ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡಗಿನ ‘ದೇವರಕಾಡಿ’ಗೂ ಬೇಕು ರಕ್ಷಣೆ

Last Updated 24 ಫೆಬ್ರುವರಿ 2018, 7:01 IST
ಅಕ್ಷರ ಗಾತ್ರ

ಗೋಣಿಕೊಪ್ಪಲು:ಕೊಡಗು ಪ್ರಾಕೃತಿಕ ಸಿರಿ ಸಂಪತ್ತಿನ ಜಿಲ್ಲೆ. ಹಲವು ಪರ್ವತ ಶ್ರೇಣಿಗಳನ್ನು ಹೊಂದಿರುವ ಈ ಜಿಲ್ಲೆ ವೈವಿಧ್ಯಮಯ ಜೀವಜಾಲ ಹೊಂದಿದೆ. ಇದಕ್ಕೆ ಕಾರಣ ಇಲ್ಲಿನ ಹಸಿರುಮಯ ಪರಿಸರ ಮತ್ತು ಅರಣ್ಯ ಪ್ರದೇಶ.

ಇಲ್ಲಿ ಮೀಸಲು ಮತ್ತು ರಾಷ್ಟ್ರೀಯ ಅರಣ್ಯ ಪ್ರದೇಶದ ಜತೆಗೆ ‘ದೇವರಕಾಡು’ ಎಂಬ ವಿಶಿಷ್ಟ ಬಗೆಯ ಅರಣ್ಯ ಪ್ರದೇಶಗಳೂ ಇವೆ. ಈ ಅರಣ್ಯ ಕೊಡಗಿನ ಸ್ವಚ್ಛ ಪರಿಸರ ಮತ್ತು ಜೀವ ವೈವಿಧ್ಯದ ಸಂರಕ್ಷಣೆಗೆ ಸಹಕಾರಿಯಾಗಿದೆ. ಆದರೆ, ಇಂದು ಅವುಗಳಿಗೆ ಒತ್ತುವರಿ ಭೀತಿ ಕಾಡುತ್ತಿದೆ; ಹೆಚ್ಚು ದೇವರಕಾಡು ಪ್ರದೇಶ ಹೊಂದಿದ್ದ ಕೀರ್ತಿ ನಿಧಾನವಾಗಿ ಮಾಯವಾಗುವ ಕಾಲ ಸಮೀಪಿಸುತ್ತಿದೆ.

ಭದ್ರಕಾಳಿ ಅಯ್ಯಪ್ಪ: ದೇವರಕಾಡು ಕಲ್ಪನೆಯೇ ವಿಶಿಷ್ಟವಾದುದು. ಬಯಲು ಸೀಮೆಯಲ್ಲಿ ದೇವಸ್ಥಾನದ ತೋಪುಗಳಿದ್ದಂತೆ ಇಲ್ಲಿನ ದೇವರಕಾಡುಗಳು. ಆದರೆ, ಅಲ್ಲಿನ ತೋಪುಗಳು ವ್ಯವಸಾಯಕ್ಕೆ ಒತ್ತುವರಿಯಾಗಿದ್ದರೆ ದೇವರಕಾಡುಗಳು ಮಾತ್ರ ಅನಾದಿಕಾಲದಿಂದಲೂ ಹಿರಿಯರ ಪರಿಸರ ಪ್ರೇಮದಿಂದ ಉಳಿದುಕೊಂಡು ಬಂದಿದ್ದವು. ಪ್ರತಿ ಊರಿನಲ್ಲಿಯೂ ಒಂದೆರಡು ದೇವರಕಾಡುಗಳು ಇದ್ದೇ ಇವೆ. ಇಲ್ಲಿನ ಎಲ್ಲಾ ದೇವರು ಭದ್ರಕಾಳಿ ಇಲ್ಲವೇ ಅಯ್ಯಪ್ಪ.

ಈ ದೇವರು ಕಲ್ಲು ಅಥವಾ ಮರದ ಬೇರಿನ ರೂಪದಲ್ಲಿವೆ. ಇವುಗಳ ಬಳಿಯಲ್ಲಿ ಹರಕೆ ಹೊತ್ತುವರು ಅರ್ಪಿಸಿದ ಮಣ್ಣಿನಲ್ಲಿ ಮಾಡಿದ ನಾಯಿ, ಮೊಲ, ಜಿಂಕೆ ಮದಲಾದ ವಿಗ್ರಹಗಳಿವೆ. ಇವುಗಳ ಮುಂದೆ ತ್ರಿಶೂಲ ಮತ್ತು ಬಿಲ್ಲುಗಳನ್ನು ಇಡಲಾಗಿದೆ.

ದೇವರಕಾಡಿನ ಒಳಗೆ ಹೋದವರೆಲ್ಲಾ ಇವುಗಳಿಗೆ ಕೈಮುಗಿದು, ಪೂಜೆ ಸಲ್ಲಿಸಿ ಬರುತ್ತಾರೆ. ವರ್ಷಕ್ಕೆ ಒಮ್ಮೆ ಹಬ್ಬವೂ ನಡೆಯುತ್ತದೆ. ಊರಿನ ಜನರೆಲ್ಲಾ ಸೇರಿ ಶ್ರದ್ಧಾಭಕ್ತಿಯಿಂದ ಪೂಜೆ ಸಲ್ಲಿಸುತ್ತಾರೆ. ಇಲ್ಲಿನ ಮರಗಳನ್ನು ಯಾರೂ ಕಡಿಯುವಂತಿಲ್ಲ. ಒಣಗಿದ ಮರಗಳನ್ನೂ ಕಟ್ಟಿಗೆಗಳಾಗಿ ಬಳಸುವಂತಿಲ್ಲ ಎಂಬ ಕಟ್ಟುನಿಟ್ಟಿನ ಸಂಪ್ರದಾಯ ಕೆಲವು ಕಡೆ ಇದೆ. ಒಂದು ಹುಲ್ಲು ಕಡ್ಡಿಯನ್ನೂ ತೆಗೆಯುವಂತಿಲ್ಲ ಎಂಬ ನಂಬಿಕೆ ಇರುವುದರಿಂದ ದೇವರಕಾಡು ಸಹಜವಾಗಿಯೇ ಉಳಿದಿದೆ ಎನ್ನುತ್ತಾರೆ ಹಿರಿಯರು.

ಜೀವ ವೈವಿಧ್ಯದ ತಾಣ: ಇದರಿಂದಾಗಿ ಈ ಕಾಡುಗಳು ಜೀವವೈವಿಧ್ಯತೆಯ ತಾಣಗಳಾಗಿವೆ. ನೂರಾರು ಬಗೆಯ ಸಸ್ಯರಾಶಿಗಳನ್ನು ಹೊಂದಿರುವ ಇವು ಗಿಡಮೂಲಿಕೆ, ಔಷಧಗಳ ಆಗರವಾಗಿವೆ. ಇಲ್ಲಿನ ಕಾಫಿ ತೋಟದ ನಡುವೆ ರಸ್ತೆಗಳ ಬದಿಯಲ್ಲಿ ಏನಾದರೂ ಕಾಡು ಕಂಡುಬಂದರೆ ಅದನ್ನು ನಿಸ್ಸಂಶಯವಾಗಿ ಹೇಳಬಹುದು, ಅದು ‘ದೇವರ ಕಾಡು’ ಎಂದು.

ಇಂತಹ ಕಾಡುಗಳೂ ಇಂದು ಹಲವು ರೀತಿಯಲ್ಲಿ ಅಳಿವಿನ ಅಂಚಿಗೆ ತಲುಪಿವೆ. ಅಕ್ಕಪಕ್ಕದ ಕಾಫಿ ತೋಟದ ಮಾಲೀಕರು ಒತ್ತುವರಿ ಮಾಡಿಕೊಳ್ಳುತ್ತಾ ಬಂದಿದ್ದಾರೆ. ಕೆಲವು ಕಾಡುಗಳು ನಿವೇಶನ ರಹಿತ ಕಾರ್ಮಿಕರ ವಾಸದ ನೆಲೆಗಳಾಗುತ್ತಿವೆ. ಮತ್ತೆ ಕೆಲವು ಆಟದ ಮೈದಾನಗಳು, ಸಮುದಾಯ ಭವನಗಳ ನಿರ್ಮಾಣ ತಾಣಗಳಾಗಿ ಪರಿವರ್ತನೆಗೊಂಡಿವೆ ಎಂಬ ಆರೋಪ ಕೇಳಿಬಂದಿದೆ. ಒತ್ತುವರಿ ಕಾರಣಕ್ಕೆ ಕೊಡಗಿನ ದಟ್ಟಕಾಡು ನಿಧಾನಕ್ಕೆ ಬರಿದಾಗುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಅರಣ್ಯ ಇಲಾಖೆ ಸುಪರ್ದಿಗೆ: ಹಿಂದೆ ಆಯಾ ಗ್ರಾಮದ ಜನರ ಸುಪರ್ದಿಯಲ್ಲಿದ್ದ ದೇವರಕಾಡನ್ನು 10 ವರ್ಷಗಳ ಈಚೆಗೆ ಅರಣ್ಯ ಇಲಾಖೆ ವಶಕ್ಕೆ ಪಡೆದುಕೊಂಡಿದೆ. ಸರ್ವೆ ಮಾಡಿಸಿ ಸುತ್ತಲೂ ಕಂದಕ ತೋಡಿ ಒತ್ತುವರಿ ತಡೆಗಟ್ಟಲಾಗಿದೆ. ಮತ್ತೆ ಕೆಲವು ಕಡೆ ಗ್ರಾಮ ಸಮಿತಿ ರಚಿಸಿ ಅವರ ಸಂರಕ್ಷಣೆಗೆ ವಹಿಸಲಾಗಿದೆ. ಪೊನ್ನಂಪೇಟೆ ಸಮೀಪದ ಕಿರುಗೂರಿನಲ್ಲಿ ಕುಟ್ಟಿಚಾತ ಹೆಸರಿನ ದೇವರ ಕಾಡಿದೆ. ಇದು 15 ಎಕರೆಗಳಷ್ಟಿದ್ದು ಇದನ್ನು ಅಲ್ಲಿನ ಗ್ರಾಮಸ್ಥರು ಕಾಪಾಡಿಕೊಂಡು ಬರುತ್ತಿದ್ದಾರೆ. ಊರಿನ ಹಿರಿಯರನ್ನು ದೇವರಕಾಡು ಸಂರಕ್ಷಣಾ ಸಮಿತಿ ಅಧ್ಯಕ್ಷರನ್ನಾಗಿ ಮಾಡಿದ್ದಾರೆ. ಇವರ ನೇತೃತ್ವದಲ್ಲಿಯೇ ಪ್ರತಿವರ್ಷ ಕಾಡಿನಲ್ಲಿರುವ ಕುಟ್ಟಿಚಾತ ದೇವರ ಉತ್ಸವವೂ ನಡೆಯುತ್ತಿದೆ.

ದೇವರಪುರದ ಕಾಡಿನಲ್ಲಿ ಕುಂಡೆ ಹಬ್ಬ: ದೇವರಪುರದ ಭದ್ರಕಾಳಿ ದೇವರ ಕಾಡಿನಲ್ಲಿ ಪ್ರತಿವರ್ಷ ಮೇ ಅಂತಿಮ ವಾರದಲ್ಲಿ ವಿಜೃಂಭಣೆಯ ಕುಂಡೆ ಹಬ್ಬ ಜರುಗುತ್ತಿದೆ. ಇಲ್ಲಿ ಕಾಡನ್ನು ಜತನವಾಗಿ ಕಾಪಾಡಿಕೊಂಡು ಬರಲಾಗಿದೆ. ಉಳಿದಂತೆ ಕುಂದ, ಕಾರ್ಮಾಡು, ಅರವತ್ತೊಕ್ಕಲು, ದೇವಪುರ, ಕೈಕೇರಿ, ಹಳ್ಳಿಗಟ್ಟು, ಹುದಿಕೇರಿ, ಕೋಣನಕಟ್ಟೆ, ನಲ್ಲೂರು, ಮತ್ತೂರು ಮೊದಲಾದ ಕಡೆಗಳಲ್ಲಿ ಸಂರಕ್ಷಿಸಿಕೊಂಡು ಬರಲಾಗಿದೆ.

ಹುತ್ತರಿ ಕೋಲಾಟಕ್ಕೆ ಉಳಿದ ಮಂದ್: ಕೆಲವು ಕಡೆ ಮಂದ್ ಮತ್ತು ಊರೊಡವೆ ಒತ್ತುವರಿಯಾಗಿದ್ದರೆ ಮತ್ತೆ ಕೆಲವು ಕಡೆ ಉಳಿದಿವೆ. ಬೆಕ್ಕೆಸೊಡ್ಲೂರು, ಕುಂದ ಬಾಳೆಲೆ ಮೊದಲಾದ ಕಡೆ ಹುತ್ತರಿ ಸಂದರ್ಭದಲ್ಲಿ ಕೋಲಾಟ ಮೊದಲಾದ ಸಾಂಸ್ಕೃತಿಕ ಕಾರ್ಯಕ್ರಮ ಈ ಮಂದ್‌ಗಳಲ್ಲಿ ಜರುಗುತ್ತಿವೆ.

‘ದೇವರಕಾಡು ಸಂರಕ್ಷಣೆಯಾಗಲಿ’: ದೇವರಕಾಡು ಉಳಿದರೆ ಕೊಡಗಿನ ಪರಿಸರ ಉಳಿಯುತ್ತದೆ. ಈ ಮೂಲಕ ಕೃಷಿ ಮತ್ತು ನೀರಿನ ಸಂರಕ್ಷಣೆಯಾಗುತ್ತದೆ. ಯಾವುದೇ ಕಾರಣಕ್ಕೂ ದೇವರಕಾಡುಗಳನ್ನು ಒತ್ತುವರಿಯಾಗಲು ಬಿಡಬಾರದು. ವಸತಿ ರಹಿತರಿಗೆ ಸರ್ಕಾರಿ ಭೂಮಿಯಲ್ಲಿ ಅವಕಾಶ ಒದಗಿಸಲಿ. ಕಾಫಿ ತೋಟ ಮತ್ತು ನಿವೇಶನಗಳಿಗೆ ಒತ್ತುವರಿಯಾಗಿರುವ ದೇವರಕಾಡುಗಳನ್ನು ಬಿಡಿಸಿ ಸಂರಕ್ಷಿಸುವುದು ಅಗತ್ಯ’ ಎಂದು ಕಿರುಗೂರು ಕುಟ್ಟಿಚಾತ ದೇವರಕಾಡು ಸಮಿತಿ ಸದಸ್ಯ ಕೊರಕುಟ್ಟೀರ ಸರಾ ಚಂಗಪ್ಪ ಆಗ್ರಹಿಸುತ್ತಾರೆ.

ಧನುಗಾಲ ‘ದೇವರಕಾಡಿ’ನಲ್ಲಿ ಕಾಫಿ ತೋಟ

ಮಾಯಮುಡಿ ಸಮೀಪದ ಧನುಗಾಲ ದೇವರಕಾಡು ಪ್ರದೇಶದಲ್ಲಿ ಮುರುಡೇಶ್ವರ ದೇವಾಲಯವಿದೆ. ಇಲ್ಲಿ ಗುಡಿಗೋಪುರ ಕಟ್ಟಿ ನಿತ್ಯವೂ ಪೂಜೆ ನಡೆಸಲಾಗುತ್ತಿದೆ. 4 ಎಕರೆಗಳಷ್ಟು ಜಾಗದಲ್ಲಿ ಕಾಡು ಕಡಿದು ದೇವಸ್ಥಾನ ಸಮಿತಿಯವರು ಕಾಫಿ ತೋಟ ಮಾಡಿದ್ದಾರೆ.

‘ತಹಶೀಲ್ದಾರ್ ಅವರ ಅನುಮತಿ ಪಡೆದು ದೇವಸ್ಥಾನ ನಿರ್ವಹಣೆಯ ವೆಚ್ಚಕ್ಕೆಂದು ಕಾಫಿ ತೋಟ ಮಾಡಲಾಗಿದೆ’ ಎನ್ನುತ್ತಾರೆ ದೇವಸ್ಥಾನ ಸಮಿತಿಯ ಅಧ್ಯಕ್ಷ ವಿರೂಪಾಕ್ಷಪ್ಪ.

ನಿರಾಶ್ರಿತರ ನೆಲೆಯಾದ ಚೆನ್ನಂಗೊಲ್ಲಿ ದೇವರಕಾಡು: ಚೆನ್ನಂಗೊಲ್ಲಿ ಅಯ್ಯಪ್ಪ ದೇವರಕಾಡು ಸಂಪೂರ್ಣ ವಸತಿ ಕೇಂದ್ರವಾಗಿದೆ. ಅಂದಾಜು 20 ಎಕರೆಗಳಷ್ಟಿದ್ದ ದೇವರಕಾಡು 50 ವರ್ಷಗಳಿಂದಲೂ 400ಕ್ಕೂ ಹೆಚ್ಚಿನ ವಸತಿ ರಹಿತರ ಆಶ್ರಯ ತಾಣವಾಗಿದೆ.

ಇಲ್ಲಿರುವವರೆಲ್ಲ ಮನೆ ನಿರ್ಮಿಸಿಕೊಂಡು ವಾಸಿಸುತ್ತಿದ್ದರೂ ಯಾರಿಗೂ ಹಕ್ಕುಪತ್ರ ಸಿಕ್ಕಿಲ್ಲ. ಮಾಯಮುಡಿ ಮಾನಿಲ್ ಅಯ್ಯಪ್ಪ ಸಂಘದವರು ದೇವರಕಾಡು ತೆರವುಗೊಳಿಸುವಂತೆ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದಾರೆ. ಇದರಿಂದ ಗ್ರಾಮದ ಅಭಿವೃದ್ಧಿಗೆ ಸರ್ಕಾರದ ಯಾವುದೇ ಅನುದಾನ ಲಭಿಸುತ್ತಿಲ್ಲ ಎಂದು ನೋವಿನಿಂದ ನುಡಿದರು ಸ್ಥಳೀಯ ನಿವಾಸಿ ಹಾಗೂ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ವಿನ್ಸೆಂಟ್ ಬಾಬು.

ಜೆ.ಸೋಮಣ್ಣ

* * 

‘ದೇವರಕಾಡು’ ಉಳಿದರೆ ಕೊಡಗಿನ ಪರಿಸರ ಉಳಿಯಲಿದೆ. ಈ ಮೂಲಕ ಕೃಷಿ ಮತ್ತು ನೀರಿನ ಸಂರಕ್ಷಣೆಯಾಗಲಿದೆ. ಯಾವುದೇ ಕಾರಣಕ್ಕೂ ದೇವರಕಾಡು ಒತ್ತುವರಿಯಾಗಲು ಬಿಡಬಾರದು
ಕೊರಕುಟ್ಟೀರ ಸರಾ ಚಂಗಪ್ಪ, ಕುಟ್ಟಿಚಾತ ದೇವರಕಾಡು ಸಮಿತಿ ಸದಸ್ಯ, ಕಿರುಗೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT