ಮಾರ್ಚ್‌ 14ರಿಂದ ಅನಿರ್ದಿಷ್ಟಾವಧಿ ಮುಷ್ಕರ

7
ಬಿಬಿಎಂಪಿ ಪೌರಕಾರ್ಮಿಕರ ಬೇಡಿಕೆ ಈಡೇರಿಕೆಗೆ ಆಗ್ರಹ

ಮಾರ್ಚ್‌ 14ರಿಂದ ಅನಿರ್ದಿಷ್ಟಾವಧಿ ಮುಷ್ಕರ

Published:
Updated:

ಬೆಂಗಳೂರು: ಬಿಬಿಎಂಪಿಯ ಪೌರಕಾರ್ಮಿಕರು ಹಾಗೂ ‘ಡಿ’ ದರ್ಜೆ ನೌಕರರ ಬೇಡಿಕೆಗಳನ್ನು 15 ದಿನಗಳಲ್ಲಿ ಈಡೇರಿಸದಿದ್ದಲ್ಲಿ ಮಾರ್ಚ್‌ 14ರಿಂದ ಮುಷ್ಕರ ನಡೆಸುವುದಾಗಿ ಪೌರ ಕಾರ್ಮಿಕರು ಹಾಗೂ`ಡಿ' ದರ್ಜೆ ನೌಕರರ ಜಂಟಿ ಕ್ರಿಯಾಸಮಿತಿ ಎಚ್ಚರಿಸಿದೆ.

ಶನಿವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಅಧ್ಯಕ್ಷ ಎನ್.ನಾರಾಯಣ್, ‘ಬೇಡಿಕೆಗಳನ್ನು ಈಡೇರಿಸುವಂತೆ ಹಲವು ಬಾರಿ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನ ಆಗಿಲ್ಲ’ ಎಂದರು.

‘4 ಸಾವಿರ ಪೌರಕಾರ್ಮಿಕ ಹುದ್ದೆಗಳನ್ನು ವಿಶೇಷ ನೇಮಕಾತಿ ಮೂಲಕ ಭರ್ತಿ ಮಾಡಬೇಕು. ಗುತ್ತಿಗೆ ಪೌರ ಕಾರ್ಮಿಕರು ಹಾಗೂ ದಿನಗೂಲಿ ಪೌರಕಾರ್ಮಿಕರನ್ನು ಕಾಯಂಗೊಳಿಸಬೇಕು. ಸಮಾನ ಕೆಲಸಕ್ಕೆ ಸಮಾನ ವೇತನದಡಿ ಗ್ರಾಮಪಂಚಾಯಿತಿ ಪೌರಕಾರ್ಮಿಕರು ಹಾಗೂ ನೀರು ಸರಬರಾಜು ಕೆಲಸಗಾರರನ್ನು ಕಾಯಂಗೊಳಿಸಬೇಕು. ಗುತ್ತಿಗೆ ಪೌರಕಾರ್ಮಿಕರ ಸುಮಾರು ₹ 212 ಕೋಟಿ ಪಿಎಫ್ ಹಣವನ್ನು ಬ್ಯಾಂಕ್ ಖಾತೆಗೆ ಜಮಾ ಮಾಡದೆ ದುರ್ಬಳಕೆ ಮಾಡಿಕೊಂಡಿರುವ ಅಧಿಕಾರಿಗಳ ಮೇಲೆ ಮೊಕದ್ದಮೆ ದಾಖಲಿಸಬೇಕು’ ಎಂದು ಒತ್ತಾಯಿಸಿದರು.

‘ಬಯೋಮೆಟ್ರಿಕ್ ವ್ಯವಸ್ಥೆಯಲ್ಲಿ ಪೌರಕಾರ್ಮಿಕರಿಗೆ ಅನಾನುಕೂಲವಾಗುವಂತೆ ಮಾಡಿರುವ ಅಧಿಕಾರಿಗಳ ವಿರುದ್ಧ ಶಿಸ್ತಿನ ಕ್ರಮ ಜರುಗಿಸಬೇಕು. ಕಿಲೋಮೀಟರ್ ಲೆಕ್ಕದಲ್ಲಿ ಪೌರಕಾರ್ಮಿಕರನ್ನು ಕೆಲಸಕ್ಕೆ ನಿಯೋಜಿಸುವ ಅವೈಜ್ಞಾನಿಕ ಪದ್ಧತಿಯನ್ನು ಕೈಬಿಡಬೇಕು. ನಿವೃತ್ತ ನಂತರವೂ ಆರೋಗ್ಯ ಗುರುತಿನ ಚೀಟಿ ಮುಂದುವರಿಸಬೇಕು. ನೌಕರರು ಮೃತಪಟ್ಟರೆ ಶವಸಂಸ್ಕಾರಕ್ಕೆ ₹20,000 ಮೊತ್ತವನ್ನು ಪಾಲಿಕೆ ವತಿಯಿಂದ ನೀಡಬೇಕು. ಕಾಲಕಾಲಕ್ಕೆ ಪೌರ ಕಾರ್ಮಿಕರಿಗೆ ದೊರೆಯಬೇಕಾದ ಸೌಲಭ್ಯಗಳನ್ನು ಕಲ್ಪಿಸಬೇಕು. ಕೆಲಸಕ್ಕೆ ಅಗತ್ಯವಿರುವ ಪರಿಕರಗಳನ್ನು ಒದಗಿಸಬೇಕು’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry