ಇಳುವರಿ ಹೆಚ್ಚಳ: ದ್ರಾಕ್ಷಿ ಬೆಳೆಗಾರರ ತಳಮಳ

ಶುಕ್ರವಾರ, ಮಾರ್ಚ್ 22, 2019
28 °C
ಜಿಲ್ಲೆಯಲ್ಲಿ ಸಂಸ್ಕರಣಾ ಘಟಕಗಳ ಅಭಾವ: ಲಾಭ ಮಧ್ಯವರ್ತಿಗಳ ಪಾಲು

ಇಳುವರಿ ಹೆಚ್ಚಳ: ದ್ರಾಕ್ಷಿ ಬೆಳೆಗಾರರ ತಳಮಳ

Published:
Updated:
ಇಳುವರಿ ಹೆಚ್ಚಳ: ದ್ರಾಕ್ಷಿ ಬೆಳೆಗಾರರ ತಳಮಳ

ಕೊಪ್ಪಳ: ಕಳೆದ ವರ್ಷದ ಫೆಬ್ರುವರಿ ತಿಂಗಳ ಮೊದಲ ವಾರ ದ್ರಾಕ್ಷಿ ಹಣ್ಣುಗಳು ನಳನಳಿಸುತ್ತಿದ್ದವು. ಕಟಾವು ಪೂರ್ಣಗೊಂಡು ಮಾರುಕಟ್ಟೆಗೆ ಲಗ್ಗೆ ಹಾಕಿದ್ದೆವು. ಆದರೆ, ಪ್ರಸಕ್ತ ವರ್ಷ ಶೀತಗಾಳಿ, ಪ್ರಖರ ಬಿಸಿಲು ಇಲ್ಲದೆ ಇರುವುದು ಹೊಡೆತ ನೀಡಿದೆ.

ಇದು ತಾಲ್ಲೂಕಿನ ಕಾಟ್ರಾಳ್ಳಿಯ ಮಾದನೂರು ಫಾರ್ಮ್‌ಹೌಸ್‌ನ ಮ್ಯಾನೇಜರ್ ಹನುಮಂತ ಕರೆಕುರಿ ದ್ರಾಕ್ಷಿಯ ಬೆಳೆಯ ಲಾಭ–ನಷ್ಟದ ಲೆಕ್ಕಾಚಾರದ ನಡುವೆಯೇ ಉತ್ತಮ ಬೆಲೆ ಸಿಗುತ್ತಿಲ್ಲ ಎಂಬ ನೋವು ವ್ಯಕ್ತಪಡಿಸಿದರು.

ಅವರ 2.5 ಎಕರೆ ತೋಟದಲ್ಲಿ ದ್ರಾಕ್ಷಿ ಹಣ್ಣುಗಳು ನಳನಳಿಸುತ್ತಿವೆ. ರೋಗದಿಂದ ಕೆಲವು ಬಳ್ಳಿಗಳಲ್ಲಿ ಹಣ್ಣುಗಳು ಒಣಗಿವೆ. ಮತ್ತಷ್ಟು ಗಾಳಿಗೆ ಧರೆಗೆ ಬಿದ್ದಿವೆ. ಉಳಿದ ಹಣ್ಣುಗಳನ್ನು ಕಟಾವು ತ್ವರಿತವಾಗಿ ಮಾರುಕಟ್ಟೆಗೆ ಸಾಗಣೆ ಮಾಡುವ ತವಕದಲ್ಲಿ ಅವರಿದ್ದರು.

‘ದ್ರಾಕ್ಷಿಯ ಇಳುವರಿ ಹೆಚ್ಚಾಗಿದೆ. ಖರೀದಿದಾರರ ಕೊರತೆ ಇದೆ. ಕೊಪ್ಪಳದಲ್ಲಿ ಸಾಕಷ್ಟು ಹಣ್ಣು ಮಾರಾಟಕ್ಕೆ ಬಂದಿದೆ. ಕೆ.ಜಿ.ಗೆ ₹40ರ ಮೇಲಿದೆ. ಆದರೆ, ಅಷ್ಟು ಲಾಭವೂ ನಮ್ಮ ಕೈಸೇರುವುದಿಲ್ಲ’ ಎಂಬ ನೋವು ಅವರದು.

ಇದು ಕಾಟ್ರಾಳ್ಳಿಯ ಹನುಮಂತ ಅವರೊಬ್ಬರ ಮಾತಲ್ಲ. ಹಿರೇಸಿಂಧೋಗಿ, ಮಂಗಳಾಪುರ, ದದೇಗಲ್‌ ಸುತ್ತಲಿನ ತೋಟಗಳ ಬೆಳೆಗಾರರ ಆತಂಕ. ಈ ವರ್ಷ ಉತ್ತಮ ಮಳೆಯಾಗಿದೆ. ಅಂತರ್ಜಲ ಮಟ್ಟವೂ ಹೆಚ್ಚಾಗಿದೆ. ಇದರಿಂದ ತರಕಾರಿ ಹಾಗೂ ಹಣ್ಣಿನ ಫಸಲು ಭರ್ಜರಿ ಬಂದಿದೆ. ರೋಗದ ಕಾಟ, ಮಾರುಕಟ್ಟೆ ಸಮಸ್ಯೆ ಹಾಗೂ ಉಪ ಉತ್ಪನ್ನಗಳ ತಯಾರಿಕೆಯಲ್ಲಿ ರೈತರು ಹಿಂದೆ ಬಿದ್ದಿದ್ದಾರೆ.

