ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಇಒ ವಿರುದ್ಧ ಅಹೋರಾತ್ರಿ ಪ್ರತಿಭಟನೆ

ಸಾಮಾನ್ಯ ಸಭೆ ಕರೆಯಲು ವಿಫಲ, ಅಮಾನತಿಗೆ ಒತ್ತಾಯ, ಕಾವೇರಿ ಸಭಾಂಗಣದಲ್ಲಿ ಊಟ
Last Updated 2 ಮಾರ್ಚ್ 2018, 11:23 IST
ಅಕ್ಷರ ಗಾತ್ರ

ಮಂಡ್ಯ: ಜಿಲ್ಲಾ ಪಂಚಾಯಿತಿ ಸದಸ್ಯರ ಜೊತೆ ಸರ್ವಾಧಿಕಾರಿಯಂತೆ ವರ್ತಿಸುತ್ತಿರುವ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಶರತ್‌ ಅವರನ್ನು ಅಮಾನತು ಮಾಡಬೇಕು ಎಂದು ಒತ್ತಾಯಿಸಿ ಸದಸ್ಯರು ಜಿಲ್ಲಾ ಪಂಚಾಯಿತಿ ಕಚೇರಿ ಎದುರು ಗುರುವಾರ ಅಹೋರಾತ್ರಿ ಪ್ರತಿಭಟನೆ ನಡೆಸಿದರು.

ಮಾರ್ಚ್‌ ಬರುತ್ತಿದ್ದಂತೆ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗುತ್ತದೆ. ಹಲವೆಡೆ ಟ್ಯಾಂಕರ್‌ ಮೂಲಕ ನೀರು ಪೂರೈಸಲು ನಿರ್ಧಾರ ಕೈಗೊಳ್ಳಬೇಕಾಗಿದೆ. ಟಾಸ್ಕ್‌ ಫೋರ್ಸ್‌ ಸಮಿತಿಯ ಮೂಲಕ ಅನುದಾನ ಪಡೆಯಲು ವಿರೋಧ ಪಕ್ಷಗಳ ಸದಸ್ಯರಿಗೆ ಶಾಸಕರು ಅನುಮತಿ ನೀಡುತ್ತಿಲ್ಲ. ಕುಡಿಯುವ ನೀರಿನ ಸಮಸ್ಯೆಯ ಬಗ್ಗೆ ಸರ್ಕಾರಕ್ಕೆ ಪತ್ರ ಬರೆಯುವ ಬಗ್ಗೆ ಸಾಮಾನ್ಯ ಸಭೆಯಲ್ಲಿ ನಿರ್ಧಾರ ಕೈಗೊಳ್ಳಬೇಕಾಗಿದೆ. ಆದರೆ ಸಿಇಒ ಬಿ.ಶರತ್‌ ಸದಸ್ಯರ ಮಾತಿಗೆ ಕಿಮ್ಮತ್ತು ನೀಡದೆ ಏಕಪಕ್ಷೀಯವಾಗಿ ಮಾತನಾಡುತ್ತಿದ್ದಾರೆ. ಸದಸ್ಯರ ಜೊತೆ ಮಾತನಾಡಲು ನಿರಾಕರಿಸುತ್ತಿರುವ ಅವರು ಉದ್ದಟತನದಿಂದ ವರ್ತಿಸುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಫೆ.21ರಂದು ಸಾಮಾನ್ಯ ಸಭೆ ನಡೆಸಲು ಪ್ರಭಾರ ಅಧ್ಯಕ್ಷೆ ಗಾಯತ್ರಿ ರೇವಣ್ಣ ಅವರು ಎಲ್ಲಾ ಸದಸ್ಯರು ಹಾಗೂ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಆದರೆ ಸಿಇಒ ಅದಕ್ಕೆ ಟಿಪ್ಪಣಿ ಬರೆದು ಅಧಿಕಾರಿಗಳು ಚುನಾವಣೆ ಕೆಲಸದಲ್ಲಿ ತೊಡಗಿದ್ದಾರೆ. ಈ ಸಂದರ್ಭದಲ್ಲಿ ಸಾಮಾನ್ಯ ಸಭೆಗಿಂತಲೂ ಚುನಾವಣೆಯ ಕೆಲಸವೇ ಮುಖ್ಯ ಎಂಬ ಅರ್ಥದಲ್ಲಿ ಟಿಪ್ಪಣಿ ಬರೆದಿದ್ದಾರೆ. ಅಧ್ಯಕ್ಷರ ಸೂಚನೆಗೆ ಟಿಪ್ಪಣಿ ಬರೆಯುವ ಅಧಿಕಾರಿ ಸಿಇಒಗೆ ಇಲ್ಲ. ಅಲ್ಲದೆ ಸಾಮಾನ್ಯ ಜನರು ಕುಡಿಯುವ ನೀರಿನ ಸಮಸ್ಯೆಯಲ್ಲಿ ಇದ್ದಾಗ ಒಂದೆರಡು ಗಂಟೆ ಕಾಲ ಅಧಿಕಾರಿಗಳು ಸಾಮಾನ್ಯ ಸಭೆಯಲ್ಲಿ ಪಾಲ್ಗೊಂಡರೆ ಯಾವ ಸಮಸ್ಯೆಯೂ ಆಗುವುದಿಲ್ಲ. ಜೊತೆಗೆ ಎಲ್ಲರೂ ಚುನಾವಣೆ ಕರ್ತವ್ಯಕ್ಕೆ ನಿಯೋಜನೆಗೊಂಡಲ್ಲ. ಬಿ.ಶರತ್‌ ಉದ್ದೇಶಪೂರ್ವಕವಾಗಿ ನೆಪ ಹೇಳುತ್ತಾ ಬಂದಿದ್ದಾರೆ ಎಂದು ಆರೋಪಿಸಿದರು.

‘ಬಿ.ಶರತ್‌ ಅವರು ಮಹಿಳಾ ಸದಸ್ಯರಿಗೆ ಗೌರವ ನೀಡುತ್ತಿಲ್ಲ. ತಮ್ಮ ಕೊಠಡಿಗೆ ಯಾವ ಸದಸ್ಯರನ್ನೂ ಸೇರಿಸುತ್ತಿಲ್ಲ. ಹೋದರೆ ಸದಸ್ಯರ ಜೊತೆ ಮಾತನಾಡುವುದಿಲ್ಲ. ಅಧ್ಯಕ್ಷರ ಜೊತೆ ಮಾತ್ರ ಮಾತನಾಡುತ್ತೇನೆ ಎಂದು ಹೇಳುತ್ತಿದ್ದಾರೆ. ಮಹಿಳಾ ಸದಸ್ಯರೊಬ್ಬರು ಈಚೆಗೆ ಸಮಸ್ಯೆ ಹೇಳಿಕೊಳ್ಳಲು ಹೋದಾಗ, ನಿಮ್ಮ ತರ್ಲೆ ವಿಚಾರವನ್ನು ನಾನು ಕೇಳಿಸಿಕೊಳ್ಳುವುದಿಲ್ಲ ಎಂದು ಅನುಚಿತವಾಗಿ ವರ್ತನೆ ಮಾಡಿದ್ದಾರೆ. ಜನರ ಸಮಸ್ಯೆಗಳು ಇವರಿಗೆ ತರ್ಲೆ ವಿಚಾರವಾಗಿವೆ. ಇಂತಹ ಸಿಇಒ ಮಂಡ್ಯಕ್ಕೆ ಬೇಕಾಗಿಲ್ಲ. ಕೂಡಲೇ ಇವರನ್ನು ಸರ್ಕಾರ ಅಮಾನತು ಮಾಡಬೇಕು’ ಎಂದು ಜಿಲ್ಲಾ ಪಂಚಾಯಿತಿ ವಿರೋಧ ಪಕ್ಷದ ನಾಯ ಹನುಮಂತು ಆಕ್ರೋಶ ವ್ಯಕ್ತಪಡಿಸಿದರು.

‘ಅಧಿಕಾರಿಗಳು ಹಾಗೂ ಸದಸ್ಯರು ಸಂಯಮದಿಂದ ನಡೆದುಕೊಂಡರೆ ಜಿಲ್ಲಾ ಪಂಚಾಯಿತಿಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು. ಅಧಿಕಾರ ವಿಕೇಂದ್ರೀಕರಣ ವ್ಯವಸ್ಥೆಯಲ್ಲಿ ಎಲ್ಲಾ ಸದಸ್ಯರಿಗೂ ಅಧಿಕಾರ ಇದೆ. ಅಧಿಕಾರಿಗಳು ಸದಸ್ಯರಿಗೆ ಇರುವ ಸ್ಥಾನವನ್ನು ಗುರುತಿಸಿ ಗೌರವ ಕೊಡಬೇಕು. ಆದರೆ ನಮ್ಮ ಸಿಇಒ ಇದಕ್ಕೆ ವಿರುದ್ಧವಾಗಿದ್ದಾರೆ. ಹೀಗಾಗಿ ಇವರನ್ನು ವರ್ಗಾವಣೆ ಮಾಡಬೇಕು’ ಎಂದು ಒತ್ತಾಯಿಸಿದರು.

ಸದಸ್ಯರು ಮಧ್ಯಾಹ್ನ ಜಿಲ್ಲಾ ಪಂಚಾಯಿತಿ ಆವರಣದಲ್ಲೇ ಊಟ ಮಾಡಿ ಪ್ರತಿಭಟನೆ ಮುಂದುವರಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ಎಂ.ಕೃಷ್ಣಪ್ಪ, ಜಿಲ್ಲಾಧಿಕಾರಿ ಎನ್‌.ಮಂಜುಶ್ರೀ ಸ್ಥಳಕ್ಕೆ ಬಂದು ಸಮಸ್ಯೆ ಬಗೆಹರಿಸುವವರೆಗೆ ಪ್ರತಿಭಟನೆಯನ್ನು ಕೈಬಿಡುವುದಿಲ್ಲ ಎಂದು ಪಟ್ಟು ಹಿಡಿದರು. ಕಚೇರಿ ಆವರಣದಲ್ಲೇ ರಾತ್ರಿ ಊಟ ಮಾಡಿದ ಸದಸ್ಯರು ಹಾಸಿಗೆ, ದಿಂಬು ತಂದು ಕಾವೇರಿ ಸಭಾಂಗಣದಲ್ಲಿ ಮಲಗಿ ಪ್ರತಿಭಟನೆ ಮುಂದುವರಿಸಿದ್ದಾರೆ.

ಪ್ರಭಾರ ಅಧ್ಯಕ್ಷೆ ಗಾಯತ್ರಿ ರೇವಣ್ಣ, ಸದಸ್ಯರಾದ ಬಿ.ಎಲ್‌.ದೇವರಾಜು, ಸುಷ್ಮಾ, ಸುಜಾತಾ ಸುಂದರಪ್ಪ, ಜಯಕಾಂತ್‌, ಅಶೋಕ್‌, ಕಾವ್ಯಾ ಶಿವಕುಮಾರ್‌ ಹಾಜರಿದ್ದರು.
***
ಸಾಮಾನ್ಯ ಸಭೆಗೆ ವಿರುದ್ಧ ಇಲ್ಲ: ಸಿಇಒ

‘ನಾನು ಸಾಮಾನ್ಯ ಸಭೆಗೆ ಇಲ್ಲ. ಆದರೆ ಸಾಮಾನ್ಯ ಸಭೆ ಕರೆಯುವುದಕ್ಕೂ ಮೊದಲು ಸರ್ಕಾರಿ ನಿಯಮದಂತೆ ಸ್ಥಾಯಿ ಸಮಿತಿ ಸಭೆ ಕರೆಯಬೇಕು. ಅದಕ್ಕೆ ಸಮಯ ಕೊಡದೆ ವಿಶೇಷ ಸಾಮಾನ್ಯ ಸಭೆ ಕರೆಯಲು ಮನವಿ ಕೊಟ್ಟಿದ್ದಾರೆ. ಆದರೆ ವಿಶೇಷ ಸಾಮಾನ್ಯ ಸಭೆ ಕರೆಯಲು ಕಾನೂನಿನಲ್ಲಿ ಅವಕಾಶ ಇಲ್ಲ. ಕುಡಿಯುವ ನೀರಿನ ಸಮಸ್ಯೆಯ ಬಗ್ಗೆ ಶಾಸಕರು ಅಧ್ಯಕ್ಷರಾಗಿರುವ ಟಾಸ್ಟ್‌ ಫೋರ್ಸ್‌ ಸಮಿತಿಯಿಂದ ಹಣ ಪಡೆಯಬಹುದು. ಅಲ್ಲದೆ ಗ್ರಾಮ ಪಂಚಾಯಿತಿಯ 14ನೇ ಹಣಕಾಸು ಯೋಜನೆಯಿಂದಲೂ ಕುಡಿಯುವ ನೀರಿಗೆ ಅನುದಾನ ಪಡೆಯಬಹುದು’ ಎಂದು ಸಿಇಒ ಪ್ರತಿಕ್ರಿಯೆ ನೀಡಿದರು.

‘ಯಾವ ಮಹಿಳಾ ಸದಸ್ಯರ ವಿರುದ್ಧವೂ ನಾನು ಅಗೌರವವಾಗಿ ನೋಡಿಕೊಂಡಿಲ್ಲ. ಡಿ.ಗ್ರೂಪ್‌ನಲ್ಲಿ ಕೆಲಸ ಮಾಡುವ ಮಹಿಳೆಯಿಂದ ಎಲ್ಲರನ್ನೂ ನಾನು ಗೌರವದಿಂದ ಕಾಣುತ್ತೇನೆ. ಆದರೆ ಸದಸ್ಯರು ಇಲ್ಲಸಲ್ಲದ ಆರೋಪ ಮಾಡುತ್ತಿರುವುದು ಸರಿಯಲ್ಲ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT