ವಿಜಯ್‌ ಹಜಾರೆ ಟ್ರೋಫಿ: ಕರ್ನಾಟಕದ ಮುಡಿಗೆ ಕಿರೀಟ

7
ಫೈನಲ್‌ನಲ್ಲಿ ಸೌರಾಷ್ಟ್ರಕ್ಕೆ ನಿರಾಸೆ

ವಿಜಯ್‌ ಹಜಾರೆ ಟ್ರೋಫಿ: ಕರ್ನಾಟಕದ ಮುಡಿಗೆ ಕಿರೀಟ

Published:
Updated:
ವಿಜಯ್‌ ಹಜಾರೆ ಟ್ರೋಫಿ: ಕರ್ನಾಟಕದ ಮುಡಿಗೆ ಕಿರೀಟ

ನವದೆಹಲಿ: ವಿಜಯ್‌ ಹಜಾರೆ ಟ್ರೋಫಿ ಏಕದಿನ ಕ್ರಿಕೆಟ್‌ ಟೂರ್ನಿಯಲ್ಲಿ ಕರ್ನಾಟಕ ಮತ್ತೊಮ್ಮೆ ಪ್ರಾಬಲ್ಯ ಮೆರೆದಿದೆ.

ಮಯಂಕ್‌ ಅಗರವಾಲ್‌ (90; 79ಎ, 11ಬೌಂ, 3ಸಿ) ಅವರ ಬ್ಯಾಟಿಂಗ್‌ ಮೋಡಿ ಮತ್ತು ಕೆ.ಗೌತಮ್‌ (27ಕ್ಕೆ3) ಸ್ಪಿನ್‌ ಬಲದಿಂದ ಕರುಣ್ ನಾಯರ್‌ ಸಾರಥ್ಯದ ತಂಡ ಈ ಬಾರಿಯ ಟೂರ್ನಿಯ ಫೈನಲ್‌ನಲ್ಲಿ 41ರನ್‌ ಗಳಿಂದ ಸೌರಾಷ್ಟ್ರ ತಂಡವನ್ನು ಸೋಲಿಸಿದೆ.

ಈ ಮೂಲಕ ಹಿಂದಿನ ಐದು ವರ್ಷಗಳಲ್ಲಿ ಮೂರನೇ ಬಾರಿ ಪ್ರಶಸ್ತಿ ಗೆದ್ದ ಹೆಗ್ಗಳಿಕೆಗೂ ಪಾತ್ರವಾಗಿದೆ. ಕರುಣ್‌ ನೇತೃತ್ವದಲ್ಲಿ ತಂಡ ಗೆದ್ದ ಮೊದಲ ಟ್ರೋಫಿಯೂ ಇದಾಗಿದೆ. ಹಿಂದಿನ ಎರಡು ಟೂರ್ನಿಗಳಲ್ಲಿ ಆರ್‌.ವಿನಯ್‌ ಕುಮಾರ್‌ ಸಾರಥ್ಯದಲ್ಲಿ ತಂಡ ಚಾಂಪಿಯನ್‌ ಪಟ್ಟ ಅಲಂಕರಿಸಿತ್ತು.

ಫಿರೋಜ್‌ ಶಾ ಕೋಟ್ಲಾ ಕ್ರೀಡಾಂಗಣದಲ್ಲಿ ಮಂಗಳವಾರ ಮೊದಲು ಬ್ಯಾಟ್‌ ಮಾಡಿದ ಕರ್ನಾಟಕ 45.5 ಓವರ್‌ಗಳಲ್ಲಿ 253ರನ್‌ಗಳಿಗೆ ಆಲೌಟ್‌ ಆಯಿತು. ಸವಾಲಿನ ಗುರಿ ಬೆನ್ನಟ್ಟಿದ ಚೇತೇಶ್ವರ ಪೂಜಾರ ನೇತೃತ್ವದ ಸೌರಾಷ್ಟ್ರ 46.3 ಓವರ್‌ಗಳಲ್ಲಿ 212ರನ್‌ಗಳಿಗೆ ಹೋರಾಟ ಮುಗಿಸಿತು.

ಆರಂಭಿಕ ಸಂಕಷ್ಟ: ಬ್ಯಾಟಿಂಗ್‌ ಆರಂಭಿಸಿದ ಕರ್ನಾಟಕ ತಂಡ ನಾಯಕ ಕರುಣ್‌ ಮತ್ತು ಕೆ.ಎಲ್‌.ರಾಹುಲ್‌ ಅವರ ವಿಕೆಟ್‌ ಬೇಗನೆ ಕಳೆದುಕೊಂಡಿತು.

ಶೌರ್ಯ ಸನಾಂಡಿಯಾ ಬೌಲ್‌ ಮಾಡಿದ ದಿನದ ಎರಡನೇ ಓವರ್‌ನ ನಾಲ್ಕನೇ ಎಸೆತದಲ್ಲಿ ಕರುಣ್‌ (0) ಬೌಲ್ಡ್‌ ಆದರು. ಮೂರನೇ ಓವರ್‌ನಲ್ಲಿ ರಾಹುಲ್‌ (0) ರನ್ಔಟ್‌ ಆದರು.

ಮಯಂಕ್‌ ಮೋಡಿ: ಆ ನಂತರ ಮಯಂಕ್‌ ಮತ್ತು ಆರ್‌. ಸಮರ್ಥ್‌ (48; 65ಎ, 1ಬೌಂ, 1ಸಿ) ಮೋಡಿ ಮಾಡಿದರು. ಸೌರಾಷ್ಟ್ರ ದಾಳಿಯನ್ನು ಸಮರ್ಥವಾಗಿ ಎದುರಿಸಿದ ಈ ಜೋಡಿ ಮೂರನೇ ವಿಕೆಟ್‌ ಪಾಲುದಾರಿಕೆಯಲ್ಲಿ 136ರನ್‌ ಗಳಿಸಿ ತಂಡವನ್ನು ಆರಂಭಿಕ ಅಪಾಯದಿಂದ ಮೇಲಕ್ಕೆತ್ತಿತು.

ಈ ಪಂದ್ಯಕ್ಕೂ ಮುನ್ನ ತಲಾ ಮೂರು ಶತಕ ಮತ್ತು ಅರ್ಧಶತಕ ಸಿಡಿಸಿ ಗಮನ ಸೆಳೆದಿದ್ದ ಮಯಂಕ್‌, ಮತ್ತೊಮ್ಮೆ ಅಬ್ಬರಿಸಿದರು. ಶತಕದ ಹಾದಿಯಲ್ಲಿ ಸಾಗುತ್ತಿದ್ದ ಅವರು 25ನೇ ಓವರ್‌ನಲ್ಲಿ ಧರ್ಮೇಂದ್ರಸಿನ್ಹಾ ಜಡೇಜಗೆ ವಿಕೆಟ್‌ ಒಪ್ಪಿಸಿದರು. ಮರು ಓವರ್‌ನಲ್ಲಿ ಸಮರ್ಥ್‌ ಅವರನ್ನು ಬೌಲ್ಡ್‌ ಮಾಡಿದ ಪ್ರೇರಕ್‌ ಮಂಕಡ್‌   ಸೌರಾಷ್ಟ್ರಕ್ಕೆ ಮೇಲುಗೈ ತಂದುಕೊಟ್ಟರು. ಸಮರ್ಥ್‌ ಅರ್ಧಶತಕದ ಸನಿಹ ಎಡವಿದರು. ಸ್ಟುವರ್ಟ್‌ ಬಿನ್ನಿ (5) ಕೂಡ ವಿಕೆಟ್‌ ನೀಡಲು ಅವಸರಿಸಿದರು.

ಆ ನಂತರ ಪವನ್‌ ದೇಶಪಾಂಡೆ (49; 60ಎ, 4ಬೌಂ, 1ಸಿ) ಮತ್ತು ಶ್ರೇಯಸ್‌ ಗೋಪಾಲ್‌ (31; 28ಎ, 6ಬೌಂ) ಆಟ ಕಳೆಗಟ್ಟಿತು. ಜವಾಬ್ದಾರಿಯುತ ಇನಿಂಗ್ಸ್‌ ಕಟ್ಟಿದ ಇವರು ತಂಡದ ಮೊತ್ತ 200ರ ಗಡಿ ದಾಟುವಂತೆ ನೋಡಿಕೊಂಡರು.

ವೃತ್ತಿಬದುಕಿನ ಕೊನೆಯ ಪಂದ್ಯ ಆಡಿದ ಎಸ್‌. ಅರವಿಂದ್‌ (13) ಕೂಡ ಮಿಂಚಿದರು.

ಸಂಕಷ್ಟ: ಗುರಿ ಬೆನ್ನಟ್ಟಿದ ಸೌರಾಷ್ಟ್ರ ಕೂಡ ಆರಂಭದಲ್ಲಿ ಸಂಕಷ್ಟ ಎದುರಿಸಿತು. ಸಮರ್ಥ್‌ ವ್ಯಾಸ್‌ (10; 6ಎ, 2ಬೌಂ) ಮತ್ತು ದೇವೇಂದ್ರ ಸಿನ್ಹಾ ಜಡೇಜ (1) ವಿಕೆಟ್‌ ಉರುಳಿಸಿದ ಪ್ರಸಿದ್ಧ ಕೃಷ್ಣ ಕರ್ನಾಟಕದ ಗೆಲುವಿನ ಕನಸಿಗೆ ಬಲ ತುಂಬಿದರು.

ಅವಿ ಬಾರೋಟ್‌ (30; 43ಎ, 4ಬೌಂ) ಮತ್ತು ನಾಯಕ ಪೂಜಾರ (94; 127ಎ, 10ಬೌಂ, 1ಸಿ) ತಂಡಕ್ಕೆ ಆಸರೆಯಾದರು. ಆದರೆ ಉಳಿದ ಬ್ಯಾಟ್ಸ್‌ಮನ್‌ಗಳು ವೈಫಲ್ಯ ಅನುಭವಿಸಿದ್ದರಿಂದ ಸೌರಾಷ್ಟ್ರದ ಎರಡನೇ ಪ್ರಶಸ್ತಿಯ ಆಸೆ ಕಮರಿತು. ಕೊನೆಯಲ್ಲಿ ಪೂಜಾರ ರನ್‌ಔಟ್‌ ಆಗಿದ್ದು ಈ ತಂಡಕ್ಕೆ ಹಿನ್ನಡೆಯಾಯಿತು.

**

ಮಿಂಚಿದ ಯುವ ಪಡೆ

ಅನುಭವಿ ವೇಗಿ ಆರ್‌.ವಿನಯ್‌ ಕುಮಾರ್ ಗಾಯದ ಕಾರಣ ಟೂರ್ನಿಯ ಕೆಲ ಪಂದ್ಯಗಳಿಗೆ ಅಲಭ್ಯರಾಗಿದ್ದರು. ಅಭಿಮನ್ಯು ಮಿಥುನ್‌ ಕೂಡ ಟೂರ್ನಿಯಲ್ಲಿ ಆಡಲಿಲ್ಲ. ಇವರ ಬದಲಿಗೆ ತಂಡದಲ್ಲಿ ಸ್ಥಾನ ಗಳಿಸಿದ್ದ ವೇಗಿಗಳಾದ ಪ್ರಸಿದ್ಧ ಕೃಷ್ಣ ಮತ್ತು ಟಿ. ‍ಪ್ರದೀಪ್ ಪರಿಣಾಮಕಾರಿ ಬೌಲಿಂಗ್‌ ಮೂಲಕ ಗಮನ ಸೆಳೆದರು. ಪ್ರಸಿದ್ಧ್‌ ಈ ಬಾರಿಯ ಟೂರ್ನಿಯಲ್ಲಿ 8 ಪಂದ್ಯಗಳಿಂದ 17 ವಿಕೆಟ್‌ ಉರುಳಿಸಿದರು. ಈ ಮೂಲಕ ಗರಿಷ್ಠ ವಿಕೆಟ್‌ ಪಡೆದವರ ಪಟ್ಟಿಯಲ್ಲಿ ಎರಡನೇ ಸ್ಥಾನ ತಮ್ಮದಾಗಿಸಿಕೊಂಡರು.

*

ದೇವಧರ್‌ ಟ್ರೋಫಿಗೆ ಅರ್ಹತೆ

ವಿಜಯ್‌ ಹಜಾರೆಯಲ್ಲಿ ಚಾಂಪಿಯನ್‌ ಆಗಿರುವ ಕರ್ನಾಟಕ ತಂಡ ದೇವಧರ್‌ ಟ್ರೋಫಿಗೆ ಅರ್ಹತೆ ಗಳಿಸಿದೆ. ಈ ಟೂರ್ನಿ ಮಾರ್ಚ್‌ 4ರಿಂದ ಧರ್ಮಶಾಲಾದಲ್ಲಿ ನಡೆಯಲಿದೆ.

ಕರುಣ್‌ ಪಡೆ ಪ್ರಶಸ್ತಿಗಾಗಿ ಭಾರತ ‘ಎ’ ಮತ್ತು ಭಾರತ ‘ಬಿ’ ತಂಡಗಳ ವಿರುದ್ಧ ಪೈಪೋಟಿ ನಡೆಸಲಿದೆ.

**

ಈ ಋತು ನನ್ನ ಪಾಲಿಗೆ ಸ್ಮರಣೀಯವಾದುದು. ವೈಫಲ್ಯದ ದಿನಗಳಲ್ಲೂ ನನ್ನ ಮೇಲೆ ನಂಬಿಕೆ ಇಟ್ಟು ಅವಕಾಶ ಕೊಟ್ಟ ಆಯ್ಕೆ ಸಮಿತಿಗೆ ಕೃತಜ್ಞನಾಗಿದ್ದೇನೆ.

–ಮಯಂಕ್‌ ಅಗರವಾಲ್‌, ಕರ್ನಾಟಕದ ಆಟಗಾರ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry