ಭಾನುವಾರ, ಡಿಸೆಂಬರ್ 8, 2019
24 °C

ಜಿಲ್ಲೆಯಲ್ಲಿ ರಾಹುಲ್‌ ‘ಜನಾಶೀರ್ವಾದ ಯಾತ್ರೆ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜಿಲ್ಲೆಯಲ್ಲಿ ರಾಹುಲ್‌ ‘ಜನಾಶೀರ್ವಾದ ಯಾತ್ರೆ’

ಬೆಳಗಾವಿ: ‌ಮುಂಬರುವ ವಿಧಾನಸಭೆ ಚುನಾವಣೆ ಅಂಗವಾಗಿ ಜಿಲ್ಲೆಯಲ್ಲಿ ಇದೇ 24 ಹಾಗೂ 26ರಂದು ವಿವಿಧೆಡೆ ಕಾಂಗ್ರೆಸ್‌ನಿಂದ ಆಯೋಜಿಸಿರುವ ‘ಜನಾಶೀರ್ವಾದ ಯಾತ್ರೆ’ಯಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಪಕ್ಷದ ಗಣ್ಯರ ದಂಡು ಭಾಗವಹಿಸಲಿದೆ.

24ರಂದು ಬೆಳಿಗ್ಗೆ 11.30ಕ್ಕೆ ಸಾಂಬ್ರಾ ವಿಮಾನನಿಲ್ದಾಣಕ್ಕೆ ಆಗಮಿಸುವ ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜತೆ ಹೆಲಿಕಾಪ್ಟರ್‌ನಲ್ಲಿ ಅಥಣಿಗೆ ತೆರಳುವರು. ಅಲ್ಲಿನ ಪ್ರವಾಸಿಮಂದಿರ ಸಮೀಪದಲ್ಲಿ ಆಯೋಜಿಸಿರುವ ಸಾರ್ವಜನಿಕ ಸಮಾರಂಭದಲ್ಲಿ ಭಾಗವಹಿಸುವರು. ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ವೇಣುಗೋಪಾಲ್‌, ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ, ಪ್ರಚಾರ ಸಮಿತಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ಕಾರ್ಯಾಧ್ಯಕ್ಷರಾದ ದಿನೇಶ್‌ ಗುಂಡೂರಾವ್‌, ಎಸ್‌.ಆರ್‌. ಪಾಟೀಲ ಹಾಗೂ ಸಚಿವರು ಭಾಗವಹಿಸುವರು.

26ರಂದು ಬೆಳಿಗ್ಗೆ 11ಕ್ಕೆ ರಾಮದುರ್ಗ ಹಾಗೂ ಮಧ್ಯಾಹ್ನ 12.45ಕ್ಕೆ ಸವದತ್ತಿಯಲ್ಲಿ ನಡೆಯುವ ಸಭೆಗಳಲ್ಲಿ ರಾಹುಲ್‌ ಪಾಲ್ಗೊಳ್ಳುವರು. ರೋಡ್‌ ಶೋ ನಡಸುವರು. ಸವದತ್ತಿ ಯಲ್ಲಮ್ಮನಗುಡ್ಡದಲ್ಲಿರುವ ರೇಣುಕಾ ಯಲ್ಲಮ್ಮ ದೇವಸ್ಥಾನ, ರಾಮದುರ್ಗ ತಾಲ್ಲೂಕಿನ ಗೊಡಚಿ ವೀರಭದ್ರಶ್ವರ ದೇವಸ್ಥಾನಕ್ಕೆ ಭೇಟಿ ನೀಡಲಿದ್ದಾರೆ.

ಅಥಣಿ ವರದಿ: ಇಲ್ಲಿ ಕಾಂಗ್ರೆಸ್‌ ಸಮಾವೇಶಕ್ಕೆ ನಡೆದಿರುವ ವೇದಿಕೆಯ ಸಿದ್ಧತೆಗಳನ್ನು ಪಕ್ಷದ ಮುಖಂಡರು ಶುಕ್ರವಾರ ವೀಕ್ಷಿಸಿದರು. ‘ಯುವಜನರಿಗೆ ಉದ್ಯೋಗ ನೀಡುವುದಾಗಿ ಕೇಂದ್ರ ಸರ್ಕಾರ ನೀಡಿದ ಭರವಸೆ ಸುಳ್ಳಾಗಿದೆ. ಕೊಟ್ಟ ಮಾತಿಗೆ ತಪ್ಪಿದ ಬಿಜೆಪಿ ನಾಯಕರು ಜನರ ಕ್ಷಮೆ ಕೇಳಬೇಕು’ ಎಂದು ಇಂಧನ ಸಚಿವ ಡಿ.ಕೆ. ಶಿವಕುಮಾರ ಒತ್ತಾಯಿಸಿದರು.

‘ದೇಶದೆಲ್ಲೆಡೆ ರಾಹುಲ್‌ ಗಾಂಧಿ ಅಲೆ ಇದೆ. ಜನರ ಒಲವು ಕಾಂಗ್ರೆಸ್‌ ಪಕ್ಷದತ್ತ ವಾಲಿದೆ. ಬಿಜೆಪಿಯವರು ಪಕೋಡ ಅಂಗಡಿ ತೆರೆಯುವಂತೆ ಯುವಕರಿಗೆ ಹೇಳುತ್ತಿರುವುದು ನಾಚಿಕೆಯ ಸಂಗತಿಯಾಗಿದೆ. ಮುಂಬರುವ ಚುನಾವಣೆಯಲ್ಲಿ ಜನರು ಬಿಜೆಪಿಯವರಿಗೆ ಪಾಠ ಕಲಿಸಲಿದ್ದಾರೆ’ ಎಂದರು.

ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ, ‘ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಲಿದೆ. ಗ್ರಾಮೀಣ ಜನರ ನಿರೀಕ್ಷೆಗೆ ತಕ್ಕಂತೆ ಮುಖ್ಯಮಂತ್ರಿ ಜನಪರ ಯೋಜನೆಗಳನ್ನು ನೀಡಿದ್ದಾರೆ. ಸಾಲ ಮನ್ನಾ ಮಾಡುವ ಮೂಲಕ ರೈತರ ಬದುಕಿಗೆ ಆಸರೆಯಾಗಿದ್ದಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ, ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ವಿನಯ ನಾವಲಗಟ್ಟಿ, ಮುಖಂಡರಾದ ವೀರಣ್ಣ ಮತ್ತಿಕಟ್ಟಿ, ವೀರಕುಮಾರ ಪಾಟೀಲ, ಶಹಜಹಾನ ಡೊಂಗರಗಾಂವ,  ಕಿರಣಕುಮಾರ ಪಾಟೀಲ, ಎಸ್.ಕೆ. ಬುಟಾಳೆ, ಎಸ್.ಎಂ. ನಾಯಿಕ, ಮಹೇಶ ಕುಮಠಳಿ, ಗಜಾನನ ಮಂಗಸೂಳಿ, ಸುರೇಶಗೌಡ ಪಾಟಿಲ, ಅರ್ಷದ ಗದ್ಯಾಳ, ಅನಿಲ ಸುಣದೋಳಿ, ಶ್ರೀಮಂತ ಪಾಟೀಲ ಇದ್ದರು.

ಪ್ರತಿಕ್ರಿಯಿಸಿ (+)