ಅತ್ಯಾಚಾರ ಎಸಗಿ ಕಂದಮ್ಮನನ್ನು ಕೊಂದ!

7

ಅತ್ಯಾಚಾರ ಎಸಗಿ ಕಂದಮ್ಮನನ್ನು ಕೊಂದ!

Published:
Updated:
ಅತ್ಯಾಚಾರ ಎಸಗಿ ಕಂದಮ್ಮನನ್ನು ಕೊಂದ!

ಬೆಂಗಳೂರು: ಮೂರು ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಸೋನು ನಿಶಾದ್ (28) ಎಂಬ ಪೇಂಟರ್, ನಂತರ ತಲೆ ಮೇಲೆ ಕಲ್ಲು ಎತ್ತಿಹಾಕಿ ಆಕೆಯನ್ನು ಕೊಲೆಗೈದಿದ್ದಾನೆ.

ಕೊತ್ತನೂರು ಠಾಣೆ ವ್ಯಾಪ್ತಿಯಲ್ಲಿ ಸೋಮವಾರ ರಾತ್ರಿ ಈ ಕೃತ್ಯ ನಡೆದಿದ್ದು, ಉತ್ತರಪ್ರದೇಶಕ್ಕೆ ಪರಾರಿಯಾಗುವ ಯತ್ನದಲ್ಲಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಗೋರಖ್‌ಪುರದ ನಿಶಾದ್, ನಾಲ್ಕು ವರ್ಷಗಳ ಹಿಂದೆ ನಗರಕ್ಕೆ ಬಂದಿದ್ದ. ಸಂತ್ರಸ್ತೆ ಪೋಷಕರು ಸಹ ಅಲ್ಲಿನವರೇ ಆಗಿದ್ದು, ನಗರದಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು.

ಒಂದೇ ಊರಿನವರಾದ ಕಾರಣ ಬಾಲಕಿಯ ತಂದೆ ಹಾಗೂ ನಿಶಾದ್ ನಡುವೆ ಸ್ನೇಹ ಬೆಳೆದಿತ್ತು. ಇದೇ ಒಡನಾಟದ ನೆಪದಲ್ಲಿ ಆಗಾಗ್ಗೆ ನೆರೆಮನೆಗೆ ಹೋಗಿ ಬರುತ್ತಿದ್ದರಿಂದ ಅವರ ಆರು ಮಕ್ಕಳಿಗೂ ನಿಶಾದ್ ಚಿರಪರಿಚಿತನಾಗಿದ್ದ.

ನಿತ್ಯ ತಿಂಡಿ ಕೊಡಿಸುತ್ತಿದ್ದ ಹಾಗೂ ತಮ್ಮೊಟ್ಟಿಗೆ ಆಟವಾಡುತ್ತಿದ್ದ ಕಾರಣಕ್ಕೆ ಮಕ್ಕಳಿಗೆಲ್ಲ ಆತ ಅಚ್ಚುಮೆಚ್ಚು. ಅವರೆಲ್ಲರೂ ನಿಶಾದ್‌ನನ್ನು ‘ಮಾಮಾ.. ಮಾಮಾ..’ ಎಂದೇ ಕರೆಯುತ್ತಿದ್ದರು.

ಪಾನಮತ್ತನಾಗಿ ರಾತ್ರಿ 7 ಗಂಟೆ ಸುಮಾರಿಗೆ ಮನೆ ಹತ್ತಿರ ಬಂದಿದ್ದ ನಿಶಾದ್, ಅಂಗಳದಲ್ಲಿ ಆಟವಾಡುತ್ತಿದ್ದ ಮಕ್ಕಳ ಜತೆ ಸ್ವಲ್ಪ ಹೊತ್ತು ಕುಳಿತಿದ್ದ. ನಂತರ ಮೂರು ವರ್ಷದ ಬಾಲಕಿಯನ್ನು ಕರೆದ ಆತ, ‘ಚಾಕೊಲೇಟ್‌ ಕೊಡಿಸುತ್ತೇನೆ ಬಾ..’ ಎಂದು ಭುಜದ ಮೇಲೆ ಕೂರಿಸಿಕೊಂಡು ಹೋಗಿದ್ದ.

ನಂತರ ನಿರ್ಜನ ಪ್ರದೇಶದ ಶೆಡ್‌ವೊಂದಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ್ದ. ಸುಮ್ಮನೆ ಬಿಟ್ಟರೆ ಪೋಷಕರಿಗೆ ವಿಷಯ ತಿಳಿಸಿಬಿಡುತ್ತಾಳೆ ಎಂದು, ತಲೆ ಹಾಗೂ ಹೊಟ್ಟೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆಗೈದಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಇತ್ತ 7.30ರ ಸುಮಾರಿಗೆ ಮಕ್ಕಳನ್ನು ಊಟಕ್ಕೆ ಕರೆಯಲು ಹೊರಬಂದ ತಾಯಿ, ಮಗಳು ಕಾಣದಿದ್ದಾಗ ಗಾಬರಿಯಿಂದ ಹುಡುಕಾಟ ಶುರು ಮಾಡಿದ್ದಾರೆ. ನಿಶಾದ್ ಅಂಗಳದಲ್ಲಿ ಇದ್ದುದನ್ನು ನೋಡಿದ್ದ ಅವರು, ಅನುಮಾನದ ಮೇಲೆ ಆತನ ಮನೆ ಹತ್ತಿರ ಹೋಗಿದ್ದಾರೆ. ಬೀಗ ಹಾಕಿದ್ದರಿಂದ ಸುತ್ತಮುತ್ತಲ ರಸ್ತೆಗಳಲ್ಲೆಲ್ಲ ಹುಡುಕಾಟ ನಡೆಸಿದ್ದಾರೆ. ಯಾವುದೇ ಸುಳಿವು ಸಿಗದಿದ್ದಾಗ 8.30ರ ಸುಮಾರಿಗೆ ಠಾಣೆಗೆ ತೆರಳಿ ದೂರು ಕೊಟ್ಟಿದ್ದಾರೆ.

ನಾಪತ್ತೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ನಿರ್ಜನ ಪ್ರದೇಶಗಳಲ್ಲೆಲ್ಲ ಶೋಧ ನಡೆಸಿದ್ದರು. ನಿಶಾದ್ 9 ಗಂಟೆ ಸುಮಾರಿಗೆ ತನ್ನ ಮನೆಗೆ ತೆರಳಿದ್ದ. ಈ ಬಗ್ಗೆ ಸಂತ್ರಸ್ತೆಯ ತಾಯಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಆತನನ್ನು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ಕೃತ್ಯ ಬಾಯ್ಬಿಟ್ಟಿದ್ದಾನೆ.

‘ಬಾಲಕಿ ಮೇಲೆ ಕಲ್ಲು ಎತ್ತಿಹಾಕಿದ್ದರಿಂದ ಆತನ ಮೇಲೆಲ್ಲ ರಕ್ತ ಸಿಡಿದಿತ್ತು. ತನ್ನ ರಕ್ತಸಿಕ್ತ ಬಟ್ಟೆಗಳನ್ನು ಮನೆಯ ಹಿಂಭಾಗದಲ್ಲಿ ಬಿಸಾಡಿದ್ದ ಆರೋಪಿ, ಬೇರೆ ಉಡುಪು ಧರಿಸಿ ಉತ್ತರ ಪ್ರದೇಶಕ್ಕೆ ಹೊರಡಲು ಸಿದ್ಧನಾಗಿದ್ದ. ಆ ಬಟ್ಟೆಗಳನ್ನು ಜಪ್ತಿ ಮಾಡಿದ್ದೇವೆ’ ಎಂದು ತನಿಖಾಧಿಕಾರಿಗಳು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry