ಓದುವ ಸುಖಕ್ಕೆ ವೃದ್ಧಾಪ್ಯವಿಲ್ಲ

ಮಂಗಳವಾರ, ಮಾರ್ಚ್ 26, 2019
22 °C

ಓದುವ ಸುಖಕ್ಕೆ ವೃದ್ಧಾಪ್ಯವಿಲ್ಲ

Published:
Updated:
ಓದುವ ಸುಖಕ್ಕೆ ವೃದ್ಧಾಪ್ಯವಿಲ್ಲ

* ಭುವನೇಶ್ವರಿ ಹೆಗಡೆ

ಕೆಲವೇ ದಶಕಗಳ ಹಿಂದಿನ ಮಾತು. ಯಾರ ಮನೆಗಳಲ್ಲೂ ಟಿವಿ ಎಂಬ ಮಾಯಾಪೆಟ್ಟಿಗೆ ಅವತರಿಸಿರಲಿಲ್ಲ. ಸಂಜೆ ಮನೆಯ ಹಿರಿಯರೆಲ್ಲಾ ಒಂದೆಡೆ ಸೇರಿ ಮಕ್ಕಳಿಗೆ ಮಗ್ಗಿ ಬಾಯಿಪಾಠ ಮಾಡಿಸಿ ಭಜನೆ ಹೇಳುತ್ತ ಮನೆಗೆಲಸ ಮುಗಿಸಿ ಹರಟೆ ಹೊಡೆಯುತ್ತಿದ್ದರು.

ಹಳ್ಳಿಗಳಲ್ಲಿ ಎಲೆ–ಅಡಿಕೆ ಬಟ್ಟಲು  ಜಗುಲಿಯಲ್ಲಿ ಪ್ರತಿಷ್ಠಾಪಿಸಲ್ಪಟ್ಟು ಅದರ ಸುತ್ತ ಮಾತುಕತೆ, ನಗು–ಹರಟೆ ಎಲ್ಲವೂ ನಡೆಯುತ್ತಿತ್ತು. ಹೆಚ್ಚಿನವು ಕೂಡು ಕುಟುಂಬಗಳೇ ಆಗಿದ್ದರು; ಒಬ್ಬಳು ಬಾಣಂತಿ, ಇನ್ನೊಬ್ಬಳು ಬಸುರಿ; ಅವರನ್ನು ನೋಡಲು ಒಬ್ಬ ಅಜ್ಜಿ – ಹೀಗೆ ಕುಟುಂಬಗಳು ನೆಮ್ಮದಿಯ ತಾಣಗಳಾಗಿದ್ದವು. ಕೌಟುಂಬಿಕ ಲಾಲನೆ–ಪಾಲನೆಗಳಲ್ಲಿ  ಚೂರು ಕೊರತೆ ಕಾಣದ ಮಕ್ಕಳು ಪರಾಕ್ರಮಶಾಲಿಗಳಾಗಿ ಧೈರ್ಯದಿಂದ ಜನರನ್ನೂ ಜೀವನವನ್ನೂ ಎದುರಿಸುತ್ತ ದೈಹಿಕವಾಗಿ, ಮಾನಸಿಕವಾಗಿ ಸ್ವಸ್ಥರಾಗಿದ್ದು ಸ್ವಸ್ಥಸಮಾಜವೊಂದರ ಸದಸ್ಯರಾಗಿ  ಬಾಳುತ್ತಿದ್ದರು. ಮಗುವನ್ನು ಪೋಷಿಸಲು ತಾಯಿಯೇ ಆಗಬೇಕೆಂದಿಲ್ಲ. ಚಿಕ್ಕಮ್ಮ, ದೊಡ್ಡಮ್ಮ, ಅಜ್ಜಿ, ತಂದೆಯ ತಂಗಿ, ನೆರೆಮನೆಯ ಅಜ್ಜಿ, ದೂರದ ಅತ್ತೆ – ಹೀಗೆ ಸಂಬಂಧಿಗಳ ಕೊಂಡಿಯೇ ಬೆಸೆದಿರುತ್ತಿತ್ತು. ಹೆಣ್ಣುಮಕ್ಕಳು ಚಿಕ್ಕ ಮಕ್ಕಳಿಂದ ಹಿಡಿದು ಯುವತಿಯರು ಸಹ ಅಜ್ಜನ ಮನೆಗೆ ಹೋಗಿ ಉಳಿಯುವುದು, ಚಿಕ್ಕಪ್ಪನ ಜೊತೆ ಜಾತ್ರೆಗೆ ಹೋಗಿ ಬರುವುದು, ತಮ್ಮ ಮಗಳು ಅಜ್ಜಿಯ ಮನೆಗೆ ಹೊರಟು ನಿಂತಾಗ ಸೈಕಲ್ಲಿನಲ್ಲಿ ಬರುವ ಪಕ್ಕದ ಮನೆ ಸುಬ್ಬು ಹತ್ತಿರ ‘ಕೂಸಿಗೆ ಅಜ್ಜನ ಮನೆಗೆ ಹೋಗಬೇಕಂತೆ ಸ್ವಲ್ಪ ಬಿಟ್ಟು ಬರುತ್ತೀಯಾ? ಮಗಾ’ ಎಂದು ಕೇಳಿ ಮಗಳನ್ನು ಅವನ ಸೈಕಲ್ಲಿಗೆ ಏರಿಸಿ ಕಳಿಸಿ ನೆಮ್ಮದಿಯಿಂದ ಒಳ ಹೋಗುವ ಹಿರಿಯರು... ಅಂದಿನ ಸಾಮಾಜಿಕ ಸ್ವಾಸ್ಥ್ಯವೇ ಹಾಗಿತ್ತು. ಬರುಬರುತ್ತಾ ನಾಗರಿಕತೆ ಪಸರಿಸಿದಂತೆ ಏನಾಗಿ ಹೋಯಿತು? ಚಿಕ್ಕಮಗು ಶಾಲೆಯಿಂದ ಬರಲು ಕೊಂಚ ತಡವಾದರೂ ಆತಂಕಕ್ಕೆ ಒಳಗಾಗುವ ತಾಯಿ–ತಂದೆಯರು. ಬಂದ ಮೇಲೆ ಶಾಲೆಯಲ್ಲಿ ನಡೆದ ಘಟನೆಗಳು ಏನಾದರೂ ಅನುಚಿತ ನಡೆದಿತ್ತೇ ಎಂಬ ಅನೂಹ್ಯ ಭಯ. ಇದು ಬಂದಿದ್ದಾದರು ಎಲ್ಲಿಂದ?  ಯೋಚಿಸಿದಷ್ಟೂ ಉತ್ತರ ಹೊಳೆಯದು.

