ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಚ್ಛ ಭಾರತ ಅನುದಾನ ದುರ್ಬಳಕೆ

Last Updated 27 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ಕೇಂದ್ರ ಸರ್ಕಾರದ ಸ್ವಚ್ಛ ಭಾರತ ಯೋಜನೆಯಡಿ ₹154.98 ಕೋಟಿ ಅನುದಾನವನ್ನು ಪಾಲಿಕೆಯು ನಿಯಮಬಾಹಿರವಾಗಿ ಅನ್ಯ ಉದ್ದೇಶಗಳಿಗೆ ಬಳಕೆ ಮಾಡಿದೆ ಎಂದು ಪಾಲಿಕೆಯ ಜೆಡಿಎಸ್‌ ಪಕ್ಷದ ನಾಯಕಿ ನೇತ್ರಾ ನಾರಾಯಣ್‌ ಆರೋಪಿಸಿದರು.

ಮಂಗಳವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಾರ್ವಜನಿಕ ಶೌಚಾಲಯ ಹಾಗೂ ಅದಕ್ಕೆ ಸಂಬಂಧಿಸಿದಂತೆ ಕೊಳವೆಬಾವಿ ಕೊರೆಸಲು ಅನುದಾನ ಬಳಸಿಕೊಳ್ಳಬೇಕು. ಆದರೆ, ಡಾಂಬರೀಕರಣ, ಆಟದ ಮೈದಾನ ನಿರ್ಮಾಣ, ಒಳಚರಂಡಿ, ಕೊಳವೆಬಾವಿ ಕೊರೆಸುವುದು, ಕಟ್ಟಡಕ್ಕೆ ಸುಣ್ಣ ಬಳಿಯುವುದು, ರಾಜಕಾಲುವೆ ಅಭಿವೃದ್ಧಿ, ಹೆಚ್ಚು ಪ್ರಖರದ ದೀಪಗಳ ಅಳವಡಿಕೆ ಹಾಗೂ ಸರ್ಕಾರಿ ಶಾಲಾ ಕೊಠಡಿಗಳ ನಿರ್ಮಾಣ ಸೇರಿದಂತೆ ಅನೇಕ ಕಾಮಗಾರಿಗಳಿಗೆ ಬಳಸಿಕೊಳ್ಳಲಾಗಿದೆ. ಇದಕ್ಕೆ ಜಾಬ್‌ ಕೋಡ್‌ಗಳನ್ನು ನೀಡಿದ್ದು, ಹಣವನ್ನೂ ಪಾವತಿ ಮಾಡಲಾಗಿದೆ. ಇದರಲ್ಲಿ ಸುಮಾರು ₹110 ಕೋಟಿ ಅವ್ಯವಹಾರ ನಡೆದಿದೆ’ ಎಂದು ದೂರಿದರು.

ಈಗಾಗಲೇ ಪೂರ್ಣಗೊಂಡಿರುವ ಕಾಮಗಾರಿಗಳಿಗೆ ಬೇರೆ ಶೀರ್ಷಿಕೆ ನೀಡಿ, ಅವು ಪ್ರಗತಿಯಲ್ಲಿರುವುದಾಗಿ ಹೇಳಿ, ಈ ಯೋಜನೆಯಡಿ ಅನುದಾನ ಪಡೆಯಲಾಗಿದೆ. ಇದರಲ್ಲಿ ಮುಖ್ಯ ಆರ್ಥಿಕಾಧಿಕಾರಿ, ಕಾರ್ಯನಿರ್ವಾಹಕ ಎಂಜಿನಿಯರ್‌, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಹಾಗೂ ಮುಖ್ಯ ಲೆಕ್ಕಾಧಿಕಾರಿ ಪಾತ್ರ ಮುಖ್ಯವಾಗಿದೆ ಎಂದು ಆರೋಪಿಸಿದರು.

ಇದೇ ವಿಷಯವನ್ನು ಕೌನ್ಸಿಲ್‌ ಸಭೆಯಲ್ಲೂ ಪ್ರಸ್ತಾಪಿಸಿದರು.

ಇದಕ್ಕೆ ಉತ್ತರಿಸಿದ ಪಾಲಿಕೆಯ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌, ‘ಸ್ವಚ್ಛ ಭಾರತ ಯೋಜನೆಯ ಅನುದಾನವನ್ನು ವೈಯಕ್ತಿಕ, ಸಮುದಾಯ ಹಾಗೂ ಸಾರ್ವಜನಿಕ ಶೌಚಾಲಯಗಳ ನಿರ್ಮಾಣ ಮತ್ತು ಕೊಳವೆ ಬಾವಿ ಕೊರೆಸಲು ಬಳಸಬಹುದು. ಆದರೆ, ರಾಜ್ಯ ಸರ್ಕಾರದ ಅನುದಾನದಲ್ಲಿ 7 ಕಸ ಸಂಸ್ಕರಣಾ ಘಟಕಗಳನ್ನು ₹440 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಇದಕ್ಕಾಗಿ ಸ್ವಚ್ಛ ಭಾರತ ಯೋಜನೆಯಡಿ ಶೇ 20ರಷ್ಟು ಅನುದಾನವನ್ನು ಕೇಂದ್ರ ಸರ್ಕಾರ ನೀಡಲಿದೆ. ಇದಕ್ಕಾಗಿ ಪ್ರಸ್ತಾವ ಸಲ್ಲಿಸಲಾಗಿತ್ತು. ಈ ಯೋಜನೆಯ ಅನುದಾನದ ಪೈಕಿ ₹88 ಕೋಟಿಯನ್ನು ಅನ್ಯ ಉದ್ದೇಶಗಳಿಗೆ ಬಳಸಿಕೊಳ್ಳಲಾಗಿದೆ’ ಎಂದು ಸ್ಪಷ್ಟಪಡಿಸಿದರು.

ಸ್ವಚ್ಛ ಭಾರತ ಯೋಜನೆಯ ಅನುದಾನ ಬಳಕೆಯ ಅವ್ಯವಹಾರದ ಬಗ್ಗೆ ಸಿಬಿಐ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು.
–ನೇತ್ರಾ ನಾರಾಯಣ್‌, ಜೆಡಿಎಸ್‌ ನಾಯಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT