ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮಹಿಳೆಯನ್ನು ಮಂಚಕ್ಕೆ ಕರೆದ ಕೇಸ್‌ ವರ್ಕರ್‌’

Last Updated 1 ಮಾರ್ಚ್ 2018, 19:56 IST
ಅಕ್ಷರ ಗಾತ್ರ

ಬೆಂಗಳೂರು: ‘ಒಂಟಿ ಮನೆಯ ಅನುದಾನ ನೀಡಲು ಕೇಸ್‌ ವರ್ಕರ್‌ ಚಂದ್ರು ಅವರು ಮಹಿಳೆಯನ್ನು ಮಂಚಕ್ಕೆ ಕರೆಯುವ ಮೂಲಕ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ’ ಎಂದು ಪಾಲಿಕೆಯ ಲಗ್ಗೆರೆ ವಾರ್ಡ್‌ ಸದಸ್ಯೆ ಮಂಜುಳಾ ನಾರಾಯಣ ಸ್ವಾಮಿ ಆರೋಪಿಸಿದರು.

ಈ ಕುರಿತ ಆಡಿಯೊ ಹಾಗೂ ವಿಡಿಯೊವನ್ನು ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಬಿಡುಗಡೆ ಮಾಡಿದರು.

‘ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಿ ಭ್ರಷ್ಟಾಚಾರ ಹಾಗೂ ಲೈಂಗಿಕ ದೌರ್ಜನ್ಯ ಮಿತಿಮೀರಿದೆ. ಒಂಟಿ ಮನೆಗಾಗಿ ಕಚೇರಿಗೆ ಹೋಗುವ ಮಹಿಳೆಯರ ಮೇಲೆ ಅಧಿಕಾರಿಗಳು ಲೈಂಗಿಕ ದೌರ್ಜನ್ಯ ಎಸಗುತ್ತಿದ್ದಾರೆ’ ಎಂದು ಆರೋಪಿಸಿದರು.

‘ಮಹಿಳೆಯೊಬ್ಬರು ಒಂಟಿ ಮನೆಗೆ ಅರ್ಜಿ ಸಲ್ಲಿಸಿದ್ದರು. ಅವರನ್ನು ಪದೇ ಪದೇ ಅಲೆದಾಡಿಸಿದ್ದ ಚಂದ್ರು, ಬಳಿಕ ಸೆಕ್ಸ್‌ಗೆ ಬರುವಂತೆ ಪೀಡಿಸಿದ್ದರು. ಅಲ್ಲದೆ, ರಾತ್ರಿ 9 ಗಂಟೆಗೆ ಮಹಿಳೆಯ ಮನೆಗೆ ಹೋಗಿದ್ದರು. ಇದರಿಂದ ಗಾಬರಿಗೊಂಡಿದ್ದ ಅವರು, ಮನೆಯಲ್ಲಿ ವಯಸ್ಸಿಗೆ ಬಂದ ಮಕ್ಕಳಿದ್ದಾರೆ. ಏನಿದು ನಿಮ್ಮ ವರ್ತನೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು. ನಾನು ಹೇಳಿದಂತೆ ಕೇಳದೇ ಇದ್ದರೆ ಬಿಲ್‌ ನೀಡುವುದಿಲ್ಲ ಎಂದು ಚಂದ್ರು ಧಮಕಿ ಹಾಕಿದ್ದರು’ ಎಂದು ದೂರಿದರು.

‘ಮಹಿಳೆಯು ಈ ಕುರಿತು ನನ್ನ ಬಳಿ ಅಳಲು ತೋಡಿಕೊಂಡಿದ್ದರು. ಇಂತಹ ಪರಿಸ್ಥಿತಿ ಯಾವುದೇ ಹೆಣ್ಣು ಮಕ್ಕಳಿಗೆ ಬರಬಾರದು. ಈ ಕುರಿತು ಮೂರು ತಿಂಗಳ ಹಿಂದೆಯೇ ಕೌನ್ಸಿಲ್‌ ಸಭೆಯಲ್ಲಿ ಪ್ರಸ್ತಾಪ ಮಾಡಲು ಪ್ರಯತ್ನಿಸಿದ್ದೆ. ಆದರೆ, ಇದಕ್ಕೆ ಮೇಯರ್‌ ಅವಕಾಶ ನೀಡಿರಲಿಲ್ಲ’ ಎಂದು ಬೇಸರ
ವ್ಯಕ್ತಪಡಿಸಿದರು.

‘ಒಎಫ್‌ಸಿ ಅಳವಡಿಕೆ ಸಂಬಂಧ ಎಇಇ ಬಸವರಾಜ್‌ ಹಾಗೂ ಎಇ ಅಶ್ವತ್ಥ್‌ ಲಂಚ ಪಡೆದಿದ್ದಾರೆ. ಇದರಲ್ಲಿ ಜಂಟಿ ಆಯುಕ್ತರೂ ಭಾಗಿಯಾಗಿದ್ದಾರೆ. ಯಾವುದೇ ಕೆಲಸವಾಗಬೇಕಾದರೆ ₹50 ಸಾವಿರದಿಂದ ₹1 ಲಕ್ಷ ಲಂಚ ನೀಡಬೇಕು. ಇದಕ್ಕೆ ಶಾಸಕ ಮುನಿರತ್ನ ಕುಮ್ಮಕ್ಕು ನೀಡುತ್ತಿದ್ದಾರೆ’ ಎಂದು ಆರೋಪಿಸಿದರು.

‘ಈ ವಿಷಯಗಳ ಕುರಿತು ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ಅವರಿಗೆ ಮೌಖಿಕವಾಗಿ ದೂರು ನೀಡಿದ್ದೆ. ಆದರೆ, ಅವರು ಅಧಿಕಾರಿಗಳ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ದೂರಿದರು.

ಪ್ರತಿಕ್ರಿಯೆಗೆ ಮೇಯರ್‌ ಆರ್‌.ಸಂಪತ್‌ ರಾಜ್‌, ಬಸವರಾಜ್‌, ಅಶ್ವತ್ಥ್‌ ಹಾಗೂ ಚಂದ್ರು ಸಿಗಲಿಲ್ಲ.

* ಲೈಂಗಿಕ ದೌರ್ಜನ್ಯದ ವಿರುದ್ಧ ರಾಜ್ಯ ಮಹಿಳಾ ಆಯೋಗಕ್ಕೆ ದೂರು ನೀಡುತ್ತೇನೆ.

–ಮಂಜುಳಾ ನಾರಾಯಣಸ್ವಾಮಿ, ಪಾಲಿಕೆ ಸದಸ್ಯೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT