪ್ರಮುಖ ಸಾಕ್ಷ್ಯಗಳಾಗಿದ್ದು, ಡಿವಿಆರ್‌ಗಳನ್ನು ಜಪ್ತಿ ಮಾಡಿದ್ದೇವೆ. ವಿದ್ವತ್ ಅವರ ಹೇಳಿಕೆ ದಾಖಲಿಸಿಕೊಂಡರೆ, ತನಿಖೆ ಮುಕ್ತಾಯವಾಗುತ್ತದೆ’ ಎಂದು ಮಾಹಿತಿ ನೀಡಿದರು.

ಪ್ರತಿಕ್ರಿಯಿಸಿ (+)