ಜೋಳ, ಶೇಂಗಾ, ಸಜ್ಜೆ ಹಾಗೂ ಸಿರಿಧಾನ್ಯಗಳಿಗೆ ಪ್ರಸಿದ್ಧವಾಗಿದ್ದ ಜಿಲ್ಲೆಯಲ್ಲಿ ಇತ್ತೀಚಿನ ವರ್ಷಗಳಿಂದ ತೋಟಗಾರಿಕಾ ಬೆಳೆಗಳಿಗೆ ಆದ್ಯತೆ ಕೊಡಲಾಗಿದೆ. ದ್ರಾಕ್ಷಿ, ದಾಳಿಂಬೆ, ಬಾಳೆ, ಕಲ್ಲಂಗಡಿ, ಪಪ್ಪಾಯಿ ಕೃಷಿಯತ್ತ ರೈತರು ಚಿತ್ತ ಹರಿಸುತ್ತಿದ್ದಾರೆ. ಜಿಲ್ಲೆಯ ಹವಾಗುಣವೂ ಇದಕ್ಕೆ ಪೂರಕವಾಗಿದೆ.

'ಯಲಬುರ್ಗಾ, ಕುಷ್ಟಗಿ ಹಾಗೂ ಕೊಪ್ಪಳ ತಾಲ್ಲೂಕುಗಳಲ್ಲಿ ಹಣ್ಣು ಬೆಳೆಗಾರರ ಸಂಖ್ಯೆ ವೃದ್ಧಿಸಿದೆ' ಎಂದು ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ಕೃಷ್ಣ ಉಕ್ಕುಂದ ಹೇಳಿದರು.

ಪ್ರಸಕ್ತ ವರ್ಷ 800 ಹೆಕ್ಟೇರ್‌ ಪ್ರದೇಶದಲ್ಲಿ ದ್ರಾಕ್ಷಿ ಬೆಳೆಯಲಾಗಿದೆ. ಸೋನಾಕ್ ದ್ರಾಕ್ಷಿ ತಳಿ ರೈತರ ಕೈಹಿಡಿದಿದೆ. ಮಾಣಿಕ್‌ ಚಮನ್, ಶರದ್‌ ಸೀಡಲೆಸ್‌, ಕೃಷ್ಣಾ ಶರದ್‌ ಫ್ಲೇಮ್‌ ತಳಿಯೂ ಅಲ್ಲಿಲ್ಲಿ ಕಾಣಬಹುದು. ವೈನ್‌ ತಯಾರಿಕೆಯ ತಳಿಗಳ ಕಡೆಗೂ ತೋಟಗಾರಿಕೆ ಇಲಾಖೆ ಗಮನಹರಿಸಿದೆ.

ಪಕ್ಷಿ ನಿರೋಧಕ ಬಲೆಗಳ ವಿತರಣೆ, ಯಾಂತ್ರೀಕರಣ, ಪಾಲಿಹೌಸ್‌ ನಿರ್ಮಾಣ, ಪ್ರಧಾನ ಮಂತ್ರಿ ಸಿಂಚಾಯ್ ಯೋಜನೆಯಲ್ಲಿ ಹನಿ ನೀರಾವರಿ ಅಳವಡಿಕೆಗೆ ಪ್ರೋತ್ಸಾಹಧನ ಹಾಗೂ ಒಣ ದ್ರಾಕ್ಷಿ ಶೆಡ್‌ ನಿರ್ಮಾಣಕ್ಕೆ ತೋಟಗಾರಿಕೆ ಆರ್ಥಿಕ ನೆರವು ನೀಡಿದೆ.

ರಾಯಚೂರು ಕೃಷಿ ವಿಶ್ವವಿದ್ಯಾಲಯದ ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳು ದ್ರಾಕ್ಷಿ ತೋಟಗಳಿಗೆ ತೆರಳಿ ಬೆಳೆ ಪರಿಶೀಲನೆ ಹಾಗೂ ಮಾರ್ಗದರ್ಶನ ಮಾಡಿದ್ದಾರೆ. ಈ ಎಲ್ಲ ಪ್ರಯತ್ನಗಳಿಂದ ದ್ರಾಕ್ಷಿ ಬೆಳೆಯುವ ಜಿಲ್ಲೆಗಳ ಪಟ್ಟಿಯಲ್ಲಿ ಕೊಪ್ಪಳವೂ ಸ್ಥಾನ ಪಡೆದುಕೊಂಡಿದೆ.

‘ಡಾನ್ ಮತ್ತು ಬೂದು ರೋಗದಿಂದ ಬೆಳೆ ಉಳಿಸಿಕೊಳ್ಳುವುದು ಕಷ್ಟವಾಗಿದೆ. ಕೊಟ್ಟಿಗೆ ಗೊಬ್ಬರದ ಜತೆಗೆ ರಾಸಾಯನಿಕ ಗೊಬ್ಬರದ ಬಳಕೆಯೂ ಅನಿವಾರ್ಯ. ಇದರಿಂದ ಉತ್ಪಾದನಾ ವೆಚ್ಚ ಏರಿಕೆ ಆಗುತ್ತಿದೆ’ ಎನ್ನುತ್ತಾರೆ ಹನುನಂತ ಕರೆಕುರಿ.

‘ರೈತರು ಮಧ್ಯೆ ವರ್ತಿಗಳಿಂದ ಶೋಷಣೆಗೆ ಒಳಗಾಗುತ್ತಿದ್ದಾರೆ. ಮಾರುಕಟ್ಟೆಗೆ ಬಂದು ಮಾರಾಟ ಮಾಡಲು ಅನುಕೂಲಗಳಿಲ್ಲ. ಸಂಸ್ಕರಣೆ ಹಾಗೂ ಉಪ ಉತ್ಪನ್ನಗಳಾದ ದ್ರಾಕ್ಷಾ ರಸ, ಒಣದ್ರಾಕ್ಷಿ ಸಂಸ್ಕರಣೆ ಬಗ್ಗೆ ಮಾರ್ಗದರ್ಶನ ಮಾಡಬೇಕಾಗಿದೆ’ ಎನ್ನುತ್ತಾರೆ ಪ್ರಗತಿಪರ ರೈತರು.

***

‘ಒಣದ್ರಾಕ್ಷಿ ಘಟಕ ಸ್ಥಾಪನೆಗೆ ಉತ್ತೇಜನ’

‘ಜಿಲ್ಲೆಯಲ್ಲಿ ಎರಡು, ಮೂರು ತಳಿಯ ದ್ರಾಕ್ಷಿ ಮಾತ್ರ ರೈತರು ಬೆಳೆಯುತ್ತಿದ್ದಾರೆ. 30ಕ್ಕೂ ಹೆಚ್ಚು ದ್ರಾಕ್ಷಿ ತಳಿಗಳಿವೆ. ಈ ವಿಷಯದಲ್ಲಿ ಶೇ 50ರಷ್ಟು ಬೆಳೆಗಾರರಿಗೆ ತಾಂತ್ರಿಕ ಮಾಹಿತಿಯ ಕೊರತೆ ಇದೆ’ ಎನ್ನುತ್ತಾರೆ ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ಕೃಷ್ಣ ಉಕ್ಕುಂದ.

‘ಕೆಲವರು ಒಣದ್ರಾಕ್ಷಿ ಸಂಸ್ಕರಣಾ ಘಟಕ ಸ್ಥಾಪಿಸಿದ್ದಾರೆ. ಆರು ರೈತರಿಗೆ ಇಲಾಖೆಯೇ ಆರ್ಥಿಕ ನೆರವು ನೀಡಿದೆ. ಆಸಕ್ತ ರೈತರು ಮುಂದೆ ಬಂದರೆ ಘಟಕ ಸ್ಥಾಪನೆಗೆ ಇಲಾಖೆಯಿಂದ ಪ್ರೋತ್ಸಾಹಧನ ನೀಡಲಾಗುವುದು. ಮುಂದಿನ ವರ್ಷ ಪುಣೆಯ ದ್ರಾಕ್ಷಿ ಸಂಶೋಧನಾ ಕೇಂದ್ರದ ನೆರವಿನಿಂದ ಜಿಲ್ಲೆಯ ರೈತರಿಗೆ ತರಬೇತಿ, ಮಾರ್ಗದರ್ಶನ ನೀಡಲಾಗುವುದು’ ಎನ್ನುತ್ತಾರೆ ಅವರು.

**

ಬೆಳೆಗಾರರಿಗೆ ಅರಿವು ಮೂಡಿಸಲು ಮೊದಲ ಬಾರಿಗೆ ದ್ರಾಕ್ಷಿ ಮೇಳ ಹಮ್ಮಿಕೊಂಡಿದ್ದೆವು. ಕೆ.ಜಿ.ಗೆ ₹70ರ ವರೆಗೆ ದ್ರಾಕ್ಷಿ ಹಣ್ಣುಗಳ ಮಾರಾಟವಾದವು.

ಕೃಷ್ಣ ಉಕ್ಕುಂದ, ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry