ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾರು ಭ್ರಷ್ಟರು? ಚರ್ಚೆಗೆ ಬನ್ನಿ‌: ಸಿದ್ದರಾಮಯ್ಯ

ಪ್ರಧಾನಿ ಟೀಕೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು
Last Updated 28 ಫೆಬ್ರುವರಿ 2018, 21:37 IST
ಅಕ್ಷರ ಗಾತ್ರ

ಬಾಗಲಕೋಟೆ/ಕೊಪ್ಪಳ: ‘ಸೀದಾ ರುಪಯ್ಯಾ ಸರ್ಕಾರ’ ಎಂದು ಟೀಕಿಸಿದ ಪ್ರಧಾನಿ ನರೇಂದ್ರ ಮೋದಿಗೆ ಬುಧವಾರ ಇಲ್ಲಿ ತಿರುಗೇಟು ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ಯಾರು ಭ್ರಷ್ಟರು, ಯಾರದ್ದು ನಿಷ್ಕ್ರಿಯ ಸರ್ಕಾರ ಎಂಬುದರ ಬಗ್ಗೆ ಬಹಿರಂಗ ಚರ್ಚೆಗೆ ಬನ್ನಿ’ ಎಂದು ಸವಾಲು ಹಾಕಿದರು.

ನಗರದಲ್ಲಿ ಆಯೋಜಿಸಿದ್ದ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಅವರು, ‘ನಿಮ್ಮ ಆರೋಪಗಳ ಬಗ್ಗೆ ಒಂದೇ ವೇದಿಕೆಯಲ್ಲಿ ಚರ್ಚಿಸೋಣ ಅದಕ್ಕೆ ಪೂರಕ ಸಾಕ್ಷ್ಯ ಒದಗಿಸಿ’ ಎಂದು ಕೇಳಿದರು.

ಬಿಜೆಪಿ ಅಧಿಕಾರದಲ್ಲಿರುವ ದೇಶದ ಯಾವುದೇ ರಾಜ್ಯದಲ್ಲಿ ಬಡವರಿಗೆ ಏಳು ಕೆ.ಜಿ ಉಚಿತವಾಗಿ ಅಕ್ಕಿ ಕೊಡಲಾಗುತ್ತಿದೆಯೇ ಎಂಬುದನ್ನು ತೋರಿಸುವಂತೆ ಪ್ರಧಾನಿಗೆ ಕೇಳಿದ ಸಿದ್ದರಾಮಯ್ಯ, ‘ನಾವು ಕೊಟ್ಟ ಅಕ್ಕಿಯಲ್ಲಿಯೇ ಮುಷ್ಟಿ ಅಕ್ಕಿ ತೆಗೆದುಕೊಂಡು ಹೊಸ ನಾಟಕ ಆಡಲು ಹೊರಟಿದ್ದೀರಿ. ರಾಜ್ಯದ ಜನತೆ ರಾಜಕೀಯವಾಗಿ ಪ್ರಬುದ್ಧರಿದ್ದಾರೆ. ನೀವು ಏನೇ ನಾಟಕ ಮಾಡಿದರೂ ಇಲ್ಲಿ ನಡೆಯುವುದಿಲ್ಲ. ಕನ್ನಡಿಗರನ್ನು ಅಷ್ಟು ಸುಲಭವಾಗಿ ಮೋಸ ಮಾಡಲು ಸಾಧ್ಯವಿಲ್ಲ’ ಎಂದರು.

ದಾವಣಗೆರೆಯಲ್ಲಿ ರೈತರ ಸಮಾವೇಶಕ್ಕೆ ಬಂದಿದ್ದ ಮೋದಿ, ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿನ ಸಾಲ ಮನ್ನಾ ಮಾಡುವುದಾಗಿ ಹೇಳಿದ್ದಾರಾ? ಮಹದಾಯಿ ಬಗ್ಗೆ ಪ್ರಸ್ತಾಪಿಸಿದ್ದಾರಾ? ಎಂದು ನೆರೆದವರನ್ನು ಕೇಳಿದ ಅವರು, ‘ಹಾಗಿದ್ದರೆ ದೆಹಲಿಯಿಂದ ಸುಳ್ಳು ಹೇಳಲು ಪ್ರಧಾನಿ ಬಂದಿದ್ದರೇ? ನಾನು 40 ವರ್ಷಗಳಿಂದ ರಾಜಕಾರಣದಲ್ಲಿರುವೆ. ಆದರೆ ಮೋದಿಯಷ್ಟು ಮಹಾ ಸುಳ್ಳುಗಾರ ಪ್ರಧಾನಿಯನ್ನು ಇಲ್ಲಿಯವರೆಗೂ ನೋಡಿಲ್ಲ’ ಎಂದರು.

‘ಮೋದಿ ಸ್ವಂತ ಬುದ್ಧಿಯಿಂದ ಹೀಗೆ ಮಾತಾಡುತ್ತಿಲ್ಲ. ಬದಲಿಗೆ ಯಡಿಯೂರಪ್ಪ, ಶೋಭಾ ಕರಂದ್ಲಾಜೆ, ಜಗದೀಶ ಶೆಟ್ಟರ್ ಹೇಳಿಕೊಟ್ಟಿದ್ದನ್ನು ಹೇಳುತ್ತಾರೆ. ಆ ಮೂವರ ಮಟ್ಟಕ್ಕೆ ಇಳಿದಿರುವ ಮೋದಿ, ಪ್ರಧಾನಿ ಸ್ಥಾನದ ಘನತೆ ಕಳೆದಿರುವುದು ಬೇಸರ ತಂದಿದೆ’ ಎಂದು ಹೇಳಿದರು.

ಮೋದಿ ಮಾತಿಗೆ ಮೂರು ಕಾಸಿನ ಕಿಮ್ಮತ್ತಿಲ್ಲ: ‘ಪ್ರಧಾನ ಮಂತ್ರಿ ನರೇಂದ್ರ ಮೋದಿ ಮಾತಿಗೆ ಮೂರು ಕಾಸಿನ ಕಿಮ್ಮತ್ತಿಲ್ಲ. ಇಷ್ಟು ಕೀಳುಮಟ್ಟದಲ್ಲಿ ಮಾತನಾಡುವ ಪ್ರಧಾನಿಯನ್ನು ನಾನು ಕಂಡಿರಲಿಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕೊಪ್ಪಳದಲ್ಲಿ ಬುಧವಾರ ಆಕ್ರೋಶ ವ್ಯಕ್ತಪಡಿಸಿದರು.

**

‘ಕುದುರೆ ಏರದವನು ವೀರನೂ ಅಲ್ಲ, ಶೂರನೂ ಅಲ್ಲ‘

‘ಬೇಳೆ ಬೇಯಿಸಿಕೊಳ್ಳಬಹುದು ಎಂಬ ಕಾರಣಕ್ಕೆ ಸಮ್ಮಿಶ್ರ ಸರ್ಕಾರ ಬರಲಿ ಎಂದು ಜೆಡಿಎಸ್‌ನವರು ಕಾಯುತ್ತಿದ್ದಾರೆ. ಆದರೆ ರಾಜ್ಯದ ಜನ ಗೇಯುವ ಎತ್ತಿಗೆ ಮೇವು ಹಾಕಲಿದ್ದಾರೆ. ಕಾಂಗ್ರೆಸ್‌ಗೆ ಬಹುಮತ ನಿಶ್ಚಿತ’ ಎಂದು ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು.

ಯಡಿಯೂರಪ್ಪ ಹಾಗೂ ಕುಮಾರಸ್ವಾಮಿ ಅವರನ್ನು ಉದ್ದೇಶಿಸಿ, ‘ಕೊಟ್ಟ ಕುದುರೆಯನ್ನು ಏರದವನು ವೀರನೂ ಅಲ್ಲ, ಶೂರನೂ ಅಲ್ಲ’ ಎಂಬ ವಚನವನ್ನು ಉಲ್ಲೇಖಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT