ಎಪಿಎಂಸಿ ಮಳಿಗೆ ಅನ್ಯ ಉದ್ದೇಶಗಳಿಗೆ ಬಳಕೆ!

7

ಎಪಿಎಂಸಿ ಮಳಿಗೆ ಅನ್ಯ ಉದ್ದೇಶಗಳಿಗೆ ಬಳಕೆ!

Published:
Updated:
ಎಪಿಎಂಸಿ ಮಳಿಗೆ ಅನ್ಯ ಉದ್ದೇಶಗಳಿಗೆ ಬಳಕೆ!

ಶಿವಮೊಗ್ಗ: ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ (ಎಪಿಎಂಸಿ) ಆವರಣದಲ್ಲಿ ಕೃಷಿ ಉತ್ಪನ್ನಗಳ ಮಾರಾಟಕ್ಕೆ ಮಳಿಗೆ ಪಡೆದು ಅನ್ಯ ಉದ್ದೇಶಗಳಿಗೆ ಬಳಸುತ್ತಿರುವ ವರ್ತಕರ ವಿರುದ್ಧ ಕ್ರಮ ಕೈಗೊಳ್ಳಲು ಸರ್ಕಾರ ಆದೇಶಿಸಿದೆ.

ಕರ್ನಾಟಕ ಕೃಷಿ ಉತ್ಪನ್ನ ಮಾರಾಟ ಮತ್ತು ನಿಯಂತ್ರಣ ಕಾಯ್ದೆ (1968) ಪ್ರಕಾರ ಎಪಿಎಂಸಿ ಅಧೀನಕ್ಕೆ ಒಳಪಟ್ಟ ಮಳಿಗೆ ಅಥವಾ ಗೋದಾಮುಗಳನ್ನು ಕೃಷಿ ಉತ್ಪನ್ನಗಳ ಸಂಗ್ರಹ ಹಾಗೂ ಮಾರಾಟಕ್ಕೆ ಮಾತ್ರ ಬಳಸಬೇಕು. ಬೇರೆ ರೀತಿಯ ಸಾಮಗ್ರಿ ಮಾರಾಟ ಮಾಡುವುದು, ಸಂಗ್ರಹಿಸುವುದು ಶಿಕ್ಷಾರ್ಹ ಅಪರಾಧ.

ಶಿವಮೊಗ್ಗ ಎಪಿಎಂಸಿ ಆವರಣದಲ್ಲಿ ಇರುವ ಮಳಿಗೆಗಳಲ್ಲಿ ಬ್ಲೇಡ್, ಶೇವಿಂಗ್ ಕ್ರೀಂ, ಪ್ಲಾಸ್ಟಿಕ್‌ ಬಾಟಲ್‌, ಸೋಪು, ಶ್ಯಾಂಪು, ಕಾಸ್ಮೆಟಿಕ್, ಊದಿನಕಡ್ಡಿ, ಪೊರಕೆ, ಬಹುರಾಷ್ಟ್ರೀಯ ಕಂಪನಿ ಉತ್ಪನ್ನಗಳಾದ ಪೆಪ್ಸಿ, ಕೋಕಕೋಲಾ, ಡಾಬರ್ ಆಮ್ಲಾ ತೈಲ, ಪಾನೀಯಗಳು ಒಳಗೊಂಡಂತೆ ವಿವಿಧ ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತಿದೆ.

ಹಿಂದೆ ಜಿಲ್ಲೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬಂದಿದ್ದಾಗ ಅವರಿಗೆ ಮನವಿ ಸಲ್ಲಿಸಿದ್ದ ಹಲವು ವರ್ತಕರು ಎಪಿಎಂಸಿ ಆವರಣದಲ್ಲಿ ಕೃಷಿ ಉತ್ಪನ್ನ ಹೊರತುಪಡಿಸಿ, ಇತರೆ ಸಾಮಗ್ರಿಗಳ ಸಂಗ್ರಹ ಮತ್ತು ಮಾರಾಟ ನಿಷೇಧಿಸಬೇಕು ಎಂದು ಒತ್ತಾಯಿಸಿದ್ದರು. ಸರ್ಕಾರವೂ ವರ್ತಕರ ಮನವಿ ಪುರಸ್ಕರಿಸಿತ್ತು.

ಎರಡು ದಿನಗಳ ಹಿಂದೆ ಈ ಸಂಬಂಧ ಆದೇಶ ಹೊರಡಿಸಿರುವ ಸರ್ಕಾರದ ಜಂಟಿ ಕಾರ್ಯದರ್ಶಿ ಎಂ. ಭಕ್ತವತ್ಸಲ ಅವರು ನಿಯಮ ಬಾಹಿರವಾಗಿ ಅನ್ಯ ಉತ್ಪನ್ನ ಮಾರಾಟ ಮಾಡುತ್ತಿರುವ ವರ್ತಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಎಂಪಿಎಂಸಿ ಕಾರ್ಯದರ್ಶಿಗೆ ಸೂಚಿಸಿದ್ದಾರೆ.

ಸರ್ಕಾರ ಪತ್ರ ತಲುಪಿದ ತಕ್ಷಣ ಕಾರ್ಯಪ್ರವೃತ್ತರಾಗಿರುವ ಎಪಿಎಂಸಿ ಅಧಿಕಾರಿಗಳು ಕಾನೂನು ಉಲ್ಲಂಘಿಸಿ ವ್ಯವಹಾರ ನಡೆಸುತ್ತಿರುವ ವರ್ತಕರಿಗೆ ನೋಟಿಸ್ ಜಾರಿ ಮಾಡಿದ್ದಾರೆ. ಯಾವ ಉದ್ದೇಶಕ್ಕೆ ಮಳಿಗೆ ಅಥವಾ ಗೋದಾಮು ನೀಡಲಾಗಿದೆಯೋ ಅದ್ದಕ್ಕೆ ಬದ್ಧರಾಗಿ ಕಟ್ಟಡ ಬಳಸಬೇಕು. ಬೇರೆ ಉದ್ದೇಶಕ್ಕೆ ಬಳಕೆ ಮಾಡುತ್ತಿರುವವರು ಕೂಡಲೇ ಮಳಿಗೆ ತೆರವುಗೊಳಿಸುವಂತೆ ನೋಟಿಸ್‌ನಲ್ಲಿ ಸೂಚಿಸಲಾಗಿದೆ.

ನೋಟಿಸ್‌ ನೀಡಿದ 7 ದಿನಗಳ ಒಳಗೆ ತೆರವಿಗೆ ಕ್ರಮ ಕೈಗೊಳ್ಳದಿದ್ದರೆ ನಿಯಮಾನುಸಾರ ವರ್ತಕರ ಮಾರಾಟ ಪರವಾನಗಿ ರದ್ದುಗೊಳಿಸಲಾಗುವುದು ಎಂದು ಎಚ್ಚರಿಸಲಾಗಿದೆ. ಎಪಿಎಂಸಿ ಆವರಣದಲ್ಲಿ ವರ್ತಕರಿಗೆ 174 ಮಳಿಗೆ ಬಾಡಿಗೆ ನೀಡಲಾಗಿದೆ. ಸರ್ಕಾರ ಮಂಜೂರು ಮಾಡಿದ ನಿವೇಶನಗಳಲ್ಲಿ 300ಕ್ಕೂ ಹೆಚ್ಚು ಮಳಿಗೆಗಳಿವೆ.

‘ಸಾಕಷ್ಟು ಮಳಿಗೆಗಳು, ಗೋದಾಮುಗಳಲ್ಲಿ ನಿಯಮದಂತೆಯೇ ವ್ಯಾಪಾರ ವಹಿವಾಟು ನಡೆಸಲಾಗುತ್ತಿದೆ. ಕೆಲವು ಮಳಿಗೆಗಳನ್ನು ಮಾತ್ರ ಅನ್ಯ ಉದ್ದೇಶಕ್ಕೆ ಬಳಕೆ ಮಾಡುತ್ತಿರುವುದು ಕಂಡುಬಂದಿದೆ. ಈಗಾಗಲೇ ಅಂಥವರಿಗೆ ಎರಡು ಬಾರಿ ನೋಟಿಸ್ ನೀಡಲಾಗಿದೆ. ಕೊನೆಯ ನೋಟಿಸ್ ನೀಡಿದ ನಂತರ ನಿಯಮದಂತೆ ಕ್ರಮ ಕೈಗೊಳ್ಳಲಾಗುವುದು’ ಎನ್ನುತ್ತಾರೆ ಎಪಿಎಂಸಿ ಕಾರ್ಯದರ್ಶಿ ಆರ್.ಎಂ. ಪಾಟೀಲ್.

ಮಾರುಕಟ್ಟೆಗೆ ಬರುವ ರೈತರು, ಲಾರಿ ಚಾಲಕರು ಸಣ್ಣಪುಟ್ಟ ಸಾಮಗ್ರಿಗಳಿಗೆ ಬಹುದೂರ ಹೋಗಿಬರ ಬೇಕಿತ್ತು. ರಾತ್ರಿ ಸಮಯದಲ್ಲಿ ಇಲ್ಲಿ ಏನೂ ಸಿಗುತ್ತಿರಲಿಲ್ಲ. ಈ ತೊಂದರೆ ತಪ್ಪಿಸಲು ಅಗತ್ಯವಾದ ಕೆಲವು ಸಾಮಗ್ರಿ ಇಟ್ಟುಕೊಂಡಿದ್ದೇವೆ. ಇದನ್ನೇ ಕೆಲವರು ದೊಡ್ಡದು ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಅಲ್ಲಿನ ಚಿಲ್ಲರೆ ವ್ಯಾಪಾರಿಗಳು.

ಕೃಷಿ ಉತ್ಪನ್ನಗಳ ಸಂಗ್ರಹ ಮತ್ತು ಮಾರಾಟಕ್ಕೆ ಮಾತ್ರ ಅವಕಾಶ ಇರಬೇಕು. ಉಳಿದ ವ್ಯವಹಾರಕ್ಕೆ ಕಡಿವಾಣ ಹಾಕಬೇಕು ಎಂದು ಹಲವು ವರ್ಷಗಳಿಂದ ಹೋರಾಟ ಮಾಡಿಕೊಂಡು ಬಂದಿದ್ದೇವೆ. ಕೇವಲ ನೋಟಿಸ್‌ ನೀಡುತ್ತಾ ಕುಳಿತುಕೊಳ್ಳದೇ ತಕ್ಷಣ ಕ್ರಮ ಕೈಗೊಂಡು ತೆರವುಗೊಳಿಸಬೇಕು ಎಂದು ಒತ್ತಾಯಿಸುತ್ತಾರೆ ಎಪಿಎಂಸಿ ವರ್ತಕ ಬಿ.ಎಲ್. ಕುಮಾರಸ್ವಾಮಿ.

* * 

ನಿಯಮ ಉಲ್ಲಂಘಿಸಿದವರಿಗೆ ಎರಡು ಬಾರಿ ನೋಟಿಸ್ ನೀಡಲಾಗಿದೆ. ಅಂತಿಮ ನೋಟಿಸ್ ನೀಡಿದ ನಂತರ ನಿಯಮದಂತೆ ಕ್ರಮ ಕೈಗೊಳ್ಳಲಾಗುವುದು.

ಆರ್.ಎಂ. ಪಾಟೀಲ್,  ಕಾರ್ಯದರ್ಶಿ, ಎಪಿಎಂಸಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry