ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರ್ಷದ ಟ್ರೆಂಡ್ ಒಂದು ಮುನ್ನೋಟ

Last Updated 25 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ಪ್ರತಿ ವರ್ಷವೂ ಒಂದೊಂದು ಬಗೆಯ ಹೊಸತನವನ್ನು ಹೊತ್ತು ಫ್ಯಾಷನ್‌ ಪ್ರಿಯರ ಎದುರು ನಿಲ್ಲುತ್ತದೆ. ಹೀಗೆ ಜನ್ಮ ತಾಳುವ ಹೊಸ ವಿನ್ಯಾಸಗಳು ಕೆಲವೊಮ್ಮೆ ಬೆರುಗು, ಮತ್ತೊಮ್ಮೆ ವಿಸ್ಮಯವನ್ನು ಮೂಡಿಸುತ್ತಾ ಜನರ ಬದುಕಿನಲ್ಲಿ ಹಾಸುಹೊಕ್ಕಾಗಿಬಿಡುತ್ತದೆ. ಹಳೆಯ ಶೈಲಿಯ ಫ್ಯಾಷನ್‌ ಉಡುಪು, ಆಭರಣಗಳನ್ನು ತೊಟ್ಟು ಬೇಸತ್ತಿರುವವರು ಇದೀಗ 2018ರಲ್ಲಿ ಫ್ಯಾಷನ್‌ ಲೋಕಕ್ಕೆ ಲಗ್ಗೆ ಇಟ್ಟಿರುವ ವಿವಿಧ ವಿನ್ಯಾಸದ ಉಡುಪು, ಆಭರಣಗಳನ್ನು ತೊಟ್ಟು ಸಂಭ್ರಮಿಸಬಹುದು.

ಪಾಶ್ಚಾತ್ಯ ಉಡುಗೆಗಳು: ಮೊಣಕಾಲುದ್ದದ, ನೆಲ ತಾಕುವಂಥ ತೋಳುಗಳು: ದಿರಿಸಿನ ತೋಳು ಒಮ್ಮೆ ಕಿರಿದಾದರೆ ಇನ್ನೊಮ್ಮೆ ಮೊಣಕೈ ದಾಟುತ್ತದೆ. ಅದೂ ಬೇಸರವಾದರೆ ಸ್ಲೀವ್‌ಲೆಸ್‌. ಕೆಲವೊಮ್ಮೆ ಪುಗ್ಗಿ ಕೈವಿನ್ಯಾಸ. ಇನ್ನು ಮುಂದೆ ಇಷ್ಟೇ ಅಲ್ಲ, ಹೊಸ ವಿನ್ಯಾಸಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ನೆಲ ತಾಕುವ ಮತ್ತು ಮೊಣಕಾಲುದ್ದದ ಸಡಿಲವಾದ, ಅಸ್ಸೆಮೆಟ್ರಿಕ್‌ ವಿನ್ಯಾಸ, ಸೀಳು ಮತ್ತು ನೆರಿಗೆಯ ತೋಳುಗಳುಳ್ಳ ಈ ಉಡುಪು ಕಾಕ್‌ಟೇಲ್‌ ಅಥವಾ ಸಂಜೆ ಪಾರ್ಟಿಗಳಿಗೆ ಉತ್ತಮ ಆಯ್ಕೆ ಎನಿಸುತ್ತವೆ.

ತಿಳಿಬಣ್ಣದ ಉಡುಪು: ಪಾಸ್ಟಲ್‌ ಹ್ಯೂಸ್‌ ಹೆಸರಿನ ಉದ್ದನೆಯ ಗೌನ್‌ಗಳು, ಬ್ಲೇಜರ್‌ಗಳು ತಿಳಿ ನೆರಳೆ, ಹಸಿರು, ಗುಲಾಬಿ, ಕೆಂಪು, ಕೇಸರಿ ವಿವಿಧ ಬಣ್ಣಗಳಲ್ಲಿ ಹೆಚ್ಚು ಜನಪ್ರಿಯವಾಗುತ್ತಿವೆ. ಸದಾ ಒಂದೇ ರೀತಿಯ ಉಡುಗೆ ತೊಡುತ್ತಿರುವವರು ಮತ್ತು ತಿಳಿ ಬಣ್ಣ ಪ್ರಿಯರು ಇದೀಗ ಡೇಟಿಂಗ್‌, ಪಾರ್ಟಿ ಹಾಗೂ ಕಚೇರಿಗಳಿಗಾಗಿ ಇವನ್ನು ಸುಲಭವಾಗಿ ಆಯ್ದುಕೊಳ್ಳಬಹುದು.

ಅಗಲ ಪ್ಯಾಂಟ್: ದೀರ್ಘಕಾಲ ಬಾಳಿಕೆ ಬರುವ ಈ ಪ್ಯಾಂಟ್‌ಗಳು ಕಪ್ಪು, ಬಿಳಿ, ಪ್ಲೇನ್‌ ಅಥವಾ ಹೂಗಳ ಚಿತ್ತಾರವಿರುವ ವಿನ್ಯಾಸಗಳಲ್ಲಿ ಲಭ್ಯ. ಇವು ಎತ್ತರ ಇರುವವರಿಗೆ ಹೇಳಿ ಮಾಡಿಸಿದಂತಿರುತ್ತವೆ. ಸಿಲ್ಕ್‌ ಕಮಿಸೊಲ್ ಟಾಪ್‌ ಅಥವಾ ಸ್ಲೀವ್‌ಲೆಸ್‌ ಶರ್ಟ್‌ ಜೊತೆ ಹಾಕಿಕೊಂಡರೆ ಸೊಗಸಾಗಿ ಕಾಣುತ್ತದೆ. ಆರಾಮದಾಯಕ ಎನ್ನುವ ಕಾರಣಕ್ಕೆ ಹೆಚ್ಚು ಜನಪ್ರಿಯತೆ ಗಳಿಸಲಿದೆ ಈ ದಿರಿಸು ಎಂಬುದು ಸದ್ಯದ ಲೆಕ್ಕಾಚಾರ. ಬೇಸಿಗೆ ದಿನಗಳು ಹತ್ತಿರವಾಗುತ್ತಿರುವುದರಿಂದ ಇವುಗಳಿಗೆ ಬಹು ಬೇಡಿಕೆ ಇದೆ.


ಕ್ರೇಪ್ಸ್‌ ಅಂಡ್‌ ಪೋಂಚೊಸ್‌ ಉಡುಗೆ ಹಾಗೂ ಹೊಸ ಬಗೆಯ ಚಪ್ಪಲಿಗಳು

ಬೆರೆಟ್ ಟೋಪಿಗಳು: ಇತಿಹಾಸದಲ್ಲಿ ಹೆಸರುವಾಸಿಯಾದ ಬೆರೆಟ್‌ ಟೋಪಿ ಇದೀಗ ಮತ್ತೆ ಫ್ಯಾಷನ್‌ ಡಿಸೈನರ್‌ ಮತ್ತು ಫ್ಯಾಷನ್‌ ಪ್ರಿಯರ ಮೆಚ್ಚುಗೆಗೆ ಪಾತ್ರವಾಗಿದೆ. 2018ರ ‘ಹಾಟ್‌ ಟ್ರೆಂಡ್‌ ಹ್ಯಾಟ್‌’ ಎನಿಸಿಕೊಂಡಿದೆ. ನೀಳವಾಗಿ ಇಳಿಬಿಟ್ಟ ಕೂದಲಿಗೆ ಕಪ್ಪು, ಗಾಢ ಕೆಂಪು ಹಾಗೂ ವಿವಿಧ ಬಣ್ಣಗಳ ಸೂಕ್ಷ್ಮ ಹೂಗಳ ಚಿತ್ತಾರವಿರುವ ಬೆರೆಟ್‌ ಟೋಪಿ ಧರಿಸಿದರೆ ಸಾಕು ನೋಡುಗರ ಗಮನ ನಿಮ್ಮ ಮೇಲೆಯೇ ಇರುವುದಂತೂ ಖಚಿತ.

ಎಥ್ನಿಕ್‌ ಉಡುಗೆಗಳು: ಹಬ್ಬ ಹರಿದಿನಗಳು, ಮದುವೆಗಳಿಗಾಗಿ ಸಾಂಪ್ರದಾಯಿಕ ಉಡುಪೇ ಚೆಂದ ಎಂಬುದು ಹಲವರ ಅಭಿಪ್ರಾಯ. ಸಾಂಪ್ರದಾಯಿಕ ಶೈಲಿ ಮತ್ತು ಫ್ಯಾಷನ್‌ ಮೆರುಗನ್ನು ಒಂದಾಗಿಸಿರುವ ಹೊಸ ಬಗೆಯ ವಿಭಿನ್ನ ವಿನ್ಯಾಸದ ಬಟ್ಟೆಗಳು ಇದೀಗ ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಜಾಕೆಟ್‌ ಸಹಿತ ಗಾಗ್ರಾ, ಮೊಣಕೈವರೆಗಿನ ಸಡಿಲವಾದ ತೋಳು ಇರುವ ಮತ್ತು ಪರದೆಯಂತಹ ಹೊದಿಕೆಯಿರುವ ರವಿಕೆ (ಕೇಪ್ಸ್‌ ಅಂಡ್‌ ಪೋಂಚೊಸ್‌), ಮುಂಭಾಗದಲ್ಲಿ ಸೀಳಿದಂತಿರುವ ಉದ್ದನೆಯ ಕುರ್ತಾ, ಶೋಲ್ಡರ್‌ ಕಟೌಟ್ಸ್‌, ಚೂಡಿದಾರ ಸಹಿತ ಸೀರೆ, ಪ್ರೀ ಡ್ರೇಪ್ಡ್‌ ಸೀರೆ, ಬೆಲ್‌ ಸ್ಲೀವ್ಸ್‌ ಸೀರೆ, ಬೆಲ್ಟ್‌ ಸಹಿತ ಸೀರೆ, ಪ್ರೀ ಸ್ಟಿಚ್ಡ್‌ ಸೀರೆ, ಹಾಗೂ ಶರ್ಟ್‌ ಮಾದರಿಯ ರವಿಕೆಗಳು ಈ ವರ್ಷದಲ್ಲಿ ಟ್ರೆಂಡ್‌ ಸೃಷ್ಟಿಸಲಿವೆ ಎಂಬುದು ಫ್ಯಾಷನ್‌ ಜಗತ್ತಿನ ತಜ್ಞರ ಅಂದಾಜು.

ಕಿವಿಯೋಲೆ: ಕಿವಿಗಳಿಗೆ ಎರಡು ವಿಭಿನ್ನ ರೀತಿಯ ಬೇರೆ ಬೇರೆ ಕಿವಿಯೋಲೆ ತೊಡುವುದು ಕೂಡ ಇಂದಿನ ಫ್ಯಾಷನ್‌ ಆಗಿದೆ. ಸ್ಪ್ರಿಂಗ್‌, ರಿಂಗ್‌, ಕೊರಳುದ್ದದ, ಮೊಣಚಾದ ಮತ್ತು ಅಂಗೈ ಅಗಲದ ಹರಳು, ಗರಿ, ದಾರದ ಕಿವಿಯೋಲೆಗಳು ಮತ್ತು ಬಣ್ಣ ಬಣ್ಣದ ಜುಮ್ಕಿಗಳು ಫ್ಯಾಷನ್‌ ಪ್ರಿಯರಿಗೆ ಇದೀಗ ಅಚ್ಚುಮೆಚ್ಚಾಗಲಿವೆ.

ಅಂದಹಾಗೆ ಕಿವಿಯ ಗಾತ್ರವನ್ನೂ ಮೀರಿಸುವ ಈಯರ್‌ ಕಫ್‌ಗಳು ಮಾರುಕಟ್ಟೆಯಲ್ಲಿ ಹೊಸ ಹಾಗೂ ಜನಪ್ರಿಯ ಟ್ರೆಂಡ್‌ ಎನಿಸಿಕೊಳ್ಳುತ್ತಿವೆ.

ಚಪ್ಪಲಿಗಳು: ಬಣ್ಣಬಣ್ಣದ ಶೂ, ಸ್ಯಾಂಡಲ್‌ಗಳಿಗೆ ಹರಳು, ಹಕ್ಕಿಗಳ ಗರಿ, ಉಲನ್‌, ರಬ್ಬರ್‌ ಶೃಂಗಾರವಿರುವ ವಿಭಿನ್ನ ವಿನ್ಯಾಸದ ಚಪ್ಪಲಿಗಳು ಫ್ಯಾಷನ್‌ ಪ್ರಿಯರನ್ನು ಸೆಳೆಯುತ್ತಿವೆ

ಉಂಗುರಗಳು: ಬ್ಲಾಕ್‌ ಮೆಟಲ್‌ ಉಂಗುರಗಳು ಇದೀಗ ಮತ್ತೆ ಫ್ಯಾಷನ್‌ ಆಗಿವೆ. ಬಣ್ಣ ಬಣ್ಣದ ಹರಳುಗಳು, ಗೊಂಬೆ ಮಾದರಿಯ ಡಉಂಗುರಗಳು, ಒಂದೇ ಹರಳಿನ ಮತ್ತು ಒಂದಕ್ಕಿಂತ ಹೆಚ್ಚು ಹರಳಿನ ಉಂಗುರಗಳು, ಸೂಕ್ಷ್ಮ ವಿನ್ಯಾಸಗಳಿರುವ ಸಿಂಪಲ್‌ ಉಂಗುರಗಳು ಟ್ರೆಂಡ್‌ ಆಗಿವೆ. ಆಯಾ ಉಡುಗೆಗಳಿಗೆ ತಕ್ಕಂತೆ ಉಂಗುರಗಳನ್ನು ಆಯ್ದುಕೊಳ್ಳುವ ಅಧಿಕ ಅವಕಾಶ ನಿಮಗೂ ಇದೆ. ಒಮ್ಮೆ ಟ್ರೈ ಮಾಡಿ ನೋಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT