ಪತ್ನಿ ಕೊಂದು ಸುಟ್ಟು ಶರಣಾದ ಆರೋಪಿ

7
ಹೆಂಡತಿಯ ಶೀಲ ಶಂಕಿಸಿ ಕೊಲೆಗೈದು, ಸಾಕ್ಷ್ಯಕ್ಕಾಗಿ ಕತ್ತರಿಸಿಟ್ಟುಕೊಂಡ ಕಿವಿಗಳನ್ನು ಠಾಣೆಗೆ ತಂದ ಪತಿ

ಪತ್ನಿ ಕೊಂದು ಸುಟ್ಟು ಶರಣಾದ ಆರೋಪಿ

Published:
Updated:
ಪತ್ನಿ ಕೊಂದು ಸುಟ್ಟು ಶರಣಾದ ಆರೋಪಿ

ಚಿಕ್ಕಬಳ್ಳಾಪುರ: ಶಿಡ್ಲಘಟ್ಟ ತಾಲ್ಲೂಕಿನ ಚಿಕ್ಕದಾಸೇನಹಳ್ಳಿಯಲ್ಲಿ ಮಂಗಳವಾರ ಪತ್ನಿಯ ಶೀಲ ಶಂಕಿಸಿ ಕೊಲೆ ಮಾಡಿದ ಆರೋಪಿ, ಕಳೇಬರವನ್ನು ಸುಟ್ಟು ಹಾಕಿ, ಕತ್ತರಿಸಿಟ್ಟುಕೊಂಡಿದ್ದ ಕಿವಿಗಳೊಂದಿಗೆ ಬಂದು ಗ್ರಾಮಾಂತರ ಠಾಣೆಗೆ ಶರಣಾಗಿದ್ದಾನೆ.

ಚಿಕ್ಕದಾಸೇನಹಳ್ಳಿಯ ಆದಿನಾರಾಯಣಪ್ಪ ಕೊಲೆ ಆರೋಪಿ. ಮಂಗಳವಾರ ಬೆಳಿಗ್ಗೆ ಪತ್ನಿ ವೆಂಕಟಲಕ್ಷ್ಮಮ್ಮ (28) ಅವರನ್ನು ಆರೋಪಿಯು ಸೌದೆ ತರುವ ನೆಪದಲ್ಲಿ ತಮ್ಮದೇ ತೋಟಕ್ಕೆ ಕರೆದುಕೊಂಡು ಹೋಗಿ ಕತ್ತು ಹಿಸುಕಿ ಸಾಯಿಸಿದ್ದಾನೆ ಎಂದು ಪೊಲೀಸರು ತಿಳಿಸಿದರು.

ಹೆಂಡತಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ರೀತಿ ಪ್ರಕರಣ ಬಿಂಬಿಸಲು ಯತ್ನಿಸಿದ ಆರೋಪಿಯು, ಸಾಧ್ಯವಾಗದೇ ಹೋದಾಗ ಚಾಕುವಿನಿಂದ ಪತ್ನಿಯ ಕಿವಿಗಳನ್ನು ಕತ್ತರಿಸಿ, ಬಳಿಕ ಕಟ್ಟಿಗೆ ರಾಶಿ ಹಾಕಿ ದೇಹವನ್ನು ಸುಟ್ಟು ಹಾಕಿದ್ದಾನೆ ಎಂದು ಹೇಳಿದರು.

(ವೆಂಕಟಲಕ್ಷ್ಮಮ್ಮ)

ಆದಿನಾರಾಯಣಪ್ಪ ಮತ್ತು ವೆಂಕಟಲಕ್ಷ್ಮಮ್ಮ ಅವರಿಗೆ 12 ವರ್ಷಗಳ ಹಿಂದೆ ಮದುವೆಯಾಗಿತ್ತು. ಈ ದಂಪತಿಗೆ ಇಬ್ಬರು ಪುತ್ರರಿದ್ದಾರೆ. ಆರೋಪಿಯು ಎಲೆಕ್ಟ್ರಿಕಲ್ ಕೆಲಸ ಮಾಡಿಕೊಂಡಿದ್ದ.

‘ಅಕ್ರಮ ಸಂಬಂಧ ಹೊಂದಿದ್ದ ಪತ್ನಿಗೆ ಅನೇಕ ಬಾರಿ ಎಚ್ಚರಿಕೆ ನೀಡಿದರೂ ಎಚ್ಚೆತ್ತುಕೊಳ್ಳಲಿಲ್ಲ. ಹೀಗಾಗಿ ಅವಳಿಗೊಂದು ಗತಿ ಕಾಣಿಸಲು ನಿರ್ಧರಿಸಿ ಈ ಕೆಲಸ ಮಾಡಿರುವೆ. ಹೆಂಡತಿಯನ್ನು ಕೊಂದೆ ಎಂದು ಹೇಳಿದರೆ ಅದಕ್ಕೆ ಸಾಕ್ಷ್ಯ ಏನಿದೆ ಎಂದು ಕೇಳುವವರಿಗೆ ತೋರಿಸುವುದಕ್ಕಾಗಿಯೇ ಆಕೆಯ ಕಿವಿಗಳನ್ನು ಕತ್ತರಿಸಿ ತಂದಿರುವೆ’ ಎಂದು ಆರೋಪಿಯು ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾನೆ ಎಂದು ತಿಳಿದು ಬಂದಿದೆ.

ಎಸ್‌ಪಿ ಕಾರ್ತಿಕ್ ರೆಡ್ಡಿ, ಸರ್ಕಲ್‌ ಇನ್‌ಸ್ಪೆಕ್ಟರ್ ಸಿದ್ದರಾಜು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ವೆಂಕಟಲಕ್ಷ್ಮಮ್ಮ ಅವರ ದೇಹ ಸಂಪೂರ್ಣ ಸುಟ್ಟು ಬೂದಿಯಾಗಿದೆ. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ವಶಕ್ಕೆ ಪಡೆದ ಪೊಲೀಸರು ಸ್ಥಳ ಮಹಜರು ನಡೆಸಿದರು.

(ಆದಿನಾರಾಯಣಪ್ಪ)

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry