ಸಂಸ್ಕೃತಿ ಅರಿಯಲು ಹೆದ್ದಾರಿ

7

ಸಂಸ್ಕೃತಿ ಅರಿಯಲು ಹೆದ್ದಾರಿ

Published:
Updated:
ಸಂಸ್ಕೃತಿ ಅರಿಯಲು ಹೆದ್ದಾರಿ

* ಎಲ್ಲಿಂದ ಬಂದಿದ್ದೀರಿ?

ನನ್ನ ಹುಟ್ಟೂರು ಅಮೆರಿಕದ ಸಿಯಾಟೆಲ್‌. ಈಚೆಗೆ ಭಾರತದಲ್ಲಿಯೇ ಹೆಚ್ಚು ಇರುತ್ತೇನೆ. ಮುಂಬೈ, ದೆಹಲಿ, ಬೆಂಗಳೂರಿನಲ್ಲಿ ನನಗೆ ಸಿನಿಮಾ ಹಾಗೂ ಸಾಹಿತ್ಯ ಜಗತ್ತಿನ ಅನೇಕ ಸ್ನೇಹಿತರಿದ್ದಾರೆ. ಸದ್ಯ ಎರಡು ತಿಂಗಳುಗಳ ಕಾಲ ಇಂದಿರಾನಗರದಲ್ಲಿ ಸ್ನೇಹಿತರ ಮನೆಯಲ್ಲಿ ಅತಿಥಿಯಾಗಿದ್ದೇನೆ.

* ನಿಮ್ಮ ಬಗ್ಗೆ ಸ್ವಲ್ಪ ಹೇಳಿ...

ನಾನೂ ಕೆಲ ಸಿನಿಮಾಗಳನ್ನು ಮಾಡಿದ್ದೇನೆ. ಸಿನಿಮಾ ಉತ್ಸವಗಳಲ್ಲಿ ಸಲಹೆಗಾರನಾಗಿಯೂ ಕೆಲಸ ಮಾಡಿದ್ದೇನೆ. ಸಿಯಾಟೆಲ್‌ ಸೌತ್‌ ಏಷ್ಯನ್‌ ಸಿನಿಮಾ ಉತ್ಸವವನ್ನು ಪ್ರತಿ ವರ್ಷದ ಅಕ್ಟೋಬರ್‌ನಲ್ಲಿ ನಾನೇ ಸಂಘಟಿಸುತ್ತೇನೆ. ಪುಸ್ತಕವನ್ನೂ ಬರೆದಿದ್ದೇನೆ. ಭಾರತದಲ್ಲಿ ಕೆಲವು ಸಾಕ್ಷ್ಯಚಿತ್ರಗಳನ್ನೂ ಮಾಡಿದ್ದೇನೆ. ನನ್ನನ್ನು ಸಿನಿಪ್ರೇಮಿ, ನಿರ್ದೇಶಕ, ವಿಮರ್ಶಕ, ಇತಿಹಾಸ ತಜ್ಞ, ಲೇಖಕ ಎಂದು ಕರೆಯಬಹುದು. ಡೈನಿಂಗ್ ಔಟ್‌ ಎನ್ನುವ ಚಿತ್ರವೊಂದನ್ನು ಬೆಂಗಳೂರಿನಲ್ಲಿಯೇ ಮಾಡುತ್ತಿದ್ದೇನೆ. ಇತ್ತೀಚೆಗಷ್ಟೇ ಅಮೆರಿಕದಲ್ಲಿ ರೇನ್‌ಬೋ ಹಿಲ್‌ ಎನ್ನುವ ಚಿತ್ರವನ್ನೂ ಮಾಡಿ ಮುಗಿಸಿದ್ದೇನೆ.

* ಬೆಂಗಳೂರು ಸಿನಿಮಾ ಉತ್ಸವದಲ್ಲಿ ಭಾಗವಹಿಸಲು ಕಾರಣ?

ಸಿನಿಮಾಗಳು ವಿವಿಧ ದೇಶ, ಸಂಸ್ಕೃತಿಯನ್ನು ಅರಿಯಲು ಹೆದ್ದಾರಿ. ಭಾರತದಲ್ಲಿ ನಾನು ಭಾಗವಹಿಸುತ್ತಿರುವ ಎಂಟನೇ ಸಿನಿಮಾ ಉತ್ಸವ ಇದು. ಸೆಪ್ಟೆಂಬರ್‌ನಲ್ಲಿ ನಡೆಯುವ ಶಿಮ್ಲಾ ಸಿನಿಮೋತ್ಸವಕ್ಕೂ ಹೋಗ್ತೀನಿ. ತಿರುವನಂತಪುರದಲ್ಲಿ ನಡೆಯುವ ಸ್ವತಂತ್ರ ಸಾಕ್ಷ್ಯಚಿತ್ರ ಹಾಗೂ ಕಿರುಚಿತ್ರಗಳ ಉತ್ಸವದಲ್ಲಿಯೂ ಪಾಲ್ಗೊಳ್ಳುತ್ತೇನೆ. ದಕ್ಷಿಣ ಏಷ್ಯಾ ಸಿನಿಮಾಗಳ ಬಗ್ಗೆ ನನಗೆ ಆಸಕ್ತಿ ಹೆಚ್ಚು.

* ಯಾವೆಲ್ಲಾ ಸಿನಿಮಾ ನೋಡಿದಿರಿ?

ಭಾರತೀಯ ಸಿನಿಮಾಗಳ ಸಂಭಾಷಣೆ ನನಗೆ ಇಷ್ಟ. ತಮಿಳು, ತೆಲುಗು, ಮರಾಠಿ, ಹಿಂದಿ, ಮಲಯಾಳಂ ಹೀಗೆ ಎಲ್ಲಾ ಬಗೆಯ ಸಿನಿಮಾ ನೋಡುತ್ತೇನೆ. ಈ ತಕ್ಷಣಕ್ಕೆ ಚಿತ್ರಗಳ ಹೆಸರು ನೆನಪಾಗುತ್ತಿಲ್ಲ. ಸಿನಿಮಾ ಉತ್ಸವಗಳಲ್ಲಿ ನನ್ನನ್ನು ಮತ್ತೆಮತ್ತೆ ನೋಡಿದವರು ‘ಈ ಸಲ ಎಷ್ಟು ಸಿನಿಮಾ ನೋಡಿದಿರಿ’ ಎಂದು ಕೇಳುವುದು ಮಾಮೂಲು. ಸಾವಿರಾರು ಸಿನಿಮಾ ನೋಡಿದೆ ಎಂದು ನಾನು ತಮಾಷೆಯಾಗಿ ಉತ್ತರಿಸುತ್ತೇನೆ.

* ಭಾರತೀಯ ಸಿನಿಮಾಗಳು ಹೇಗೆ ಭಿನ್ನ?

ಭಾರತೀಯ ಸಿನಿಮಾಗಳನ್ನು ವಿಶ್ಲೇಷಿಸಲು ನಾನು ಸರಿಯಾದ ವ್ಯಕ್ತಿಯಲ್ಲ. ಅದರ ಬದಲು ಭಾರತೀಯ ಸಿನಿಮಾಗಳಲ್ಲಿ ಯಾವ ಭಾಷೆಯಲ್ಲಿ ಉತ್ತಮ ಸಿನಿಮಾಗಳು ಬರುತ್ತಿವೆ ಎನ್ನುವುದನ್ನು ಕೇಳಿ. ನನ್ನ ಪ್ರಕಾರ ಮರಾಠಿಯಲ್ಲಿ ಅತ್ಯುತ್ತಮ ಸಿನಿಮಾಗಳು ಬರುತ್ತಿವೆ. ಚಿತ್ರಕಥೆ, ನಿರೂಪಣೆ ಶೈಲಿ ಎರಡರಲ್ಲೂ ಮರಾಠಿ ಸಿನಿಮಾ ಸಾಕಷ್ಟು ಮುಂದಿದೆ. ಬೋಪಾಲ್‌ನ ಸಿನಿಮಾಗಳೂ ಚೆನ್ನಾಗಿರುತ್ತವೆ. ಇನ್ನು ವಾಣಿಜ್ಯಾತ್ಮಕವಾಗಿ ನೋಡಬೇಕು ಎಂದರೆ ತೆಲುಗು ಸಿನಿಮಾಗಳು ಮೇಲುಗೈ ಸಾಧಿಸಿವೆ. ಸಾಕಷ್ಟು ಹಿಂದಿ ಸಿನಿಮಾಗಳನ್ನು ನೋಡಿದ್ದೇನೆ, ಹಿಂದಿ ಭಾಷೆಯಲ್ಲಿ ಸ್ವಲ್ಪ ಮಾತನಾಡುವುದನ್ನೂ ಕಲಿತಿದ್ದೇನೆ.

ಬೆಂಗಳೂರು ಇಷ್ಟವಾಯ್ತಾ?

ಭಾರತದಲ್ಲಿ ಬೆಂಗಳೂರಿನಷ್ಟು ನನಗೆ ಬೇರೆ ಊರೂ ಇಷ್ಟವಾಗಲಿಲ್ಲ. ಇಲ್ಲಿ ಬಂದರೆ ಮನೆಗೇ ಬಂದಂಥ ಅನುಭವ ಆಗುತ್ತದೆ. ಮುಂಬೈ, ದೆಹಲಿಗೆ ಹೋಲಿಸಿದರೆ ಬೆಂಗಳೂರು ಪ್ರಶಾಂತವಾಗಿದೆ. ಟ್ರಾಫಿಕ್‌ ಕಡಿಮೆ, ತಂಪು ವಾತಾವರಣ, ಇಲ್ಲಿಯ ಜನರೂ ಸ್ನೇಹಜೀವಿಗಳು.

ಸಂಪರ್ಕಕ್ಕೆ lylempearson@yahoo.com

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry