ಸಿನಿಮೋತ್ಸವ: ಒಂದು ಮೌಲ್ಯಮಾಪನ

7

ಸಿನಿಮೋತ್ಸವ: ಒಂದು ಮೌಲ್ಯಮಾಪನ

Published:
Updated:
ಸಿನಿಮೋತ್ಸವ: ಒಂದು ಮೌಲ್ಯಮಾಪನ

ಮುಂಬೈನ ಉಮಾ ಡಾ ಕುನ್ಹಾ ನಾಲ್ಕೂವರೆ ದಶಕಗಳಿಂದ ಸಿನಿಮೋತ್ಸವದ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದಾರೆ. ಕಾನ್ಸ್‌, ಟೊರೆಂಟೊ, ಬರ್ಲಿನ್‌ ಸೇರಿದಂತೆ ಜಗತ್ತಿನ ಹಲವು ಜನಪ್ರಿಯ ಸಿನಿಮೋತ್ಸವಗಳಿಗೆ ಕ್ಯುರೇಟರ್‌ ಆಗಿ ಕೆಲಸ ಮಾಡಿದ ಅನುಭವ ಅವರಿಗಿದೆ. filmindiaworldwide.com ಸಿನಿಮಾ ಜಾಲತಾಣದ ಸಂಪಾದಕಿಯಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.

ಬೆಂಗಳೂರಿನಲ್ಲಿ ಗುರುವಾರ  (ಮಾ. 1) ಮುಕ್ತಾಯಗೊಂಡ 10ನೇ ಬೆಂಗಳೂರು ಅಂತರರಾಷ್ಟ್ರೀಯ ಸಿನಿಮೋತ್ಸವದಲ್ಲಿಯೂ ಕ್ಯುರೇಟರ್‌ ಆಗಿ ಭಾಗವಹಿಸಿದ್ದರು. ಚಿತ್ರೋತ್ಸವದ ಕುರಿತು ಅವರೊಂದಿಗೆ ನಡೆಸಿದ ಸಂದರ್ಶನದಲ್ಲಿ ಅನಿಸಿಕೆಗಳನ್ನು ಹಂಚಿಕೊಂಡಿರುವುದಲ್ಲದೇ, ಇನ್ನಷ್ಟು ಉತ್ತಮಗೊಳಿಸಲು ಕೆಲವು ಸಲಹೆಗಳನ್ನೂ ನೀಡಿದ್ದಾರೆ.

* ಬರ್ಲಿನ್‌, ಕಾನ್ಸ್‌ ಸೇರಿದಂತೆ ಜಗತ್ತಿನ ಹಲವು ಜನಪ್ರಿಯ ಚಿತ್ರೋತ್ಸವಗಳಲ್ಲಿ ನೀವು ಭಾಗವಹಿಸಿದ್ದೀರಿ. ಅವುಗಳಿಗೆ ಹೋಲಿಸಿದರೆ ಭಾರತೀಯ ಚಿತ್ರೋತ್ಸವಗಳ ಗುಣಮಟ್ಟ ಹೇಗಿದೆ?

ಕೇರಳ, ಬೆಂಗಳೂರು, ಜಿಯೊ ಮಾಮಿ, ಮುಂಬೈ ಸೇರಿದಂತೆ ಭಾರತದ ಪ್ರಮುಖ ಚಿತ್ರೋತ್ಸವಗಳಿಗೂ ಕಾನ್ಸ್‌, ಟೊರೆಂಟೊ, ಬರ್ಲಿನ್‌ ಚಿತ್ರೋತ್ಸವಗಳಿಗೂ ಗುಣಮಟ್ಟದಲ್ಲಿ ಹೆಚ್ಚಿನ ವ್ಯತ್ಯಾಸವೇನಿಲ್ಲ. ವ್ಯತ್ಯಾಸ ಇರುವುದು ಬಜೆಟ್‌ ಮತ್ತು ಅವು ತಲುಪುವ ಜನರ ಸಂಖ್ಯೆಯಲ್ಲಷ್ಟೇ. ಅವೆಲ್ಲ ಸಿನಿಮೋತ್ಸವಗಳು ಹಲವು ದಶಕಗಳಿಂದ ನಡೆದುಕೊಂಡು ಬಂದಿವೆ. ಅವುಗಳ ಬಜೆಟ್‌ ತುಂಬ ದೊಡ್ಡದು. ಅದಕ್ಕೆ ತಕ್ಕ ಹಾಗೆ ಪ್ರಾಯೋಜಕರೂ ಇದ್ದಾರೆ. ಹಾಗಾಗಿಯೇ ಅವರು ಅದ್ಧೂರಿಯಾಗಿ ಸಿನಿಮೋತ್ಸವಗಳನ್ನು ಆಯೋಜಿಸುತ್ತಾರೆ.

* ಬೆಂಗಳೂರು ಚಿತ್ರೋತ್ಸವದ ಬಗ್ಗೆ ಹೇಳಿ. ಈ ವರ್ಷದ ಚಿತ್ರೋತ್ಸವ ಹೇಗಿತ್ತು?

ಎಲ್ಲ ಆಯಾಮಗಳಿಂದಲೂ ಈ ವರ್ಷದ ಬೆಂಗಳೂರು ಚಿತ್ರೋತ್ಸವ ಪರಿಣಾಮಕಾರಿಯಾಗಿತ್ತು. ಜಗತ್ತಿನ ಬೇರೆ ಬೇರೆ ದೇಶಗಳ ಅದ್ಭುತವಾದ ಸಿನಿಮಾಗಳನ್ನು ಆಯ್ದುಕೊಂಡಿದ್ದರು. ಈ ಸಿನಿಮೋತ್ಸವದ ಕಲಾ ನಿರ್ದೇಶಕ ವಿದ್ಯಾಶಂಕರ್‌ ಅವರಿಗೆ ಜಗತ್ತಿನ ಸಿನಿಮಾಗಳ ಬಗ್ಗೆ ಚೆನ್ನಾಗಿ ಅರಿವಿದೆ. ಆದರೆ ಸಾಕಷ್ಟು ಗೌರವ ಮತ್ತು ಕಾಳಜಿಯಿಂದಲೇ ಹೇಳುವುದಾದರೆ– ಪ್ರಾದೇಶಿಕ, ಅದರಲ್ಲಿಯೂ ಕನ್ನಡದ ಸಿನಿಮಾ ಸ್ಪರ್ಧಾವಿಭಾಗಗಳ ಆಯ್ಕೆಯಲ್ಲಿ ಇನ್ನಷ್ಟು ನಿಖರತೆ ಇರಬೇಕಿತ್ತು. ಪ್ರತಿಯೊಂದು ಸಿನಿಮೋತ್ಸವವೂ ತನ್ನ ಪ್ರಾದೇಶಿಕ ಭಾಷೆಯ ಸಿನಿಮಾಗಳನ್ನು ಪ್ರೋತ್ಸಾಹಿಸುವ ಉದ್ದೇಶ ಹೊಂದಿರುವುದು ಸಹಜ. ಆದರೆ ಅಂಥ ಉದ್ದೇಶದಿಂದ ಆಯ್ಕೆ ಮಾಡಿದ ಚಿತ್ರಗಳು ಸ್ಪರ್ಧಾತ್ಮಕ ಗುಣಮಟ್ಟದಲ್ಲಿರಬೇಕು. ‘ಮಿಡಿಯೋಕರ್‌’ ಸಿನಿಮಾಗಳ ಆಯ್ಕೆ ನಡೆಯದಂತೆ ಎಚ್ಚರ ವಹಿಸಬೇಕು.

ಸ್ಪರ್ಧಾ ವಿಭಾಗದಲ್ಲಿದ್ದ ಹಲವು ಕನ್ನಡ ಸಿನಿಮಾಗಳು ಸಾಧಾರಣ ಮಟ್ಟಕ್ಕಿಂತ ಕೆಳಗಿದ್ದವು ಎಂದು ಸ್ಥಳೀಯ ಮತ್ತು ವಿದೇಶಿ ಡೆಲಿಗೇಟ್ಸ್‌ ಮಾತನಾಡಿಕೊಳ್ಳುವುದನ್ನು ಕೇಳಿದ್ದೇನೆ. ಕೆಲವು ವಿದೇಶಿ ಪ್ರತಿನಿಧಿಗಳಂತೂ ಇಂಥ ಸಿನಿಮಾಗಳು ಸಿನಿಮೋತ್ಸವಕ್ಕೆ ಹೇಗೆ ಆಯ್ಕೆಯಾದವು ಎಂದು ಆಶ್ಚರ್ಯಪಟ್ಟರು. ಪ್ರಾದೇಶಿಕ ಕಾರಣವೊಂದನ್ನೇ ಮುಂದಿಟ್ಟುಕೊಂಡು ಕೆಳದರ್ಜೆಯ ಸಿನಿಮಾಗಳನ್ನು ಆಯ್ಕೆ ಮಾಡುವುದರಿಂದ ಒಳಿತಿಗಿಂತ ಕೆಡುಕಾಗುವುದೇ ಹೆಚ್ಚು.

ಎಪ್ಪತ್ತರ ದಶಕದಲ್ಲಿ ‘ಭಾರತೀಯ ಪನೋರಮಾ’ ವಿಭಾಗದಲ್ಲಿ ಕನ್ನಡ ಸಿನಿಮಾಗಳು ನಮ್ಮ ಹೆಮ್ಮೆಯಾಗಿದ್ದವು. ಅದನ್ನು ನಾವು ಮರೆತುಬಿಟ್ಟಿದ್ದೇವೆ ಅನಿಸುತ್ತದೆ. ಈಗ ನಾವು ಆ ಕಾಲದ ಕನ್ನಡ ಕ್ಲಾಸಿಕ್‌ ಸಿನಿಮಾಗಳನ್ನು ಮತ್ತೆ ಪ್ರದರ್ಶಿಸುವ ಬಗ್ಗೆ ಯೋಚಿಸಬೇಕಾಗಿದೆ. ಇನ್ನೊಂದು ವಿಷಯ ಹೇಳಬೇಕು. ಈಗ ಭಾರತದ ಎಲ್ಲ ಮುಖ್ಯ ಸಿನಿಮೋತ್ಸವಗಳಲ್ಲಿಯೂ ಒಂದು ಟ್ರೆಂಡ್‌ ಶುರುವಾಗಿದೆ.

ಈ ವರ್ಷದ ಬೆಂಗಳೂರು ಸಿನಿಮೋತ್ಸವವೂ ಅದಕ್ಕೆ ಹೊರತಾಗಿಲ್ಲ. ಅದೇನೆಂದರೆ, ಚಿತ್ರೋತ್ಸವದ ಉದ್ಘಾಟನೆ ಮತ್ತು ಸಮಾರೋಪ ಸಮಾರಂಭಗಳಿಗೆ ಬಾಲಿವುಡ್‌ ತಾರೆಯರನ್ನು ಕರೆಸುವುದು. ಇದು ಪ್ರಾದೇಶಿಕ ಸಿನಿಮಾಗಳಿಗೆ ಖಂಡಿತವಾಗಿಯೂ ಗೌರವ ತರುವ ಸಂಗತಿ ಅಲ್ಲ.

ನಾವು ನಮ್ಮ ಪ್ರಾದೇಶಿಕ ಪ್ರತಿಭೆಗಳನ್ನು ಗುರ್ತಿಸಿ, ಗೌರವಿಸುವುದನ್ನು ರೂಢಿಸಿಕೊಳ್ಳಬೇಕು. ಅಂಥ ತಾರೆಗಳನ್ನು ಕರೆಸಲು ಸಾಕಷ್ಟು ಹಣವನ್ನೂ ವ್ಯಯಿಸಬೇಕಾಗುತ್ತದೆ. ಆ ದುಬಾರಿ ಮೊತ್ತದ ಹಣವನ್ನು ಸಿನಿಮೋತ್ಸವದ ಮೂಲಭೂತ ಸೌಲಭ್ಯಗಳನ್ನು ಇನ್ನಷ್ಟು ಉತ್ತಮಗೊಳಿಸಲು ಏಕೆ ಬಳಸಬಾರದು? ಪ್ರಾದೇಶಿಕ ಸಿನಿಮಾಗಳು ಮತ್ತು ತಾರೆಯರನ್ನು ಪ್ರೋತ್ಸಾಹಿಸುವುದು ಎಲ್ಲ ಚಿತ್ರೋತ್ಸವಗಳ ಮೂಲಭೂತ ಜವಾಬ್ದಾರಿಯೂ ಹೌದು.

* ಸಿನಿಮೋತ್ಸವವನ್ನು ಇನ್ನಷ್ಟು ಉತ್ತಮಗೊಳಿಸಲು ನಿಮ್ಮ ಸಲಹೆಗಳೇನು?

ಸಿನಿಮೋತ್ಸವ ನಡೆಯುವ ಒರಾಯನ್‌ ಮಾಲ್‌ ಉತ್ತಮ ಸ್ಥಳ ಮತ್ತು ಪ್ರದರ್ಶನ ಸೌಲಭ್ಯಗಳನ್ನು ಹೊಂದಿದೆ. ಆದರೆ ಅಲ್ಲಿನ ಅತಿಯಾದ ಗದ್ದಲ, ಜನದಟ್ಟಣೆ, ಧ್ವನಿವರ್ಧಕಗಳು, ನೂಕುನುಗ್ಗಲನ್ನು ಪ್ರತಿನಿಧಿಗಳು, ಅದರಲ್ಲಿಯೂ ವಿದೇಶಿ ಪ್ರತಿನಿಧಿಗಳು ಸಹಿಸಿಕೊಳ್ಳುವುದು ಕಷ್ಟ. ಅವರಿಗೆ ಇಂಥ ವಾತಾವರಣ ರೂಢಿ ಇರುವುದಿಲ್ಲ. ಹಾಗಾಗಿ ಮಾಲ್‌ನ ಒಳಗಡೆಯೇ ಪ್ರಶಾಂತವಾಗಿ ಕೂತು ತಿಂಡಿ, ತಿನಿಸುಗಳನ್ನು ಸವಿಯಬಲ್ಲಂಥ ನಿರ್ದಿಷ್ಟ ಜಾಗವೊಂದರ ಅವಶ್ಯಕತೆ ಇದೆ.

ಎಲ್ಲ ಮುಖ್ಯ ಸಿನಿಮೋತ್ಸವಗಳಲ್ಲಿಯೂ ವೀಕ್ಷಣಾ ಕೊಠಡಿ ಇರುತ್ತದೆ. ಅಲ್ಲಿ ಪ್ರೇಕ್ಷಕರು ಚಿತ್ರಮಂದಿರಗಳಲ್ಲಿ ನೋಡಲು ತಪ್ಪಿಸಿಕೊಂಡ ಸಿನಿಮಾಗಳನ್ನು ಕಂಪ್ಯೂಟರ್‌ನಲ್ಲಿ ಖಾಸಗಿಯಾಗಿ ನೋಡಬಹುದು. ಅಂಥದ್ದೊಂದು ಸೌಲಭ್ಯವನ್ನು ಬೆಂಗಳೂರು ಸಿನಿಮೋತ್ಸವದಲ್ಲಿಯೂ ರೂಪಿಸಬೇಕಾದ ಅಗತ್ಯ ಇದೆ.

ಚಿತ್ರೋತ್ಸವದ ಮಾಧ್ಯಮಕೇಂದ್ರವೂ ಸುಸಜ್ಜಿತವಾಗಿರಲಿಲ್ಲ. ಮಾಧ್ಯಮಕೇಂದ್ರದ ಒಳಗಡೆಯೇ ಜನರು ಜೋರಾಗಿ ಮಾತನಾಡುತ್ತಿದ್ದರು. ಸಂಗೀತದ ಗದ್ದಲವೂ ಜೋರಾಗಿತ್ತು. ಅಂತರ್ಜಾಲ ಸಂಪರ್ಕವೂ ಸಮಂಜಸವಾಗಿ ಕಾರ್ಯನಿರ್ವಹಿಸುತ್ತಿರಲಿಲ್ಲ. ಚಿತ್ರಮಂದಿರದೊಳಗೆ ಲ್ಯಾಪ್‌ಟಾಪ್‌ ತೆಗೆದುಕೊಂಡು ಹೋಗುವ ಅವಕಾಶ ಇರಲಿಲ್ಲ. ಬೇರೆ ಚಿತ್ರೋತ್ಸವಗಳಲ್ಲಿ ಈ ಅವಕಾಶ ಇರುತ್ತದೆ. ಇಂಥ ನಿಮಯಗಳನ್ನು ಪ್ರತಿನಿಧಿಗಳಿಗೆ ಮುಂಚಿತವಾಗಿ ತಿಳಿಸಿದರೆ ಮುಜುಗರವಾಗುವುದನ್ನು ತಪ್ಪಿಸಬಹುದು.

* ಬೆಂಗಳೂರಿನ ಜೊತೆಗೆ ಮೈಸೂರಿನಲ್ಲಿ ಚಿತ್ರೋತ್ಸವ ನಡೆಸುವ ಬಗ್ಗೆ ನಿಮ್ಮ ಅಭಿಪ್ರಾಯ ಏನು?

ಮೈಸೂರಿನಲ್ಲಿಯೂ ಸಿನಿಮೋತ್ಸವ ನಡೆಸಬೇಕು ಎನ್ನುವುದಕ್ಕೆ ನನ್ನ ಬೆಂಬಲ ಇದೆ. ಕೊರತೆಗಳು ಏನೇ ಇದ್ದರೂ ಬೆಂಗಳೂರು ಸಿನಿಮೋತ್ಸವ ಗುಣಮಟ್ಟ ಮತ್ತು ವಿಸ್ತಾರದ ದೃಷ್ಟಿಯಿಂದ ಸಾಕಷ್ಟು ಬೆಳೆದಿದೆ. ಬೇರೆ ಎಲ್ಲ ಸಿನಿಮೋತ್ಸವಗಳ ಸಿದ್ಧತೆಗೆ ವರ್ಷಪೂರ್ತಿ ಕೆಲಸ ಮಾಡುವ ಸಿಬ್ಬಂದಿ ಮತ್ತು ನಿರ್ದಿಷ್ಟ ಕಚೇರಿ ಇರುತ್ತದೆ. ಆದರೆ ಈ ಉತ್ಸವವನ್ನು ಕಲಾನಿರ್ದೇಶಕರು ತಮ್ಮ ಸಹೋದ್ಯೋಗಿಗಳು ಮತ್ತು ಸ್ವಯಂ ಸೇವಕರ ಸಹಾಯದಿಂದ ನಿರ್ದಿಷ್ಟ ಕಚೇರಿ, ಸಿಬ್ಬಂದಿ ಇಲ್ಲದೇ ಕೇವಲ ಮೂರು ತಿಂಗಳಲ್ಲಿ ಆಯೋಜಿಸಿದ್ದಾರೆ. ಇದು ಕಡಿಮೆ ಸಾಧನೆಯಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry