27 ಮಂದಿ ಜೀವ ಉಳಿಸಿದ ಐಸಿಯು

7

27 ಮಂದಿ ಜೀವ ಉಳಿಸಿದ ಐಸಿಯು

Published:
Updated:
27 ಮಂದಿ ಜೀವ ಉಳಿಸಿದ ಐಸಿಯು

ಶ್ರವಣಬೆಳಗೊಳ: ಬಾಹುಬಲಿ ಮಹಾಮಸ್ತಕಾಭಿಷೇಕ ಮಹೋತ್ಸವದ ಅಂಗವಾಗಿ ಈ ಬಾರಿ ತೀವ್ರ ನಿಗಾ ಘಟಕ (ಐಸಿಯು) ತೆರೆದ ಪರಿಣಾಮ 27 ಮಂದಿಯ ಪ್ರಾಣ ಉಳಿದಿದೆ.

ಪ್ರತಿ 12 ವರ್ಷಕ್ಕೊಮ್ಮೆ ನಡೆಯುವ ಮಹೋತ್ಸವಕ್ಕೆ ದೇಶ, ವಿದೇಶಗಳಿಂದ ಅಪಾರ ಸಂಖ್ಯೆಯ ಭಕ್ತರು, ಪ್ರವಾಸಿಗರು, ಯಾತ್ರಾರ್ಥಿಗಳು ಭೇಟಿ ನೀಡುವುದು ಸಾಮಾನ್ಯ. 2006ರಲ್ಲಿ ನಡೆದ ಮಹಾಮಸ್ತಕಾಭಿಷೇಕದಲ್ಲಿ ಹೃದಯಾಘಾತದಿಂದಲೇ ಮೂವರು ಮೃತಪಟ್ಟಿದ್ದರು. ಐವತ್ತಕ್ಕೂ ಹೆಚ್ಚು ಹೃದ್ರೋಗಿಗಳಿಗೆ ಚಿಕಿತ್ಸೆ ನೀಡಲಾಗಿತ್ತು.

ಹಾಗಾಗಿ ಆರೋಗ್ಯ ಇಲಾಖೆ ಮುಂಜಾಗ್ರತೆ ವಹಿಸಿ ಫೆ. 1 ರಿಂದಲೇ ಕ್ಷೇತ್ರದಲ್ಲಿ 18 ಕ್ಲಿನಿಕ್‌ಗಳನ್ನು ತೆರೆದು, ₹ 60 ಲಕ್ಷಕ್ಕೂ ಹೆಚ್ಚು ಮೌಲ್ಯದ ಔಷಧಗಳನ್ನು ದಾಸ್ತಾನು ಮಾಡಿತು. ಅಲ್ಲದೇ ಪ್ರಥಮ ಬಾರಿಗೆ ಹೋಬಳಿ ಮಟ್ಟದ ಸಮುದಾಯ ಆಸ್ಪತ್ರೆಯಲ್ಲಿ 3 ಹಾಸಿಗೆಯ ತೀವ್ರ ನಿಗಾ ಘಟಕ ತೆರೆಯುವುದರ ಜತೆಗೆ ಬೆಂಗಳೂರು ಮತ್ತು ಮೈಸೂರು ಜಯದೇವ ಹೃದ್ರೋಗ ಕೇಂದ್ರದಿಂದ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.

ಬೆಟ್ಟ ಹತ್ತುವಾಗ, ಇಳಿಯುವಾಗ ಹಾಗೂ ಸರದಿ ಸಾಲಿನಲ್ಲಿ ನಿಂತಿರುವ ವೇಳೆ ಈ ವರೆಗೂ 27 ಮಂದಿಗೆ ಹೃದಯಾಘಾತವಾಗಿದ್ದು, ಎಲ್ಲರಿಗೂ ಸಕಾಲಕ್ಕೆ ಚಿಕಿತ್ಸೆ ದೊರೆತ ಪರಿಣಾಮ ಬದುಕುಳಿದರು. ಇವರಲ್ಲಿ ಐವರು ಪೊಲೀಸರು, ಸ್ವಾಮೀಜಿ ಆಪ್ತ ಸಹಾಯಕ ಬ್ರಹ್ಮೇಶ್‌ ಜೈನ್ ಹಾಗೂ ಭಕ್ತರು ಸೇರಿದ್ದಾರೆ. ಮುಂದಿನ ವೈದ್ಯಕೀಯ ತಪಾಸಣೆಗೆ ಬೆಂಗಳೂರು ಮತ್ತು ಮೈಸೂರಿನ ಜಯದೇವ ಹೃದ್ರೋಗ ಆಸ್ಪತ್ರೆಗೆ ಆಂಬುಲೆನ್ಸ್‌ನಲ್ಲಿ ಕಳುಹಿಸಲಾಯಿತು.

ವಿಂಧ್ಯಗಿರಿ ಬೆಟ್ಟದ ಮೇಲೆ 4 ಕ್ಲಿನಿಕ್‌, ಚಂದ್ರಗಿರಿ ಬೆಟ್ಟದಲ್ಲಿ 1 ಕ್ಲಿನಿಕ್‌ ತೆರೆಯಲಾಗಿದೆ. 450 ಆರೋಗ್ಯ ಇಲಾಖೆ ಸಿಬ್ಬಂದಿ ಮತ್ತು 20 ಆಂಬುಲೆನ್ಸ್‌ಗಳನ್ನು ಬಳಸಿಕೊಳ್ಳಲಾಗುತ್ತಿದೆ. ವೈದ್ಯಕೀಯ ಸೇವೆ ಫೆ. 28ರ ವರೆಗೂ ಮುಂದುವರೆಯಲಿದೆ. ತ್ಯಾಗಿಗಳು, ಮುನಿಗಳು, ಮಾತಾಜಿಗಳಿಗೆ ಆಯುರ್ವೇದ ಆಸ್ಪತ್ರೆ ಸಿಬ್ಬಂದಿ ಉಪಚರಿಸಿ, ಅಗತ್ಯ ಔಷಧಗಳನ್ನು ನೀಡಿದ್ದು ವಿಶೇಷವಾಗಿತ್ತು.

ಫಾರ್ಮಸಿಸ್ಟ್‌ಗಳಾದ ಜಗದೀಶ್‌, ಮುರುಳಿ, ಎಸ್‌.ಬಿ.ಯೋಗೀಶ್‌, ತಿಮ್ಮೇಶ್‌ ಪ್ರಭು, ವಾಹನ ಚಾಲಕ ಹರೀಶ್‌ ಅವರು ಉಗ್ರಾಣದಿಂದ ಕ್ಲಿನಿಕ್‌ಗಳಿಗೆ ಔಷಧಗಳನ್ನು ಪೂರೈಸುತ್ತಿದ್ದಾರೆ.

‘ಮಹೋತ್ಸವದ ಅಂಗವಾಗಿ ಈ ಬಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ತೀವ್ರ ನಿಗಾ ಘಟಕ ತೆರೆದ ಪರಿಣಾಮ ಹೃದಯಾಘಾತಕ್ಕೆ ಒಳಗಾದ 27 ಮಂದಿಗೆ ಅಗತ್ಯ ಚಿಕಿತ್ಸೆ ನೀಡಿ ಜೀವ ಉಳಿಸಿ, ಬೆಂಗಳೂರು, ಮೈಸೂರು ಆಸ್ಪತ್ರೆಗೆ ಕಳುಹಿಸಲಾಯಿತು. ವಿಂಧ್ಯಗಿರಿ ಬೆಟ್ಟದ 300 ಮೆಟ್ಟಿಲು ತಲುಪತ್ತಿದ್ದಂತೆ ಏದುಸಿರು ಬಿಡಲು ಆರಂಭಿಸುತ್ತಾರೆ. ಇಲ್ಲಿಯೇ ಹೆಚ್ಚು ಹೃದಯಾಘಾತ ಸಂಭವಿಸಿರುವ ಬಗ್ಗೆ ವರದಿಯಾಗಿದೆ’ ಎಂದು ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಬಿ.ಆರ್‌.ಯುವರಾಜ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಮೈ, ಕೈ ನೋವು, ಅಲರ್ಜಿ, ಹೃದ್ರೋಗ ಸಮಸ್ಯೆ ಇರುವವರಿಗೆ ಹೆಚ್ಚು ಚಿಕಿತ್ಸೆ ನೀಡಲಾಗಿದೆ. ನೀರಿನ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳಹಿಸಲಾಗಿದ್ದು, ಸಾಂಕ್ರಾಮಿಕ ರೋಗ ಕಂಡು ಬಂದಿಲ್ಲ. ಎಲ್ಲಾ ಕೇಂದ್ರಗಳಲ್ಲೂ ಔಷಧ ಕೊರತೆಯಾಗದಂತೆ ನೋಡಿಕೊಳ್ಳಲಾಗಿದೆ. ಒಆರ್‌ಎಸ್‌, ಗ್ಲುಕೋಸ್‌, ರಕ್ತ ಹೀನತೆ ಟಾನಿಕ್‌ ಹಾಗೂ ಮಹಿಳೆಯರಿಗೆ ಶುಚಿ ಪ್ಯಾಡ್‌ ಉಚಿತವಾಗಿ ನೀಡಲಾಗುತ್ತಿದೆ’ ಎಂದು ಡಾ.ಜನಾರ್ಧನ್‌ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry