ಅಂತರಂಗದ ಮಾತು ಕೇಳಿ: ಅಮ್ಮ

7

ಅಂತರಂಗದ ಮಾತು ಕೇಳಿ: ಅಮ್ಮ

Published:
Updated:
ಅಂತರಂಗದ ಮಾತು ಕೇಳಿ: ಅಮ್ಮ

ಬೆಂಗಳೂರು: ಬಾಹ್ಯ ಅಂಶಗಳಿಗೆ ಮಾತ್ರ ಆದ್ಯತೆ ನೀಡಿ ಅಂತರಂಗವನ್ನು ಕಡೆಗಣಿಸಿದರೆ ಸ್ವಾಭಾವಿಕವಾಗಿ ಅಸಮತೋಲನ ಉಂಟಾಗುತ್ತದೆ. ಜಗತ್ತಿನ ಎಲ್ಲ ಸಮಸ್ಯೆಗಳಿಗೆ ಮೂಲ ಕಾರಣ ಇದೇ ಆಗಿದೆ ಎಂದು ಮಾತಾ ಅಮೃತಾನಂದಮಯಿ (ಅಮ್ಮ) ಹೇಳಿದರು.

ಅಮೃತಾನಂದಮಯಿ ಮಠದ ಅಂಗಳದಲ್ಲಿ ಶನಿವಾರ ಆಯೋಜಿಸಿದ್ದ ಬ್ರಹ್ಮಸ್ಥಾನಂ ವಾರ್ಷಿಕೋತ್ಸವದಲ್ಲಿ ಅವರು ಮಾತನಾಡಿದರು.

ಎಲ್ಲ ವಸ್ತುಗಳು ಹಾಗೂ ಜೀವಿಗಳಿಗೆ ಒಳ ಮತ್ತು ಹೊರ ಎಂಬ ಎರಡು ಭಾವಗಳಿರುತ್ತವೆ. ಆ ಎರಡು ಅಂಶಗಳು ಕೂಡಿದಾಗ ಮಾತ್ರ ಎಲ್ಲದಕ್ಕೂ ಪೂರ್ಣತೆ ಸಿಗುತ್ತದೆ. ಈ ಸತ್ಯವನ್ನು ಮರೆತ ಮನುಷ್ಯರು ಹೊರಗಿನ ದೇಹಕ್ಕೆ ಹಾಗೂ ಭೋಗಕ್ಕೆ ಮಾತ್ರ ಪ್ರಾಮುಖ್ಯತೆ ನೀಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಬಹುತೇಕರು ತಮ್ಮ ಅಂತರಂಗದ ಆತ್ಮದ ಮಾತನ್ನು ಪರಿಗಣಿಸುತ್ತಿಲ್ಲ. ಇದು ಹೇಗೆ ಅಂದರೆ, ‘ಉಡುಗೆ ತೊಡುಗೆ ಇದೆ. ಅದನ್ನು ಧರಿಸುವ ಮನುಷ್ಯನೇ ಇಲ್ಲ’ ಎಂಬಂತೆ. ಬಾಹ್ಯದ ಅಂಶಗಳಿಗೆ ಮಾತ್ರ ಹೆಚ್ಚು ಆದ್ಯತೆ ನೀಡಲಾಗುತ್ತಿದೆ. ಅದಕ್ಕೆ ಬದಲಾಗಿ, ಗರಿಗೆದರಿ ನರ್ತಿಸುವ ನವಿಲಿನ ಬಾಹ್ಯ ಸೌಂದರ್ಯದಂತೆ ಹಾಗೂ ಇಂಪಾಗಿ ಕೂಗುವ ಕೋಗಿಲೆಯ ಆಂತರಿಕ ಸೌಂದರ್ಯದಂತೆ ನಮ್ಮ ಮಕ್ಕಳಲ್ಲಿ ಬಾಹ್ಯ ಮತ್ತು ಆಂತರಿಕ ಸೌಂದರ್ಯಗಳು ಮೇಳೈಸಲಿ’ ಎಂದರು.

‘ನಿಜವಾದ ಶಾಂತಿ, ನೆಮ್ಮದಿ ಸಿಗದಂತಹ, ಪರಸ್ಪರರ ಸಂಘರ್ಷದ ವಾತಾವರಣದಲ್ಲಿ ಬದುಕುತ್ತಿದ್ದೇವೆ. ಯಾರಲ್ಲೂ ಪ್ರೇಮ–ಪ್ರಾಮಾಣಿಕತೆ ಎಂಬುದಿಲ್ಲ. ಮುಖವಾಡ ತೊಟ್ಟ ಜನರ ನಡುವೆ ಇದ್ದೇವೆ. ನಮ್ಮ ನಡೆನುಡಿಯಲ್ಲೇ ಕಹಿತನ ಬೇರು ಬಿಟ್ಟಿದೆ. ಬೇವು ಕಹಿಯಾದರೂ ಅದರಲ್ಲಿ ಔಷಧ ಗುಣವಿದೆ. ಆದರೆ, ನಮ್ಮೊಳಗಿನ ಕಹಿ ಆ ರೀತಿಯದ್ದಲ್ಲ’ ಎಂದು ಸೂಚ್ಯವಾಗಿ ಹೇಳಿದರು.

‘ಮನುಷ್ಯರು ಸಾಮಾನ್ಯಜ್ಞಾನ ಕಳೆದುಕೊಂಡ ಈ ಲೋಕದಲ್ಲಿ ನನ್ನ ಮಕ್ಕಳು (ಅನುಯಾಯಿಗಳು) ನಿಸ್ವಾರ್ಥದಿಂದ ಸಮಾಜ ಸೇವೆ ಮಾಡುತ್ತಿರುವುದು ನನ್ನಲ್ಲಿ ನಿರಾಳತೆ ಮತ್ತು ಭರವಸೆ ಮೂಡಿಸಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry