ಶ್ರೀದೇವಿ: ಅಭಿನಯ ಆಗಸದ ‘ಕಾಮನಬಿಲ್ಲು’

7

ಶ್ರೀದೇವಿ: ಅಭಿನಯ ಆಗಸದ ‘ಕಾಮನಬಿಲ್ಲು’

Published:
Updated:
ಶ್ರೀದೇವಿ: ಅಭಿನಯ ಆಗಸದ ‘ಕಾಮನಬಿಲ್ಲು’

ಶ್ರೀದೇವಿ ಅವರಿಗಿನ್ನೂ ಐವತ್ತನಾಲ್ಕೇ ವಯಸ್ಸಾಗಿತ್ತೆ? ದೊಡ್ಡ ನಟಿಯ ಅಗಲಿಕೆಯ ಸುದ್ದಿ ಕಿವಿಮೇಲೆ ಬಿದ್ದಾಗ ಅನೇಕರು ಕೇಳಿದ ಪ್ರಶ್ನೆ ಇದು. ಗೂಗಲ್ ಹುಡುಕುತಾಣದಲ್ಲಿ ಎಷ್ಟೋ ಜನ ‘Sridevi’s age’ ಎಂದು ಟೈಪಿಸಿ, ಉತ್ತರಕ್ಕೆ ಯತ್ನಿಸಿದರು. ಎ.ನಾಗೇಶ್ವರ ರಾವ್ ಹಾಗೂ ಅವರ ಮಗ ನಾಗಾರ್ಜುನ ಜೊತೆ ತೆಲುಗು ಚಿತ್ರಗಳಲ್ಲಿ, ಧರ್ಮೇಂದ್ರ ಹಾಗೂ ಅವರ ಮಗ ಸನ್ನಿ ದೇವಲ್ ಜೊತೆ ಹಿಂದಿ ಸಿನಿಮಾಗಳಲ್ಲಿ ಅಭಿನಯಿಸಿದ ಶ್ರೀದೇವಿ ಅಸಲಿ ವಯಸ್ಸಿನ ಕುರಿತು ಹೀಗೆ ಪ್ರಶ್ನೆ ಹುಟ್ಟುವುದು ಸಹಜವೆ.

ದಕ್ಷಿಣ ಭಾರತದ ಕೆಲವೇ ನಟಿಯರು ಬಾಲಿವುಡ್‌ನಲ್ಲಿ ದಾಂಗುಡಿ ಇಡಲು ಆದದ್ದು. ಅವರಲ್ಲಿ ಮುಖ್ಯರಾದವರು ಶ್ರೀದೇವಿ. ತಮಿಳುನಾಡಿನ ಶಿವಕಾಶಿ ಶ್ರೀದೇವಿ ತವರು. 1963, ಆಗಸ್ಟ್ 13 ಜನ್ಮ ದಿನಾಂಕ. ಅಪ್ಪ ಅಯ್ಯಪ್ಪನ್ ತಮಿಳಿನವರು, ವಕೀಲ. ಅಮ್ಮ ರಾಜೇಶ್ವರಿ ಮನೆಮಾತು ತೆಲುಗು. ಎಂ.ಎ. ತಿರುಮುಗಂ ‘ತುನೈವನ್’ ತಮಿಳು ಸಿನಿಮಾದಲ್ಲಿ ಬಾಲ ಮುರುಗನ ಪಾತ್ರಕ್ಕೆ ಮೊದಲು ಶ್ರೀದೇವಿಯನ್ನು ಆಯ್ಕೆ ಮಾಡಿ

ಕೊಂಡಾಗ ನಟಿಗಿನ್ನೂ ನಾಲ್ಕು ವರ್ಷ. ಬಾಲಕಿಯ ಮುಖದಲ್ಲಿನ ದೈವಕಾಂತಿ ಎಷ್ಟು ಜನಪ್ರಿಯವಾಯಿತೆಂದರೆ, ಮಲಯಾಳ, ತಮಿಳು, ತೆಲುಗು, ಕನ್ನಡದ ಚಿತ್ರಗಳಲ್ಲೂ ಪಾತ್ರಗಳು ಹುಡುಕಿ

ಕೊಂಡು ಬಂದವು. ಕನ್ನಡದ ‘ಭಕ್ತ ಕುಂಬಾರ’ದಲ್ಲಿ ಅವರು ನಟಿಸಿದಾಗ ವಯಸ್ಸಿನ್ನೂ ಹನ್ನೊಂದು. 1974ರಿಂದ 79ರ ಅವಧಿಯಲ್ಲಿ ಬಾಲ ಭಾರತ, ಸಂಪೂರ್ಣ ರಾಮಾಯಣ, ಹೆಣ್ಣು ಸಂಸಾರದ ಕಣ್ಣು, ಪ್ರಿಯಾ ಕನ್ನಡ ಚಿತ್ರಗಳಲ್ಲಿ ಅವರು ಅಭಿನಯಿಸಿದರು.

‘ಜೂಲಿ’ ಹಿಂದಿ ಚಿತ್ರದಲ್ಲಿ ಲಕ್ಷ್ಮೀ ತಂಗಿಯ ಪಾತ್ರ ನಿರ್ವಹಿಸಿದಾಗ ಶ್ರೀದೇವಿಗೆ ಹನ್ನೆರಡು ತುಂಬಿತ್ತು. ‘ಮೂಡ್ರು ಮುಡಿಚು’ ಚಿತ್ರದ ಮುಖ್ಯ ಪಾತ್ರಕ್ಕೆ ನಿರ್ದೇಶಕ ಕೆ. ಬಾಲಚಂದರ್ ಆರಿಸಿದಾಗ 14ರ ಬಾಲೆ. ಭಾರತಿ ರಾಜಾ ‘ಸಿಗಪ್ಪು ರೋಜಕ್ಕಳ್’

ನಲ್ಲಿ ಅವಕಾಶ ಕೊಟ್ಟರೆ, ಇಬ್ಬರು ಪ್ರೇಮಿಗಳ ಅಡಕತ್ತರಿಯಲ್ಲಿ ಸಿಲುಕುವ ಹುಡುಗಿಯಾಗಿ ’16 ವಯಥಿನಿಲೆ’ ತಮಿಳು ಚಿತ್ರದಲ್ಲಿ ಗುರುತಾದರು. ‘ಮೀಂಡುಂ ಕೋಕಿಲಾ’ ಚಿತ್ರಕ್ಕೆ ಮೊದಲ ಫಿಲ್ಮ್ ಫೇರ್ ಪ್ರಶಸ್ತಿ ಸಂದಾಗ 19ರ ಪ್ರಾಯ.

ಮೊದಲ ಹಿಂದಿ ಚಿತ್ರ ‘ಸೋಲ್ವಾ ಸಾವನ್’ಗೆ ಬಣ್ಣ ಹಚ್ಚಿದಾಗ ಷೋಡಶಿ. ಅದಾಗಿ ಐದು ವರ್ಷಗಳ ನಂತರ ಜಿತೇಂದ್ರ ಜೋಡಿಯಾಗಿ ನಟಿಸಿದ ‘ಹಿಮ್ಮತ್ ವಾಲಾ’ ಶ್ರೀದೇವಿ ನಸೀಬು ಬದಲಿಸಿತು. ‘ನೈನೋ ಮೆ ಸಪ್ನಾ…’ ಹಾಡಿನಲ್ಲಿ ಶ್ರೀದೇವಿ ಕಣ್ಣೇಟು ತಿಂದ ಪಡ್ಡೆಹೈಕಳು ‘ಥಂಡರ್ ಥೈಸ್ ಹುಡುಗಿ’ ಎಂಬ ಬಿರುದನ್ನೂ ಕೊಟ್ಟುಬಿಟ್ಟರು. ಅಲ್ಲಿಂದ ಶ್ರೀದೇವಿ ಬಾಲಿವುಡ್ ಓಣಿಗಳಿಗೆ ಚಿರಪರಿಚಿತರಾದರು. ತಮಿಳು, ತೆಲುಗು ಚಿತ್ರಗಳಿಂದಲೂ ವಿಮುಖರಾಗಲಿಲ್ಲ. ಯದ್ವಾ ತದ್ವಾ ಕುಣಿಯುತ್ತಿದ್ದ ಜಿತೇಂದ್ರ ಹಾಗೂ ಅತಿ ಲಾಲಿತ್ಯದ ಸುರಸುಂದರಿ ನರ್ತಕಿ ಶ್ರೀದೇವಿ ಕಾಂಬಿನೇಷನ್ ಮೋಡಿ ಮಾಡಿತು. ಇಬ್ಬರ ಜೋಡಿಯ ಒಂದೂಕಾಲು ಡಜನ್ ಚಿತ್ರಗಳಲ್ಲಿ ಸೋತಿದ್ದು ಬರೀ ಮೂರು.

‘ಮವಾಲಿ’, ‘ತೋಫಾ’, ‘ನಯಾ ಕದಂ’ ಹೀಗೆ ಕಡಿಮೆ ಅವಧಿಯಲ್ಲಿ ತಯಾರಾದ ಹಿಂದಿ ಚಿತ್ರಗಳಲ್ಲಿ ಶ್ರೀದೇವಿಯದ್ದೇ ಆಕರ್ಷಣೆ. ತನ್ನ ವಾರಿಗೆ ನಟಿಯರಾದ ಜಯಪ್ರದಾ, ಮೀನಾಕ್ಷಿ ಶೇಷಾದ್ರಿ ಇಬ್ಬರನ್ನೂ ಉತ್ಸಾಹದಲ್ಲಿ ಹಿಂದಿಕ್ಕಿದ್ದು ಶ್ರೀದೇವಿ ಹೆಗ್ಗಳಿಕೆ.

ಎನ್.ಟಿ.ಆರ್, ಶಿವಾಜಿ ಗಣೇಶನ್, ಎ.ನಾಗೇಶ್ವರ ರಾವ್, ರಾಜೇಶ್ ಖನ್ನಾ, ಧರ್ಮೇಂದ್ರ, ಅಮಿತಾಭ್ ಬಚ್ಚನ್, ಅನಿಲ್ ಕಪೂರ್, ಕಮಲ್ ಹಾಸನ್, ರಜನೀಕಾಂತ್, ಮಿಥುನ್ ಚಕ್ರವರ್ತಿ, ವೆಂಕಟೇಶ್, ನಾಗಾರ್ಜುನ, ಸಂಜಯ್ ದತ್, ರಿಷಿ ಕಪೂರ್, ಸಲ್ಮಾನ್ ಖಾನ್, ಶಾರುಖ್ ಖಾನ್… ಹೀಗೆ ತನಗಿಂತ ವಯಸ್ಸಿನಲ್ಲಿ ದೊಡ್ಡವರು, ಅತಿ ದೊಡ್ಡವರು, ವಾರಗೆಯವರ ಜೊತೆ ನಾಯಕಿಯಾದ ಶ್ರೀದೇವಿ ವಯಸ್ಸಿನ ಕುರಿತು ಅನುಮಾನಗಳು ಬರುವುದು ಸಹಜ.

ಬಾಲಿವುಡ್‌ನ ಜನಪ್ರಿಯ ಶೈಲಿಯ ಚಮಕ್ ಒಂದು ಕಡೆ. ಕೆ.ಬಾಲಚಂದರ್ ತರಹದ ಸಿನಿಮಾ ಕುಶಲಕರ್ಮಿಗಳ ಪ್ರಯೋಗಪಾಠ ಇನ್ನೊಂದು ಕಡೆ. 1982ರಲ್ಲಿ ತೆರೆಕಂಡ ‘ಮೂಡ್ರಂ ಪಿರೈ’ನಲ್ಲಿನ ಅಪಘಾತಕ್ಕೀಡಾಗಿ ಮಾನಸಿಕ ಸಮಸ್ಯೆ ಅನುಭವಿಸುವ ಹುಡುಗಿಯ ಪಾತ್ರದಲ್ಲಿ ಶ್ರೀದೇವಿ ನೀಡಿದ್ದು ಕಾಡಿದ ಅಭಿನಯ. ಕಮಲ್ ಜೊತೆಗಿನ ನಟನಾ ಜುಗಲ್ ಬಂದಿ ಅದು ಎಂದು ಬಣ್ಣಿಸಿದವರೂ ಇದ್ದಾರೆ. ಅದೇ ಹಿಂದಿಯಲ್ಲಿ ‘ಸದ್ಮಾ’ ಆಗಿ ಗೆದ್ದಿತು.

ಶ್ರೀದೇವಿ ಸುಂದರಿ, ಕಲಾವಿದೆ, ಮಳೆ ಹುಡುಗಿ, ತುಂಟಿ ಎಲ್ಲವೂ ಹೌದು. ಮಿಸ್ಟರ್ ಇಂಡಿಯಾದ ‘ಕಾಂಟೆ ನಹೀ..’ ಹಾಡಿನಲ್ಲಿ ಅವರು ಮಿಂದ ನೀಲಿ ಸೀರೆ ಎಷ್ಟೋ ಮನಸ್ಸುಗಳನ್ನು ಒದ್ದೆಮುದ್ದೆ ಮಾಡಿತ್ತು. ‘ನಾ ಜಾನೇ ಕಹಾಂ ಸೆ

ಆಯೀ ಹೈ’ ಎಂಬ ‘ಚಾಲ್ ಬಾಜ್’ ಚಿತ್ರದ ಹಾಡೂ ಎದೆಯಲ್ಲಿ ಮಳೆಬಿಲ್ಲು ಮೂಡಿಸಿತ್ತು.

ನಿರ್ದೇಶಕರ ನಟಿಯಾಗಿದ್ದ ಶ್ರೀದೇವಿ, ರಾಮಗೋಪಾಲ್ ವರ್ಮರ ತೆಲುಗು ಚಿತ್ರ ‘ಕ್ಷಣ ಕ್ಷಣಂ’ನಲ್ಲಿನ ಅಭಿನಯದಿಂದ ತೆಲುಗರ ಮನಸೂರೆಗೊಂಡರು. ‘ಜಗದೇಕವೀರುಡು ಅತಿಲೋಕ ಸುಂದರಿ’ಯಲ್ಲಿ ಇನ್ನಷ್ಟು ಯಶೋಬಾಣಗಳನ್ನು ಬಿಟ್ಟರು. ‘ಚಾಲ್ ಬಾಜ್’ನ ಅವರ ದ್ವಿಪಾತ್ರಾಭಿನಯಕ್ಕೆ ‘ವಾಹ್’ ಎಂದವರಿಗೆ ಲೆಕ್ಕವಿಲ್ಲ. ರಜನೀಕಾಂತ್, ಸನ್ನಿ ದೇವಲ್ ಲೆಕ್ಕಕ್ಕುಂಟು ಎನ್ನುವಂತೆ ಶ್ರೀದೇವಿ ಕಣ್ಣುಕೋರೈಸಿದ ಸಿನಿಮಾ ಅದು.

ಯಶ್ ಚೋಪ್ರಾ ‘ಚಾಂದಿನಿ’ ಆಗಿಸಿ, ಈ ನಟಿಯ ಸೌಂದರ್ಯೋಪಾಸನೆ ಮಾಡಿದ್ದಾಗಿ ಹೇಳಿದ್ದರು. ‘ಲಮ್ಹೆ’ ಚಿತ್ರದಲ್ಲಿ ಇನ್ನೊಂದು ಅವಕಾಶ ಕೊಡುವಷ್ಟು ಉದಾರಿ ಅವರಾದದ್ದು ಈ ನಟಿಯ ಅಭಿನಯ ಸಾಮರ್ಥ್ಯ, ಸೌಂದರ್ಯಕ್ಕೆ ಸಂದ ಮನ್ನಣೆ. ನೃತ್ಯ ಲಾಲಿತ್ಯ, ನೀಳಕಾಯ, ಸೆಳೆಯುವ ಕಣ್ಣೋಟ, ಕಂಠದಲ್ಲಿನ ಮುಗ್ಧತೆ, ಹಾಸ್ಯದ ಟೈಮಿಂಗ್ ಶ್ರೀದೇವಿ ಆಕರ್ಷಣೆಗಳು. ಶಸ್ತ್ರಚಿಕಿತ್ಸೆಯ ಮೂಲಕ ಅಗಲ ಮೂಗನ್ನು ಚೆಂದ ಮಾಡಿಕೊಂಡ ಕಾರಣಕ್ಕೂ ಅವರು ಅನೇಕರಿಗೆ ಸ್ಫೂರ್ತಿಯಾಗಿದ್ದರು.

‘ನಗೀನಾ’ ಚಿತ್ರದ ಹಾವಿನ ನೃತ್ಯ (‘ಮೇ ತೇರಿ ದುಷ್ಮನ್’ ಹಾಡು) ಸಾರ್ವಕಾಲಿಕ ಶ್ರೇಷ್ಠ ಸರ್ಪಪ್ರಧಾನ ಗೀತೆಗಳಲ್ಲಿ ಒಂದೆನಿಸಿದೆ. ‘ಖುದಾಗವಾ’ದ ದ್ವಿಪಾತ್ರ, ‘ಗುಮ್ರಾಹ್’ನ ಗಾಂಭೀರ್ಯ, ‘ಲಾಡ್ಲಾ’ದ ತುಂಟತನ ಹೀಗೆ ಜನಮಾನಸದಲ್ಲಿ

ಉಳಿದ ನಟಿ, 1996ರಲ್ಲಿ ನಿರ್ಮಾಪಕ ಬೋನಿ ಕಪೂರ್ ಅವರನ್ನು ಮದುವೆಯಾದರು. ಅದಕ್ಕೂ ಮೊದಲು ಗುಟ್ಟಾಗಿ ಅವರು ನಟ ಮಿಥುನ್ ಚಕ್ರವರ್ತಿ ಅವರನ್ನು ಲಗ್ನವಾಗಿದ್ದರೆಂಬ ಸುದ್ದಿಯನ್ನು ನಿಯತಕಾಲಿಕವೊಂದು ಪ್ರಕಟಿಸಿತ್ತು. ಮದುವೆಯ ನಂತರ ಅಭಿನಯದ ಬಿರುಸು ತಗ್ಗಿತು. ದೊಡ್ಡ ಬಜೆಟ್‌ನ ‘ರೂಪ್ ಕಿ ರಾಣಿ ಚೋರೋಂ ಕಾ ರಾಜಾ’ ಮಕಾಡೆಯಾದ ನಂತರ ಅವರು ದಾಂಪತ್ಯ ಬದುಕಿಗೆ ಕಾಲಿಡುವ ನಿರ್ಧಾರ ಕೈಗೊಂಡದ್ದು. ‘ಜುದಾಯಿ’ ಚಿತ್ರದ ನಂತರ ದೀರ್ಘ ವಿರಾಮ. 2012ರಲ್ಲಿ ತೆರೆಕಂಡ ‘ಇಂಗ್ಲಿಷ್ ವಿಂಗ್ಲಿಷ್’ನಲ್ಲಿ ಮಧ್ಯವಯಸ್ಕೆಯಾಗಿ ನಟಿಸಿ ಜನಮನ ಗೆದ್ದರು. ನಡುವೆ ಟಿ.ವಿ ಕಾರ್ಯಕ್ರಮದ ಕಂತುಗಳಲ್ಲೂ (ಮಾಲಿನಿ ಅಯ್ಯರ್) ಒಂದು ಕೈ ನೋಡಿದರು.

ಪೇಂಟಿಂಗ್ ಮಾಡುವ ಹವ್ಯಾಸವೂ ಅವರಿಗಿತ್ತು. 2010ರಲ್ಲಿ ತಮ್ಮ ಕೆಲವು ಕಲಾಕೃತಿಗಳನ್ನು ಅವರು ಹರಾಜು ಹಾಕಿದ್ದರು. ಜಾಹ್ನವಿ ಹಾಗೂ ಖುಷಿ ಎಂಬ ಇಬ್ಬರು ಹೆಣ್ಣುಮಕ್ಕಳ ದೇಖಾರೇಖಿ ಅವರ ಈಚಿನ ಆದ್ಯತೆ

ಯಾಗಿತ್ತು. ಕಳೆದ ವರ್ಷವಷ್ಟೆ ‘ಮಾಮ್’ ಸಿನಿಮಾ ತೆರೆಕಂಡು, ವಿಮರ್ಶಕರ ಮೆಚ್ಚುಗೆ ಗಳಿಸಿತ್ತು. ಅತಿಥಿ ಪಾತ್ರದಲ್ಲಿ ಕಾಣಿಸಿ

ಕೊಂಡ ‘ಜೀರೊ’ ಅವರ ಅಭಿನಯದ ಕೊನೆಯ ಚಿತ್ರ.

ಇತ್ತೀಚೆಗಷ್ಟೇ ಸುದ್ದಿಯಾದ ಪ್ರಸಂಗ ಇದು. ಲ್ಯಾಕ್ಮೆ ಫ್ಯಾಷನ್ ವೀಕ್‌ ನಲ್ಲಿ ಮಗಳು ಜಾಹ್ನವಿ ಜತೆಗೆ ನಿಂತು ಶ್ರೀದೇವಿ ಛಾಯಾಚಿತ್ರಕಾರರಿಗೆ ಪೋಸು ಕೊಟ್ಟರು. ಆಮೇಲೆ ಮಗಳು ತನ್ನದೂ ಸಿಂಗಲ್ ಫೋಟೊ ತೆಗೆಸಿಕೊಳ್ಳಲು ಅನುಮತಿ ಕೇಳಿದ್ದೇ, ಹಿರಿಯ ನಟಿ ಅವಳ ಕಡೆಗೆ ಕಣ್ಣುಬಿಟ್ಟರು. ಅವರ ಇಶಾರೆ ಅರ್ಥ ಮಾಡಿಕೊಂಡ ಮಗಳು ಛಾಯಾಚಿತ್ರಕಾರರಿಗೆ ‘ಸಾರಿ’ ಎಂದು ಹೇಳಿ ಹೊರಟುಬಿಟ್ಟರು. ಅಮ್ಮನಾಗಿ ಅವರ ಇಶಾರೆಯ ತೀವ್ರತೆಗೆ ಇದು ಸಾಕ್ಷಿ.

ಅಭಿನಯದ ಜೊತೆಗೇ ಆಟವಾಡಿಕೊಂಡು, ಪ್ರತಿಭಾವಂತ ನಿರ್ದೇಶಕರ ನಿಕಷಕ್ಕೆ ಒಡ್ಡಿಕೊಂಡು, ಖುದ್ದು ‘ಬಾಲಿವುಡ್‌ನ ಮೊದಲ ಸೂಪರ್ ಸ್ಟಾರ್ ನಟಿ’ ಎನಿಸಿಕೊಂಡ ಶ್ರೀದೇವಿ ಉಳಿಸಿರುವ ನೆನಪುಗಳು ಅಗಣಿತ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry