ಕುಮಾರ ಪರ್ವತ ಹತ್ತಿ ಇಳಿದೆವು

7

ಕುಮಾರ ಪರ್ವತ ಹತ್ತಿ ಇಳಿದೆವು

Published:
Updated:
ಕುಮಾರ ಪರ್ವತ ಹತ್ತಿ ಇಳಿದೆವು

ಅಂತೂ ಅಕ್ಷಯ್ ದೆಸೆಯಿಂದ ಕುಮಾರ ಪರ್ವತ ಚಾರಣಕ್ಕೆ ಹೊರಡೋಕೆ ತಯಾರಾದ್ವಿ. ಶನಿವಾರ ಬೆಳಿಗ್ಗೆ  8 ಗಂಟೆಗೆ ಮೆಜೆಸ್ಟಿಕ್ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಿಂದ ಹೊರಟು, ಕುಕ್ಕೆಗೆ ಹೋಗಿ ಸುಬ್ರಹ್ಮಣ್ಯ ಸ್ವಾಮಿಯ ದರ್ಶನ ಮಾಡಿಕೊಂಡು, ಆಮೇಲೆ ಪರ್ವತ ಏರೋದು ಅಂತ ನಿರ್ಧಾರ ಆಗಿತ್ತು. ಚಾರಣಕ್ಕೆ ಬೇಕಾದ ಕುರುಕಲು ತಿಂಡಿ, ಚಪಾತಿ, ಎರಡು ಜೊತೆ ಬಟ್ಟೆ, ಅದು, ಇದು ಅಂತ ಎಲ್ಲ ತುರುಕಿಕೊಂಡು ಬ್ಯಾಗನ್ನ ಬೆನ್ನು ಬಾಗುವಷ್ಟು ಭಾರ ಮಾಡ್ಕೊಂಡು ಹೊರಟಿದ್ವಿ.

ಬೇಗನೇ ಹೊರಟಿದ್ದರಿಂದ ನಾಷ್ಟ ಮಾಡೋಷ್ಟು ಪುರಸೊತ್ತಾಗ್ಲೀ, ಟೈಮಾಗ್ಲೀ ಇರ್ಲಿಲ್ಲ. ಕುಕ್ಕೆ ಸುಬ್ರಹ್ಮಣ್ಯದಲ್ಲಿ ಇಳಿಯುವಷ್ಟರಲ್ಲಿ ಆಗ್ಲೇ 5.30 ಆಗಿತ್ತು. ಸುಬ್ರಾಯ ಲಾಡ್ಜ್‌ನಲ್ಲಿ ರೂಮ್ ಬಾಡಿಗೆಗೆ ತಗೊಂಡು ಫ್ರೆಶ್ ಆಗಿ ದೇವರ ದರ್ಶನ ಮಾಡೋಕೆ ಹೋದ್ವಿ. ಆಶ್ಚರ್ಯಕ್ಕೆ ಹೋಗ್ತಿದಂಗೆ‌ ದರ್ಶನ ಆಯ್ತು. ಹೆಚ್ಚು ಕ್ಯೂ ಇರಲಿಲ್ಲ. ಆದ್ರೆ ಊಟಕ್ಕೆ ಮಾತ್ರ ಕ್ಯೂನಲ್ಲಿ ನಿಂತು ಕಾಯಬೇಕಾಯಿತು.

ಅಂಗಡಿ ಸಾಲು ಸುತ್ತಿ ಬೆಂಕಿಪೊಟ್ಣ, ಲೈಟರ್, ಸ್ವಲ್ಪ ಚಪಾತಿ, ಚಿಕನ್, ಟಾರ್ಚ್, ಮೂಸಂಬಿ, ಸೇಬು, ಇಸ್ಪೀಟು ಕಾರ್ಡ್ಸ್, ಉಪ್ಪಿನಕಾಯಿ, ಮಜ್ಜಿಗೆ‌, ಮೆಣಸಿನಕಾಯಿ ತಗೊಂಡ್ವಿ. ಬೆಳಿಗ್ಗೆ ಬೇಗ ಏಳಬೇಕಾಗಿತ್ತಲ್ವಾ? ರೂಂಗೆ ಬಂದ ತಕ್ಷಣ ಮಲಗಿಬಿಟ್ವಿ. ಬೆಳಿಗ್ಗೆ ಎದ್ದವರು ಫ್ರೆಶ್ ಆಗಿ, ನಮ್ನಮ್ಮ ಬ್ಯಾಗು, ಟೆಂಟುಗಳೊಂದಿಗೆ ಹೊರಟ್ವಿ. 5.30ಕ್ಕೆಲ್ಲ ನಮ್ಮ ಟ್ರೆಕ್ಕಿಂಗ್ ಶುರುವಾಗಿತ್ತು. ಆವಾಗ ಅನ್ಸಿದ್ದು,‌ ನಾವು ಹಗಲೊತ್ತಲ್ಲಿ ಪ್ರಯಾಣ ಶುರುಮಾಡಿ ವಿಶ್ರಾಂತಿ ತಗೊಂಡು ಟ್ರೆಕ್ಕಿಂಗ್ ಶುರುಮಾಡಿದ್ದು ಒಳ್ಳೇದಾಯ್ತು. ಇಲ್ಲ ಅಂದಿದ್ರೆ ಕಷ್ಟ ಆಗಿರೋದು.

ಇನ್ನೂ ಅಷ್ಟು ಬೆಳಕಾಗಿರಲಿಲ್ಲ, ಆ ಕತ್ಲಲ್ಲಿ ಟಾರ್ಚ್ ಬೆಳಕಲ್ಲೆ ದಾರಿ ನೋಡ್ಕೊಂಡು ಸಾಗ್ತಾ ಇದ್ವಿ. ಕಾಡು‌ದಟ್ಟವಾಗಿದ್ರಿಂದ ಬೆಳಕು ಬೇಗ ಆಗಿರಲಿಲ್ಲ. ಚಳಿಗೆ ಅಂತ ಹಾಕ್ಕೊಂಡಿದ್ದ ಫುಲ್‌ ಕವರ್‌ಗಳೆಲ್ಲ ನೆನೆದು ನಡೆಯೋಕೆ ಭಾರ ಆಗ್ಬಿಟ್ಟು ಬಿಚ್ಹಾಕಿ ಬ್ಯಾಗಿಗೆ ತುರಿಕ್ಕೊಂಡ್ವಿ. ಸಾಗ್ತ ಸಾಗ್ತ ಸುಸ್ತು ಶುರುವಾಯ್ತು. ಇನ್ನೂ ಒಂದು ಕಿಲೋಮೀಟರ್ ಕೂಡಾ ನಡೆದಿರಲಿಲ್ಲ ಆಗ್ಲೇ ಮೂರು ಕಡೆ ಕೂತು ಸುಧಾರಿಸಿಕೊಳ್ಳಬೇಕಾಯ್ತು.

ನಮ್ಮ ಜೊತೆಗೆ ಆ ಮಣಭಾರದ ಬ್ಯಾಗನ್ನೂ ಹೊತ್ತು ನಡೆಯುವಾಗ, ಈ ಟ್ರೆಕ್ಕಿಂಗ್ಗೆ ಉಟ್ಟಿರೋ ಬಟ್ಟೆ ಜೊತೆಗೊಂದು ಚಡ್ಡಿ ಇದ್ದಿದ್ರೆ ಸಾಕಾಗ್ತಿತ್ತು. ಒಳ್ಳೆ ಊರು ಬಿಡೋರಂಗೆ ಬಟ್ಟೆ ತುಂಬ್ಕೊಂಡಿದ್ದು ತಪ್ಪಾಯ್ತು ಅಂತ ಅನಿಸ್ತು. ಸ್ವಲ್ಪ ದೂರ ನಡೆಯೋದು ಆಮೇಲೆ ಸುಧಾರಿಸಿಕೊಳ್ಳೋದೇ ಒಂಥರಾ ಸೂತ್ರ ಆಗೋಯ್ತು.

ಸುಮಾರು ಏಳು ಕಿ.ಮೀ. ದೂರ ಸಾಗಿದ ಮೇಲೆ ಭಟ್ರು ಹೋಟೆಲ್ ಸಿಕ್ತು. ನಮ್ಮ ಪಾಲಿಗೆ ಮರುಭೂಮೀಲಿ ಮಳೆ ಹುಯ್ದಂಗಾಯ್ತು. ಪಕ್ಕದಲ್ಲಿ ಇದ್ದ ಅರಣ್ಯ ಇಲಾಖೆ ಸಿಬ್ಬಂದಿಯಿಂದ ಟ್ರಕ್ಕಿಂಗ್ ಹೋಗೋಕೆ ಅನುಮತಿ ತಗೊಂಡ್ವಿ. ನಾವು ತಂದಿದ್ದ ತಿಂಡಿನೇ ದಂಡಿಯಾಗಿ ಇದ್ದುದ್ದರಿಂದ ಭಟ್ರು ಹೋಟೆಲಲ್ಲಿ ನಾಷ್ಟ ತಿನ್ನೋ ಭಾಗ್ಯ ಸಿಗ್ಲಿಲ್ಲ.

ಅರಣ್ಯ ಇಲಾಖೆಯ ಕಚೇರಿವರೆಗೂ ಮಾತ್ರ ಟೆಂಟು-ಕ್ಯಾಂಪು ಹಾಕೋಕೆ ಅವಕಾಶ ಇರೋದು‌, ಅಲ್ಲಿಯೇ ಲಗೇಜನ್ನೆಲ್ಲಾ ಇಟ್ಟು ಪರ್ವತ ಹತ್ತೋಕೆ ಹೋಗಬಹುದು. ಆದರೆ ನಾವು ಕುಕ್ಕೆ ಕಡೆಯಿಂದ ಹತ್ತಿ ಸೋಮವಾರಪೇಟೆ ಕಡೆ ಇಳಿಯುತ್ತಿದ್ದರಿಂದ ನಾವು ತಗೊಂಡ್ ಹೋಗಿದ್ದ ಟೆಂಟ್ ಸಾಮಗ್ರಿಗಳಿಗೆ ಅನುಮತಿ ಕೊಟ್ರು. ಅವ್ನೆಲ್ಲ ಎತ್ಕೊಂಡು ಬೆಟ್ಟ ಹತ್ತೊದು ನಿಜಕ್ಕೂ ಹಿಂಸೆ ಆಗೋಯ್ತು.

ಈ ಕಾಲು ನೋವಲ್ಲೂ ಕಣ್ ತಂಪು ಮಾಡಿ ನೋವು ಮರೆಸುತ್ತಿದ್ದ ಸಂಗತಿ ಅಂದ್ರೆ, ಅದು ಕಾಡು, ಆ ಹಸಿರನ್ನೇ ಸುತ್ತಿಕೊಂಡು ಸುತ್ತುವರಿದಿದ್ದ ಆ ಬೆಟ್ಟ-ಗುಡ್ಡಗಳು. ಮೊದ್ಲೇ ತಂದಿದ್ದ ಬ್ರೆಡ್ಡು, ಜಾಮ್ನಲ್ಲೇ ಆ ಹೊತ್ತಿನ ನಾಷ್ಟದ ಕೋಟಾ ಮುಗೀತು.

ಮುಂದೆ ಸಣ್ಣದಾಗಿ ಹರಿತಿದ್ದ ಝರಿಯಲ್ಲಿ ಖಾಲಿಯಾಗಿದ್ದ ಬಾಟಲಿಗೆ ನೀರು ತುಂಬ್ಕೊಂಡ್ವಿ. ಆ ನೀರೋ, ಫ್ರಿಡ್ಜ್‌ನಿಂದ ಹೊರಗೆ ತೆಗೆದ ಬಾಟಲಿಯಷ್ಟು ತಣ್ಣಗಿತ್ತು. ನೀರು ಕುಡಿದಾಗ ಜೀವ ತಂಪಾಯ್ತು. ಸಾಗುವ ದಾರಿ ಕಡಿದಾಗಿತ್ತು. ಎಷ್ಟು ಅಂದ್ರೆ, ಮಂಡಿ ಮೈಗೆ ತಾಗೋಷ್ಟು, ಎತ್ತಲೂ ನೋಡದೆ ಬಗ್ಗಿ ನಡೆಯುವಷ್ಟು.

ಅಂತೂ ಸುಧಾರಿಸ್ಕೊಂಡು ಶೇಷಗಿರಿ ಅನ್ನೋ ಬೆಟ್ಟ ಏರಿ ನಿಂತು, ನೋಡೋವಾಗ ಅನ್ಸೋ ‘ವಾವ್‌’ ಶಬ್ದದ ಮುಂದೆ ನೋವೆಲ್ಲಾ ಮಾಯ ಆಗೋಗುತ್ತೆ. ಅಲ್ಲಿ ಫೋಟೋ ಗೀಟೊ ಅಂತ ತಕ್ಕೊಂಡ್ವಿ. ಆಮೇಲೆ ಶುರುವಾಗೋ ಕಾಡಹಾದಿಯಲ್ಲಿ ಕುಮಾರಪರ್ವತ ಅಥವಾ ಪುಷ್ಪಗಿರಿಗೆ ಬರೀ ಒಂದು ಕಿಲೋಮೀಟರ್ ಅಷ್ಟೇ.

ಅಂತೂ ಹದಿಮೂರು ಕಿಲೋಮೀಟರ್ ದೂರದ, 5,734 ಅಡಿ ಎತ್ತರದ ಪರ್ವತ ಹತ್ತಿ ನಿಂತ್ವಿ. ಅಡೀಲಿ ನಿಂತು ತಲೆ ಏರಿಸಿ ನೋಡೋದ್ಕು ಮುಡೀಲಿ ನಿಂತು ಪಾದವಿರಿಸಿ ನೋಡೋದ್ಕು ತುಂಬಾನೇ ವ್ಯತ್ಯಾಸ ಇದೆ. ಈ ವ್ಯತ್ಯಾಸನ್ನೆಲ್ಲ ಪದಗಳಲ್ಲಿ ಇಳಿಸೋಕೋದ್ರೆ ನಂಗಿಂತ ದಡ್ಡ ಮತ್ತೊಬ್ಬ ಇಲ್ಲ. ಅಂಥ ಅದ್ಭುತ, ಅಮೋಘ, ಅವರ್ಣನೀಯಗಳನ್ನೆಲ್ಲ ಅನುಭವಿಸಿಯೇ ತೀರಬೇಕು. ಅನುಭವಿಸಿಯೇ ಹೀರಬೇಕು.

ಆಗ್ಲೇ ಮೂರುಗಂಟೆ ಆಗಿತ್ತು ಅಲ್ಲೇ ಊಟ ಮುಗಿಸ್ಕೊಂಡ್ವಿ. ಈ ಕುರುಕಲು ತಿಂಡಿಗಿಂತ ಹಣ್ಣುಗಳು, ಎನರ್ಜಿ ಡ್ರಿಂಕ್ಸ್ ಹೆಚ್ಚಿಗೆ ಇರ್ಬೇಕು ಅಂತ ಅಲ್ಲಿ ಜ್ಞಾನೋದಯ ಆಯ್ತು. ಇಳಿಯುವಾಗ ಪುಷ್ಪಗಿರಿ ವನ್ಯಧಾಮದ ದಟ್ಟ ಕಾಡಿನ ನಡುವೆ 7 ಕಿ.ಮೀ ಹಾದಿಯನ್ನು ಕ್ರಮಿಸೋಷ್ಟರಲ್ಲಾಗಲೇ ಕತ್ತಲಾಗಿತ್ತು. ಈ ಹಾದಿಯೇನೂ ಅಷ್ಟು ಕಠಿಣವಾಗಿರಲಿಲ್ಲ, ಒಂದೆರಡು ಕಡೆ ಬಂಡೆಯಿಂದ ಇಳಿಯುವುದು ಚೂರು ತ್ರಾಸದಾಯಕ ಅಷ್ಟೇ. ಬೆಟ್ಟ ಇಳಿದು ತೂಗುಸೇತುವೆ ದಾಟಿ ಅರಣ್ಯ ಇಲಾಖಾ ಕಚೇರಿಗೆ ಹೋಗುವಷ್ಟರಲ್ಲಾಗಲೇ ಸಂಜೆ ಏಳು ಗಂಟೆಯಾಗಿತ್ತು. ಅಲ್ಲಿನ ಅಧಿಕಾರಿಗಳಿಂದ ಅನುಮತಿ ಪಡೆದು ಟೆಂಟ್ ಹಾಕಿ ಅಲ್ಲೇ ತಂಗಲು ನಿರ್ಧರಿಸಿದೆವು.

ರಾತ್ರಿ ಊಟಕ್ಕೆ ಮತ್ತದೇ ಚಪಾತಿ, ಉಪ್ಪಿನಕಾಯಿ ಜೊತೆಗೆ ಚಕ್ಲಿ, ನಿಪ್ಪಟ್ಟು, ಕೋಡುಬಳೆಗಳಂತಹ ಕುರುಕಲು ತಿಂಡಿಗಳನ್ನು ತಿಂದು ಸ್ವಲ್ಪ ಆಟ, ಅಂತ್ಯಾಕ್ಷರಿ ಹಾಡುಗಳೊಂದಿಗೆ ಮಲಗಿದೆವು. ಆ ನೋವಿಗೂ, ಆ ವಾತಾವರಣಕ್ಕೂ ಸುಖನಿದ್ರೆ ಆವರಿಸಿತ್ತು.

ಬೆಳಿಗ್ಗೆ ಏಳುವುದೇ ತಡವಾದ್ದರಿಂದ ಇದ್ದೊಂದ್ ಬಸ್ ಆಗಲೇ ಹೊರಟು ಹೋಗಿತ್ತು. ಹೇಗೂ ತಡವಾದ್ದರಿಂದ ಮಲ್ಲಳ್ಳಿ ಫಾಲ್ಸ್ ನೋಡಿ ಹೋಗುವುದೆಂದು ನಿರ್ಧಾರವಾಯಿತು. ಪುಣ್ಯಕ್ಕೆ ಅಲ್ಲಿಯ ಅರಣ್ಯ ಇಲಾಖಾ ಸಿಬ್ಬಂದಿಯವರ ಸಹಾಯದಿಂದ ಪುಳಿಯೋಗರೆ ಸಿಕ್ಕಿದ್ದು ಬರಗೆಟ್ಟ ದೇವರಿಗೆ ಪೊರ ಮಾಡ್ದಂಗಾಯ್ತು.

ನಾಷ್ಟ ಮಾಡ್ಕೊಂಡು, ಟೆಂಟ್ ಬಿಚ್ಕೊಂಡು, ಮಲ್ಲಳ್ಳಿ ಕಡೆ ಜೀಪ್ ಬೇಡ ಎಂದು ನಡೆದುಕೊಂಡೇ ಹೊಂಟ್ವಿ. ಹೋಗೋ ದಾರಿ ಅಂತು ನಿಜಕ್ಕೂ ಚಂದವಿತ್ತು. ಎತ್ತ ನೋಡಿದ್ರೂ ಗಿರಿ, ಬೆಟ್ಟ, ಕಾಡು. ಅಲ್ಲೇ ಸಿಗುವ ಶಾಂತ ಮಲ್ಲಿಕಾರ್ಜುನನಿಗೆ ಕೈಮುಗಿದು ಪ್ರಯಾಣ ಬೆಳೆಸುದ್ವಿ.

ನಿನ್ನೆ ನಡೆದಿದ್ದ ನೋವುಗಳು ಕಾಟ ಕೊಡೋಕೆ ಶುರು ಮಾಡಿದ್ವು. ಭಾರದ ಕಾಲಲ್ಲಿ, ಭಾರದ ಹೆಜ್ಜೆ ಹಿಡ್ಕೊಂಡು 10 ಕಿ.ಮೀ ನಡೆಯುವಷ್ಟರಲ್ಲಿ ಆಗಲೇ ಮಲ್ಲಳ್ಳಿ ಫಾಲ್ಸ್‌ಗೆ ಹೋಗೋ ಆಸೆನಾ ಅರ್ಧ ಬಿಟ್ಟಿದ್ವಿ. ಮಲ್ಲಳ್ಳಿ ಫಾಲ್ಸ್ ಇರೋ ದಾರಿ ಕಡೆ ತಿರುಗಿ ಅರ್ಧ ಕಿ.ಮೀ ನಡೆಯುಷ್ಟರಲ್ಲಾಗಲೇ ಫಾಲ್ಸ್‌ಗೆ ಹೋಗೋ ಆಸೆನಾ ಪೂರಾ ಬಿಟ್ಟು ವಾಪಸ್ ಸೋಮವಾರಪೇಟೆ ಕಡೆ ಹೋಗೋ ದಾರಿಯತ್ತ ಮುಖ ಮಾಡಿದ್ವಿ.

ಅದೃಷ್ಟಕ್ಕೆ ಟಿಪ್ಪರ್ ಲಾರಿಯೊಂದು ಸಿಕ್ಕಿ, ಸೋಮವಾರಪೇಟೆಯವರೆಗೂ ಡ್ರಾಪ್ ತಗೊಂಡ್ವಿ. ಪುಷ್ಪಗಿರಿ ವನ್ಯಧಾಮದಿಂದ ಸೋಮವಾರಪೇಟೆಗೆ ಒಟ್ಟು 26 ಕಿ.ಮೀ. ಸೋಮವಾರಪೇಟೆ ಸೇರುವಷ್ಟರಲ್ಲಾಗ್ಲೇ ಮಧ್ಯಾಹ್ನ 1.30 ಆಗಿತ್ತು. ಆಗ್ಲೇ ಬಸ್ಸೊಂದು ಬೆಂಗಳೂರು ಕಡೆ ಹೊರಟು ನಿಂತಿತ್ತು. ಬೆಂಗಳೂರು ತಲುಪುವಷ್ಟರಲ್ಲೇ ಸಂಜೆ ಎಂಟಾಗಿತ್ತು.

ಒಟ್ನಲ್ಲಿ ಸಾಯೋವರೆಗೂ ‘ನಾವು ಕಡ್ದು ಕಟ್ಟೆ ಹಾಕಿದ್ದೀವಿ’ ಅಂತ ಹೇಳ್ಕೊಳೋಕೆ ಒಂದು ಸುಂದರ ಅನುಭವ, ಅಷ್ಟೇ ಸಂತೋಷ ನಮ್ಮ ನೆನಪಿನ ಬುತ್ತಿಗೆ ಸೇರಿಕೊಳ್ತು. ಚಾರಣದಲ್ಲಿ ಜೊತೆಗಿದ್ದ ಗೆಳೆಯರಾದ ಅಕ್ಷಯ್‌ಗೌಡ, ಪ್ರವೀಣ್, ಸೂರಿ, ಅಕ್ಷಯ್ ಹೆಬ್ಬಾರ್, ಕಿರಣ್, ರೋಹಿತ್ ಪಾಟೀಲ್ ಅವರ ಒಡನಾಟ ಸದಾ ಖುಷಿಕೊಡುವಂಥದ್ದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry