ಐದೂ ಕ್ಷೇತ್ರಗಳಲ್ಲೂ ಚುನಾವಣೆ ತಯಾರಿ

7
ಜೆಡಿಎಸ್‌ ರಾಜ್ಯ ಘಟಕದ ಉಪಾಧ್ಯಕ್ಷ ಎಸ್‌.ಎಲ್‌.ಭೋಜೇಗೌಡ ಹೇಳಿಕೆ

ಐದೂ ಕ್ಷೇತ್ರಗಳಲ್ಲೂ ಚುನಾವಣೆ ತಯಾರಿ

Published:
Updated:

ಚಿಕ್ಕಮಗಳೂರು: ಜಿಲ್ಲೆಯ ಐದೂ ವಿಧಾನಸಭಾ ಕ್ಷೇತ್ರಗಳಿಗೆ ಜೆಡಿಎಸ್‌ ಅಭ್ಯರ್ಥಿಗಳನ್ನು ಘೋಷಣೆ ಮಾಡಿದ್ದು, ಅಭ್ಯರ್ಥಿಗಳು ಚುನಾವಣೆ ತಯಾರಿ, ಪಕ್ಷ ಸಂಘಟನೆಯಲ್ಲಿ ತೊಡಗಿದ್ದಾರೆ ಎಂದು ಜೆಡಿಎಸ್‌ ರಾಜ್ಯ ಘಟಕದ ಉಪಾಧ್ಯಕ್ಷ ಎಸ್‌.ಎಲ್‌.ಭೋಜೇಗೌಡ ಇಲ್ಲಿ ಗುರುವಾರ ತಿಳಿಸಿದರು.

‘ರಾಜ್ಯದಲ್ಲಿನ ಕಾಂಗ್ರೆಸ್‌ ಸರ್ಕಾರ, ಕೇಂದ್ರದಲ್ಲಿನ ಬಿಜೆಪಿ ಸರ್ಕಾರದ ವೈಫಲ್ಯಗಳನ್ನು ಜನರಿಗೆ ತಿಳಿಸುವ ಕೆಲಸದಲ್ಲಿ ತೊಡಗಿದ್ದೇವೆ. ಸಹಕಾರ ಬ್ಯಾಂಕುಗಳಲ್ಲಿ ರೈತರು ಪಡೆದಿರುವ ₹ 50 ಸಾವಿರವರೆಗಿನ ಸಾಲಮನ್ನಾ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದರು. ಒಟ್ಟು ₹ 8,261 ಕೋಟಿ ಸಾಲಮನ್ನಾವಾಗಲಿದೆ ಎಂದು ಹೇಳಿದ್ದರು. ಸಾಲಮನ್ನಾ ಘೋಷಣೆ ಮಾಡಿದ್ದಾರೆ ಅಷ್ಟೇ ಅದು ರೈತರಿಗೆ ತಲುಪಿಲ್ಲ. ಬಿಜೆಪಿ ಮತ್ತು ಕಾಂಗ್ರೆಸ್‌ ಎರಡೂ ರಾಜಕೀಯ ಪಕ್ಷಗಳು ಸಮಾವೇಶಗಳಲ್ಲಿ ಪರಸ್ಪರ ಆರೋಪಪ್ರತ್ಯಾರೋಪದಲ್ಲಿ ತೊಡಗಿವೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ದೂಷಿಸಿದರು.

ಜಿಲ್ಲೆಯಲ್ಲಿ ಈ ವರ್ಷವೂ ಬರಗಾಲ ಎದುರಾಗಿದೆ. ಮಲೆನಾಡು ಭಾಗದಲ್ಲಿಯೂ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ. ಕುಡಿಯು ನೀರಿನ ನಿರ್ವಹಣೆಗೆ ಸರ್ಕಾರ ಅನುದಾನ ಒದಗಿಸಬೇಕು ಎಂದರು.

ಕೇಂದ್ರ ಸರ್ಕಾರದಿಂದ ರೈತರಿಗೆ ಅನುಕೂಲವಾಗಿಲ್ಲ. ಫಸಲ್‌ ಭಿಮಾ ಯೋಜನೆ ರೈತರಿಗೆ ಅನುಕೂಲವಾಗಿಲ್ಲ. ಇದೊಂದು ವಂಚಕ ಯೋಜನೆ. ರಾಜ್ಯದಲ್ಲಿ ಜೆಡಿಎಸ್‌ ಅಧಿಕಾರಕ್ಕೆ ಬಂದರೆ 24 ಗಂಟೆಗಳಲ್ಲಿ ರೈತರ ಸಂಪೂರ್ಣ ಸಾಲ ಮನ್ನಾ ಮಾಡುವುದಾಗಿ ಸವಾಲು ಸ್ವೀಕರಿಸಲಾಗಿದೆ ಎಂದರು.

ಜಿಲ್ಲೆಯ ಅಭ್ಯರ್ಥಿಗಳ ಘೋಷಣೆಗೆ ಸಂಬಂಧಿಸಿದಂತೆ ಯಾವುದೇ ಗೊಂದಲ ಇಲ್ಲ. ಮುಖಂಡರೊಂದಿಗೆ ಚರ್ಚಿಸಿಯೇ ಅಭ್ಯರ್ಥಿಗಳನ್ನು ಅಂತಿಮಗೊಳಿಸಲಾಗಿದೆ. ಎಸ್‌.ಎಲ್‌.ಧರ್ಮೇಗೌಡ ಅವರು ತರೀಕೆರೆ ಕ್ಷೇತ್ರ, ರಂಜನ್‌ ಅಜಿತ್‌ಕುಮಾರ್‌ ಅವರು ಮೂಡಿಗೆರೆ ಕ್ಷೇತ್ರದ ಉಸ್ತುವಾರಿ ನಿರ್ವಹಿಸುತ್ತಿದ್ದಾರೆ ಎಂದರು.

ಬಿ.ಎಚ್‌.ಹರೀಶ್‌ ಅವರನ್ನು ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಘೋಷಿಸಿರುವುದಕ್ಕೆ ಸಂಬಂಧಿಸಿದಂತೆ ಯಾವುದೇ ಗೊಂದಲ ಇಲ್ಲ. ಅವರು ರೈತರೊಂದಿಗೆ ಉತ್ತಮ ಒಡನಾಡ ಹೊಂದಿದ್ದಾರೆ. ರೈತರ ನಾಡಿಮಿಡಿತ ಅವರಿಗೆ ಗೊತ್ತಿದೆ. ಪಕ್ಷದ ಅಭ್ಯರ್ಥಿಯನ್ನು ಎಲ್ಲರೂ ಬೆಂಬಲಿಸಬೇಕು ಎಂದು ಕೋರಿದರು.

ಜೆಡಿಎಸ್‌ ಮುಖಂಡ ಎಚ್‌.ಎಚ್‌.ದೇವರಾಜ್‌ ಮಾತನಾಡಿ, ‘ಜಿಲ್ಲೆಯ ಮರಳು ಸಾಗಣೆ ಪರವಾನಗಿಗಳ (ಮಿನರಲ್‌ ಡಿಸ್‌ಪ್ಯಾಚ್‌ ಪರ್ಮಿಟ್‌–ಎಂಡಿಪಿ) ಅಕ್ರಮದ ಬಗ್ಗೆ ಸಮಗ್ರ ತನಿಖೆ ನಡೆಸಬೇಕು. ಈ ಮಾಫಿಯಾದ ಬಗ್ಗೆ ಕ್ಷೇತ್ರದ ಶಾಸಕರು ಮಾತನಾಡಿಲ್ಲ. ಮಾಫಿಯಾದಲ್ಲಿ ರಾಜಕಾರಣಿಗಳ ಕೈವಾಡ ಇರುವ ಸಾಧ್ಯತೆ ಇದೆ. ತನಿಖೆ ಮಾಡಿ ಎಲ್ಲವನ್ನು ಬಯಲಿಗೆಳೆಯಬೇಕು. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು’ ಎಂದು ಹೇಳಿದರು.

‘ಮೂಡಿಗೆರೆಯ ಜೆಡಿಎಸ್‌ ವಿಕಾಸಪರ್ವ ಸಮಾವೇಶದಲ್ಲಿ ಎಚ್‌.ಡಿ.ಕುಮಾರಸ್ವಾಮಿ ಆಡಿರುವ ಮಾತನ್ನು ಪ್ರಮಾದ ಎಂಬ ರೀತಿಯಲ್ಲಿ ಬಿಂಬಿಸುತ್ತಿರುವುದು ಅತಿರೇಕ. ಭಿಕ್ಷೆ ಬೇಡುವುದರಿಂದ ಉದ್ಯೋಗ ಸಿಗಲ್ಲ, ಜೆಡಿಎಸ್‌ ಆಡಳಿತಕ್ಕೆ ಬಂದರೆ ಉದ್ಯೋಗ ನೀಡುತ್ತೇನೆ ಎಂದು ಯುವಕರಿಗೆ ಕುಮಾರಸ್ವಾಮಿ ಹೇಳಿದ್ದಾರೆ. ನಮ್ಮ ನಾಯಕರ ಬಗ್ಗೆ ವೈಯುಕ್ತಿಕವಾಗಿ ನಿಂದಿಸಿದರೆ, ಹಗುರವಾಗಿ ಮಾತನಾಡಿದರೆ ಪರಿಣಾಮ ಎದುರಿಸಬೇಕಾಗುತ್ತದೆ’ ಎಂದು ಎಚ್ಚರಿಸಿದರು.

ಜೆಡಿಎಸ್‌ ಮುಖಂಡರಾದ ಎಂ.ಡಿ.ರಮೇಶ್‌, ಹೊಲದಗದ್ದೆ ಗಿರೀಶ್‌, ಎಸ್‌.ಎಲ್‌.ಧರ್ಮೇಗೌಡ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry