ಭಾನುವಾರ, ಡಿಸೆಂಬರ್ 8, 2019
24 °C

‘ನವ ಕರ್ನಾಟಕ’ ಸಾಕಾರ– ಬಿಎಸ್‌ವೈ ಕನಸು

Published:
Updated:
‘ನವ ಕರ್ನಾಟಕ’ ಸಾಕಾರ– ಬಿಎಸ್‌ವೈ ಕನಸು

ಬೆಂಗಳೂರು: ಗುರಿಯಲ್ಲಿ ನಿಖರತೆ, ನಡೆಯಲ್ಲಿ ಸ್ಪಷ್ಟತೆ ಇತ್ತು. ಉದ್ವೇಗ ಹಾಗೂ ಅಸಹನೆಗೆ ಒಳಗಾಗದಷ್ಟು ರಾಜಕೀಯ ಪ್ರಬುದ್ಧತೆ ಎದ್ದು ತೋರುತ್ತಿತ್ತು. ನವಕರ್ನಾಟಕ ಕಟ್ಟಿಯೇ ತೀರುವೆ ಎಂಬ ಛಲವಿತ್ತು. ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರಲು ದ್ವಾಪರ ಯುಗದ ‘ಕೃಷ್ಣ’ನಂತೆ ಪ್ರಧಾನಿ ನರೇಂದ್ರ ಮೋದಿ ತಮ್ಮ ಬೆನ್ನಿಗೆ ನಿಂತು ಕಾಯುತ್ತಾರೆಂಬ ಅಚಲ ವಿಶ್ವಾಸ ಮುಖದಲ್ಲಿ ಹೊಳೆಯುತ್ತಿತ್ತು.

‘ಪ್ರಜಾವಾಣಿ’ ಕಚೇರಿಯಲ್ಲಿ ಶುಕ್ರವಾರ ನಡೆದ ‘ಕನಸಿನ ಕರ್ನಾಟಕ’ ಸಂವಾದದಲ್ಲಿ ಪಾಲ್ಗೊಂಡ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರ‌ಪ್ಪ, ‘ಮಿಷನ್–150’ ಎಂಬ ದ್ವಿಶಬ್ದ ಉಚ್ಚರಿಸಲಿಲ್ಲ. ಆದರೆ, ಮುಖ್ಯಮಂತ್ರಿ ಪಟ್ಟವೆಂಬ ಯಶಸ್ಸಿನ ಶಿಖರಕ್ಕೆ ಏರಲು ನೆರವಾಗುವ ಏಣಿಯ ಮೆಟ್ಟಿಲುಗಳ ಬಗ್ಗೆ ಹೇಳಿದರು. ಕರ್ನಾಟಕವನ್ನು ಮಾದರಿ ರಾಜ್ಯವಾಗಿ ರೂಪಿಸಲು, ಅಧಿಕಾರ ಹಿಡಿದೊಡನೆ ಕ್ವಚಿತ್ತಾಗಿ ಮಾಡುವುದೇನು, ಮಾಡಬೇಕಾದುದೇನು ಎಂಬುದನ್ನು ಮಾತಿನುದ್ದಕ್ಕೂ ವಿವರಿಸಿದರು.

ವಿವಿಧ ಕ್ಷೇತ್ರಗಳ ಪರಿಣತರು, ಓದುಗರು ನೀಡಿದ ಸಲಹೆಗಳನ್ನು, ವಿದ್ಯಾರ್ಥಿಯೊಬ್ಬ ಖಾಲಿ ಹಾಳೆಯ ಮೇಲೆ ಬರೆದುಕೊಳ್ಳುವಂತಹ ವಿನಯ ಸಂಪನ್ನತೆಯನ್ನೂ ತೋರಿದರು. ಗೊತ್ತಿಲ್ಲದ ಸಂಗತಿ ಮುಖಾಬಿಲೆಯಾದಾಗ, ‘ಮತ್ತೊಮ್ಮೆ ಖಂಡಿತಾ ನಿಮ್ಮೊಂದಿಗೆ ಚರ್ಚಿಸುತ್ತೇನೆ’ ಎಂದ ಅವರು ಹೆಸರು, ವಿಳಾಸಗಳನ್ನೂ ಪಡೆದುಕೊಂಡರು. ಪ್ರಶ್ನೆಗಳಿಗೆ ಸಿಡಿಮಿಡಿಗೊಳ್ಳದ ಅವರು, ಕೆಲವೊಮ್ಮೆ ಮೌನ, ಮಗದೊಮ್ಮೆ ನಗು, ಮತ್ತೊಮ್ಮೆ ಮರು ಪ್ರಶ್ನೆಯನ್ನೇ ಅಸ್ತ್ರವಾಗಿ ಬಳಸಿದರು.

ಸಿದ್ದರಾಮಯ್ಯ ನೇತೃತ್ವದ ಸರ್ಕಾರವನ್ನು ನೇರವಾಗಿ ಬೈಯದ ಯಡಿಯೂರಪ್ಪ, ಆಡಳಿತ ವೈಫಲ್ಯ, ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿರುವುದು, ಎಡೆಬಿಡದೇ ನಡೆಯುತ್ತಿರುವ ರೈತರ ಆತ್ಮಹತ್ಯೆ, ಅತ್ಯಾಚಾರಗಳನ್ನೂ ಉಲ್ಲೇಖಿಸಿ, ಜನರು ಬದಲಾವಣೆ ಬಯಸಿದ್ದಾರೆ ಎಂದು ಮನವರಿಕೆ ಮಾಡುವ ಯತ್ನ ಮಾಡಿದರು. ಸ್ವಚ್ಛ, ದಕ್ಷ ಆಡಳಿತ ನೀಡುವುದು ತಮ್ಮ ಸಂಕಲ್ಪ ಎಂಬುದನ್ನು ಒತ್ತಿ ಹೇಳಿದರು.

ನವ ಕರ್ನಾಟಕ ಪರಿವರ್ತನಾ ಯಾತ್ರೆಯ ಯಶಸ್ಸು ತಂದುಕೊಟ್ಟ ಉಮೇದಿನಲ್ಲಿದ್ದ ಅವರು, ಎಲ್ಲ ಪ್ರಶ್ನೆಗಳಿಗೂ ಸಾವಧಾನವಾಗಿ ಉತ್ತರಿಸಿದರು. ಸುದ್ದಿ ಸಂಪಾದಕ ರವೀಂದ್ರ ಭಟ್ಟ ಸಂವಾದ ನಡೆಸಿಕೊಟ್ಟರು.

ಅನ್ನದಾತೋ ಸುಖೀಭವ: ‘ಅನ್ನದಾತ ಸದಾ ಸುಖಿಯಾಗಿರಬೇಕು ಎಂಬುದು ನನ್ನ ಹಂಬಲ. ₹1 ಲಕ್ಷ ಕೋಟಿಯನ್ನು ನೀರಾವರಿಗೆ ಮೀಸಲಿಟ್ಟು, ಕೆರೆ ಕಟ್ಟೆ ತುಂಬಿಸಿ ರೈತರ ಸಮಸ್ಯೆಗೆ ಸ್ಪಂದಿಸುತ್ತೇನೆ. ರೈತರ ಆತ್ಮಹತ್ಯೆ ನಿಲ್ಲಿಸಿ, ಅವರ ನೆರವಿಗೆ ಧಾವಿಸಬೇಕಾಗಿದೆ. ರೈತರ ಪಂಪ್‌ಸೆಟ್‌ಗಳಿಗೆ ಕನಿಷ್ಠ 12 ಗಂಟೆ ಸತತ ವಿದ್ಯುತ್ ಪೂರೈಕೆ ನನ್ನ ಗುರಿ’ ಎಂದರು.

‘ವಿವಿಧ ಸ್ಕೀಮ್‌ಗಳಲ್ಲಿ ರಾಜ್ಯಕ್ಕೆ ಹಂಚಿಕೆಯಾಗಿರುವ ನೀರಿನ ಸದ್ಬಳಕೆಗೆ ಯೋಜನೆ ರೂಪಿಸಿ ಕಾಲಮಿತಿಯಲ್ಲಿ ಅನುಷ್ಠಾನ ಮಾಡಬೇಕು. ಆಲಮಟ್ಟಿ ಅಣೆಕಟ್ಟೆಯ ಎತ್ತರವನ್ನು 519 ಅಡಿಗೆ ಏರಿಸಲು ನ್ಯಾಯಮಂಡಳಿ ಅನುಮತಿ ನೀಡಿ ಏಳು ವರ್ಷಗಳು ಕಳೆದಿವೆ. ಇವತ್ತಿಗೂ ಪುನರ್ವಸತಿ ಹಾಗೂ ಪುನರ್‌ನಿರ್ಮಾಣ ಪ್ರಕ್ರಿಯೆ ಪೂರ್ಣಗೊಂಡಿಲ್ಲ. ಆಲಮಟ್ಟಿ ಜಲಾಶಯದ ಎತ್ತರವನ್ನು ಏರಿಸಿ ರೈತರಿಗೆ ನೀರು ಒದಗಿಸಲು ಮೊದಲ ಆದ್ಯತೆ ನೀಡುತ್ತೇನೆ’ ಎಂದರು.

‘ರೈತರ ಬೆಳೆಗೆ ಬೆಲೆ ಇಲ್ಲದೇ ಇರುವುದು ಸಮಸ್ಯೆ. ಇದಕ್ಕಾಗಿ ₹5,000 ಕೋಟಿ ಆವರ್ತ ನಿಧಿ ಸ್ಥಾಪಿಸುತ್ತೇನೆ. ಕೇಂದ್ರ ಸರ್ಕಾರ ಬೆಂಬಲಬೆಲೆ ಘೋಷಿಸುವವರೆಗೆ ಕಾಯದೇ, ಬೆಲೆ ಕುಸಿತವಾದ ಕೂಡಲೇ ಬೆಂಬಲಬೆಲೆ ಖರೀದಿ ಕೇಂದ್ರ ಆರಂಭಿಸಿದರೆ ರೈತರಿಗೆ ಲಾಭವಾಗಲಿದೆ. ಈ ಬಗ್ಗೆ ವಿಶಿಷ್ಟ ಕಾರ್ಯಕ್ರಮ ರೂಪಿಸುವೆ’ ಎಂದು ಪ್ರತಿಪಾದಿಸಿದರು.

ಪ್ರಜಾಮತ–ಭಾವನೆಗಳ ಮಿಡಿತ
ಜನಪ್ರಿಯ ಹಾಗೂ ವಿಶ್ವಾಸಾರ್ಹ ಪತ್ರಿಕೆ ‘ಪ್ರಜಾವಾಣಿ’ಯು ‘ಪ್ರಜಾಮತ’ ಶೀರ್ಷಿಕೆಯಡಿ ನಡೆಸುತ್ತಿರುವ ಸಂವಾದ ಉತ್ತಮವಾದುದು. ಹಿರಿಯರು, ತಜ್ಞರ ಮನಸ್ಸಿನ ಭಾವನೆಗಳನ್ನು ಹಂಚಿಕೊಳ್ಳಲು ಹಾಗೂ ಜನರ ಅಪೇಕ್ಷೆ ತಿಳಿಯಲು ಒಳ್ಳೆಯ ಅವಕಾಶ ಕಲ್ಪಿಸಿದೆ –ಯಡಿಯೂರಪ್ಪ

***

ಒಂದೇ ಪಕ್ಷದಿಂದ ಅಭಿವೃದ್ಧಿ ಸಾಧ್ಯ: ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಪಕ್ಷ ಅಧಿಕಾರದಲ್ಲಿದ್ದರೆ ಮಾತ್ರ ನೂರಕ್ಕೆ ನೂರರಷ್ಟು ಪ್ರಮಾಣದಲ್ಲಿ ಕರ್ನಾಟಕದ ಸಮಗ್ರ ಅಭಿವೃದ್ಧಿ ಸಾಧ್ಯ ಎಂದು ಯಡಿಯೂರಪ್ಪ ಅಭಿಪ್ರಾಯಪಟ್ಟರು.

ದೂರದೃಷ್ಟಿಯಿರುವ, ಅಭಿವೃದ್ಧಿಯ ಹರಿಕಾರ ನರೇಂದ್ರ ಮೋದಿ ಕೇಂದ್ರದಲ್ಲಿದ್ದಾರೆ. ಇಲ್ಲಿಯೂ ಬಿಜೆಪಿ ಸರ್ಕಾರ ಬಂದರೆ ದೊಡ್ಡ ಪ್ರಮಾಣದಲ್ಲಿ ರಾಜ್ಯಕ್ಕೆ ಅನುದಾನ ಹರಿದು ಬರುತ್ತದೆ. ಹೀಗಾಗಿ ಜನರು ಬಿಜೆಪಿಯನ್ನೇ ಗೆಲ್ಲಿಸುತ್ತಾರೆ ಎಂದೂ ವಿಶ್ವಾಸ ವ್ಯಕ್ತಪಡಿಸಿದರು.

***

‘ರಾಜಧಾನಿಯಲ್ಲಿ ಹೊಸ ಕೈಗಾರಿಕೆಗೆ ಅವಕಾಶ ನೀಡೆವು’

‘ನಮ್ಮ ಸರ್ಕಾರ ಬಂದರೆ ಬೆಂಗಳೂರು ಮತ್ತು ಸುತ್ತಮುತ್ತ ಹೊಸ ಕೈಗಾರಿಕೆಗಳಿಗೆ ಜಾಗ ಕೊಡುವುದಿಲ್ಲ. ಎರಡು ಮತ್ತು ಮೂರನೇ ಹಂತದ ನಗರಗಳಲ್ಲಿ ಅಗತ್ಯ ಮೂಲಸೌಕರ್ಯ ಕಲ್ಪಿಸಿ, ಅಲ್ಲಿ ಬಂಡವಾಳ ಹೂಡುವವರಿಗೆ ಹೆಚ್ಚಿನ ಉತ್ತೇಜನ ಹಾಗೂ ವಿನಾಯಿತಿಗಳನ್ನು ಘೋಷಣೆ ಮಾಡಲಾಗುವುದು. ಹಾಗಾದಲ್ಲಿ ಮಾತ್ರ ರಾಜ್ಯದಲ್ಲಿ ಕೈಗಾರಿಕೆ ಬೆಳವಣಿಗೆ ಸಾಧ್ಯ’ ಎಂದು ಯಡಿಯೂರಪ್ಪ ಅಭಿಪ್ರಾಯಪಟ್ಟರು.

‘ಆಂಧ್ರ ಪ್ರದೇಶ ಮತ್ತು ತೆಲಂಗಾಣದ ಮುಖ್ಯಮಂತ್ರಿಗಳು ಉದ್ಯಮ ಸ್ನೇಹಿ ಆಡಳಿತ ನೀಡಿ, ಬಂಡವಾಳ ಆಕರ್ಷಿಸುತ್ತಿದ್ದಾರೆ. ಆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕ ಯಾವುದರಲ್ಲೂ ಕಡಿಮೆ ಇಲ್ಲ. ಅಧಿಕಾರ ನಡೆಸುವವರಲ್ಲಿ ಇಚ್ಛಾಶಕ್ತಿ ಕೊರತೆ ಎದ್ದು ಕಾಣಿಸುತ್ತಿದೆ. ಬಂಡವಾಳ ಹೂಡಿಕೆಯಲ್ಲಿ ಕರ್ನಾಟಕವನ್ನು ನಂ.1 ಸ್ಥಾನಕ್ಕೆ ತರುತ್ತೇನೆ’ ಎಂದರು.

‘ಕೈಗಾರಿಕೆಗಳಿಗೆ 24 ಗಂಟೆ ವಿದ್ಯುತ್, ಅಧಿಕಾರಶಾಹಿಯ ಕಿರಿಕಿರಿ ತಪ್ಪಿಸುವುದು, ಉದ್ಯಮ ಬೆಳೆಸಲು ಮುಕ್ತ ಅವಕಾಶ ಕಲ್ಪಿಸುವುದರ ಜತೆಗೆ ನವೋದ್ಯಮ, ಕೌಶಲಾಭಿವೃದ್ಧಿಗೆ ಒತ್ತು ನೀಡುತ್ತೇನೆ. ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗ ಸೃಷ್ಟಿಗೆ ಅವಕಾಶ ಕಲ್ಪಿಸುವ ಯೋಜನೆ ರೂಪಿಸುತ್ತೇನೆ’ ಎಂದು ಹೇಳಿದರು.

***

‘ಬ್ರ್ಯಾಂಡ್‌ ಬೆಂಗಳೂರಿಗೆ ಮತ್ತೆ ಮೆರುಗು ತರುವೆ’
‘ಬೆಂಗಳೂರಿನ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡಬೇಕಿದೆ. ಜಾಗತಿಕ ಮಟ್ಟಕ್ಕೆ ತಕ್ಕಂತೆ ಮೂಲಸೌಕರ್ಯ, ಉಪನಗರ ರೈಲು ಯೋಜನೆ ಅನುಷ್ಠಾನ, ಗುಂಡಿಗಳಿಲ್ಲದ ರಸ್ತೆ ನಿರ್ಮಾಣ ಹಾಗೂ ಕೆರೆಗಳ ಸಂರಕ್ಷಣೆ ಮಾಡಬೇಕಿದೆ. ರಾಜ್ಯ ಸರ್ಕಾರದ ನಿರಾಸಕ್ತಿಯಿಂದಾಗಿ ಕಳೆಗುಂದಿರುವ ‘ಬ್ರ್ಯಾಂಡ್‌ ಬೆಂಗಳೂರು’ ಪ್ರಸಿದ್ಧಿಗೆ ಮತ್ತೆ ಮೆರುಗು ನೀಡುವೆ’ ಎಂದು ಯಡಿಯೂರಪ್ಪ ಪ್ರತಿಪಾದಿಸಿದರು.

‘ರಾಜಧಾನಿ ಈಗ ‘ಕ್ರೈಂ ಸಿಟಿ, ರೇಪ್‌ ಸಿಟಿ’ ಆಗಿದೆ. ಅದನ್ನು ಸುರಕ್ಷಿತ ನಗರವನ್ನಾಗಿ ಮಾಡಲು ಒತ್ತು ನೀಡುತ್ತೇನೆ. ಕೇಂದ್ರದ ಅನುದಾನಗಳನ್ನು ಸಮರ್ಪಕವಾಗಿ ಬಳಸಿಕೊಂಡು ನಗರದ ಸಮಗ್ರ ಅಭಿವೃದ್ಧಿ ಮಾಡುತ್ತೇನೆ’ ಎಂದರು.

‘ಬೆಂಗಳೂರಿನ ಅಭಿವೃದ್ಧಿಗಾಗಿ ಪ್ರತ್ಯೇಕ ಕಾಯ್ದೆ ತರುವ ಅಗತ್ಯವಿದೆ. ಈ ಬಗ್ಗೆ ನಿಮ್ಮ ನಿಲುವೇನು’ ಎಂದು ನಗರ ಯೋಜನಾ ತಜ್ಞ ವಿ.ರವಿಚಂದರ್‌ ಪ್ರಶ್ನಿಸಿದರು. ‘ಪ್ರತ್ಯೇಕ ಕಾಯ್ದೆಯ ಅಗತ್ಯ ಇಲ್ಲ. ಇಲ್ಲಿ ಬಿಡಿಎ ಇದೆ ಹಾಗೂ ಸಾಕಷ್ಟು ಎಂಜಿನಿಯರ್‌ಗಳು ಇದ್ದಾರೆ. ನಗರಕ್ಕೆ ಒಳ್ಳೆಯ ಅಧಿಕಾರಿಗಳನ್ನು ನಿಯೋಜಿಸಿದರೆ ಸಾಕು. ಕೆಲಸ ಮಾಡಲು ಉತ್ತಮ ವಾತಾವರಣ ಸೃಷ್ಟಿಸಬೇಕಿದೆ ಅಷ್ಟೆ’ ಎಂದು ಯಡಿಯೂರಪ್ಪ ಪ್ರತಿಪಾದಿಸಿದರು.

‘ನಗರಕ್ಕೆ ಮೂರು ಹಂತದ ಆಡಳಿತ ವ್ಯವಸ್ಥೆ ಬೇಕು ಹಾಗೂ ವಾರ್ಡ್‌ ಸಮಿತಿಗಳನ್ನು ಬಲಪಡಿಸಬೇಕು ಎಂದು ನಾವು ವರದಿ (ಬೆಂಗಳೂರು ಪುನರ್‌ರಚನಾ ಸಮಿತಿ) ಸಲ್ಲಿಸಿದ್ದೆವು. ಈ ಬಗ್ಗೆ ನಿಮ್ಮ ನಿಲುವು ಏನು’ ಎಂಬ ರವಿಚಂದರ್‌ ಪ್ರಶ್ನೆಗೆ ಅವರು ಉತ್ತರಿಸಲಿಲ್ಲ.

‘ನಗರದ ಶಾಸಕರು ಕಾರ್ಪೊರೇಟರ್‌ಗಳ ಕೆಲಸವನ್ನು ಮಾಡುತ್ತಿದ್ದಾರೆ’ ಎಂದು ಸಿಟಿಜನ್‌ ಆ್ಯಕ್ಷನ್‌ ಫೋರಂ ಅಧ್ಯಕ್ಷ ಡಿ.ಎಸ್‌. ರಾಜಶೇಖರ್ ದೂರಿದರು. ‘ಇದಕ್ಕೆ ಕಡಿವಾಣ ಹಾಕಬೇಕಿದೆ. ವ್ಯವಸ್ಥೆ ಬಿಗಿ ಮಾಡುವ ಮೂಲಕ ಇದನ್ನು ನಿಯಂತ್ರಿಸುತ್ತೇವೆ’ ಎಂದು ಭರವಸೆ ನೀಡಿದರು.

ಪ್ರತಿಕ್ರಿಯಿಸಿ (+)