ಅತ್ಯಾಚಾರ ಆರೋಪ; ಕಸಾಪ ಅಧ್ಯಕ್ಷರ ವಿರುದ್ಧ ಎಫ್‌ಐಆರ್‌

7

ಅತ್ಯಾಚಾರ ಆರೋಪ; ಕಸಾಪ ಅಧ್ಯಕ್ಷರ ವಿರುದ್ಧ ಎಫ್‌ಐಆರ್‌

Published:
Updated:

ಬೆಂಗಳೂರು: ಮದುವೆಯಾಗುವುದಾಗಿ ನಂಬಿಸಿ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ಎಸಗಿದ್ದ ಆರೋಪದಡಿ ಕನ್ನಡ ಸಾಹಿತ್ಯ ಪರಿಷತ್‌ನ ಬೆಂಗಳೂರು ನಗರ ಜಿಲ್ಲಾ ಅಧ್ಯಕ್ಷ ಮಾಯಣ್ಣ ಅವರ ವಿರುದ್ಧ ಚನ್ನಮ್ಮನ ಕೆರೆ ಅಚ್ಚುಕಟ್ಟು ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

‘ಸಂತ್ರಸ್ತೆಯು ನೀಡಿದ್ದ ಮೂರು ಪುಟಗಳ ದೂರಿನನ್ವಯ ಅತ್ಯಾಚಾರ, ವಂಚನೆ, ಜೀವ ಬೆದರಿಕೆ ಆರೋಪದಡಿ ಎಫ್‌ಐಆರ್‌ ದಾಖಲಿಸಿಕೊಂಡಿದ್ದೇವೆ’ ಎಂದು ದಕ್ಷಿಣ ವಿಭಾಗದ ಡಿಸಿಪಿ ಶರಣಪ್ಪ ತಿಳಿಸಿದರು.

‘ಕೌಟುಂಬಿಕ ಕಲಹದಿಂದಾಗಿ ಪತಿಯಿಂದ ದೂರವಾಗಿರುವ ನಾನು, ಪುತ್ರ ಹಾಗೂ ತಾಯಿ ಜತೆ ವಾಸವಿದ್ದೇನೆ. ತಾಯಿಗೆ ಪರಿಚಿತರಾಗಿದ್ದ ಮಾಯಣ್ಣ, ತಮ್ಮ ಕಚೇರಿಯಲ್ಲಿ ಸಹಾಯಕಿ ಕೆಲಸಕ್ಕೆ ನೇಮಿಸಿಕೊಂಡಿದ್ದರು. ತಿಂಗಳಿಗೆ ₹3 ಸಾವಿರ ವೇತನ ನೀಡುತ್ತಿದ್ದರು. ತಮ್ಮ ಪತ್ನಿಯ ಆರೋಗ್ಯ ಸರಿ ಇಲ್ಲ. ಹೆಚ್ಚು ದಿನ ಬದುಕುವುದಿಲ್ಲ. ತನಗೆ ಗಂಡು ಮಗು ಅಗತ್ಯವಿದ್ದು, ಮದುವೆಯಾಗುವಂತೆ ಕೇಳಿಕೊಂಡಿದ್ದರು’ ಎಂದು ದೂರಿನಲ್ಲಿ ಮಹಿಳೆ ಬರೆದಿದ್ದಾರೆ.

‘ವಿವಾಹವಾಗಲು ನಿರಾಕರಿಸುತ್ತಿದ್ದಂತೆ, ನನ್ನ ಹಾಗೂ ನನ್ನ ಪುತ್ರನ ಹೆಸರಿನಲ್ಲಿ ಬ್ಯಾಂಕ್‍ನಲ್ಲಿ ₹1 ಕೋಟಿ ಠೇವಣಿ ಇಡುವುದಾಗಿ ಹೇಳಿದ್ದರು. ಪತಿಯಿಂದ ವಿಚ್ಛೇದನ ಸಿಕ್ಕರೆ ಮದುವೆ ಆಗುವುದಾಗಿ ಅವರಿಗೆ ಹೇಳಿದ್ದೆ. ಇದಕ್ಕೆ ಒಪ್ಪಿದ್ದ ಅವರು, 2015ರಲ್ಲಿ ₹5 ಲಕ್ಷ ಹಣ ನೀಡಿ ಭುವನೇಶ್ವರಿ ನಗರದಲ್ಲಿ ಭೋಗ್ಯಕ್ಕೆ ಮನೆ ಮಾಡಿಕೊಟ್ಟಿದ್ದರು. ವಾರಕ್ಕೆ ಎರಡ್ಮೂರು ಬಾರಿ ವಿಶ್ರಾಂತಿ ಪಡೆಯುವ ನೆಪದಲ್ಲಿ ಮನೆಗೆ ಬರುತ್ತಿದ್ದ ಅವರು, ಲೈಂಗಿಕವಾಗಿ ನನ್ನನ್ನು ಬಳಸಿಕೊಂಡಿದ್ದಾರೆ. ಒಮ್ಮೆ ಬಿಡದಿ ಸಮೀಪದ ವಂಡರ್ ಲಾಗೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ.’

‘ಅದಾದ ನಂತರ ನನ್ನಿಂದ ಅಂತರ ಕಾಯ್ದುಕೊಳ್ಳಲು ಯತ್ನಿಸಿದ ಅವರು, ಬೇರೆಯವರೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಿಯಾ ಎಂದು ಹೇಳುತ್ತಿದ್ದಾರೆ. ಪ್ರಾಣ ಬೆದರಿಕೆ ಹಾಕಿ ಕೆಲಸದಿಂದಲೂ ತೆಗೆದು ಹಾಕಿದ್ದಾರೆ. ಅದನ್ನು ಪ್ರಶ್ನಿಸಲು ಫೆ. 6ರಂದು ಅವರ ಕಚೇರಿಗೆ ಹೋದಾಗ ಮಾಯಣ್ಣ ಹಾಗೂ ಅವರ ಪತ್ನಿ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ. ಮನೆಗೂ ಬಂದು ಬೆದರಿಕೆ ಹಾಕಿ ಹೋಗಿದ್ದಾರೆ’ ಎಂದು ಮಹಿಳೆ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry