7

ವಿವಿಧತೆಯಲ್ಲಿ ಏಕತೆ ಸಾರಿದ ವಿದೇಶಿ ವಿದ್ಯಾರ್ಥಿಗಳು

Published:
Updated:
ವಿವಿಧತೆಯಲ್ಲಿ ಏಕತೆ ಸಾರಿದ ವಿದೇಶಿ ವಿದ್ಯಾರ್ಥಿಗಳು

ಬೆಂಗಳೂರು: ವಿವಿಧ ದೇಶಗಳ ವಿದ್ಯಾರ್ಥಿಗಳು ಮಾತೃಭಾಷೆಯಲ್ಲಿ ಭಾಷಣ ಮಾಡುವ ಜತೆಗೆ ಕವಿತೆ ವಾಚನ ಹಾಗೂ ಹಾಡುಗಾರಿಕೆ ಮೂಲಕ ಗಮನ ಸೆಳೆದರು. ಅವರವರ ಸಂಸ್ಕೃತಿಯ ವೇಷಭೂಷಣ ತೊಟ್ಟು ಸಂಭ್ರಮಿಸಿದರು. ವಿವಿಧತೆಯಲ್ಲಿ ಏಕತೆಯನ್ನು ಸಾರಿದರು.

ಯಲಹಂಕದ ರೇವಾ ವಿಶ್ವವಿದ್ಯಾಲಯದ ಪ್ರದರ್ಶನ ಕಲಾ ವಿಭಾಗ ಹಾಗೂ ಮಾರ್ಕ್‌ ಮೀಡಿಯಾ ಕಮ್ಯುನಿಕೇಷನ್ಸ್ ಆಶ್ರಯದಲ್ಲಿ ಆಯೋಜಿಸಿದ್ದ ಅಂತರರಾಷ್ಟ್ರೀಯ ಮಾತೃಭಾಷಾ ದಿನಾಚರಣೆಯಲ್ಲಿ ಕಂಡು ಬಂದ ದೃಶ್ಯಗಳಿವು.

ಅಫ್ಗಾನಿಸ್ತಾನದ ಮುಸಾವರ್ ಕಾಜ್ಮಿ ಪರ್ಷಿಯನ್‌ ಭಾಷೆಯ ಗೀತೆಯೊಂದನ್ನು ಹಾಡಿ, ಅದರ ಭಾವಾರ್ಥವನ್ನು ಹಿಂದಿ ಭಾಷೆಯಲ್ಲಿ ವಿವರಿಸಿದರು.

‘ರೇವಾ ವಿಶ್ವವಿದ್ಯಾಲಯಕ್ಕೆ ಸೇರಿದ ಒಂದು ವರ್ಷದಲ್ಲಿ ಹಿಂದಿ ಭಾಷೆ ಕಲಿತಿದ್ದೇನೆ. ಇನ್ನೊಂದು ವರ್ಷದಲ್ಲಿ ಕನ್ನಡ ಕಲಿತು ಮತ್ತಷ್ಟು ಚೆನ್ನಾಗಿ ಮಾತನಾಡುತ್ತೇನೆ’ ಎಂದು ಕನ್ನಡದಲ್ಲೇ ಹೇಳಿದಾಗ ಸಭಿಕರು ಕರತಾಡನದ ಮೂಲಕ ಅಭಿನಂದನೆ ಸಲ್ಲಿಸಿದರು.

ಆಫ್ರಿಕಾದಿಂದ ಭಾರತಕ್ಕೆ ಬಂದ ಸಂದರ್ಭದಲ್ಲಿ ಎದುರಿಸಿದ ಭಾಷಾ ಸಮಸ್ಯೆ ಹಾಗೂ ಕನ್ನಡ ಕಲಿಯುವ ಅನಿವಾರ್ಯತೆ ಕುರಿತು ವಿದ್ಯಾರ್ಥಿ ಲಿಯೊ ವಿವರಿಸಿದರು.

ಭಾಷೆಗಳನ್ನು ಬಳಕೆ ಮಾಡದೆ ಇರುವುದರಿಂದ ಅವು ಅವನತಿಯ ಹಾದಿಯತ್ತ ಸಾಗುತ್ತಿರುವ ಕುರಿತು ಗುಜರಾತಿನ ಇಶಿತಾ ಶಾಹ್ ಮಾತನಾಡಿದರು.

ವಿಶ್ವವಿದ್ಯಾಲಯದ ಕುಲಾಧಿಪತಿ ಪಿ.ಶ್ಯಾಮರಾಜು, ‘ಇಲ್ಲಿ 20ಕ್ಕೂ ಹೆಚ್ಚು ದೇಶಗಳ ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ. ಎಲ್ಲ ಭಾಷೆಗಳ ಸಾಂಸ್ಕೃತಿಕ ಉತ್ಸವಗಳನ್ನು ಆಚರಿಸಲಾಗುತ್ತಿದೆ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry