‘ಮಳೆ,ಬೆಳೆ ಭವಿಷ್ಯ ಹೇಳುವ ಕಾಮಣ್ಣ’

7
ಬಡಿಗೇರ ಕೈಯಲ್ಲಿ ತಯಾರಾದ ಕಾಮಣ್ಣನ ಮುಖಗಳು

‘ಮಳೆ,ಬೆಳೆ ಭವಿಷ್ಯ ಹೇಳುವ ಕಾಮಣ್ಣ’

Published:
Updated:
‘ಮಳೆ,ಬೆಳೆ ಭವಿಷ್ಯ ಹೇಳುವ ಕಾಮಣ್ಣ’

ಸವದತ್ತಿ: ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಹೋಳಿ ಹಬ್ಬದ ಸಂಭ್ರಮ ಸುರುವಾಗಿದೆ. ಹಲಗೆ ಹಾಗೂ ಖಣಿ ವಾದ್ಯಗಳ ಸದ್ದು, ಕಾಮ ದಹನಕ್ಕೆ ಸಿದ್ಧತೆಗಳು ನಡೆದಿವೆ. ದಹನವಾಗಲಿರುವ ಕಾಮಣ್ಣನ ಆಕರ್ಷಕ ತಲೆಗಳು ಬಣ್ಣಗಳಿಂದ ಅಲಂಕೃತಗೊಂಡು ಗಮನ ಸೆಳೆದಿವೆ.

ಇಲ್ಲಿನ ಬಾಳಪ್ಪ ವೀರಭದ್ರಪ್ಪ ಬಡಿಗೇರ ಅವರ ಮನೆತನ 4 ದಶಕಗಳಿಂದ ಕಾಮಣ್ಣನ ಮೂರ್ತಿಗಳ ತಲೆಗಳನ್ನು ತಯಾರಿಸುತ್ತದೆ. ಪಟ್ಟಣದಲ್ಲಿ ಸುಮಾರು 23 ಹಾಗೂ ಗ್ರಾಮಗಳಿಗೆ ಕಾಮಣ್ಣನ ಮೂರ್ತಿಗಳಿಗೆ ತಲೆ ತಯಾರಿಸಿ ಕೊಡುತ್ತದೆ. ಹೋಳಿ ಹಬ್ಬದ ಮೊದಲೇ 3 ರಿಂದ 4 ತಿಂಗಳಿಂದ ಕಾಮಣ್ಣನ ತಲೆಗಳ ತಯಾರಿಯಲ್ಲಿದ್ದಾರೆ. ಈ ಮೊದಲು, ಕಾಮಣ್ಣನ ತಲೆ ತಯಾರಿಸಲು ಬಾಬತ್ತುದಾರರು (ಜವಾನ್ದಾರಿ) ಮಾವಿನ ಗಿಡದ ಹಸಿ ಕಟ್ಟಿಗೆ ತಂದು ಕೊಡುತ್ತಿದ್ದರು. ಆದರೆ ಇದೀಗ ನಾವೇ ತಂದು ತಯಾರಿಸಬೇಕಾಗಿದೆ ಎನ್ನುತ್ತಾರೆ ಬಾಳಪ್ಪ ಬಡಿಗೇರ.

ಈ ಪ್ರಕ್ರಿಯೆಯಲ್ಲಿ ಬಡಿಗೇರ ಮನೆತನದ ರಾಜು ಬಡಿಗೇರ ಹಾಗೂ ಮಾನಪ್ಪ ಹಾದಿಮನಿ ಕೂಡಾ ಕಾಮಣ್ಣನ ತಲೆ ತಯಾರಿಸಿ, ಕಾಮ ದಹನ ಕಾರ್ಯಕ್ಕೆ ಸಹಕರಿಸುತ್ತ ಬಂದಿದ್ದಾರೆ. ಇಂದು ಹೋಳಿ ಹುಣ್ಣಿಮೆ. ಅಂದು ಕಾಮಣ್ಣನ ತಲೆಗಳನ್ನು ಹಲಗೆ, ರಣಕಹಳೆ ವಾದ್ಯಗಳೊಂದಿಗೆ ಕೈಯಲ್ಲಿ ಕತ್ತಿ ಹಿಡಿದು, ಹೋಳಿ ಪದ ಹಾಡುತ್ತ ಭಕ್ತಿ, ಶ್ರದ್ಧೆಯಿಂದ ತಗೆದುಕೊಂಡು ಹೋಗಿ, ಪ್ರತಿಷ್ಠಾಪಿಸಿ, ಪೂಜೆ ಮಾಡಿ, ನಂತರ ಮರುದಿನ ದಹನ ಮಾಡುವುದು ಸಂಪ್ರದಾಯ.

ಮಳೆ ಬೆಳೆ ಹೇಳುವ ಕಾಮಣ್ಣ: ಇಲ್ಲಿನ ಆನಿಅಗಸಿಯ ಕಾಮಣ್ಣ ಈ ವರ್ಷದ ಮಳೆ, ಬೆಳೆ ವಿಧಾನ, ಲಾಭ ಹಾನಿಗಳನ್ನು ಸಾರಿ ಹೇಳುತ್ತಾನೆ. ಇಲ್ಲಿ ಭಾವೈಕತೆಯ ಕಂಪು ಸಾರುವ ಕಾಮಣ್ಣನ ಸಂದೇಶಕ್ಕೆ ಎಲ್ಲರೂ ಕಾಯುತ್ತಾರೆ.  ಹುಣ್ಣಿಮೆ ದಿನ ಕಾಮಣ್ಣನನ್ನು ಪ್ರತಿಷ್ಠಾಪಿಸುವಾಗ ಹಿರೇಮಸೀದಿ ಮುಲ್ಲಾನವರ ಪೈಜಾಮ್‌ ಹಾಕುವ ಪದ್ಧತಿ ಇದೆ. ಅಲ್ಲದೆ ಕಾಮಣ್ಣ ದಹನಗೊಳ್ಳುವ ಜಾಗದಲ್ಲಿ ನೀರು ತುಂಬಿ ಕೊಡದಲ್ಲಿ ನವಧಾನ್ಯಗಳನ್ನು ಹಾಕಿ ಮುಚ್ಚಿರುತ್ತಾರೆ. ಅದನ್ನು ಯುಗಾದಿಯ ದಿನದಂದು ಹೊರತಗೆದು ನೋಡಿದಾಗ, ಅದರಲ್ಲಿನ ನೀರಿನ ಪ್ರಮಾಣವನ್ನು ಗುರುತಿಸಿ, ಆ ವರ್ಷದ ಮಳೆ, ಬೆಳೆಯನ್ನು ನಿರ್ಧರಿಸುತ್ತಾರೆ.

ಈ ಕಾರ್ಯಕ್ರಮದ ನೇತೃತ್ವವನ್ನು ಶಂಕರಗೌಡ ಪಾಟೀಲ, ಲಕ್ಷ್ಮಣರಾವ್‌ ಕುಲಕರ್ಣಿ ವಹಿಸುತ್ತಾರೆ. ರೈತರು, ಬಾಬತ್ತುಗಾರರು ಇರುತ್ತಾರೆ ಸವದತ್ತಿಯಲ್ಲಿ  ಮಾ.2ರಂದು ಕಾಮದಹನ ಮಾಡಲಾಗುವುದು ಎಂದು ಹಿರಿಯರಾದ ಲಕ್ಷ್ಮಣರಾವ್‌ ಕುಲಕರ್ಣಿ ‘ಪ್ರಜಾವಾಣಿ’ಗೆ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry