‘ಶೈಕ್ಷಣಿಕವಾಗಿ ಬಂಜಾರಾ ಸಮುದಾಯ ಬೆಳವಣಿಗೆ ಅಗತ್ಯ’

7

‘ಶೈಕ್ಷಣಿಕವಾಗಿ ಬಂಜಾರಾ ಸಮುದಾಯ ಬೆಳವಣಿಗೆ ಅಗತ್ಯ’

Published:
Updated:

ಹಾವೇರಿ: ‘ಸಮಾಜದ ಮುಖ್ಯ ವಾಹಿನಿಯ ಸಂಪರ್ಕವಿಲ್ಲದೇ ಅಲೆಮಾರಿಯಾಗಿದ್ದ ಬಂಜಾರಾ ಜನಾಂಗಕ್ಕೆ ದಿಕ್ಕು ತೋರಿಸಿದ ಸಂತ ಸೇವಾಲಾಲ್ ಮಹಾನ್‌ ದಾರ್ಶನಿಕರಲ್ಲಿ ಒಬ್ಬರು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ರುದ್ರಪ್ಪ ಲಮಾಣಿ ಬಣ್ಣಿಸಿದರು.

ನಗರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಕನ್ನಡ ಸಂಸ್ಕೃತಿ ಇಲಾಖೆ ಹಾಗೂ ಸಂತ ಸೇವಾಲಾಲ್ ಜಯಂತಿ ಆಚರಣೆ ಸಮಿತಿ ಸಹಯೋಗದಲ್ಲಿ ಭಾನುವಾರ ನಡೆದ ‘ಸಂತ ಸೇವಾಲಾಲ್‌ ಜಯಂತಿ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಅಲೆಮಾರಿಗಳಾಗಿದ್ದ ಬಂಜಾರಾ ಸಮಾಜದ ಏಳಿಗೆಗೆ ಶ್ರಮಿಸಿದ ಸೇವಾಲಾಲರು, ಸಾತ್ವಿಕ ನೆಲೆಯಲ್ಲಿ ಜೀವನ ನಡೆಸಲು ಧರ್ಮದ ಪ್ರೇರಣೆ ನೀಡಿದರು. ಅವರ ಸಾಮಾಜಿಕ ಕಾಳಜಿ ಇಂದಿಗೂ ಪ್ರಸ್ತುತ’ ಎಂದರು.

‘ಬಂಜಾರಾ ಸಮುದಾಯ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ, ಅವರ ಉಜ್ವಲ ಭವಿಷ್ಯಕ್ಕಾಗಿ ಎಲ್ಲರೂ ಶ್ರಮಿಸಬೇಕು. ಕಂದಾಚಾರ, ಮೂಢನಂಬಿಕೆಗಳನ್ನು ಬಿಟ್ಟು ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಬೆಳವಣಿಗೆಯ ಚಿಂತನೆ ನಡೆಸಬೇಕು’ ಎಂದು ಸಲಹೆ ನೀಡಿದರು.

ಧಾರವಾಡ ಕರ್ನಾಟಕ ವಿಶ್ವ ವಿದ್ಯಾಲಯದ ನಿರ್ದೇಶಕ ಡಾ. ಹರಿಲಾಲ್ ಪವಾರ ಮಾತನಾಡಿ, ‘ಶೋಷಿತ ಸಮುದಾಯವಾದ ಬಂಜಾರ ಸಮುದಾಯವು ಶೈಕ್ಷಣಿಕವಾಗಿ ಬೆಳವಣಿಗೆ ಹೊಂದಬೇಕಾಗಿದೆ’ ಎಂದು ಹೇಳಿದರು.

ಪಶು ಸಂಗೋಪನೆ ಇಲಾಖೆ ನಿರ್ದೇಶಕ ಡಾ.ರಾಜಾ ನಾಯಕ್ ಮಾತ ನಾಡಿ, ‘ಸರ್ಕಾರ ಸಂತ ಸೇವಾಲಾಲ್‌ ರನ್ನು ಕಳೆದ 279 ವರ್ಷಗಳಿಂದ ಗುರುತಿಸಲು ವಿಫಲವಾಗಿದ್ದವು. ಈ ಬಾರಿ ಸರ್ಕಾರದ ವತಿಯಿಂದ ಅವರ ಜಯಂತಿಯನ್ನು ಆಚರಿಸುತ್ತಿರುವುದು ನಮ್ಮ ಸಮುದಾಯಕ್ಕೆ ಸಂದ ಗೌರವ’ ಎಂದರು.

ಗುಂಡೂರ ತಿಪ್ಪೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಕೊಟ್ರೇಶಪ್ಪ ಬಸೇಗಣ್ಣಿ, ನಗರಸಭೆ ಅಧ್ಯಕ್ಷೆ ಪಾರ್ವತೆಮ್ಮ ಹಲಗಣ್ಣನವರ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಂಜೀವಕುಮಾರ ನೀರಲಗಿ, ಜಾನಪದ ವಿಶ್ವವಿದ್ಯಾಲಯದ ಕುಲಪತಿ ಡಿ.ಬಿ.ನಾಯಕ್, ತಹಶೀಲ್ದಾರ್‌ ಜಗದೀಶ ಮಜ್ಜಗಿ, ಜಿಲ್ಲಾ ಪಂಚಾಯ್ತಿ ಸದಸ್ಯ ಶಶಿಕಲಾ ಪರಮೇಶ, ಸೀಮಾ ನಾಯಕ್, ಸಿ.ಸಿ.ಲಮಾಣಿ, ಎಸ್.ಎಂ.ಎನ್. ಗಾಜೀಗೌಡರ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ಉಪನಿರ್ದೇಶಕ ಕೆ.ಸಿ.ನಾಗರಾಜ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry