ಡಾನ್‌ ಡಗಾಲ್‌..!

ಭಾನುವಾರ, ಮಾರ್ಚ್ 24, 2019
33 °C

ಡಾನ್‌ ಡಗಾಲ್‌..!

Published:
Updated:
ಡಾನ್‌ ಡಗಾಲ್‌..!

ಹೊರಗಡೆಯಿಂದ ನೋಡಿದರೆ ಯಾವುದೋ ಕಟ್ಟಡದ ಕಾಮಗಾರಿ ನಡೆಯುತ್ತಿದೆಯೇನೋ ಎಂಬ ಭಾವನೆ ಹುಟ್ಟಿಸುವ ಸಿಮೆಂಟ್‌ ಶೀಟ್‌ಗಳ ಗೋಡೆ. ಅದನ್ನು ದಾಟಿ ಒಳಗಡಿಯಿಟ್ಟರೆ ಬೇರೆಯದೇ ಲೋಕ. ಸೂರ್ಯ ತೆರೆಗೆ ಸರಿಯುತ್ತಲೇ ಅಮರಿಕೊಳ್ಳುತ್ತಿರುವ ಕತ್ತಲನ್ನು ಸಶಕ್ತವಾಗಿ ತಡೆದು ನಿಲ್ಲಿಸಿರುವ ಝಗಮಗ ಲೈಟುಗಳು... ಎಡಗಡೆ ರಂಗಪ್ಪ ಕಾಂಪ್ಲೆಕ್ಸ್‌ ಎಂಬ ಫಲಕ ಇರುವ ಹಳೆ ಕಟ್ಟಡ. ಬಲಗಡೆ ಅಂಥದ್ದೇ ಪಳಯುಳಿಕೆಗಳಿಗೆ ಚಿತ್ರ ವಿಚಿತ್ರವಾಗಿ ಸಿಂಗಾರ ಮಾಡಿಕೊಂಡು ‘ಮಾಡರ್ನ್‌ ಟಚ್‌’ ಪಡೆದುಕೊಂಡು ನಿಂತಿರುವ ಬಾಂಡ್‌ ಗ್ಯಾರೇಜ್‌.

ಇದ್ಯಾವ ಬೀದಿ ಎಂದು ಹುಬ್ಬೇರಿಸಬೇಡಿ. ಇದು ಯೋಗರಾಜ ಭಟ್ಟರ ಹೊಸ ಚಿತ್ರ ‘ಪಂಚತಂತ್ರ’ಕ್ಕಾಗಿ ಬೆಂಗಳೂರಿನ ಕಂಠೀವರ ಸ್ಟುಡಿಯೊದಲ್ಲಿ ಹಾಕಿರುವ ಸೆಟ್‌! ಚಿತ್ರ ಶೀರ್ಷಿಕೆ ಬಿಡುಗಡೆಗಾಗಿ ಪತ್ರಿಕಾಗೋಷ್ಠಿಯನ್ನು ಆಯೋಜಿಸಿತ್ತು ತಂಡ. ತಂಡದ ವೇದಿಕೆಯಾದರೂ ಹೇಗಿದೆ? ಹಳೆ ಕಾರ್‌ನ ಬಾನಟ್‌ ಅನ್ನು ಕಿತ್ತು ತಂದು ಡಯಾಸ್‌ ಮಾಡಲಾಗಿತ್ತು. ಟಯರ್‌ಗಳಲ್ಲಿಯೇ ಕುರ್ಚಿ ಕಟ್ಟಲಾಗಿತ್ತು. ಕಿತ್ತೋದ ಗಾಡಿ ಸೀಟೇ ಸಿಂಹಾಸನ!

ನಿದ್ದೆಗೆಟ್ಟು ಕೆಂಪಾಗಿದ್ದ ಕಣ್ಣು, ದೂಳಿನಿಂದ ಹೊಸದೇ ಬಣ್ಣ ಪಡೆದುಕೊಂಡಿದ್ದ ಜೀನ್ಸ್‌ ಅಂಗಿ, ಹಗಲಿಡೀ ಬಿಸಿಲಿಗೆ ಒಡ್ಡಿಕೊಂಡು ರಾತ್ರಿ ದೀಪದ ಬೆಳಕಲ್ಲಿ ಕಪ್ಪಗೆ ಹೊಳೆಯುತ್ತಿರುವ ಮುಖ.. ಈಗಷ್ಟೇ ಯಾವುದೋ ಹಳೆ ಗ್ಯಾರೇಜಿನಲ್ಲಿ ಕೆಲಸ ಮುಗಿಸಿ ಸೀದಾ ಬಂದು ನಿಂತ ಮೆಕ್ಯಾನಿಕ್‌ ಹಾಗೆ ಕಾಣುತ್ತಿದ್ದ ಯೋಗರಾಜ ಭಟ್ಟರ ವೇಷಕ್ಕೆ ನೆತ್ತಿಮೇಲೆ ನೆಟ್ಟಗೆ ನಿಲ್ಲಿಸಿದ್ದ ಸ್ಪೈಕ್‌ ಕೇಶವಿನ್ಯಾಸ ಮಾತ್ರ ಹೊಂದಿಕೊಳ್ಳದೆ ಒದ್ದಾಡುತ್ತಿತ್ತು. ಅದನ್ನು ಸಮಾಧಾನ ಮಾಡುವಂತೆ ಒಮ್ಮೆ ತಲೆಕೆರೆದುಕೊಂಡು ಡ್ರೈವರ್‌ ಜಾಗದಲ್ಲಿ ಮಾತಿಗೆ ನಿಂತ ಭಟ್ಟರು ಪ್ರಶ್ನೆಗೆ ಆಸ್ಪದವೇ ಇಲ್ಲದಂತೆ ಚಿತ್ರದ ಕಥೆಯನ್ನೇ ಪೂರ್ತಿ ಹೇಳಿಬಿಟ್ಟರು. ಅದನ್ನು ಅವರ ಮಾತಿನಲ್ಲಿ ಕೇಳಿದರೇ ಚೆನ್ನ.

‘ಈ ಸಿನಿಮಾ ಮಾಡಲು ನಿರ್ಧರಿಸಿದ್ದು ಬೇಗ. ಚಿತ್ರೀಕರಣವೂ ಅಷ್ಟೇ ಬೇಗ ಆರಂಭವಾಯ್ತು. ಆದರೆ ಶೀರ್ಷಿಕೆ ಅಂತಿಮಗೊಳಿಸಿದ್ದು ತಡವಾಗಿ.

ಆನಂದ್‌ ಅಂತ ನನ್ನ ಡ್ರೈವರ್‌ ಇದ್ದ. ಇತ್ತೀಚೆಗೆ ಕಾರ್‌ ಆ್ಯಕ್ಸಿಡೆಂಟ್‌ ಆಗಿ ತೀರಿಹೋದ. ಅವನ ಅಂತ್ಯಸಂಸ್ಕಾರಕ್ಕೆ ಹೋಗಿದ್ದಾಗ ಸಾವಿನ ನೋವಿನಲ್ಲಿ ‘ಆನಂದ ಗಾಡಿ ತೆಗಿ’ ಎಂಬ ಶೀರ್ಷಿಕೆ ಹೊಳೆಯಿತು. ಅದಕ್ಕೆ ಹೊಂದುವ ಹಾಗೆ ಕಥೆ ಬರೆಯಲು ಯತ್ನಿಸುತ್ತಿದ್ದೆ. ಅಂಥದ್ದೇ ಒಂದುದಿನ ಸಂಜೆ ಮಾಸ್ತಿ ಮತ್ತು ಕಾಂತರಾಜ್‌ ಭೇಟಿಯಾದರು. ಅವತ್ತು ನಾನು ಯಾವುದೋ ಕಾರ್ಯಕ್ರಮಕ್ಕೆ ಹೋಗಬೇಕಾಗಿತ್ತು. ‘ಎರಡೇ ನಿಮಿಷ ಒಂದು ಕಥೆ ಹೇಳ್ತೀವಿ ಕೇಳಿಹೋಗಿ’ ಅಂದರು. ಕೂತೆ. ಕಥೆಯ ಒಂದು ಎಳೆಯನ್ನಷ್ಟೇ ಹೇಳಿದರು. ಅವತ್ತು ನಾನು ಕಾರ್ಯಕ್ರಮಕ್ಕೆ ಹೋಗಲೇ ಇಲ್ಲ. ಆ ಕಥೆ ನನ್ನನ್ನು ಅಷ್ಟು ಕಚ್ಚಿಕೊಂಡುಬಿಟ್ಟಿತ್ತು. ಅದೊಂದು ಕೀಲಿ ಕೈ ಅಷ್ಟೆ. ರಾತ್ರಿಯಿಡೀ ಚರ್ಚಿಸಿದೆವು. ಅದಕ್ಕೊಂದು ತಲೆ ಬಾಲ, ಅದ್ಭುತವಾದ ಕ್ಲೈಮ್ಯಾಕ್ಸ್‌ ಕೂಡ ಅವತ್ತೇ ಹೊಳೆಯಿತು.

ಸಾಮಾನ್ಯವಾಗಿ ಪಂಚತಂತ್ರ, ಈಸೋಪನ ನೀತಿ ಕಥೆಗಳು ಇವುಗಳಲ್ಲೆಲ್ಲ ಪ್ರಾಣಿಗಳು ಅಥವಾ ವಸ್ತುಗಳ ಮೂಲಕ ಮನುಷ್ಯನ ಕಥೆಯನ್ನು ಹೇಳುತ್ತಿರುತ್ತಾರೆ. ಇದೂ ಒಂದು ಬಗೆಯಲ್ಲಿ ಅಂಥದ್ದೇ ಕಥೆ. ಆದ್ದರಿಂದಲೇ ಇದಕ್ಕೆ ‘ಪಂಚತಂತ್ರ’ ಎಂದು ಹೆಸರಿಟ್ಟೆವು.

ಒಂದು ಬೀದಿಯಲ್ಲಿ ಒಂದು ಕಡೆ ರಂಗಪ್ಪನ ಕಾಂಪ್ಲೆಕ್ಸ್‌. ಅವನು ತನ್ನ ಕಟ್ಟಡದ ನೆಲಮಹಡಿಯನ್ನು ಹಲವು ಜನರಿಗೆ ಅಂಗಡಿ ಹಾಕಿಕೊಳ್ಳಲು ಮಾರಾಟ ಮಾಡಿ, ಮಾಳಿಗೆ ಮೇಲೆ ವಾಸವಾಗಿದ್ದಾನೆ. ಅವರೆಲ್ಲರೂ ಐವತ್ತು ಅರವತ್ತರ ಆಸುಪಾಸಿನವರು. ‘ನಮ್‌ ಕಾಲ್ದಲ್ಲಿ ಹಿಂಗಿರ್ಲಿಲ್ಲ’ ಎನ್ನುವಂಥ‌ ಮನಸ್ಥಿತಿಯವರು. ಆ ಗುಂಪಿಗೆ ರಂಗಪ್ಪ ನಾಯಕ. (ಆ ಪಾತ್ರವನ್ನು ರಂಗಾಯಣ ರಘು ಮಾಡ್ತಿದ್ದಾರೆ) ಅದರ ಎದುರಿನಲ್ಲಿ ಬಾಂಡ್‌ ಗ್ಯಾರೇಜ್‌. ಅದು ಕಥಾನಾಯಕ ವಿಹಾನ್‌ನದ್ದು. ಜತೆಗೊಂದಿಷ್ಟು ಹುಡುಗರು. ಅವರೆಲ್ಲರೂ ರೇಸ್‌ ಕಾರ್‌ಗಳನ್ನು ತಯಾರಿಸಿ ಕೊಡುತ್ತಾರೆ. ಬದುಕಿನಲ್ಲಿ ಏನೂ ಅನುಭವ ಇಲ್ದಿದ್ರೂ ಹುಚ್ಚಾಪಟ್ಟೆ ಹಾರಾಡುವ ಹುಡುಗರು. ಈ ಇಡೀ ಜಾಗ ತನ್ನದು ಎಂದು ಬಾಂಡ್‌ ಎನ್ನುವ ವ್ಯಕ್ತಿ ಕೇಸು ಹಾಕಿದ್ದಾನೆ. ಪ್ರಕರಣ ನಡೆಯುತ್ತಿದೆ.

ಇಲ್ಲಿ ಒಂದು ಕಡೆ ದೂರದರ್ಶನ ಇನ್ನೊಂದು ಕಡೆ ಎಂಟಿವಿ ಮನಸ್ಥಿತಿಯವರಿದ್ದಾರೆ. ನಡುವೆ ಪೀಳಿಗೆಯ ನಡುವಿನ ಅಂತರದ ರಸ್ತೆ ಇದೆ. ಜತೆಗೆ ಪ್ರೀತಿ, ಕಾಮ, ಮೋಹ, ದುಡ್ಡು ಎಲ್ಲವೂ ಇದೆ. ಹುಡುಗುಬುದ್ದಿ ಮತ್ತು ಮುದಿಬುದ್ದಿಯ ನಡುವಿನ ಈ ಕಾದಾಟಕ್ಕೆ ಒಂದು ಅದ್ಭುತವಾದ ಕ್ಲೈಮ್ಯಾಕ್ಸ್‌ ಇದೆ’

ಸಿನಿಮಾ ಬಗ್ಗೆ ಹೇಳಬೇಕಿರುವುದನ್ನೆಲ್ಲ ಹೀಗೆ ಒಂದೇ ಉಸಿರಿಗೆ ಹೇಳಿ ಸುಮ್ಮನಾದರು ಭಟ್ಟರು.

ನಂತರ ಮೈಕ್‌ ಕೈಗೆತ್ತಿಕೊಂಡ ನಟಿಯರಾದ ಅಕ್ಷರಾ ಗೌಡ, ಸೋನಲ್‌ ಮಂತೆರೊ, ವಿಹಾನ್‌ ಎಲ್ಲರೂ ಧನ್ಯವಾದಗಳನ್ನು ಅರ್ಪಿಸಲಿಕ್ಕಾಗಿಯೇ ಮಾತನ್ನು ಮೀಸಲಿಟ್ಟರು.

‘ಟಗರು ಚಿತ್ರದ ಸಂಭಾಷಣೆಯನ್ನು ಕೇಳಿ ಯೋಗರಾಜ ಭಟ್ಟರು ನನಗೆ ಕರೆ ಮಾಡಿದ್ದರು. ನಂತರ ನಾನು ಕಾಂತರಾಜ್‌ ಸಿದ್ಧಮಾಡಿಟ್ಟುಕೊಂಡಿದ್ದ ಈ ಕಥೆಯನ್ನು ಅವರಿಗೆ ಹೇಳಿದೆವು. ಅವರಿಗೆ ಇಷ್ಟವಾಗಿ ಈಗ ಸಿನಿಮಾ ಆಗುತ್ತಿದೆ. ನಮ್ಮ ಕಥೆಗೆ ತಮ್ಮದೇ ಶೈಲಿಯಲ್ಲಿ ಒಗ್ಗರಣೆ ಹಾಕಿದ್ದಾರೆ ಭಟ್ಟರು’ ಎಂದರು ಮಾಸ್ತಿ.

ಯೋಗರಾಜ್‌ ಭಟ್‌ ಬ್ಯಾನರ್‌ನಲ್ಲಿಯೇ ಸಿದ್ಧವಾಗುತ್ತಿರುವ ಈ ಚಿತ್ರಕ್ಕೆ ಹರಿಪ್ರಸಾದ್‌ ಮತ್ತು ಸನತ್‌ ಕುಮಾರ್ ಹಣ ಹೂಡಿದ್ದಾರೆ. ಹೊಸ್ಮನೆ ಮೂರ್ತಿ ಸೆಟ್‌ ವಿನ್ಯಾಸ ಮಾಡಿದ್ದಾರೆ. ಹರಿಕೃಷ್ಣ ಸಂಗೀತ, ಸುಜ್ಞಾನ್‌ ಛಾಯಾಗ್ರಹಣ ಚಿತ್ರಕ್ಕಿದೆ. ರಂಗಾಯಣ ರಘು, ಕಾಂತರಾಜ್‌, ಕರಿಸುಬ್ಬು, ದೀಪಕ್‌, ಸತ್ಯಮೂರ್ತಿ ಮುಂತಾದವರು ತಾರಾಗಣದಲ್ಲಿದ್ದಾರೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry