ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಹಾಪುರಕ್ಕೆ ರಾಜಕೀಯ ಸ್ವಾತಂತ್ರ್ಯ ಬೇಕು: ಯಾಳಗಿ

Last Updated 27 ಫೆಬ್ರುವರಿ 2018, 8:38 IST
ಅಕ್ಷರ ಗಾತ್ರ

ಶಹಾಪುರ: ಕಳೆದ ನವೆಂಬರ್‌ನಲ್ಲಿ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರನ್ನು ಕರೆಸಿ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮೈದಾನದಲ್ಲಿ ಪಕ್ಷದ ಕಾರ್ಯಕರ್ತರ ಸಮಾವೇಶವನ್ನು ಯಶಸ್ವಿಯಾಗಿ ಸಂಘಟಿಸುವ ಮೂಲಕ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷಕ್ಕೆ ಹೊಸ ಖದರನ್ನು ತಂದವರು ಅಮೀನರಡ್ಡಿ ಯಾಳಗಿ. ಆರು ತಿಂಗಳಿಂದ ಕ್ಷೇತ್ರದ 148 ಹಳ್ಳಿಗಳಿಗೆ ಭೇಟಿ ನೀಡಿ ಅಲ್ಲಿನ ಸಮಸ್ಯೆಗಳಿಗೆ ಸ್ಪಂದಿಸುತ್ತಾ, ಯುವಕರನ್ನು ಪಕ್ಷಕ್ಕೆ ಸೆಳೆಯುತ್ತಾ ಮುನ್ನಡೆದಿದ್ದಾರೆ.

ಅಮೀನರಡ್ಡಿ ಶಹಾಪುರ ಮತಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ಎಂದು ಘೋಷಣೆಯಾಗಿದ್ದು, ಯುವಕರಲ್ಲಿ ಉತ್ಸಾಹ ಇಮ್ಮಡಿಸಿದೆ. ಫೆ.27 ರ ಮಂಗಳವಾರ ಸ್ವಾಭಿಮಾನಿ ಕಾರ್ಯಕರ್ತರ ಸಮಾವೇಶವನ್ನು ಹಮ್ಮಿಕೊಳ್ಳುವ ಮೂಲಕ ಬಿಜೆಪಿ ಮತ್ತು ಕಾಂಗ್ರೆಸ್‌ಗೆ ಪೈಪೋಟಿ ನೀಡಲು ಮುಂದಾಗಿದ್ದಾರೆ.

ಅಮೀನರಡ್ಡಿ ಯಾಳಗಿ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿ ‘ಶಹಾಪುರ ಮತಕ್ಷೇತ್ರಕ್ಕೆ ಇನ್ನೂ ರಾಜಕೀಯ ಸ್ವಾತಂತ್ರ್ಯ ಲಭಿಸಿಲ್ಲ. ಹಲವು ವರ್ಷದಿಂದ ದರ್ಶನಾಪುರ ಹಾಗೂ ಶಿರವಾಳ ಕುಟುಂಬಗಳು ಪಾಳೇಗಾರಿಕೆಯಂತೆ ಕುಟುಂಬ ರಾಜಕಾರಣ ಮಾಡುತ್ತಲೇ ಬಂದಿವೆ. ಎರಡು ಬಾರಿ ಸಚಿವರಾಗಿದ್ದ ಶರಣಬಸಪ್ಪ ದರ್ಶನಾಪುರ ಕ್ಷೇತ್ರದ ಅಭಿವೃದ್ಧಿ ಕಡೆಗೆ ಗಮನ ಹರಿಸಲಿಲ್ಲ. ಇದರಿಂದ ಹಲವಾರು ಗ್ರಾಮಗಳಿಗೆ ಸಮರ್ಪಕವಾಗಿ ಕುಡಿಯುವ ನೀರು, ರಸ್ತೆ ಇಲ್ಲದೆ ಪರದಾಡುವಂತೆ ಆಗಿದೆ. ಸಚಿವರಾಗಿದ್ದ ಸಂದರ್ಭದಲ್ಲಿ ಸರ್ಕಾರದ ಮೇಲೆ ಒತ್ತಡ ಹಾಕಿ ಎಂಜಿನಿಯರಿಂಗ್ ಕಾಲೇಜು ಸ್ಥಾಪನೆ ಮಾಡಿಸಲಿಲ್ಲ. ಅಲ್ಲದೆ ಕ್ಷೇತ್ರವು ಶೈಕ್ಷಣಿಕವಾಗಿ ಸಾಕಷ್ಟು ಹಿಂದುಳಿಯಲು ಶಾಸಕ ಗುರು ಪಾಟೀಲ ಶಿರವಾಳ ಕಾರಣ’ ಎಂದು ಆರೋಪಿಸಿದರು.

‘ಕೃಷ್ಣಾ ಭಾಗ್ಯ ಜಲ ನಿಗಮದ ಮೂಲಕ ಸಾಕಷ್ಟು ನೀರಾವರಿ ಸೌಲಭ್ಯವನ್ನು ಪಡೆದುಕೊಂಡಿದ್ದೇವೆ. ಆದರೂ ಅಸಮರ್ಪಕವಾಗಿ ಅನುಷ್ಠಾನದಿಂದ ಕಾಲುವೆ ಕೊನೆ ಭಾಗದ ರೈತರಿಗೆ ನೀರು ಹರಿಸಲು ಇಂದಿಗೂ ಸಾಧ್ಯವಾಗಿಲ್ಲ. ಕೃಷಿ ಮಾರುಕಟ್ಟೆ ರೈತರಿಗೆ ಶಾಪವಾಗಿವೆ. ಎಪಿಎಂಸಿಗೆ ಸಾಕಷ್ಟು ಆದಾಯ ಬರುತ್ತಿದ್ದರೂ ಸೋರಿಕೆಯಿಂದ ನಷ್ಟ ಅನುಭವಿಸುವಂತಾಗಿದೆ. ಬಿಗಿಯಾದ ಆಡಳಿತವಿಲ್ಲದೆ ನಲುಗಿ ಹೋಗಿವೆ’ ಎಂದು ದೂರಿದರು.

‘ಕೆಂಭಾವಿ ನೂತನ ತಾಲ್ಲೂಕು ರಚನೆಗೆ ದರ್ಶನಾಪುರ ಹಾಗೂ ಶಿರವಾಳ ಇಬ್ಬರು ದೊಡ್ಡ ತೊಡಕಾಗಿದ್ದಾರೆ. ಒಣ ಪ್ರತಿಷ್ಠೆಯಿಂದ ಇಬ್ಬರು ತಾಲ್ಲೂಕು ರಚನೆಗೆ ರಾಜಕೀಯ ಇಚ್ಛಾಶಕ್ತಿಯ ಕೊರತೆಯಿಂದ ಅಲ್ಲಿನ ಜನ ತೊಂದರೆ ಅನುಭವಿಸುವಂತೆ ಆಗಿದೆ. ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿದ್ದು, ತಾಲ್ಲೂಕು ರಚಿಸುವಂತೆ ಹೈಕೋರ್ಟ್‌ ನಿರ್ದೇಶನ ನೀಡಿದ್ದರೂ ಕೂಡಾ ಸರ್ಕಾರ ಮುಂದಾಗಿಲ್ಲ. ಇದು ಸರ್ಕಾರದ ಹಾಗೂ ಕಾಂಗ್ರೆಸ್ ಪಕ್ಷದ ಮಲತಾಯಿ ಧೋರಣೆಯಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಶಹಾಪುರ ನಗರಭೆಯ ಹಲವಾರು ವಾರ್ಡ್‌ಗಳಲ್ಲಿ ಕನಿಷ್ಠ ಸೌಲಭ್ಯವಿಲ್ಲದೆ ಜನ ತೊಂದರೆ ಅನುಭವಿಸುತ್ತಿದ್ದಾರೆ. ಒಳಚರಂಡಿ ವ್ಯವಸ್ಥೆ ಇಲ್ಲ. ಸಿ.ಸಿ ರಸ್ತೆ ಮಾಯವಾಗಿವೆ. ನಗರಸಭೆಯ ಆಡಳಿತವಂತೂ ತುಕ್ಕು ಹಿಡಿದು ನಿಂತಿದೆ. ಬೇಸಿಗೆ ಕಾಲದಲ್ಲಿ ಕುಡಿಯುವ ನೀರಿನ ಬವಣೆ ಹೇಳತೀರದಾಗಿದೆ. ಮೂರು ದಶಕದ ಹಿಂದೆ ನಿರ್ಮಿಸಿದ ಫಿಲ್ಟರ್ ಬೆಡ್ ಕೆರೆಯಲ್ಲಿ ನೀರು ಸಂಗ್ರಹಿಸಿ ಬಿಡುತ್ತಾರೆ. ಇದು ಇನ್ನಷ್ಟು ಸಮಸ್ಯೆಯನ್ನು ಹುಟ್ಟು ಹಾಕಿದೆ. ನಗರಕ್ಕೆ ಶಾಶ್ವತವಾದ ಕುಡಿಯುವ ನೀರಿನ ಯೋಜನೆಗಾಗಿ ತಾಲ್ಲೂಕಿನ ಹುರಸಗುಂಡಗಿ ಗ್ರಾಮದ ಬಳಿ ಭೀಮಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಬ್ರಿಜ್ ಕಂ ಬ್ಯಾರೇಜ್ ಮೂಲಕ ನಗರಕ್ಕೆ ನೀರು ಸರಬರಾಜು ಮಾಡುವ ಯೋಜನೆ ತುರ್ತಾಗಿ ಆಗಬೇಕಾದ ಕೆಲಸವಾಗಿದೆ’ ಎಂದು ವಿವರಿಸಿದರು.

ದೇವೇಗೌಡ, ಕುಮಾರಸ್ವಾಮಿ ಭಾಗಿ

ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಫೆ.27ರಂದು ಮಂಗಳವಾರ ಮಧ್ಯಾಹ್ನ 12 ಗಂಟೆಗೆ ಜೆಡಿಎಸ್ ಸ್ವಾಭಿಮಾನಿ ಕಾರ್ಯಕರ್ತರ ಸಮಾವೇಶವನ್ನು ಆಯೋಜಿಸಲಾಗಿದೆ.

ಸಮಾವೇಶವನ್ನು ಪಕ್ಷದ ರಾಷ್ಟ್ರೀಯ ಘಟಕದ ಅಧ್ಯಕ್ಷ ಎಚ್‌.ಡಿ.ದೇವೇಗೌಡ ಉದ್ಘಾಟಿಸುವರು. ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ, ಮುಖಂಡರಾದ ಎಚ್.ವಿಶ್ವನಾಥ, ಬಂಡೆಪ್ಪ ಕಾಶಂಪೂರ, ಶಾಸಕ ಎ.ಎಸ್.ಪಾಟೀಲ ನಡಹಳ್ಳಿ, ಕೋನೆರಡ್ಡಿ ಭಾಗವಹಿಸಲಿದ್ದಾರೆ.

ಬೆಳಿಗ್ಗೆ ಗೋಗಿಯ ಚಂದಾಹುಸೇನಿ ದರ್ಗಾ, ಸಗರದ ಸೂಫಿ ಸರಮತ್ ದರ್ಗಾಕ್ಕೆ ದೇವೇಗೌಡರು ಭೇಟಿ ನೀಡಲಿದ್ದಾರೆ. ಹಲವಾರು ಮುಖಂಡರು ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT