ಗುರುವಾರ , ಜೂನ್ 4, 2020
27 °C
ತ್ರಿಕೋನ ಸ್ಪರ್ಧೆಯಿಂದ ಗಮನ ಸೆಳೆದಿರುವ ಕ್ಷೇತ್ರ

‘ದೊಡ್ಡ’ ಹಣಾಹಣಿಗೆ ಸಜ್ಜಾಗುತ್ತಿದೆ ‘ಚಿಕ್ಕ’ಪೇಟೆ

ಪ್ರವೀಣ್‌ ಕುಮಾರ್‌ ಪಿ.ವಿ. Updated:

ಅಕ್ಷರ ಗಾತ್ರ : | |

‘ದೊಡ್ಡ’ ಹಣಾಹಣಿಗೆ ಸಜ್ಜಾಗುತ್ತಿದೆ ‘ಚಿಕ್ಕ’ಪೇಟೆ

ಬೆಂಗಳೂರು: ಈ ವಿಧಾನಸಭಾ ಕ್ಷೇತ್ರದ ಹೆಸರು ‘ಚಿಕ್ಕಪೇಟೆ’. ಆದರೆ, ಈ ಹೆಸರಿನ ವಾರ್ಡ್‌ ಇರುವುದು ಗಾಂಧಿನಗರ ಕ್ಷೇತ್ರದ ವ್ಯಾಪ್ತಿಯಲ್ಲಿ. ಕ್ಷೇತ್ರ ಪುನರ್‌ವಿಂಗಡಣೆ ಬಳಿಕದ ಎರಡು ಚುನಾವಣೆಗಳಲ್ಲೂ ಇಲ್ಲಿ ತ್ರಿಕೋನ ಸ್ಪರ್ಧೆ ಇತ್ತು. ಈ ಬಾರಿ ಮತ್ತೆ ದೊಡ್ಡ ಮಟ್ಟದ ಹಣಾಹಣಿಗೆ ಇಲ್ಲಿ ಆಖಾಡ ಸಜ್ಜಾಗುತ್ತಿದೆ.

ಕಾಂಗ್ರೆಸ್‌ನ ಆರ್‌.ವಿ.ದೇವರಾಜ್‌ ಇಲ್ಲಿನ ಶಾಸಕ. 1994ರಲ್ಲಿ ಚಾಮರಾಜಪೇಟೆ ಕ್ಷೇತ್ರದಲ್ಲಿ ಗೆಲ್ಲುವ ಮೂಲಕ ವಿಧಾನಸಭೆ ಪ್ರವೇಶಿಸಿದ್ದ ಅವರು 1999ರಲ್ಲಿ ಮತ್ತೆ ಜಯಗಳಿಸಿದ್ದರು. ಎಸ್‌.ಎಂ.ಕೃಷ್ಣ ಅವರಿಗೆ ಅವಕಾಶ ಕಲ್ಪಿಸುವ ಸಲುವಾಗಿ 2004ರಲ್ಲಿ ಅವರು ಚುನಾವಣೆಗೆ ಸ್ಪರ್ಧಿಸಿರಲಿಲ್ಲ. ಕೃಷ್ಣ ಅವರು ಮಹಾರಾಷ್ಟ್ರ ರಾಜ್ಯಪಾಲರಾದ ಬಳಿಕ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. 2005ರಲ್ಲಿ ನಡೆದ ಉಪಚುನಾವಣೆಯಲ್ಲಿ ಜೆಡಿಎಸ್‌ನ ಜಮೀರ್‌ ಅಹಮದ್‌ ಖಾನ್‌ ವಿರುದ್ಧ ದೇವರಾಜ್‌ ಸೋತಿದ್ದರು.

ಪುನರ್‌ ವಿಂಗಡಣೆ ಬಳಿಕ 2008ರಲ್ಲಿ ಅವರು ಬಿಜೆಪಿಯ ಡಾ.ಹೇಮಚಂದ್ರ ಸಾಗರ್‌ ವಿರುದ್ಧ 7,281 ಮತಗಳಿಂದ ಸೋತಿದ್ದರು. ಆದರೆ, 2013ರಲ್ಲಿ ಬಿಜೆಪಿಯ ಉದಯ್‌ ಬಿ.ಗರುಡಾಚಾರ್‌ ವಿರುದ್ಧ 13,059 ಮತಗಳ ಅಂತರದ ಗೆಲುವಿನ ನಗೆ ಬೀರಿದ್ದರು. 

ಕಳೆದ ಚುನಾವಣೆಯಲ್ಲಿ ಇಲ್ಲಿ ಕಾಂಗ್ರೆಸ್‌ ಟಿಕೆಟ್‌ಗಾಗಿ ಸಿದ್ದಾಪುರ ವಾರ್ಡ್‌ನಲ್ಲಿ ಎರಡು ಬಾರಿ ಗೆದ್ದಿದ್ದ ಮಾವಳ್ಳಿ ಉದಯಶಂಕರ್‌ ಹಾಗೂ ದೇವರಾಜ್‌ ನಡುವೆ ಪೈಪೋಟಿ ಇತ್ತು. ಉದಯಶಂಕರ್‌ 2015ರ ಪಾಲಿಕೆ ಚುನಾವಣೆಯಲ್ಲಿ ಸೋಲು ಕಂಡಿದ್ದಾರೆ. ಹಾಗಾಗಿ, ಈ ಬಾರಿ ಪಕ್ಷವು ಮತ್ತೆ ದೇವರಾಜ್‌ ಅವರನ್ನೇ ಕಣಕ್ಕಿಳಿಸುವ ಸಾಧ್ಯತೆ ಹೆಚ್ಚು.

ಪ್ರಸ್ತುತ ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾಗಿರುವ ಶಾಸಕರು, 600ಕ್ಕೂ ಅಧಿಕ ಮಂದಿಗೆ ವಸತಿ ಒದಗಿಸಿದ್ದಾರೆ. ‘ಆರ್‌.ವಿ.ದೇವರಾಜ್‌ ಟ್ರಸ್ಟ್‌’ ಮೂಲಕವೂ ಮತಬ್ಯಾಂಕ್‌ ಭದ್ರಪಡಿಸಿಕೊಳ್ಳುವ ಪ್ರಯತ್ನ ನಡೆಸಿದ್ದಾರೆ.

‘₹700 ಕೋಟಿಗೂ ಅಧಿಕ ಮೊತ್ತದ ಕಾಮಗಾರಿಗಳಾಗಿವೆ. ಎಲ್ಲ ವಾರ್ಡ್‌ಗಳ ರಸ್ತೆಗಳನ್ನು ಅಭಿವೃದ್ಧಿಪಡಿಸಿದ್ದೇವೆ. ಜೆ.ಸಿ.ರಸ್ತೆಯಲ್ಲಿ ವಾಹನ ದಟ್ಟಣೆ ಕಡಿಮೆ ಮಾಡುವ ನಿಟ್ಟಿನಲ್ಲಿ ಉಕ್ಕಿನ ಸೇತುವೆ ಕಾಮಗಾರಿಗೂ ಮಂಜೂರಾತಿ ಸಿಕ್ಕಿದೆ. ಕೆಂಪಾಂಬುಧಿ ಕೆರೆ ಹಾಗೂ ಭೈರಸಂದ್ರ ಕೆರೆಗಳನ್ನು ಅಭಿವೃದ್ಧಿಪಡಿಸಿದ್ದೇವೆ. ಇಂದಿರಾ ಕ್ಯಾಂಟೀನ್‌ ಯೋಜನೆ ಜನರಿಗೆ ಇಷ್ಟವಾಗಿದೆ. ಈ ಎಲ್ಲಾ ವಿಚಾರಗಳು ನಮ್ಮ ಪಕ್ಷಕ್ಕೆ ಮತ ತರಲಿವೆ’ ಎನ್ನುತ್ತಾರೆ ದೇವರಾಜ್‌ ಅವರ ಮಗ ಆರ್‌.ವಿ.ಯುವರಾಜ್‌. ಅವರು ಸುಧಾಮನಗರ ವಾರ್ಡ್‌ನ ಸದಸ್ಯ.

ಮಾವಳ್ಳಿ ಉದಯಶಂಕರ್‌ ಪಾಲಿಕೆ ಚುನಾವಣೆಯಲ್ಲಿ ಸೋಲಲು ದೇವರಾಜ್‌ ಅಸಹಕಾರವೂ ಕಾರಣ ಎಂಬ ಸಿಟ್ಟು ಕಾಂಗ್ರೆಸ್‌ನ ಕೆಲವು ಕಾರ್ಯಕರ್ತರಲ್ಲಿದೆ.

ಇಲ್ಲಿ ಬಿಜೆಪಿಯಿಂದ ಟಿಕೆಟ್‌ ಗಿಟ್ಟಿಸಲು ನಾಲ್ಕೈದು ಮಂದಿ ಪ್ರಯತ್ನ ನಡೆಸುತ್ತಿದ್ದಾರೆ. ಒಂದು ಬಾರಿ ಶಾಸಕರಾಗಿದ್ದ ಹೇಮಚಂದ್ರ ಸಾಗರ್‌, ಕಳೆದ ಚುನಾವಣೆಯಲ್ಲಿ ಸೋಲು ಕಂಡಿದ್ದ ಉದ್ಯಮಿ ಉದಯ್‌ ಗರುಡಾಚಾರ್‌, ಶ್ರೀನಗರ ವಾರ್ಡ್‌ನ ಪಾಲಿಕೆ ಸದಸ್ಯ ಕೆಂಪೇಗೌಡ, ಪಾಲಿಕೆಯ ಮಾಜಿ ಸದಸ್ಯ ಧನರಾಜ್‌ ಹೆಸರು ಚಾಲ್ತಿಯಲ್ಲಿದೆ. ಸೋತ ಬಳಿಕವೂ ಉದಯ ಗರುಡಾಚಾರ್ ಜನರ ಸಂಪರ್ಕ ಇಟ್ಟುಕೊಂಡು ಚುನಾವಣೆಗೆ ಸಿದ್ಧತೆ ಮಾಡಿಕೊಂಡಿದ್ದಾರೆ.

ಬಿಜೆಪಿ ನಗರ ಜಿಲ್ಲಾ ವಕ್ತಾರ ಎನ್‌.ಆರ್‌.ರಮೇಶ್‌ ಕೂಡಾ ಟಿಕೆಟ್‌ ಸಿಗುವ ನಿರೀಕ್ಷೆ ಹೊಂದಿದ್ದಾರೆ. ‘ಕಾಂಗ್ರೆಸ್‌ ಸರ್ಕಾರದ ಭ್ರಷ್ಟಾಚಾರಗಳ ವಿರುದ್ಧ ನಡೆಸಿದ ಹೋರಾಟ ಪರಿಗಣಿಸಿ ಪಕ್ಷ ನನಗೆ ಟಿಕೆಟ್‌ ನೀಡಲಿದೆ ಎಂಬ ವಿಶ್ವಾಸವಿದೆ. ಇಲ್ಲಿ ನಮ್ಮ ಪಕ್ಷದ ಅಭ್ಯರ್ಥಿಯೇ ಗೆಲುವು ಸಾಧಿಸಲಿದ್ದಾರೆ’ ಎಂದು ಅವರು ಹೇಳಿದರು.

‘ಇಲ್ಲಿ ನಡೆದಿರುವ ಕಾಮಗಾರಿಗಳಲ್ಲಿ ಅವ್ಯವಹಾರಗಳು ನಡೆದಿವೆ. ಶಾಸಕರ ಹಾಗೂ ಅವರ ಬೆಂಬಲಿಗರ ಕಾರ್ಯವೈಖರಿಯ ಬಗ್ಗೆ ಜನ ಮುನಿಸಿಕೊಂಡಿದ್ದಾರೆ. ನಮ್ಮ ಪಕ್ಷದ ಅಭ್ಯರ್ಥಿಯ ಗೆಲುವಿಗೆ ಈ ಅಂಶಗಳು ನೆರವಾಗಲಿವೆ’ ಎಂಬುದು ಅವರ ವಾದ.

’ಇಲ್ಲಿ ವ್ಯಾಪಾರಿಗಳು, ಮಧ್ಯಮವರ್ಗದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಹಿಂದಿನಿಂದಲೂ ಅವರು ಬಿಜೆಪಿ ಪರ ಒಲವು ಹೊಂದಿದ್ದಾರೆ. ಕಳೆದ ಚುನಾವಣೆಯಲ್ಲಿ ಪಕ್ಷದ ನಾಯಕರಲ್ಲಿ ಒಗ್ಗಟ್ಟಿಲ್ಲದ ಕಾರಣ ನಮಗೆ ಹಿನ್ನಡೆ ಆಗಿತ್ತು. ಆದರೆ, ಈ ಬಾರಿ ಹಾಗಾಗದು. ಅಭ್ಯರ್ಥಿ ಆಯ್ಕೆ ಕುರಿತ ಗೊಂದಲವನ್ನು ಆದಷ್ಟು ಬೇಗ ನಿವಾರಿಸಿದಷ್ಟೂ ನಮ್ಮ ಪಕ್ಷದ ಅಭ್ಯರ್ಥಿಗೆ ಗೆಲ್ಲುವ ಅವಕಾಶ ಹೆಚ್ಚು’ ಎನ್ನುತ್ತಾರೆ ಪಕ್ಷದ ಕಾರ್ಯಕರ್ತರು.

ಸಾಮಾಜಿಕ ಕಾರ್ಯಕರ್ತೆ ಲತಾ ಸುಕುಮಾರ್‌, ಮುಖಂಡರಾದ ಮಹಮ್ಮದ್‌ ಹ್ಯಾರಿಸ್‌, ಮಿಸ್ಬಾವುದ್ದೀನ್‌ ಹಾಗೂ  ತನ್ವೀರ್‌ ಅಹ್ಮದ್‌ ಜೆಡಿಎಸ್‌ ಟಿಕೆಟ್‌ ಆಕಾಂಕ್ಷಿಗಳು. ಕಳೆದ ಚುನಾವಣೆಯಲ್ಲಿ ಇಲ್ಲಿ ಪಕ್ಷದ ಅಭ್ಯರ್ಥಿಯಾಗಿದ್ದ ಎಂ.ಸಿ.ನಾರಾಯಣಗೌಡ ಸಕ್ರಿಯ ರಾಜಕಾರಣದಿಂದ ದೂರ ಉಳಿದಿದ್ದಾರೆ.

‘ಇಲ್ಲಿ ಪಕ್ಷದ ನೆಲೆ ಗಟ್ಟಿಯಾಗಿದೆ. ಪುನರ್‌ವಿಂಗಡಣೆ ಬಳಿಕದ ಎರಡೂ ಚುನಾವಣೆಗಳಲ್ಲೂ ಪಕ್ಷದ ಅಭ್ಯರ್ಥಿಗಳು ಇಲ್ಲಿ 23 ಸಾವಿರಕ್ಕೂ ಅಧಿಕ ಮತಗಳನ್ನು ಪಡೆದಿದ್ದರು. ಈ ಬಾರಿ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಆಡಳಿತ ವೈಖರಿಯಿಂದ ಜನ ರೋಸಿ ಹೋಗಿದ್ದಾರೆ. ಹಾಗಾಗಿ ನಮ್ಮ ಪಕ್ಷಕ್ಕೆ ಹೆಚ್ಚಿನ ಅವಕಾಶ ಇದೆ’ ಎನ್ನುತ್ತಾರೆ ಜೆಡಿಎಸ್‌ ನಗರ ಜಿಲ್ಲಾ ಘಟಕದ ಅಧ್ಯಕ್ಷ ಪ್ರಕಾಶ್‌.

***

ಎಸ್‌ಡಿಪಿಐ ಸ್ಪರ್ಧೆ

ಈ ಕ್ಷೇತ್ರದ ಸಿದ್ದಾಪುರ ವಾರ್ಡ್‌ನಲ್ಲಿ ಎಸ್‌ಡಿಪಿಐನ ಮುಜಾಹಿದ್‌ ಪಾಷಾ ಪಾಲಿಕೆ ಸದಸ್ಯರಾಗಿದ್ದಾರೆ. ಅವರು ಮಾವಳ್ಳಿ ಉದಯ್ಶಂಕರ್‌ ಅವರನ್ನು ಸೋಲಿಸಿದ್ದರು.

‘ಈ ಮಹಾನಗರದಲ್ಲಿ ಎಸ್‌ಡಿಪಿಐಗೂ ಅಸ್ತಿತ್ವ ಇದೆ ಎಂದು ತೋರಿಸಿಕೊಟ್ಟಿದ್ದೇವೆ. ವಿಧಾನಸಭಾ ಚುನಾವಣೆಯಲ್ಲಿ ನಾನೂ ಕಣಕ್ಕಿಳಿಯಲಿದ್ದೇನೆ. ನಮಗೂ ಇಲ್ಲಿ ಮತದಾರರಿದ್ದಾರೆ’ ಎಂದು ಪಾಷಾ ತಿಳಿಸಿದರು.

***

ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರ

2013ರ ಚುನಾವಣೆಯ ಚಿತ್ರಣ

1.09 ಲಕ್ಷ

ಚಲಾಯಿತ ಮತಗಳು16

ಅಭ್ಯರ್ಥಿಗಳು ಕಣದಲ್ಲಿದ್ದರುಅಭ್ಯರ್ಥಿ, ಪಕ್ಷ, ಮತ, ಶೇಕಡಾ (ಒಟ್ಟು ಚಲಾಯಿತ ಮತದಲ್ಲಿ)

ಆರ್‌.ವಿ.ದೇವರಾಜ್‌, ಕಾಂಗ್ರೆಸ್‌, 44714, (41.09 %)

ಉದಯ್‌ ಬಿ.ಗರುಡಾಚಾರ್‌, 31,655, (29.09 %)

ಎಂ.ಸಿ.ನಾರಾಯಣ ಗೌಡ, ಜೆಡಿಎಸ್‌, 24382, (22.41 %)

 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.