ಅಂದಿನವರಿಗೆ ಮೈಮುರಿ ದುಡಿತ, ಕಾಲ್ನಡಿಗೆಯ ಪ್ರವಾಸ, ಪ್ರಯಾಸ ಇದ್ಯಾವುದೂ ಕಾಡುತ್ತಲೇ ಇರಲಿಲ್ಲ. ಮಕ್ಕಳಿಲ್ಲದ ಅಜ್ಜಿಯೋರ್ವಳು ಅನಾಥಳಾದರೆ ಸಂಬಂಧಿಗಳಲ್ಲಿ ಯಾರನ್ನಾದರೂ ಆಶ್ರಯಿಸಿ ಜೀವನವನ್ನು ಸವೆಸುವ ದೃಶ್ಯ ಸಾಮಾನ್ಯವಾಗಿತ್ತು. ಆ ಮನೆಯ ಮಕ್ಕಳು ಮೊಮ್ಮಕ್ಕಳು ಅಜ್ಜಿಯನ್ನು ಆಶ್ರಯಿಸಿ 'ಅಜ್ಜಿ ಮುದ್ದು' ಅನುಭವಿಸುತ್ತಾ ಅನುನಯದ ನುಡಿಗಳನ್ನು ಆಲಿಸಿ ಅಜ್ಜಿಯ ಬಳಿ ಕಥೆ ಕೇಳುತ್ತಾ ತಮ್ಮ ಅರಿವಿನ ಪರಿಧಿಯನ್ನು ವಿಸ್ತರಿಸಿಕೊಳ್ಳುತ್ತಾ ಬೆಳೆಯುತ್ತಿದ್ದವು. ಅಜ್ಜಿಯಾದರೂ ಕೆಲಸ–ಬೊಗಸೆ ಮುಗಿಸಿ ಮನೆಯ ಮಹಿಳೆಯರ ಕಷ್ಟಸುಖ ಅಲಿಸಿಕೊಳ್ಳುತ್ತಾ ಗಂಡಸರ ದುಡಿಮೆಗೂ ಕೈ ಜೋಡಿಸಿ ಸಲಹೆ ಸಹಕಾರ ನೀಡುತ್ತಾ ಆಳುಕಾಳುಗಳ ಜೊತೆ ನೆಮ್ಮದಿಯಿಂದ ದಿನ ಕಳೆಯುವಂತಹ ದೃಶ್ಯಗಳು ನನ್ನ ಕಣ್ಮುಂದೆ ಇಂದಿಗೂ ಇವೆ. ಅಜ್ಜಿಯರೆಂದರೆ ಈ ಕಾರಣಕ್ಕಾಗಿ ನನಗೆ ಎಲ್ಲಿಲ್ಲದ ಅಕ್ಕರೆ. ನಾನು ಕಂಡ ನಮ್ಮೊಂದಿಗೆ ಬಾಳಿದ ನಮ್ಮ ಕುಟುಂಬದ ಅನೇಕ ಅಜ್ಜಿಯರು ನನ್ನ ಹಿಂದೆ ಇದ್ದಂತೆ ನನಗೆ ಈಗಲೂ ಭಾಸವಾಗುವುದಿದೆ. ಅವರ ಧೈರ್ಯ–ಸ್ಥೈರ್ಯ ವರ್ತಮಾನದ  ಕಿರಿಕಿರಿಗಳನ್ನು ಚೂರು ಆತಂಕಗೊಳ್ಳದೆ ಪರಿಹರಿಸಿಕೊಳ್ಳುವ ಅವರ ಚಾಕಚಕ್ಯತೆ ನನಗೆ ಅಂದಿಗೂ ಇಂದಿಗೂ ಸೋಜಿಗವಾಗಿಯೇ ಉಳಿದಿದೆ. ಚಿಕ್ಕ ಅವಮಾನ ಚಿಕ್ಕ ಸೋಲು ಧೃತಿಗೆಡಿಸಿದ ಕ್ಷಣಗಳಲ್ಲಿ ನನ್ನ ಬೆನ್ನು ತಟ್ಟಿ ಮೈದಡವಿ ಧೈರ್ಯ ಹೇಳುವ ಅಜ್ಜಿಯರು ಇಂದು ಸಹ ನನ್ನ ಪಾಲಿಗಿರುವುದು ನನ್ನ ಅದೃಷ್ಟವೆಂದೇ ಭಾವಿಸಿದ್ದೇನೆ.

ಚಿಕ್ಕವರಿರುವಾಗ ತಮ್ಮ–ತಂಗಿಯರು ಮನೆಗೆ ಬರುತ್ತಿದ್ದ ಪತ್ರಿಕೆಗಳನ್ನು ಎಲ್ಲರೂ ಕಾದು ಓದುತ್ತಾ ನಾಮುಂದು, ತಾಮುಂದು ಎಂದು ಸ್ಪರ್ಧೆ ನಡೆಯುತ್ತಿತ್ತು. ಇದ್ದ ಇಬ್ಬರು ಅಜ್ಜಿಯರಲ್ಲಿ ಒಬ್ಬರಿಗೆ ಓದಲು ಬರುತ್ತಿತ್ತು ಆಸಕ್ತಿಯೂ ಇತ್ತು. ಬಿಡುವಿನ ವೇಳೆಯನ್ನು ಓದುವುದರಲ್ಲಿಯೇ ಕಳೆಯುತ್ತಿದ್ದರು. ಇನ್ನೊಬ್ಬ ಅಜ್ಜಿಗೆ ಓದಲು ಬರುತ್ತಿರಲಿಲ್ಲ. ಆದರೆ ನಾವು ಓದಿದ ಎಲ್ಲ ಕಥೆಗಳನ್ನು ಕಾದಂಬರಿಯನ್ನೂ ಸಹ ಅವರಿಗೆ ಓದಿ ಹೇಳಬೇಕಿತ್ತು. ನಾವ್ಯಾರೂ ಸಿಗದಿದ್ದಾಗ ರಾತ್ರಿ ಒಂದು ಅಜ್ಜಿ ಇನ್ನೊಂದು ಅಜ್ಜಿಗೆ ಓದಿ ಹೇಳುವುದು ತುಂಬಾ ಹೊತ್ತಿನ ತನಕ ಕೇಳಿ ಬರುತ್ತಿತ್ತು. ಈ ಎಲ್ಲ ಘಟನೆಗಳು ಒಮ್ಮಿಂದೊಮ್ಮೆಲೆ ಮಗುಚಲ್ಪಟ್ಟಿದ್ದು ಕಳೆದೆರಡು ತಿಂಗಳಿನಿಂದ ನಮ್ಮ ಮನೆಯ ಮೇಲಿನ ಡಾಕ್ಟರ್ ಒಬ್ಬರ ಮನೆಗೆ ಬಂದು ಉಳಿದ ಓರ್ವ ಅಜ್ಜಿಯಿಂದ. ನಮ್ಮ ಕೆಲಸದ ಗೀತಾ ಅಲ್ಲಿಯೂ ಕೆಲಸ ಮಾಡುತ್ತಾಳಾದ್ದರಿಂದ ಅವರ ಮನೆಗೆ ಅಜ್ಜಿ ಆಗಮಿಸಿದ್ದು ಅವಳಿಂದಲೇ ತಿಳಿಯಿತು ಮತ್ತು ಆ ಅಜ್ಜಿಗೆ ಓದುವುದೇ ಕೆಲಸ ಎಂಬ ವಿಚಿತ್ರ ಸುದ್ದಿಯನ್ನು ಗೀತಾ ತಂದಳು. ನಮ್ಮ ಮನೆಯಲ್ಲಿ ಎಲ್ಲೆಂದರಲ್ಲಿ ಅಡುಗೆಮನೆಯಲ್ಲಿ ಸಹ ಪುಸ್ತಕಗಳು ಬಿದ್ದಿರುವುದು ಅತೀವ ಆಶ್ಚರ್ಯ ಅವಳಿಗೆ. ‘ಈ ಪುಸ್ತಕ ಇಟ್ಕೊಂಡು ಏನು ಮಾಡುತ್ತಿರವ್ವ’ ಎಂದು ಆಗಾಗ ಕೇಳುವುದು ಉಂಟು.

ನಾನು ಭಾಷಣಗಳಿಗೆ ಹೋಗಿ ವಾಪಸ್ ಬರುವಾಗ ಕೈಯಲ್ಲಿ ಪುಸ್ತಕಗಳನ್ನು ತಂದಾಗ ಈ ಗೀತಾಗೆ ಅಸಹನೆ. ‘ಮತ್ತೆ ಬಂದವು ಪುಸ್ತಕಗಳು’ ಎಂದು ಗೊಣಗುತ್ತಾ ಅವುಗಳನ್ನು ಒಂದು ಕಡೆ ಜೋಡಿಸುತ್ತಾಳೆ. ಹೀಗೆ ಪುಸ್ತಕದ ಕುರಿತು ವಿಚಿತ್ರವಾಗಿ ನೋಡುವ ಗೀತಾಳಿಗೆ ಮೇಲಿನ ಮನೆಯಲ್ಲಿ ಓದುವ ಅಜ್ಜಿ ಆಗಮಿಸಿದ ದಿನದಿಂದ ಒಂದು ಸಂಭ್ರಮ ಉಂಟಾಗಿಬಿಟ್ಟಿತ್ತು. ಅಜ್ಜಿ ಪುಸ್ತಕಗಳನ್ನು ಹುಡುಕುತ್ತಿದ್ದಾಗ ‘ಕೆಳಗೊಬ್ಬ ಟೀಚರ್ ಇದ್ದಾರೆ ಅವರ ಮನೇಲಿ ರಾಶಿ ಪುಸ್ತಕ ಇದೆ’ ಎಂದು ಹೇಳಿದಳಂತೆ. ‘ಮೇಲಿನ ಅಜ್ಜಿಗೆ ಪುಸ್ತಕ ಬೇಕಂತೆ ಕೊಡುತ್ತೀರಾ?’ ಎಂದು ಕೇಳಿ ತೆಗೆದುಕೊಂಡು ಹೋಗಿ ಕೊಡುತ್ತಿದ್ದಳು. ಅಜ್ಜಿಯೋ ಎರಡು ದಿನದಲ್ಲಿ ಆರು ಪುಸ್ತಕ ಓದಿ ಮುಗಿಸಿ ಬಿಡುತ್ತಾರೆ.

ನನಗೂ ದಿಗಿಲು! ಒಂದೊಂದೇ ಪುಸ್ತಕದ ಕಪಾಟುಗಳು ಖಾಲಿಯಾದವು (ಕ್ಲೀನ್ ಆದವು). ಪುಸ್ತಕಗಳ ಸೆಟ್ ಗೀತಾ ಕೊಂಡು ಹೋಗೋದು ಎರಡು ದಿನದಲ್ಲಿ ವಾಪಸ್ ತರುವುದು ನನಗಂತೂ ವಿಚಿತ್ರವಾಗಿ ಕಂಡಿತ್ತು. ನನ್ನ ಪುಸ್ತಕಗಳು ಮುಗಿದು ಬೇರೆಯವರ ಕೃತಿಗಳು ವಿಮರ್ಶಾಗ್ರಂಥಗಳು, ಅಭಿನಂದನಾಗ್ರಂಥಗಳು – ಹೀಗೆ ಕಪಾಟಿಗೆ ಕಪಾಟು ಮಗುಚಲ್ಪಟ್ಟು ಎಲ್ಲ ಪುಸ್ತಕಗಳು ಹೊರಬಂದವು. ಅಕ್ಷರವನ್ನೇ ಉದ್ಯೋಗವನ್ನಾಗಿಸಿಕೊಂಡ ನನ್ನಂಥವರಿಗೆ ಹೀಗೆ ಯಾರೋ ಒಂದೇ ಸವನೆ ಓದುವವರಿದ್ದಾರೆ ಎಂದರೆ ಅವರ ಕುರಿತು ಅಕ್ಕರೆ ಗೌರವ ಮೂಡದಿರುತ್ತದೆಯೆ?

‘ನಿನ್ನ ಅಜ್ಜಿಯನ್ನೊಮ್ಮೆ ನನಗೆ ತೋರಿಸು ಗೀತಾ’ ಎಂದೆ. ಮರುದಿನ ಗೀತಾ ಬರುವಾಗ ಓರ್ವ ಕೃಶಕಾಯದ ಪುಟ್ಟ ಅಜ್ಜಿಯನ್ನು ಕರೆತಂದಳು. ಬಂದವರೇ ನನ್ನ ಮನೆಯ ಪುಸ್ತಕದ ಕಪಾಟು ಶೋಕೇಸ್‌ನಲ್ಲಿರುವ ಪ್ರಶಸ್ತಿ ಸ್ಮರಣಿಕೆ ಇವುಗಳನ್ನೆಲ್ಲ ಮಗುವಿನಂತೆ ಕಣ್ಣರಳಿಸಿ ನೋಡತೊಡಗಿದರು. ನನ್ನ ಬಾಲ್ಯದಲ್ಲಿ ನಾವು ಓದಿ ಹೇಳುತ್ತಿದ್ದ ಅಪಾರ ಆಸಕ್ತಿಯಿಂದ ಕೇಳುತ್ತಿದ್ದ ಅಜ್ಜಿಯರು ನೆನಪಾದರು. ಅವರು ಕುಂದಾಪುರದವರು ಹೆಸರು ಭವಾನಿ ಅಮ್ಮ, ಕನ್ನಡ ಮಾಧ್ಯಮದಲ್ಲಿ ಓದಿದವರು, ಎಂಬೆಲ್ಲ ವಿವರಗಳನ್ನು ಅವರ ಬಾಯಿಯಿಂದಲೇ ಕೇಳಿ ತಿಳಿದೆ. ನೀವು ಯಾರ್ಯಾರ ಪುಸ್ತಕ ಓದಿದ್ದೀರಿ ಎಂದು ಕೇಳಿದಾಗ ಅಜ್ಜಿ ಕೊಟ್ಟ ಪಟ್ಟಿ ನನಗೆ ಆಶ್ಚರ್ಯವನ್ನು ಉಂಟುಮಾಡಿತ್ತು. ನಮ್ಮ ಸಾಹಿತ್ಯದ ಅಧ್ಯಾಪಕರು ಸಹ ಇಷ್ಟು ಕೃತಿಗಳನ್ನು ಓದಿರಲಾರರು. ಎಂ. ಕೆ. ಇಂದಿರಾ, ವಾಣಿ ಮೊದಲಾದ ಮಹಿಳೆಯರ ಕೃತಿಗಳನ್ನು ಹಿಡಿದು ಕಾರಂತರು, ಅಡಿಗರು ಮೊದಲಾದವರ ಕೃತಿಗಳನ್ನು ಅಜ್ಜಿ ಹೆಸರಿಸಿದಾಗ ನನಗೆ ರೋಮಾಂಚನವಾದಂತೆ ಆಯಿತು.

‘ನಿಮ್ಮ ಪುಸ್ತಕಗಳನ್ನು ಓದುವ ತನಕ ಹಾಸ್ಯಸಾಹಿತ್ಯ ನನಗೆ ಪರಿಚಯವೇ ಇರಲಿಲ್ಲ. ನಿಮ್ಮದೊಂದು ಪುಸ್ತಕವನ್ನು ಸಹಿ ಹಾಕಿ ಕೊಡಿ’ ಎಂದು ಅಜ್ಜಿ ಕೇಳಿದಾಗ ನನಗೆ ಕಣ್ತುಂಬಿ ಬಂತು. ನಮ್ಮ ಹಳೆಯ ತಲೆಮಾರು ಸಂಸ್ಕೃತಿಯನ್ನು ಉಳಿಸಿಕೊಂಡು ಬರುವ ಕಾರಣಕ್ಕಾಗಿ ನನಗೆ ಗೌರವ. ಇಲ್ಲಿ ನೋಡಿದರೆ ತಮ್ಮ ವೃದ್ಧಾಪ್ಯವನ್ನು ಲೆಕ್ಕಿಸದೆ ಪುಸ್ತಕವನ್ನು ಓದುವ ಸುಖವನ್ನು ಅನುಭವಿಸುತ್ತಿರುವ ಈ ವೃದ್ಧೆಗೆ ನನ್ನ ನಮನಗಳನ್ನು ಸಲ್ಲಿಸಿ ನನ್ನ ಸ್ವಂತ ಕೃತಿಯ ಸಹಿ ಹಾಕಿದ ಪ್ರತಿಯೊಂದನ್ನು ಅವರ ಕೈಗಿಟ್ಟು ನಮಸ್ಕರಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry